ಮಿತ್ರಾ ಹಿರಣ್ಯಕಾ..
ಮಕ್ಕಳೆ ಕೇಳಿ ಕಥೆಯನು ಹೇಳುವೆ|
ಬೇಟೆಯ ಬೇಡನ ಬಲೆಯಲಿ ಬಂಧಿತ|
ಕಪೋತ ಬಳಗವು ಕಷ್ಟದಿ ಸಿಲುಕಲು |
ಅಳುವುದ ಬಿಟ್ಟು ಯುಕ್ತಿಯ ಹೂಡಿ |
ಧೈರ್ಯದಿ ಒಟ್ಟಿಗೆ ಒಗ್ಗಟ್ಟಲಿ ಹಾರಿ|
ಮಿತ್ರನ ಸಹಾಯದಿ ಬಿಡುಗಡೆ ಪಡೆದ|
ಕಥೆಯನು ಕನ್ನಡ ಕಣ್ಮಣಿಗಳೆ ಕೇಳಿ||
ಪಂಪಾತೀರದ ಹಂಪೆಯ ಕಾಡಲಿ|
ಚಿತ್ರಗ್ರೀವನು ಕಪೋತ ರಾಜನು|
ತನ್ನಯ ಬಳಗದ ಜೊತೆಯಲೆ ಇರುವನು|
ನಿತ್ಯವು ಹಾರುತ ಕಾಳನು ಹುಡುಕುತ |
ಹೊಟ್ಟೆಯ ತುಂಬಿಸಿ ಮರಿಗಳ ಪೊರೆಯುತ|
ಬಾನಲಿ ನಲಿಯುತ ಸುಖದಿಂದಿರುವ|
ಕಪೋತ ಬಳಗವ ನಿತ್ಯವು ನೋಡಲು|
ಬಲೆಯನು ಬೀಸಿ ಹಿಡಿಯುವ ಆಸೆಯು |
ಹೆಚ್ಚಿತು ಮನದಲಿ ಬೇಟೆಯ ಬೇಡಗೆ|
ಹೊರಗಡೆ ಹೊಲದಲಿ ಅಕ್ಕಿಯ ಬೀರಿದ|
ಕೆಳಗಡೆ ಠಕ್ಕಿನ ಬಲೆಯನು ಹರಡಿದ|
ಅಕ್ಕಿಯು ಕೆಳಗಡೆ ಬಲೆಯದು ಮೇಲೆ|
ಹಕ್ಕಿಯ ಹಿಡಿಯಲು ಕುಳಿತನು ಹೊಂಚಿ ||
ಮೋಸವ ತಿಳಿಯದ ಕಪೋತ ಬಳಗವು|
ಹರಡಿದ ಅಕ್ಕಿಯ ನೋಡಲು ಕೆಳಗಡೆ|
ಅಕ್ಕಿಯ ಆಸೆಗೆ ಹಸಿವೆಯು ಹೆಚ್ಚಲು|
ನಲಿಯುತ ಇಳಿದು ಅಕ್ಕಿಯ ಮುಕ್ಕಲು|
ಬೇಡನ ಬಲೆಯಲಿ ಮೋಸದಿ ಸಿಲುಕಲು|
ಮಿತ್ರರ ರೋದನ ಮುಗಿಲನು ಮುಟ್ಟಲು|
ರೋದಿಸೆ ಏನೂ ಪ್ರಯೋಜನ ವಾಗದು|
ಧೈರ್ಯವಗೆಡದೆ ಚತುರತೆಯಿಂದಲೆ|
ಬಿಡುಗಡೆ ಪಡೆಯುವ ಯೋಜನೆಯೊಂದಿದೆ|
ಗಲಾಟೆ ಮಾಡದೆ ಕೇಳಿರಿ ಸುಮ್ಮನೆ|
ಚಾಚೂ ತಪ್ಪದೆ ಪಾಲಿಸಿ ಸೂಚನೆ|
ಎನ್ನುತ ರಾಜನು ಧೈರ್ಯವ ತುಂಬಲು||
ಮತಂಗ ಪರ್ವತ ಗುಹೆಯಾ ಬಿಲದಲಿ|
ಹಿರಣ್ಯಕನೆಂಬ ಮೂಷಿಕ ರಾಜನು|
ನನ್ನಯ ನಲ್ಮೆಯ ಸ್ನೇಹಿತನಿರುವನು|
ಅವನೇ ಬಂಧನ ಬಿಡಿಸುವ ಬಂಧುವು|
ಹೆಮ್ಮೆಯ ರೆಕ್ಕೆಯೆ ನಮ್ಮಯ ಶಕ್ತಿಯು|
ತಲೆಯೊಳಗಿರಲು ಬುದ್ಧಿಯ ಯುಕ್ತಿಯು|
ಬೇಡನು ಬರಲು ಮೂರನು ಎಣಿಸುವೆ|
ಬಲೆಯ ಸಮೇತವೆ ಒಟ್ಟಿಗೆ ಹಾರುವ|
ಎಂದನು ಧೈರ್ಯದ ಕಪೋತ ರಾಜನು|
ಬೇಡನು ಬರುತಿಹ ಸದ್ದನು ಕೇಳಲು|
ಮೂರನೆ ಸಂಖ್ಯೆಯ ತಕ್ಷಣ ಹೇಳಲು|
ಒಗ್ಗಟ್ಟಲಿ ಎಲ್ಲರು ಒಟ್ಟಿಗೆ ಹಾರಲು||
ಬಾಯನು ಬಿಡುತಲಿ ಬೇಡನು ನೋಡಿದ|
ಓಡಿದ ಬೇಡನು ಬೊಬ್ಬೆಯ ಹೊಡೆಯುತ|
ಬಲೆಯ ಸಮೇತ ಬಾನಲಿ ಹಾರುವ|
ಪಾರಿವಾಳಗಳ ಕೋಪದಿ ಬೈಯುತ|
ಹಕ್ಕಿಯು ಸಿಕ್ಕದೆ ಬಲೆಯೂ ಸಿಕ್ಕದೆ|
ಬೇಡನು ನಡೆದನು ಏನೂ ದಕ್ಕದೆ||
ಗಗನದಿ ಹಾರುತ ಬಲೆಯನು ಹೊತ್ತು|
ಮತಂಗ ಪರ್ವತ ಮುಟ್ಟಿದ ಮಿತ್ರರು|
ಇಳಿದರು ಇಲಿಯ ಬಿಲದಾ ಬಳಿಯಲಿ|
ಮಿತ್ರಾ ಹಿರಣ್ಯಕಾ ಮಿತ್ರಾ ಹಿರಣ್ಯಕಾ|
ಆತಂಕದಿ ಕೂಗಲು ಕಪೋತರಾಜನು|
ಓಡುತ ಬಂದನು ಮೂಷಿಕ ರಾಜನು|
ಮಿತ್ರನ ಕಷ್ಟದ ಸ್ಥಿತಿಯನು ನೋಡಲು|
ಮರುಗಿದ ಹಿರಣ್ಯಕ ಬಂಧನ ಬಿಡಿಸಲು |
ಬಲೆಯನು ಕಡಿಯುವ ಆತುರ ತೋರಲು|
ಮೊದಲಲಿ ಬಿಡಿಸು ಎನ್ನಯ ಪ್ರಜೆಗಳ|
ಕೊನೆಯಲೆ ಬರಲಿ ನನ್ನಯ ಸರದಿ|
ಎನ್ನಲು ಚಿತ್ರಗ್ರೀವನು ಧೃಡತೆಯಲಿ|
ಪ್ರಜೆಗಳ ಕ್ಷೇಮವೆ ಮೊದಲಲಿ ರಾಜಗೆ|
ಮೆಚ್ಚಿದ ಹಿರಣ್ಯಕ ಮಿತ್ರನ ಮಾತಿಗೆ|
ಚೂಪಿನ ಹಲ್ಲಲಿ ಬಲೆಯನು ಕಡಿಯುತ|
ಎಲ್ಲರ ಬಂಧನ ಬಿಡಿಸಿದ ಹಿರಣ್ಯಕ||
ಒಗ್ಗಟ್ಟಿದ್ದರೆ ಎಲ್ಲವು ಸಾಧ್ಯವು|
ಸ್ನೇಹದ ಒಲವು ಭಾರೀ ಬಲವು|
ಎರೆಡೂ ಇದ್ದರೆ ಎಲ್ಲಾ ಗೆಲುವು|
ಮೂಷಿಕ ರಾಜಗೆ ವಂದನೆ ಸಲ್ಲಿಸಿ|
ಕಪೋತ ಬಳಗವು ಮರಳಲು ಗೂಡಿಗೆ|
ಮಿತ್ರರ ಬಂಧನ ಬಿಡಿಸಿದ ಹಿರಣ್ಯಕ|
ಬೀಗುತ ಹಿಗ್ಗಲಿ ಬಿಲವನು ಸೇರಿದ||
ರಾಜನ ಮಕ್ಕಳ ಬುದ್ಧಿ ವಿಕಸನ|
ವಿಷ್ಣುಶರ್ಮನ ಪಂಚತಂತ್ರ ಕಥನ|
ಜಯಪ್ರಕಾಶಿತ ಕನ್ನಡ ಕವನ|
ಕನ್ನಡ ಸಿರಿ ಸಂಪದಿಗರಿಗೆ ನಮನ.||