ಮಿಥ್ಯಾರೋಪ: ಎಚ್ಚರ ಅವಶ್ಯಕ

ಮಿಥ್ಯಾರೋಪ: ಎಚ್ಚರ ಅವಶ್ಯಕ

ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದೂರಮಾಡಿಕೊಳ್ಳುತ್ತಾರೆ. ಜೊತೆಗೆ ಪಾಕಿಸ್ಥಾನವನ್ನು ಸಮರ್ಥಿಸುವ ಬುದ್ದಿಯಿಂದಲೂ ಹೊರಬರುತ್ತಾರೆ. ಆದರೆ ಆ ನಂಬಿಕೆಯನ್ನು ದೇಶ ಅದನ್ನು ನಿರೀಕ್ಷಿಸಬಹುದೇ? ದೇಶದ ಪ್ರಧಾನಮಂತ್ರಿಯವರ ಮಾತಿಗಿಂತ ಅಧಿಕೃತತೆ ಇನ್ನೇನೂ ಇಲ್ಲ, ಅದೂ ಲೋಕಸಭೆ ಚರ್ಚೆಯ ಹೇಳಿಕೆಗೆ ಸಂವಿಧಾನದಷ್ಟೇ ಗೌರವವಿರುತ್ತವೆ. ಅಷ್ಟಾದರೂ ಪ್ರಕರಣವನ್ನು ರಾಜಕೀಯ ನೆಲೆಗಟ್ಟಿನಿಂದ ನೋಡುವ ವಿರೋಧಪಕ್ಷಗಳ ಗುಣವನ್ನು ಏನೆಂದು ಹೇಳಬೇಕು? ಹಾಗಾದರೆ ಇವರ ಸಂವಿಧಾನ ಪ್ರೇಮದ ಸಾಚಾತನವೆಷ್ಟು?

ಸಂಸತ್ ಅಧಿವೇಶನ ಪ್ರಾರಂಭದಿಂದಲೂ ಕಾಂಗ್ರೆಸಿನ ಅಸಹನೆ ವ್ಯಕ್ತವಾಗುತ್ತಿದೆ. ಭದ್ರತೆಯ ವಿಷಯದಲ್ಲಿ ವಿರೋಧಪಕ್ಷಗಳು ಸರ್ಕಾರಕ್ಕೆ ಬೆಂಬಲ, ಸೈನ್ಯಕ್ಕೆ ಸ್ಥೈರ್ಯ ಮತ್ತು ಯುದ್ಧದ ಬಗ್ಗೆ ಜನರಲ್ಲಿ ಉದ್ಭವವಾಗುವ ಸಹಜವಾದ ಗೊಂದಲಗಳನ್ನು ನಿವಾರಿಸಲು ಬೀದಿಗಿಳಿಯಬೇಕಿತ್ತು. ವಿರೋಧಪಕ್ಷಗಳ ಸ್ಥಾನಮಾನಗಳಿರುವುದೇ ಇಂಥ ಕಾರ್ಯಗಳಿಗೆ. ಆಡಳಿತ ಪಕ್ಷವನ್ನು ಎಚ್ಚರಿಸಲು, ಮಾರ್ಗದರ್ಶನ ನೀಡಲು ಮತ್ತು ಪ್ರಜೆಗಳ ಜೀವನಮಟ್ಟವನ್ನು ಎತ್ತರಕ್ಕೇರಿಸಲು ಆಡಳಿತಪಕ್ಷಕ್ಕಿಂತ ಹೆಚ್ಚು ಕೆಲಸ ಮಾಡಬೇಕಾದವರು ವಿರೋಧಪಕ್ಷಗಳು. ಅಲ್ಲದೆ ಬಾಹ್ಯ ಆಕ್ರಮಣ ಮತ್ತು ಬೆದರಿಕೆಗಳನ್ನು ದೇಶ ಎದುರಿಸುವ ಸಂದರ್ಭದಲ್ಲಿ ಒಗ್ಗಟ್ಟು ತೋರಬೇಕಾದ ಮತ್ತು ಆಕ್ರಮಣಶೀಲ ದೇಶಗಳಿಗೆ ಆ ಒಗ್ಗಟ್ಟೇ ಶಕ್ತಿಯಾಗಿ ತೋರಬೇಕಾದವರು ಈ ವಿರೋಧಪಕ್ಷಗಳು, ದುರದೃಷ್ಟವೆಂದರೆ ಆಪರೇಶನ್ ಸಿಂದೂರ್ ಚರ್ಚೆಯಲ್ಲಿ ವಿರೋಧ ಪಕ್ಷಗಳು ನೇರಾನೇರವಾಗಿ ಶತ್ರುದೇಶದ ಪರವಾಗಿ ಮಾತಾಡಿ, ಸರ್ಕಾರವನ್ನು ಟೀಕಿಸಿದ್ದವು. ಅಂದರೆ ಶತ್ರುದೇಶದ ಧೈರ್ಯ ಹೆಚ್ಚಲು ಕಾರಣವಾಗಿದ್ದರು. ಅದನ್ನು ಲೋಕಸಭೆಯಲ್ಲಿ ಸ್ವತಃ ಪ್ರಧಾನಮಂತ್ರಿಗಳೇ ಎತ್ತಿ ಆಡಿದ್ದಾರೆಂದರೆ ವಿರೋಧಪಕ್ಷಗಳ ಮಟ್ಟ ಪಾತಾಳಕ್ಕಿಳಿದಿದೆ ಎಂದೇ ಅರ್ಥ.

ಇಂದು ಕಾಂಗ್ರೆಸ್ ತಮ್ಮ ಸರ್ಕಾರಗಳಿದ್ದಾಗ ಎದುರಿಸಿದ ಯುದ್ಧಗಳ ಯಶಸ್ಸನ್ನು ದೊಡ್ಡ ಸ್ವರದಿಂದ ಕೊಚ್ಚಿಕೊಳ್ಳುತ್ತಿದೆ. ಆದರೆ ಆ ಎಲ್ಲಾ ಸಂದರ್ಭಗಳಲ್ಲಿ ಯುದ್ಧ ವಿರಾಮ ಹೇಗೆ ಸಂಭವಿಸಿತೆಂಬುದನ್ನು ಬಾಯಿತಪ್ಪಿಯೂ ಹೇಳುತ್ತಿಲ್ಲ. ಅಂಥವರಿಗೆ ಮೋದಿ ಸ್ವಯಂ ನಿರ್ಣಯದಿಂದ ಯುದ್ಧ ಘೋಷಣೆ ಮಾಡಿದ್ದು, ವಿವೇಚನೆಯಿಂದ ಅದಕ್ಕೆ ತಾತ್ಕಾಲಿಕ ಅಂತ್ಯ ಹಾಡಿದ್ದು ಕಣ್ಣುಕುಕ್ಕುತ್ತಿದೆ. ವಿದೇಶಗಳ ಮಾತುಗಳನ್ನು ಲೆಕ್ಕಿಸದೆ ಮುಂದಡಿಯಿಟ್ಟ ಅವರ ಛಾತಿಗೆ ಹೊಟ್ಟೆಯುರಿಪಟ್ಟುಕೊಳ್ಳುತ್ತಿದೆ. ಈ ರೀತಿಯ ದುರ್ಗುಣ ಮತ್ತು ಹೊಟ್ಟೆಯುರಿ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ಅದನ್ನು ಗಟ್ಟಿಗೊಳಿಸುವುದೂ ಇಲ್ಲ. ದೇಶ ಇದನ್ನು ಅರ್ಥಮಾಡಿಕೊಳ್ಳಬೇಕು. ವಿರೋಧಪಕ್ಷಗಳಿಂದ ಪ್ರಜಾಪ್ರಭುತ್ವ ಪ್ರಬಲ ವಾಗುವುದೆಂಬ ನಂಬಿಕೆಯನು ತಾತ್ಕಾಲಿಕವಾಗಿ ಕಳಚಿಕೊಳ್ಳಬೇಕಾದ ವಿಲಕ್ಷಣ ಸಂದರ್ಭ ಸೃಷ್ಟಿಯಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೩೧-೦೭-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ