ಮಿಥುನ ಕವಿತೆ

ಮಿಥುನ ಕವಿತೆ

ಬರಹ

ಬೇಕೆನ್ನಿಸಿದ ಕೂಡಲೇ ಸಿಕ್ಕದ್ದನ್ನಪ್ಪಿಕೊಂಡು

ತಿದ್ದುವ ಮೊದಲೇ ಕಳೆದು ಹೋಗಿದ್ದ ಮೂಲಪ್ರತಿ

ಮತ್ತೇನನ್ನೋ ಧ್ಯಾನಿಸುತ್ತಿದ್ದಾಗ ಸಿಕ್ಕು

ತಟ್ತನೆ ಮತ್ತೆಲ್ಲಿಗೋ ಒಯ್ದ ಪರಿಜು.

 

ಇಷ್ಟೂ ದಿನ ತಲೆಮರೆಸಿಕೊಂಡಿದ್ದ ಭಾವಗಳು

ಎದ್ದು ಬಂದು ಎದೆಗೊರಗಿದ ಚಣ

ಶಿರಸ್ತ್ರಾಣ, ಭುಜಕೀರ್ತಿ,ಕರ್ಣಕುಂಡಲಗಳಲುಗಿ

ಒಳಗೆಲ್ಲೋ ಹುದುಗಿಹೋಗಿದ್ದವನೆದ್ದು ಕುಳಿತಂಥ ಸಂಭ್ರಮ,

 

ಮೈಯ ಸೋಕಿದೊಡನೆ ಮಿಂಚುಗೆರೆ

ಒದ್ದೆ ಆರುವವರೆಗೂ ಓತಪ್ರೋತದ ಧಾರೆ

ತುಯ್ಯುತ್ತಲೇ ಇದ್ದ ತೂಗುಮಂಚದ ಹಲಗೆ

ನಿಲುಗಡೆಗೆ ಬರುವುದು ಬರೀ ಅರೆಘಳಿಗೆಯೊಳಗೆ,

 

ನಿತ್ರಾಣಗೊಂಡು ಪಕ್ಕಕ್ಕೆ ಹೊರಳಿ ವಿಶ್ರಮಿಸಿದ ವೇಳೆ,

ಕವಿತೆ-ಮಿಥುನಗಳ ಅಗ್ನಿದಿವ್ಯಕೆ ಸಾಕ್ಷಿ- ಈ ಜೀವ ರೇಷಿಮೆಯ ಎಳೆ!