ಮಿಣುಕು ಹುಳಗಳು

ಮಿಣುಕು ಹುಳಗಳು

ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡು ಗಂಟೆ ಮಳೆ ಸುರಿದು, ಸಂಜೆ ಹೊಳವಾಗಿತ್ತು. ಮನೆ ಎದುರಿನ ಗದ್ದೆಗಳಲ್ಲಿ ನೀರು ತುಂಬಿದ್ದು, ಕೆಲವೇ ದಿನಗಳ ಹಿಂದೆ ಬತ್ತದ ನಾಟಿ ಮಾಡಿದ್ದರು," ಎನ್ನುತ್ತಾರೆ ಅಂಕಣಕಾರ ಮತ್ತು ಲೇಖಕ ಶ್ರೀ ಶಶಿಧರ ಹಾಲಾಡಿ. ಅವರು ‘ಮಿಣುಕು ಹುಳಗಳು’ ಕುರಿತು ಬರೆದಿರುವ ಲೇಖನವನ್ನು ನಾನು ಜಾಲತಾಣದಲ್ಲಿ ಗಮನಿಸಿದೆ. ಮಿಣುಕು ಹುಳಗಳ ಬಗ್ಗೆ ಬಹಳ ಸ್ವಾರಸ್ಯಕರವಾಗಿ ಬರೆದ ಬರಹದ ಕೆಲವು ಪ್ರಮುಖ ಅಂಶಗಳನ್ನು ಆಯ್ದು ‘ಸಂಪದ'ದಲ್ಲಿ ಹಂಚಿಕೊಳ್ಳುತ್ತಿರುವೆ.

ಭಾವಜೀವಿಗಳ ಮನದ ತುಂಬಾ ಬೆಳಕನ್ನು ತುಂಬಬಲ್ಲ ಮಿಣುಕು ಹುಳಗಳ ಮಾಯಾಲೋಕದ ಬೆರಗನ್ನು ಪೂರ್ತಿಯಾಗಿ ಅನುಭವಿಸಬೇಕಾದರೆ, ನೀವೊಮ್ಮೆ ಅವುಗಳ ಬೆಳಕಿನಾಟವನ್ನು ನೋಡಲೇಬೇಕು ಹೊರತು ಅಕ್ಷರದಲ್ಲಿ ವರ್ಣಿಸುವುದು ಕಷ್ಟ. ಅದರಲ್ಲೂ, ಮಿಣುಕುಹುಳಗಳು, ಒಮ್ಮೊಮ್ಮೆ ನಡೆಸುವ “ಬೆಳಕಿನ ಪರಿಷೆ”ಯಂತೂ, ಈ ನಿಸರ್ಗಲೋಕದ ಅದ್ಭುತ ದೃಶ್ಯಗಳಲ್ಲಿ ಒಂದು ಮತ್ತು ಅದೊಂದು ವಿಸ್ಮಯಕಾರಿ ವಿದ್ಯಮಾನ. ಮಿಣುಕು ಹುಳಗಳ ವಿಚಾರವನ್ನು ಬರೆಯುವಾಗ, ಬಹುಷಃ ಅವುಗಳ `ಬೆಳಕಿನ ಪರಿಷೆ'ಯ ವಿವರದಿಂದಲೇ ಆರಂಭಿಸುವುದು ವಿಹಿತ.

ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡು ಗಂಟೆ ಮಳೆ ಸುರಿದು, ಸಂಜೆ ಹೊಳವಾಗಿತ್ತು. ಮನೆ ಎದುರಿನ ಗದ್ದೆಗಳಲ್ಲಿ ನೀರು ತುಂಬಿದ್ದು, ಕೆಲವೇ ದಿನಗಳ ಹಿಂದೆ ಬತ್ತದ ನಾಟಿ ಮಾಡಿದ್ದರು. ಗದ್ದೆಬೈಲಿನ ಒಂದಂಚಿನಲ್ಲಿ, ಮನೆಯಿಂದ ಸುಮಾರು 100 ಅಡಿಗಳ ದೂರದಲ್ಲಿ, ನೀರು ಹರಿಯುವ ತೋಡು. ಅದರ ದಡದಲ್ಲಿ ಮುಂಡುಕನ ಹಿಂಡಲಿನ ಜತೆಯಲ್ಲೇ, ಸಳ್ಳೆ, ನೇರಳೆ, ಕಾಡುಮಾವು ಮೊದಲಾದ ಪೊದೆಗಿಡಗಳು ಪುಟ್ಟ ಮರದ ಗಾತ್ರಕ್ಕೆ ಬೆಳೆದಿದ್ದವು.

ಒಮ್ಮೆಗೇ, ಆ ಪ್ರದೇಶದಲ್ಲಿದ್ದ ಸಾವಿರಾರು ಮಿಣುಕುಹುಳಗಳು, `ಈಗ ಒಂದು ಬೆಳಕಿನ ಸಭೆ ನಡೆಸುವಾ!' ಎಂದು ನಿರ್ಧರಿಸಿರಬೇಕು. ಸಂಜೆಗತ್ತಲಿನಲ್ಲಿ ಬೈಲಿನುದ್ದಕ್ಕೂ ಅಲ್ಲಲ್ಲಿ ಹಾರಾಡುತ್ತದ್ದ ಪುಟಾಣಿ ಮಿಣುಕು ಹುಳಗಳೆಲ್ಲವೂ, ನಿಧಾನವಾಗಿ, ತೋಡಿನಂಚಿನ ಒಂದು ಮರದತ್ತ ಧಾವಿಸಿ, ಆ ಮರವನ್ನು ಮುತ್ತಿ ಕುಳಿತವು. ಮಬ್ಬುಗತ್ತಲಿನಲ್ಲಿ ಅವು ಹಾರಾಡುವುದನ್ನು, ಅವುಗಳ ಬೆಳಕಿನ ದಾರಿಯಿಂದಲೇ ಗುರುತಿಸಬಹುದಿತ್ತು. ಕತ್ತಲು ತುಂಬಿದ ಗದ್ದೆಬಯಲಿನಲ್ಲಿ, ನೆಲಮಟ್ಟದಿಂದ ಸುಮಾರು ಮೂರರಿಂದ ಆರು ಅಡಿಗಳ ಎತ್ತರದಲ್ಲಿ, ಬೆಳಕನ್ನು ಮಿನುಗಿಸುತ್ತಾ ಆ ಮಿಣುಕು ಹುಳಗಳು ಹಾರಾಡುವ ಪರಿಯೇ ಒಂದು ದೃಶ್ಯ ಕಾವ್ಯ. ಮಿಣುಕು ಮಿಣುಕು ಎಂದು ನಿಧಾನವಾಗಿ ಹಾರಾಡುತ್ತಾ, ಒಂದೊಂದೇ ಮಿಣುಕುಹುಳವು ಆ ಮರದಲ್ಲಿ ಸೇರಿಕೊಳ್ಳುವ ನೋಟವು, ದೃಶ್ಯ ಕಾವ್ಯಕ್ಕೂ ಮಿಗಿಲು.

ಅಷ್ಟು ಹೊತ್ತಿಗೆ ಅಲ್ಲೆಲ್ಲಾ ಕತ್ತಲು ಪೂರ್ತಿ ಆವರಿಸಿರುತ್ತದೆ. ಆ ಮಧ್ಯಮಗಾತ್ರದ ಮರದ ತುಂಬಾ ಮಿಣುಕುಹುಳಗಳು ಸಭೆ ನಡೆಸಲು ಆರಂಭಿಸಿದವು. ಮನುಷ್ಯರ ಸಭೆಯಾದರೆ ಸಾಕಷ್ಟು ಸದ್ದು ಗದ್ದಲ; ಆದರೆ, ಮಿಣುಕುಹುಳಗಳ ಸಭೆಯಲ್ಲಿ ಸದ್ದು ಗದ್ದಲವಿಲ್ಲ, ಬೆಳಕಿನದ್ದೇ ರಾಜ್ಯಭಾರ. ಎಲ್ಲಾ ಮಿಣುಕು ಹುಳಗಳು ಮಿಣುಕು ಮಿಣುಕು ಬೆಳಕನ್ನು ಬೀರುತ್ತಾ, ಪರಸ್ಪರ ಸಂಭಾಷಿಸುತ್ತಿದ್ದವು! ಅವು ಮಿನುಗುವ ರೀತಿಯಲ್ಲೂ ಒಂದು ಶಿಸ್ತು ಇರುತ್ತದೆ. ಮರದ ಒಂದು ಭಾಗದ ನೂರಾರು ಹುಳಗಳು ಝಗ್ ಎಂದು ಮಿನುಗಿದರೆ, ಅದಾಗಿ ಒಂದೆರಡು ಸೆಕೆಂಡುಗಳ ಅಂತರದಲ್ಲಿ ಇನ್ನೊಂದು ಭಾಗದಲ್ಲಿ ಕುಳಿತ ಮಿಣುಕು ಹುಳಗಳ ಬೆಳಕು ಬೀರಬಹುದು. ಅಥವಾ ಒಮ್ಮೊಮ್ಮೆ ಎಲ್ಲಾ ಹುಳಗಳೂ ಒಮ್ಮೆಗೇ ಝಗ್ ಎಂದು ಬೆಳಕನ್ನು ಬೀರಿ, ಆ ಕತ್ತಲ ರಾತ್ರಿಯ ಬಯಲಿಗೆ ಬೆಳಕಿನ ಸರಮಾಲೆಯನ್ನೇ ತೊಡಿಸುತ್ತವೆ. ನಮ್ಮೂರಿಗೆ ಆಗಿನ್ನೂ ವಿದ್ಯುತ್ ಸಂಪರ್ಕ ಬಂದಿರಲಿಲ್ಲ; ಅಂತಹ ಕತ್ತಲ ರಾತ್ರಿಯಲ್ಲಿ ಈ ರೀತಿ ಸಾವಿರಾರು ಮಿಣುಕು ಹುಳಗಳು, ಒಂದು ಮರದ ಮೇಲೆ ಕುಳಿತು, ಪರಸ್ಪರ ಸಂದೇಶಪಡೆದವರಂತೆ ಒಮ್ಮೆಗೇ ಎಲ್ಲವೂ ಬೆಳಕನ್ನು ಬೀರಿದಾಗ, ಝಗಮಗಿಸುವ ಬೆಳಕಿನ ಸ್ವರೂಪವು ನೋಡುಗರ ಮೇಲೆ ಮಾಡುವ ಮೋಡಿಯನ್ನು ನೀವೇ ಊಹಿಸಿ.

ಸಂಜೆ ಏಳು ಅಥವಾ ಎಂಟು ಗಂಟೆಯ ಸಮಯದಲ್ಲಿ ಈ ರೀತಿ ಸಾವಿರಾರು ಮಿಣುಕು ಹುಳಗಳು, ಮರವೊಂದರ ಮೇಲೆ ಕುಳಿತು ಬೆಳಕಿನ ಪರಿಷೆಯನ್ನು ನಡೆಸುವ ವಿದ್ಯಮಾನವು, ಸಾಮಾನ್ಯವಾಗಿ ಮಳೆಗಾಲದ ಮೊದಲ ಕೆಲವು ವಾರಗಳಲ್ಲಿ ಕಾಣಸಿಗುತ್ತದೆ. ಜೂನ್ ಎರಡನೆಯ ವಾರದ ನಂತರ, ಅಂದರೆ ಆ ಪ್ರದೇಶದಲ್ಲಿ ಸಾಕಷ್ಟು ಮಳೆಯಾದ ನಂತರವಷ್ಟೇ ಮಿಣುಕುಹುಳಗಳ ಪರಿಷೆಯನ್ನು ಕಾಣಬಹುದು. ಒಂದು ಮರದಲ್ಲಿ ಈ ರೀತಿ ಸಾವಿರಾರು ಮಿಣುಕು ಹುಳಗಳು ಗುಂಪಾಗಿ ಕುಳಿತು, ಸುಮಾರು ಒಂದು ಗಂಟೆಯ ತನಕ ಕತ್ತಲಿನಲ್ಲೇ ಬೆಳಕಿನ ಪರಿಷೆಯನ್ನು ನಡೆಸಿ, ಕ್ರಮೇಣ ಒಂದೊಂದಾಗಿ ಚದುರುತ್ತವೆ. ಒಮ್ಮೊಮ್ಮೆ, ಮಿಣುಕು ಹುಳಗಳ ಬೆಳಕಿನ ಸಭೆಯ ನಡುವೆಯೇ, ಮಳೆರಾಯನು ಕರಡಿಯ ರೀತಿ ಪ್ರವೇಶ ನೀಡುವುದುಂಟು; ಸಾವಿರಾರು ಬೆಳಕುಗಳ ಮಿನುಗುಗಳ ನಡುವೆ, ಸದ್ದು ಮಾಡುತ್ತಾ ಸುರಿವ ಮಳೆಯ ನೋಟವು, ನೋಡುಗರ ಮನದಲ್ಲೇ ಬೇರೊಂದೇ ಅಮೂರ್ತ ಭಾವನೆಗಳನ್ನು ಮೂಡಿಸಬಲ್ಲವು; ಸಣ್ಣಗೆ ಮಳೆ ಸುರಿದರೆ ಮಿಣುಕು ಹುಳಗಳ ಬೆಳಕಿನ ಪರಿಷೆ ಮುಂದುವರಿದೀತು; ದಬದಬನೆ ಸುರಿವ ಮಳೆಯನ್ನು ಕಂಡು, ಅವು ತಮ್ಮ ಬೆಳಕಿನ ಸಭೆಯನ್ನು ಬರಕಾಸ್ತು ಮಾಡುತ್ತವೋ ಏನೋ. ಹೆಚ್ಚು ಮಳೆಸುರಿದರೆ, ಅವುಗಳ ಬೆಳಕಿನ ಪರಿಷೆಯ ನೋಟವು, ತುಸು ದೂರದಲ್ಲಿದ್ದ ನಮ್ಮ ಮನೆಗೆ ಕಾಣಿಸಲಾರದು.

ಅದೇನೇ ಇದ್ದರೂ, ಮಳೆ ಬಾರದೇ ಇದ್ದ ಸಂಜೆಗಳಲ್ಲಿ, ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆಯ ತನಕ ಬೆಳಕಿನ ಪರಿಷೆಯನ್ನು ನಡೆಸಿದ ಮಿಣುಕು ಹುಳಗಳು, ಒಂದೊಂದಾಗಿ ಚದುರುತ್ತವೆ. ಕತ್ತಲಿನ ಆ ರಾತ್ರಿಯಲ್ಲಿ, ಗದ್ದೆ ಬಯಲಿನುದ್ದಕ್ಕೂ ಚಲಿಸುತ್ತಾ, ಮಿಣುಕು ಮಿಣುಕು ಎಂದು ತಮ್ಮ ಹಿಂಭಾಗದಿಂದ ಬೆಳಕು ಮಾಡುತ್ತ, ತಮ್ಮ ದಿನಚರಿಯಲ್ಲಿ ವ್ಯಸ್ತವಾಗುತ್ತವೆ. ಮಿಣುಕುಹುಳಗಳ ದಿನಚರಿ ಎಂದರೇನು? ಬಾಲದಂತಹ ಭಾಗದಿಂದ ಮಿಣುಕು ಮಿಣುಕು ಎಂದು ಬೆಳಕು ಮಾಡುತ್ತಾ ಅತ್ತಿಂದಿತ್ತ ಹಾರಾಡುವುದು! ಅಷ್ಟೇ ತಾನೆ ನಮಗೆ ಗ್ರಾಹ್ಯವಾಗುವುದು. ಆದರೆ, ಅವುಗಳ ಲೋಕವೇ ವಿಭಿನ್ನ. ಒಂದು ಮರದಲ್ಲಿ ಸಾವಿರಾರು ಮಿಣುಕು ಹುಳಗಳು ಸಭೆ ಸೇರಿದಂತೆ ಕುಳಿತು, ಒಮ್ಮೆಗೇ ಝಗ್ ಎಂದು ಬೆಳಕು ಮಾಡುವ ಕ್ರಿಯೆಯನ್ನು ಅವುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯೆ ಭಾಗ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಮಿಣುಕು ಹುಳಗಳ ಮಾಯಾಲೋಕದ ರಹಸ್ಯಗಳನ್ನು ಪೂರ್ತಿಯಾಗಿ ಮಾನವನು ಇನ್ನೂ ಅರಿತಿಲ್ಲ ಎಂದೇ ಹೇಳಬಹುದು. ಈ ಆಧುನಿಕ ಯುಗದಲ್ಲೂ ಮಿಣುಕು ಹುಳಗಳ ಬದುಕು ಮನುಷ್ಯನಿಗೆ ಒಂದು ವಿಸ್ಮಯ, ರಹಸ್ಯ ಎನಿಸಿದೆ; ಉದಾಹರಣೆಗೆ, ಮಿಣುಕು ಹುಳಗಳು ಒಂದಿಷ್ಟೂ ಬಿಸಿಯನ್ನು ತೋರದೆ, ಬೆಳಕನ್ನು ತಮ್ಮ ದೇಹದಲ್ಲಿ ಉತ್ಪತ್ತಿ ಮಾಡುವುದು ಹೇಗೆ ಎಂಬ ರಹಸ್ಯವನ್ನು ನಮ್ಮ ವಿಜ್ಞಾನವಿನ್ನೂ ಪೂರ್ತಿಯಾಗಿ ಭೇದಿಸಿಲ್ಲ.

ನಮ್ಮ ಹಳ್ಳಿ ಮನೆಯ ಅನತಿ ದೂರದಲ್ಲಿ, ಆ ರಾತ್ರಿ ಬೆಳಕಿನ ಪರಿಷೆಯನ್ನು ನಡೆಸಿದ ಮಿಣುಕು ಹುಳಗಳು, ಒಂದೊಂದಾಗಿ ಹಾರಾಡುತ್ತಾ ಚದುರಿದವು ಎಂದೆನಲ್ಲ, ಅವು ಪುನಃ ಮರುದಿನವೂ ಅದೇ ಮರದಲ್ಲಿ ಬೆಳಕಿನ ಸಭೆಯನ್ನು ನಡೆಸುತ್ತವೆಯೇ ಎಂದು ನೀವು ಕೇಳಬಹುದು. ಮಳೆಗಾಲದ ಮೊದಲ ಕೆಲವು ವಾರಗಳಲ್ಲಿ, ಒಂದೊಂದು ದಿನ ಮಾತ್ರ ಈ ರೀತಿಯ ಬೆಳಕಿನ ಸಭೆ, ಅಂದರೆ, ಒಂದೇ ಮರದಲ್ಲಿ ಸಾವಿರಾರು ಮಿಣುಕು ಹುಳಗಳು ಸೇರಿ, ಬೆಳಕನ್ನು ಒಮ್ಮೆಗೇ ಉತ್ಪತ್ತಿ ಮಾಡುವ ಚಟುವಟಿಕೆಯನ್ನು ನಡೆಸುತ್ತವೆ. ಮಳೆಗಾಲ ಮುಂದುವರಿದಂತೆ, ಅಂದರೆ, ಮಳೆ ಬೀಳುವುದು ಆರಂಭವಾಗಿ ನಾಲ್ಕಾರು ವಾರಗಳ ನಂತರ, ಅವುಗಳ ಬೆಳಕಿನ ಸಭೆ ನಡೆಸುವುದಿಲ್ಲ. ಬದಲಿಗೆ, ತಮ್ಮ ಬಾಲದಂತಹ ಭಾಗದಲ್ಲಿ ಬೆಳಕನ್ನು ಉತ್ಪಾದಿಸುತ್ತ, ಹಾರಾಡುತ್ತಾ ಇರುತ್ತವೆ. ಈ ರೀತಿ ಹಾರಾಡುವಾಗ, ಒಮ್ಮೊಮ್ಮೆ ಮನೆಯೊಳಗೂ ಬರುವುದುಂಟು. ಮನೆಯೊಳಗೆ ಬರುವ ಮಿಣುಕು ಹುಳಗಳು, ಆ ಮನೆಯಲ್ಲಿ ಹಿಂದೆ ವಾಸವಾಗಿದ್ದ ಹಿರಿಯರ ಆತ್ಮ ಎಂದೂ ತಿಳಿಯುವುದುಂಟು. ಮನುಷ್ಯನ ಬೆರಗಿಗೆ ಗ್ರಾಸವಾದ ಮಿಣುಕು ಹುಳಗಳ ಮಾಯಾಲೋಕವು, ಪುರಾತನ ಕಾಲದಿಂದಲೂ ಮಾನವಸಂಸ್ಕೃತಿಯ ಭಾಗವಾಗಿರುವುದನ್ನು ಜಗತ್ತಿನ ಬೇರೆ ಬೇರೆ ಕಡೆ ಗುರುತಿಸಿದ್ದಾರೆ.

ಜಗತ್ತಿನಲ್ಲಿ ಸುಮಾರು 2200 ಮಿಣುಕುಹುಳಗಳ ಪ್ರಭೇಗಳನ್ನು ಗುರುತಿಸಿದ್ದಾರೆ. ನಮ್ಮ ದೇಶದಲ್ಲಿ ಸುಮಾರು ೫೦ ಪ್ರಭೇದದ ಮಿಣುಕುಹುಳಗಳಿವೆ. ವಿಶೇಷವೆಂದರೆ, ನಾನು ಈಗ ತಾನೆ ಬೆರಗಿನಿಂದ ಹೇಳಿದ ಮಿಣುಕು ಹುಳಗಳ ಪರಿಷೆಯನ್ನು ನಡೆಸುವವು, ಗಂಡು ಮಿಣುಕು ಹುಳಗಳು. ಹೆಣ್ಣು ಮಿಣುಕು ಹುಳಗಳು ಗಿಡಗಳ ಮೇಲೆ ಕುಳಿತು, ಬೆಳಕು ಬೀರಿ ಗಂಡು ಹುಳಗಳನ್ನು ಆಕರ್ಷಿಸುತ್ತವೆ. ಮಿಣುಕುಹುಳಗಳ ಲಾರ್ವಾಗಳು ನೆಲದ ಮೇಲೆ ತೆವಳುವ ಸಹಸ್ರಪದಿಗಳನ್ನು ಹೋಲುತ್ತವೆ ಮತ್ತು ಅವೂ ಸಹ ಬೆಳಕನ್ನು ಬೀರುತ್ತವೆ. ಲಾರ್ವಾ ಮತ್ತು ಪ್ಯೂಪಾ ಅವಧಿಯು ಒಂದು ವರ್ಷಕ್ಕಿಂತ ಅಧಿಕ.ಗಂಡು ಹುಳಗಳು ಮಿಣುಕು ಮಿಣುಕು ಎಂದು ಬೆಳಕು ಮಾಡಿದರೆ, ಹೆಣ್ಣು ಹುಳಗಳು ನಿರಂತರ ಬೆಳಕನ್ನು ಬೀರುವುದುಂಟು. ಬಯೋಲ್ಯೂಮಿನೆಸೆನ್ಸ್ ಎಂಬ ಪ್ರಕ್ರಿಯೆಯ ಮೂಲಕ ಮಿಣುಕು ಹುಳಗಳು ತಮ್ಮ ದೇಹದಲ್ಲಿ ಬೆಳಕನ್ನು ಉಂಟು ಮಾಡುತ್ತವೆ ಎನ್ನಬಹುದು.

ಇಷ್ಟು ಹೇಳಿದ ಮಾತ್ರಕ್ಕೆ, ಏನನ್ನೂ ಹೇಳಿದಂತಾಗುವುದಿಲ್ಲ. ಏಕೆಂದರೆ, ಈ ರೀತಿ ಬೆಳಕನ್ನು ಉಂಟು ಮಾಡುವ ಸಾವಿರಾರು ಪ್ರಭೇದದ ಜೀವಿಗಳು ಈ ಜಗತ್ತಿನಲ್ಲಿವೆ; ಕೆಲವು ಪ್ರಭೇದದ ಮೀನುಗಳು ಸಹ ಬೆಳಕನ್ನು ಬೀರುವುದುಂಟು. ಅಷ್ಟೇಕೆ, ಕೊಳೆತು ಕುಂಬಾದ ಮರದ ಮೇಲೆ ಬೆಳೆಯುವ ಕೆಲವು ಅಣಬೆಗಳು ಸಹ ರಾತ್ರಿಹೊತ್ತಿನಲ್ಲಿ ಬೆಳಗುತ್ತವೆ - ಇಡೀ ಮರದ ತುಂಬಾ ಬೆಳೆದ ಅಣಬೆಗಳು ಕತ್ತಲಿನಲ್ಲಿ ಹೊಳೆಯುವುದನ್ನು ಕಂಡು, ಹಿಂದಿನ ಕಾಲದಲ್ಲಿ ಅದನ್ನೊಂದು ಕೊಳ್ಳಿ ದೆವ್ವ ಎಂದು ಮನುಷ್ಯ ತಿಳಿದಿದ್ದರೂ ಇರಬಹುದು!

ನಮ್ಮೂರಿನಲ್ಲೂ ಈಚಿನ ದಶಕಗಳಲ್ಲಿ, ಗದ್ದೆ ಮತ್ತು ಅಡಕೆಯಂತಹ ಬೆಳೆಗಳಿಗೆ ವಿವಿಧ ರೀತಿಯ ಕೀಟನಾಶಕಗಳನ್ನು ಸಿಂಪಡಿಸುವ ಪದ್ಧತಿಯು ಸಾರ್ವತ್ರಿಕವಾಗಿರುವುದರಿಂದ, ಸಹಜವಾಗಿ ಮತ್ತು ಅವಶ್ಯವಾಗಿ ಅದು ಮಿಣುಕು ಹುಳಗಳ ಬದುಕಿನ ಮೇಲೆ, ಜೀವನ ಚಕ್ರದ ಮೇಲೆ ದುಷ್ಪರಿಣಾಮವನ್ನು ಬೀರಿರಲೇ ಬೇಕು. ಆದರೆ, ಕೀಟನಾಶಕಗಳಿಂದಗಿ ಮಿಣುಕುಹುಳಗಳ ಸಂತತಿ ಅಪಾಯಕ್ಕೆ ಸಿಲುಕಿರುವ ಕುರಿತಾಗಿ ನಮ್ಮ ರಾಜ್ಯದಲ್ಲಿ ಅಧ್ಯಯನ ನಡೆದ ವಿವರಗಳು ಹೆಚ್ಚು ಪ್ರಚುರಗೊಂಡಿಲ್ಲ.

ನಮ್ಮ ದೇಶದ ಹಲವು ಕಡೆ ಮಿಣುಕುಹುಳಗಳ ಸಂತತಿ ಇದೆ. ಮುಖ್ಯವಾಗಿ ಹೆಚ್ಚು ಗಿಡಮರಗಳಿರುವ ಸಹ್ಯಾದ್ರಿಯ ಕಾಡುಗಳಲ್ಲಿ, ಹಿಮಾಲಯದ ಕಾಡಿನಲ್ಲಿ, ಕಾಡಿನಂಚಿನ ಹಳ್ಳಿಗಳಲ್ಲಿ ಇವುಗಳನ್ನು ಕಾಣಬಹುದು. ಮಹಾರಾಷ್ಟ್ರದಲ್ಲಿ ೨೦೨೩ರಲ್ಲಿ ಮಿಣುಕು ಹುಳಗಳನ್ನು ವೀಕ್ಷಿಸುವ ಪ್ರವಾಸ ಮತ್ತು ಚಾರಣದ ಚಟುವಟಿಕೆ ನಡೆದ ವರದಿಯಾಗಿದೆ; ಯು.ಎಸ್. ಮೊದಲಾದ ಮುಂದುವರಿದ ದೇಶಗಳಲ್ಲಿ ಮಿಣುಕುಹುಳಗಳ ವೀಕ್ಷಣೆಯು ಒಂದು ಪ್ರಮುಖ ಪ್ರವಾಸ ಚಟುವಟಿಕೆಯಾಗಿ ಮತ್ತು ವಿದ್ಯಾರ್ಥಿಗಳ ಅಧ್ಯಯನದ ವಿಷಯವಾಗಿಯೂ ಪ್ರಚಾರದಲ್ಲಿದೆ. ಅಂತಹದೇ ಚಟುವಟಿಕೆಯನ್ನು ನಮ್ಮ ದೇಶದಲ್ಲೂ ಈಚಿನ ವರ್ಷಗಳಲ್ಲಿ ನಡೆಸುವ ಪ್ರಯತ್ನಗಳು ಅಲ್ಲಲ್ಲಿ ನಡೆದಿರುವುದನ್ನು ಕಾಣಬಹುದು. ಆದರೆ, ಇಂತಹ ಚಟುವಟಿಕೆಗಳಿಂದಲೂ ಮಿಣುಕುಹುಳಗಳ ಜೀವನಪದ್ಧತಿಗೆ ತೊಂದರೆಯಾಗಬಹುದೆಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪರಸ್ಪರ ಬೆಳಕಿನ ಸಂಭಾಷಣೆಯ ಮೂಲಕ ಸಂತಾನೋತ್ಪತ್ತಿಗೆ ಸಂಗಾತಿಯನ್ನು ಹುಡುಕುವ ಮಿಣುಕು ಹುಳಗಳಿಗೆ, ಟಾರ್ಚ್ ಬೆಳಕು, ಹೋಂಸ್ಟೇಗಳ ಪ್ರಖರ ಬೆಳಕು ಗೊಂದಲ ಉಂಟುಮಾಡಲೂಬಹುದು ಎಂಬ ಕಳವಳವನ್ನು ಸಹ ವ್ಯಕ್ತಪಡಿಸಲಾಗಿದೆ. ಸಾವಿರಾರು ಮಿಣುಕು ಹುಳಗಳು ಒಂದೆಡೆ ಸೇರಿ ಮಳೆಗಾಲದಲ್ಲಿ ನಡೆಸುವ ಬೆಳಕಿನ ಪರಿಷೆಯನ್ನು ನೋಡಲು ಬಯಸುವವರು, ಬಹುಷಃ ಇದನ್ನು ಸಹ ನೆನಪಿನಲ್ಲಿಟ್ಟುಕೊಳ್ಳಬೇಕಾದೀತು.

ನಮ್ಮ ರಾಜ್ಯದ ಮಟ್ಟಿಗೆ ಹೇಳುವುದಾದರೆ, ಹೆಚ್ಚು ಮರಗಿಡಗಳಿರುವ ಎಲ್ಲಾ ಊರುಗಳಲ್ಲೂ ಮಿಣುಕುಹುಳಗಳನ್ನು ಕಾಣಬಹುದು. ಬೆಂಗಳೂರು ನಗರದ ಅಂಚಿನಲ್ಲಿರುವ ಕೆಂಗೇರಿಯಂತಹ ಪ್ರದೇಶಗಳಲ್ಲೂ ಮಿಣುಕುಹುಳಗಳನ್ನು ನಾಲ್ಕಾರು ಮಿಣುಕು ಹುಳಗಳನ್ನು ನಾನು ಕಂಡಿದ್ದೆ. ಬೆಂಗಳೂರು ಸರಹದ್ದಿನ ಕಾಡುಪ್ರದೇಶಗಳಲ್ಲಿ, ಸ್ಯಾಂಕಿ ಕೆರೆ, ಹೆಬ್ಬಾಳ ಕೆರೆ ಪರಿಸರ, ನಂದಿ ಬೆಟ್ಟ ಮೊದಲಾದ ಪ್ರದೇಶಗಳಲ್ಲಿ ಮಿಣುಕುಹುಳಗಳಿರುವುದನ್ನು ಎಂಪ್ರಿ ಸಂಸ್ಥೆ ಗುರುತಿಸಿದೆ. ಆದರೆ ಅವುಗಳ ವ್ಯಾಪಕ ಅಧ್ಯಯನ, ಪ್ರಖರ ಬೆಳಕಿನಿಂದ ಅವುಗಳಿಗೆ ಒದಗಿದ ಸಂಕಷ್ಟ ಮೊದಲಾದ ವಿದ್ಯಮಾನಗಳು ಇನ್ನಷ್ಟೇ ಖಚಿತ ಅಧ್ಯಯನಕ್ಕೆ ಒಳಪಡಬೇಕಿದೆ. ಇಂತಹ ಅಧ್ಯಯನಗಳನ್ನು ನಮ್ಮ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಅಗತ್ಯವಾಗಿ ಮಾಡಬೇಕಿದೆ.

ನಿಮ್ಮೂರಿನಲ್ಲೂ ಮಿಣುಕುಹುಳಗಳಿರಬಹುದು; ಕತ್ತಲ ರಾತ್ರಿಯಲ್ಲಿ ಆ ವಿಶಿಷ್ಟ ಕೀಟಗಳನ್ನು ಗುರುತಿಸುವ ಪ್ರಯತ್ನ ಮಾಡಿ, ನಿಸರ್ಗದ ವಿಸ್ಮಯಕಾರಿ ಬೆಳಕಿನ ಕಾವ್ಯಕ್ಕೆ ಸಾಕ್ಷಿಯಾಗಿ! 

-ಶಶಿಧರ ಹಾಲಾಡಿ

(ಚಿತ್ರಕೃಪೆ: ಅಂತರ್ಜಾಲ)

(ಸಂಗ್ರಹ) ಸಂತೋಷ ಕುಮಾರ್, ಸುರತ್ಕಲ್