ಮಿಂಚು ಮತ್ತು ಮಳೆ

ಮಿಂಚು ಮತ್ತು ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ದಿವ್ಯಾ ಕಾರಂತ
ಪ್ರಕಾಶಕರು
ದಿವ್ಯಾ ಕಾರಂತ, ಗುರುರಾಜ್ ಬಡಾವಣೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೧

ಉದಯೋನ್ಮುಖ ಕಥೆಗಾರ್ತಿ ದಿವ್ಯಾ ಕಾರಂತರ ‘ಮಿಂಚು ಮತ್ತು ಮಳೆ' ನಿಸರ್ಗದ ಪರ ಲೇಖಕಿಯ ತುಡಿತದ ಕಥೆಗಳು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ದಿವ್ಯಾ ಅವರು ಈ ಕಥಾ ಸಂಕಲನದ ಕಥೆಗಳನ್ನು ಅನುಭವಿಸಿ ಬರೆದಂತಿದೆ. ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಹಿರಿಯ ಲೇಖಕರಾದ ಎಸ್ ಎನ್ ಸೇತೂರಾಮ್ ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವಗಳ ಆಯ್ದ ಭಾಗ ನಿಮ್ಮ ಓದಿಗಾಗಿ...

“ದಿವ್ಯಾ ಕಾರಂತರ ಕಥಾ ಸಂಕಲನ 'ಮಿಂಚು ಮತ್ತು ಮಳೆ'. ಮೂಲತಃ ಚಿಕ್ಕಮಗಳೂರು, ಕೊಪ್ಪದ ಹತ್ತಿರದ ಬಸರೀಕಟ್ಟೆಯವರು. ಮಲೆನಾಡ ಗರ್ಭ ಹಾಗಾಗಿ ಮಿಂಚು ಮತ್ತು ಮಳೆ ಸ್ವಾಭಾವಿಕ. ಆಪ್ತವಾದ, ವೈಯಕ್ತಿಕ ಅನುಭವಗಳು ಕಥೆಗಳಾದಾಗ, ವಿವರಗಳು ಹೆಚ್ಚಿರುತ್ತೆ. ಓದಿದವರಿಗೂ ಆಪ್ತ ಅನ್ನಿಸತ್ತೆ. ವಿವರಗಳು ಕಥೆಗಳನ್ನು ಬದುಕಿಗೆ ಹತ್ತಿರವಾಗಿಸಿ, ಓದಿದವನಿಗೂ ಇದು ತನ್ನದೇ ಬದುಕಿನ ಭಾಗ ಅನ್ನಿಸಿ, ಅವನೂ ಒಂದು ಪಾತ್ರ ಆಗ್ತಾನೆ. ಕಥೆಗಳು ಗೆಲ್ಲೋದು ಇಲ್ಲೆ. ಈ ಕಥಾ ಸಂಕಲನ ಬರಹಗಾರ್ತಿಯ ಬಾಲ್ಯದ ದಿನಗಳು, ಭಾವಗಳು, ಆ ವಯಸ್ಸಿನ ಬುದ್ದಿವಂತಿಕೆಗಳು, ಆವತ್ತಿನ ಸುಖ-ದುಃಖ ಇವುಗಳನ್ನೊಳಗೊಂಡ ಕಥೆಗಳ ಗುಚ್ಚ. ಸ್ವಂತ ಅನ್ನಿಸತ್ತೆ, ಹಾಗಾಗಿ ಆಪ್ತವಾಗತ್ತೆ.

ಬಾಲ್ಯವನ್ನು ಬಾಲ್ಯವಾಗೇ ಬರಹದಲ್ಲಿ ದಾಖಲಿಸೋದು ಕಷ್ಟ, ಕಳೆದುಕೊಂಡ ವಿಷಾದವಿರತ್ತೆ, ಅದಿಲ್ಲದಾಗ ಬಾಲಿಶವಾಗತ್ತೆ. ಬಾಲಿಶವೂ ಆಗದೇ, ವಿಷಾದದ ಸೋಂಕೂ ಇಲ್ಲದೇ, ಪ್ರಬುದ್ಧವಾಗಿ ಕಥೆಯಾಗಿಸೋದು ಕಷ್ಟ, ಇಲ್ಲಿ ಆ ಪ್ರಬುದ್ಧತೆಯೂ ಇದೆ. ಮನಸ್ಸು, ಹೃದಯಕ್ಕೆ ಸುಖ ಅನ್ನಿಸತ್ತೆ. ನನ್ನನ್ನ ಸಾಹಿತ್ಯಕ್ಕೆ ಪರಿಚಯಿಸಿದ್ದು ನನ್ನ ಅಮ್ಮ. ಆಕೆ, ಗ್ರಂಥಾಲಯಗಳಿಂದ ಪುಸ್ತಕ ತಂದು ಓದೋಳು. ಅವಳು ಪಕ್ಕಕ್ಕಿಟ್ಟಾಗ ನಾನು ಓದಿದ್ದು. ಮೊದಲಿಗೆ ದಿವಂಗತ ಅನಕೃ, ತರಾಸು ನಂತರ ರಾಮಮೂರ್ತಿ, ಕೃಷ್ಣಮೂರ್ತಿ ಪುರಾಣಿಕ, ಬಸವರಾಜ ಕಟ್ಟೀಮನಿ, ಆಮೇಲೆ ಗೋರೂರು, ಮಾಸ್ತಿ ಇತ್ಯಾದಿ. ಇವರಿಗೆ ಸಮಸಮವಾಗಿ ತ್ರಿವೇಣಿ, ಆರ್ಯಾಂಬ ಪಟ್ಟಾಭಿ, ಅನುಪಮಾ ನಿರಂಜನ, ಎಮ್ ಕೆ ಇಂದಿರಾ, ಇವರುಗಳ ಸಾಹಿತ್ಯದ ಪರಿಚಯವೂ ಆಯಿತು. ಎರಡೂ ಗುಂಪುಗಳದ್ದು ಸಮಸಮ ಸಾಹಿತ್ಯ. ಇವರು ಹೆಚ್ಚು, ಅವರು ಕಮ್ಮಿ ಅಂತ ಅನ್ನಿಸಿಯೇ ಇರಲಿಲ್ಲ. ಆ ಕಾಲದ ಸಾಹಿತ್ಯ; ಸಾಹಿತ್ಯ ಅಷ್ಟೇ! ಪುರುಷ ಮತ್ತು ಸ್ರ್ತೀ ಅನ್ನುವ ಭೇದವೇ ಮನಸ್ಸಿಗೆ ಬಂದಿರಲಿಲ್ಲ. ನಂತರದ ದಿನಗಳಲ್ಲಿ ಕುವೆಂಪು, ಶಿವರಾಮ ಕಾರಂತರು, ಭೈರಪ್ಪನವರು, ಪೂರ್ಣಚಂದ್ರ ತೇಜಸ್ವಿ. ಮುಂದಕ್ಕೆ ಅನಂತಮೂರ್ತಿ, ಲಂಕೇಶ್, ಕುಂವೀ ಹೀಗೆ ಸಾಲು ಸಾಲು ಪರಿಚಯಗಳಾದವು. ಆದರೆ ಈ ಗುಂಪಿನೊಟ್ಟಿಗೆ ಗುರುತಿಸಿಕೊಳ್ಳುವಂತಹ, ಸಾಹಿತ್ಯ ಬರೆದ ಸ್ರ್ತೀ ಸಾಹಿತಿಗಳ ಅರಿವು ನನಗಿಲ್ಲ. ಇದ್ದಿರಬಹುದು ಆದರೆ ಸಮಸಮವಾಗಿ ಹೆಸರಾಗಲಿಲ್ಲ ಅನ್ನುವುದಂತೂ ಸತ್ಯ. ಹಾಗೆ ನೋಡಿದರೆ, ಈ ಮೂರ್ನಾಲ್ಕು ದಶಕಗಳಲ್ಲೇ ಸ್ತ್ರೀ ಸ್ವಾತಂತ್ರ್ಯದ ಉದ್ಘೋಷಣೆ ತಾರಕದಲ್ಲಿತ್ತು. ಸ್ರ್ತೀಯರಿಗೆ ಸಮವಿದ್ಯೆ ಮತ್ತು ಸಮಾವಕಾಶದ ವಿಚಾರ ಪ್ರಬಲವಾಯಿತು. ಆ ವಾತಾವರಣವೂ ಬಂತು ಹಾಗಿದ್ದೂ ಸಾಹಿತ್ಯ ಬರಲಿಲ್ಲ. ಅಂದರೆ ಸಮಾಜದಲ್ಲಿ ಬದಲಾವಣೆ ಬಂತು ಆದರೆ ಚಿಂತಕರ ವಲಯದಲ್ಲಿ ಬದಲಾವಣೆ ಬರಲಿಲ್ಲ ಮತ್ತು ಹೆಣ್ಣಿನ ಪರಿಸ್ಥಿತಿ ಅಲ್ಲಿ ಮೊದಲಿಗಿಂತ ಅತ್ತತ್ತ ಅಂತ ಆಯ್ತಾ. ಇತ್ತೀಚಿನ ದಿನಗಳಲ್ಲಿ ಓದಿಗೆ ನನಗೆ ಕೆಲವು ಕಥಾಸಂಕಲನಗಳು ಸಿಕ್ಕಿವೆ. ಸದ್ಯದ ಸಾಹಿತ್ಯದ ಖಾಲೀತನವನ್ನು ಈ ಸಾಹಿತ್ಯ ತುಂಬಬಹುದೇನೋ. ಈ ನಿಟ್ಟಿನಲ್ಲಿ ದಿವ್ಯಾ ಕಾರಂತರ ಪ್ರಯತ್ನ, ವೈಯಕ್ತಿಕವಾಗಿ ನನಗೆ ಸ್ವಾಗತಾರ್ಹ.

ಈ ದೇಶದಲ್ಲಿ ಹತ್ತಾರು ಧರ್ಮಗಳು, ನೂರಾರು ಜಾತಿಗಳು. ಮೀರಿ ನಾಗರಿಕರಾಗಿ ಬದುಕಬೇಕಾದರೆ ಧರ್ಮಗಳನ್ನು ತೊಡೆಯಬೇಕು ಮತ್ತು ಬೇರೆ ಜಾತಿಗಳನ್ನು ಅಳಿಸಿ ಏಕವಾಗಬೇಕು ಅನ್ನುವ ಕನಸು ಸಹಜ. ಎಲ್ಲಾ ಮನುಷ್ಯನಿಗೂ ಮೂಲತಃ ಮನುಷ್ಯನಾಗೇ ಬಾಳಬೇಕು ಅನ್ನುವ ವಾಂಛೆ ಸಹಜವಾಗಿ ಇದ್ದೇ ಇರತ್ತೆ. ಹಾಗಿದ್ದಾಗ ಏಕಧರ್ಮ ಒಂದು ಸೂಕ್ತ ಸನ್ನಿವೇಶ. ಆದರೆ ಉದ್ಭವಿಸುವ ಪ್ರಶ್ನೆ, ಏಕಧರ್ಮ ಸರಿ ಆದರೆ ಯಾವ ಧರ್ಮ? ಮತ್ತೆ ಶುರು ಜಿಜ್ಞಾಸೆ.

ಹೊಸದೊಂದು ಹುಟ್ಟಹಾಕಬೇಕಾ? ಅಥವಾ ಇರುವ ಧರ್ಮಗಳಲ್ಲಿ ಒಂದನ್ನು ಆರಿಸಿಕೋಬೇಕಾ? ಅದನ್ನು ಮೀರಿ ಮತ್ತೆ ಶುರುವಾಗತ್ತೆ, ಯಾವ ಧರ್ಮ? ನಾನು ಹೆಚ್ಚೋ, ನೀನು ಹೆಚ್ಚೋ? ಅಲ್ಲಿಗೆ ಸಧ್ಯದ ಮನಸ್ಥಿತಿಗೆ ಬೇಕಾದ್ದು ಸರ್ವಧರ್ಮಸಹಿಷ್ಣುತೆ. ಒಂದು ಧರ್ಮ ಅದರ ಆಯಸ್ಸು ಕಳೆದು ಇನ್ನೊಂದು ಧರ್ಮ ಉದ್ಭವಿಸುವುದು ಮನುಷ್ಯನ ಇತಿಹಾಸದಲ್ಲಿ ಸ್ವಾಭಾವಿಕ ಘಟನೆ. ಅದನ್ನು ಕಾಲಕ್ಕೇ ಬಿಡುವುದು ಸೂಕ್ತವೇನೋ.

ಇನ್ನು ಜಾತಿಯ ವಿಷಯ ಬಂದರೆ, ಈ ದೇಶದ ಒಂದು ಅನಿಷ್ಟ ಪದ್ಧತಿ, ವಿವಿಧ ಜಾತಿಗಳು! ಸತ್ಯ. ತೊಡೆಯುವುದು ಹೇಗೆ? ಅಂತರಜಾತೀಯ ವಿವಾಹ ಒಂದು ಉತ್ತರವಾಗಿ ಬಂತು. ಇದನ್ನ ಪ್ರೊಗ್ರೆಸ್ಸಿವ್ ಅಂತ ಕರೆದ್ವಿ. ಹೆಣ್ಣು ಗಂಡು ಅವರವರ ಜಾತಿ ಧರ್ಮಗಳ ಸಂಕೋಲೆಗಳನ್ನು ಕಿತ್ತು ಸಹಜ ಪ್ರೀತಿಯಲ್ಲಿ ಒಂದಾಗಿ, ಹೊಸದೊಂದು ಸಾಮಾಜಿಕ ಭಾಷ್ಯ ಬರೆದರು, ಹೌದಾ? ಅಂತರಧರ್ಮೀಯ ವಿವಾಹದಲ್ಲಿ ಹೆಣ್ಣು ಹಿಂದೂಧರ್ಮೀಯಳಾಗಿದ್ದು, ಗಂಡು ಅನ್ಯಧರ್ಮೀಯನಾದಲ್ಲೆಲ್ಲ ಸಾಮಾನ್ಯವಾಗಿ ಹೆಣ್ಣು, ಗಂಡಿನ ಧರ್ಮವನ್ನೇ ಸ್ವೀಕರಿಸುತ್ತಾಳೆ. ಅದೇ ಅನ್ಯಧರ್ಮೀಯ ಹೆಣ್ಣು, ಹಿಂದೂಧರ್ಮದವನನ್ನು ಮದುವೆಯಾದರೆ, ದೇಶದಲ್ಲಿ ಶಾಂತಿ ಕದಡುತ್ತೆ, ಮನೆಗಳು ಸುಡುತ್ತವೆ, ಹೆಣಗಳು ಬೀಳುತ್ತವೆ. ಇನ್ನು ಅಂತರಜಾತೀಯ ವಿವಾಹಗಳ ಪರಿಸ್ಥಿತಿ ಸ್ವಲ್ಪ ಬೇರೆ. ಹೆಣ್ಣು ಬ್ರಾಹ್ಮಣ ಸಮುದಾಯದವಳಾಗಿದ್ದು ಗಂಡು ಅಲ್ಲದಿದ್ದರೇ, ಅದೊಂದು ಪ್ರೊಗ್ರೆಸ್ಸಿವ್ ಅನ್ನಿಸಿಕೊಳ್ಳುವ ಆಲೋಚನಾ ಲಹರಿ. ಅದೇ ಗಂಡು ಬ್ರಾಹ್ಮಣ ಸಮುದಾಯದವನಾಗಿದ್ದು ಹೆಣ್ಣು ಅಲ್ಲದಿದ್ದರೇ, ಅದೊಂದು ಎಕ್ಸಾಯಿಟೇಶನ್. ಅಂದರೆ ಅನ್ಯಜಾತಿಯ ಮೇಲೆ ಅಹಂಕಾರದ ದಬ್ಬಾಳಿಕೆ ಅನ್ನುವ ಬಣ್ಣ. ಅಲ್ಲಿಗೆ, ಜಾತಿಗಳು ತೊಡೆಯಬೇಕಾದರೆ, ಅಂತರಜಾತೀಯ ವಿವಾಹಗಳಾಗಬೇಕು ಮತ್ತು ಹೆಣ್ಣು ಬ್ರಾಹ್ಮಣ ಸಮುದಾಯದವಳೇ ಆಗಿರಬೇಕು ಅನ್ನುವಲ್ಲಿಗೆ ಬಂದು ನಿಲ್ಲತ್ತೆ. ಹಾಗೆ ನೋಡಿದರೆ ಬಹಳಷ್ಟು ಅಂತರಜಾತೀಯ ವಿವಾಹಗಳಲ್ಲಿ ಹೆಣ್ಣು ಬ್ರಾಹ್ಮಣ ಸಮುದಾಯದವಳೇ. ಅಂದರೆ ಏನು, ಬ್ರಾಹ್ಮಣ ಸಮುದಾಯದ ಹೆಣ್ಣುಮಕ್ಕಳು ಮಾತ್ರ ಬದಲಾವಣೆ ಬಯಸ್ತಾ ಇದ್ರಾ ಅಥವಾ ಸಂಸಾರ ಬಂಧನದ ಸಂಕೋಲೆಗಳಲ್ಲಿ ಸಿಕ್ಕಿ ಅವರಿಗೆ ಮಾತ್ರ ಬಿಡುಗಡೆ ಬೇಕಾಗಿತ್ತಾ ಅಥವಾ ಮಿಕ್ಕ ಸಮುದಾಯಗಳ ಹೆಣ್ಣುಮಕ್ಕಳಿಗೆ ಪ್ರೊಗ್ರೆಸ್ಸಿವ್ ಭಾವದ ಅವಶ್ಯಕತೆ ಇರಲಿಲ್ವಾ ಅಥವಾ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ, ಸುಖ ಸಂತೋಷಗಳಿಂದ ಸಂಕೋಲೆಗಳಿಲ್ಲದೆ ಬದುಕ್ತಾ ಇದ್ರಾ? ಕಾರಣ ಇದು ಅಂತ ಅನ್ನಿಸೋಲ್ಲ. ಬ್ರಾಹ್ಮಣ ಸಮುದಾಯದ ಹೆಣ್ಣುಮಕ್ಕಳನ್ನು ಪ್ರೀತಿಸಿದರೆ ಮತ್ತು ಮದುವೆಯಾದರೆ, ಬ್ರಾಹ್ಮಣರು ಗುಂಪು ಕಟ್ಟಿಕೊಂಡು ದೊಂಬಿ ಮಾಡೋಲ್ಲ. ಒಂದಾಗಿ ನಿಂತು ಪ್ರತಿಭಟಿಸೊಲ್ಲ. ಕೇರಿ ನುಗ್ಗೋಲ್ಲ. ರಕ್ತ ಹರಿಸೊಲ್ಲ. ಅಬ್ಬಬ್ಬ ಅಂದರೆ ರಾತ್ರೋರಾತ್ರಿ ಗುಟ್ಟಾಗಿ ಊರು ಬಿಡಬಹುದು. ನನಗೆ ಪರಿಚಯದ ಒಂದು ಮನೆಯಲ್ಲಿ ಪಿಂಡ ಹಾಕಿದ್ದೂ ಇದೆ, ಅಷ್ಟೆ.

ಎರಡನೆಯದು, ಕರ್ಮ ಸಿದ್ಧಾಂತ ನಂಬುವವರನ್ನು ಮದುವೆಯಾದರೆ ಸಮಸ್ಯೆ ಇರೋಲ್ಲ. ಮುಂದೆ ಸಮಸ್ಯೆ ಆದರೂ ಕರ್ಮ ಅಂತ ಅನುಭವಿಸಿಬಿಡ್ತಾರೆ. ವ್ಯತಿರಿಕ್ತವಾಗಿ ಪ್ರತಿಕ್ರಿಯಿಸೋಲ್ಲ. ಅಲ್ಲದೇ ಸಂಸಾರ ಗುಟ್ಟು, ರೋಗ ರಟ್ಟು ಅಂತ ನಂಬಿರುವವರು ಮುಚ್ಚಿಟ್ಟುಕೊಂಡೇ ಬದುಕುತ್ತಾರೆ. ಬವಣೆಗಳು ಬಯಲಿಗೆ ಬರೋದೇ ಇಲ್ಲ, ಪ್ರಪಂಚಕ್ಕೆ ಗೊತ್ತಾಗಬಾರದು! ನನ್ನ ದೃಷ್ಟಿಯಲ್ಲಿ, ಜಾತಿ ನಿರ್ಮೂಲನೆಗೆ ವಿಚಾರ ಒಂದಾದರೆ ಸಾಲದು, ಆಚಾರ ಒಂದಾಗಬೇಕು. ಮಂಚ ಒಂದಾದರೆ ಸಾಲದೇನೋ, ಅಡುಗೆ ಮನೆಗಳು ಒಂದಾಗಬೇಕೇನೋ. ಅಂತರಜಾತೀಯ ವಿವಾಹಗಳಾಗಿವೆ ಆದರೆ ಜಾತಿ ನಶಿಸ್ತಾ? ಗೊತ್ತಿಲ್ಲ. ಈ ವಾತಾವರಣ, ಸನ್ನಿವೇಶದಲ್ಲಿ ಯಾವ ಸಾಹಿತ್ಯ ಸೃಷ್ಟಿಯಾದೀತು? ಪೊಳ್ಳು ಸಿದ್ಧಾಂತಗಳು, ಸುಳ್ಳು ಘೋಷಣೆಗಳು, ಮೀರಿದ್ದು ಬಂತಾ? ನೂರರಲ್ಲಿ ಓದುಗರ ದೃಷ್ಟಿಯಿಂದ ಒಂದು ಪುಸ್ತಕ ಗೆದ್ದಿರಬಹುದು ಮಿಕ್ಕದ್ದೆಲ್ಲಾ ಲೈಬ್ರರಿಗೆ ಅಲ್ವಾ? ಇದೇನಿದ್ರೂ ಮತಲಬೀ ಸಾಹಿತ್ಯ! ಬಹುಶಃ ಸ್ತ್ರೀಯರ ಮನಸ್ಸಿಗೆ ಈ ಸಾಹಿತ್ಯ ಒಗ್ಗಲಿಲ್ಲವೇನೋ."