ಮಿದುಳಿನ ಮಡಿಕೆಗಳು ಮತ್ತು ಬುದ್ಧಿವಂತಿಕೆ

ಮಿದುಳಿನ ಮಡಿಕೆಗಳು ಮತ್ತು ಬುದ್ಧಿವಂತಿಕೆ

ನಮ್ಮ ಜೊತೆಗಾರರಲ್ಲಿ ಯಾರಾದರೂ ಬಹಳ ಬುದ್ಧಿವಂತರಿದ್ದರೆ, ಅವನ ಮಿದುಳಿನ ಮಡಿಕೆಗಳ ಸಂಖ್ಯೆ ಹೆಚ್ಚಿರಬೇಕು ಎಂದು ನಾವು ತಮಾಷೆ ಮಾಡುವುದುಂಟು. ನಿಜಕ್ಕೂ ಈ ಮಾತು ಸತ್ಯವೇ? ಈ ಬಗ್ಗೆ ತಿಳಿಯಬೇಕಾದರೆ ನಾವು ಮೊದಲು ನಮ್ಮ ಮಿದುಳಿನ ಹುಟ್ಟು ಹಾಗೂ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲವಾದರೆ ನಮಗೆ ಮಿದುಳಿನ ಮಡಿಕೆಗಳ ವಿನ್ಯಾಸದ ಬಗ್ಗೆ ತಿಳಿಯಲಾರದು. 

ನಮ್ಮ ತಲೆ ಬುರುಡೆಯ ಒಳಗಡೆ ಕ್ಷೇಮವಾಗಿರುವ ಮಿದುಳು ಎಂಬ ವಸ್ತುವು ನಮ್ಮ ಇಡೀ ದೇಹವನ್ನು ನಿಯಂತ್ರಿಸುತ್ತದೆ. ಮಿದುಳಿನಲ್ಲಿ ಬಿಳಿಯ ನರದ್ರವ್ಯ ಹಾಗೂ ಬೂದು ನರದ್ರವ್ಯಗಳು ಎಂಬ ಎರಡು ಭಾಗಗಳಿರುತ್ತವೆ. ಬೂದು ನರದ್ರವ್ಯದಲ್ಲಿರುವಂತೆ ಬಿಳಿಯ ನರದ್ರವ್ಯದಲ್ಲಿ ಮಡಿಕೆ (ಪದರು) ಗಳಿಲ್ಲ. ಮಗುವೊಂದು ತಾಯಿಯ ಗರ್ಭದಲ್ಲಿ ಭ್ರೂಣವಾಗಿ ಬೆಳೆಯುತ್ತಿರುವಾಗ ಸುಮಾರು ಮೂರು ತಿಂಗಳುಗಳ ತನಕ ಈ ಮಡಿಕೆಗಳು ಕಂಡು ಬರುವುದಿಲ್ಲ. ಮೂರು ತಿಂಗಳ ಬಳಿಕ ನಿಧಾನವಾಗಿ ಮಿದುಳಿನ ಮೇಲೆ ಮಡಿಕೆಗಳು ಮೂಡಲು ಪ್ರಾರಂಭವಾಗುತ್ತದೆ. ಮಿದುಳಿನ ಸಂದುಗಳು ಒಂದೊಂದಾಗಿ ಬೆಳೆದು ಮಡಿಕೆಗಳು ಹೆಚ್ಚಾಗುತ್ತಾ ಬರುತ್ತವೆ. ಈ ಸಂದುಗಳು ಮತ್ತು ಅದರಿಂದ ಉಂಟಾದ ಮಡಿಕೆಗಳಿಂದಾಗಿ ಬೂದು ನರದ್ರವ್ಯದ ಒಟ್ಟು ವಿಸ್ತಾರ ಮಿದುಳಿನ ಹೊರಮೈಯ ವಿಸ್ತಾರದ ಮೂರರಷ್ಟಾಗುತ್ತದೆ. 

ಪ್ರೌಢಾವಸ್ತೆಯಲ್ಲಿರುವ ಮನುಷ್ಯನ ಮಿದುಳಿನ ಬೂದು ನರದ್ರವ್ಯದ ವಿಸ್ತಾರ ೨೨೦೦ ಚದರ ಸೆಂ. ಮೀ. ಅದರ ಒಟ್ಟು ಗಾತ್ರ ೩೦೦ ಘನ ಸೆಂ. ಮೀ. ಅದರಲ್ಲಿ ಸುಮಾರು ೨೬೦೦ ಮಿಲಿಯನ್ ನರಕಣಗಳಿರುತ್ತವೆ. ಬೂದು ನರದ್ರವ್ಯದ ಮೂರನೆಯ ಒಂದು ಭಾಗ ಮಾತ್ರ ಹೊರ ಹೊದಿಕೆಯಾಗಿ ಕಾಣುತ್ತದೆ. ಉಳಿದ ಭಾಗಗಳೆಲ್ಲವೂ ಮಡಿಕೆಗಳಲ್ಲಿ ಅಡಗಿರುತ್ತವೆ. 

ಸಂದುಗಳು ಹಾಗೂ ಮಡಿಕೆಗಳ ರೀತಿಯಲ್ಲಿ ನಮ್ಮ ಮಿದುಳು ಇಲ್ಲದೇ ಹೋಗಿದ್ದರೆ ಅಷ್ಟು ವಿಸ್ತಾರವಾದ ಬೂದು ನರದ್ರವ್ಯವುಳ್ಳ ಈ ಮಿದುಳಿನ ಗಾತ್ರವನ್ನು ತಲೆ ಬುರುಡೆಯ ಒಳಗಡೆ ಹೊಂದಿಸಲು ನಮ್ಮ ಬುರುಡೆಯನ್ನು ಈಗಿರುವುದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚಿಸಬೇಕಾಗುತ್ತಿತ್ತು ! ಆಗ ಮನುಷ್ಯ ಹೇಗೆ ಕಾಣಿಸಬಹುದು ಎಂಬುವುದನ್ನು ನಮಗೆ ಊಹಿಸಿಕೊಳ್ಳಲೂ ಭಯವಾಗುತ್ತದೆ. ಬಹುಷಃ ನಮ್ಮ ಚಲನ ಚಿತ್ರಗಳಲ್ಲಿ ತೋರಿಸುವ ಕೆಲವು ಅನ್ಯಗ್ರಹ ವಾಸಿ (Allian) ಜೀವಿಗಳಂತೆ ಕಾಣಿಸುತ್ತಿದ್ದೆವೋ ಏನೋ?

ಮಿದುಳಿನ ಮಡಿಕೆ ಹೆಚ್ಚಾದಂತೆಲ್ಲಾ ನಮ್ಮ ಬುದ್ಧಿಶಕ್ತಿಯೂ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಈ ನಂಬಿಕೆಗೆ ಯಾವುದೇ ಆಧಾರ ಇಲ್ಲವೆಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಈ ರೀತಿಯಾಗಿ ನೋಡಲು ಹೋದರೆ ಆನೆಯ ಶರೀರವೂ ದೊಡ್ದದು, ಅದರ ತಲೆ ಬುರುಡೆಯ ಒಳಗಿರುವ ಮಿದುಳಿನ ಗಾತ್ರವೂ ದೊಡ್ದದು. ಆ ಮಿದುಳಿನ ಬೂದು ನರದ್ರವ್ಯದಲ್ಲಿರುವ ಮಡಿಕೆಗಳ ಸಂಖ್ಯೆಯೂ ಮಾನವನಿಗಿಂತಲೂ ಅಧಿಕ. ಅದೇ ರೀತಿ ಸಮುದ್ರದಲ್ಲಿ ವಾಸಿಸುವ ತಿಮಿಂಗಿಲಗಳ ಮಿದುಳಿನ ಗಾತ್ರವೂ ಬಹಳ ದೊಡ್ದದು. ಸ್ಪರ್ಮ್ ತಿಮಿಂಗಿಲ ಎಂಬ ಜಾತಿಯ ತಿಮಿಂಗಿಲಗಳ ಮಿದುಳಿನ ತೂಕ ೯ ಕೆ.ಜಿ.ಗೂ ಅಧಿಕವಾಗಿರುತ್ತದೆ. ಆದರೆ ಆನೆ ಮತ್ತು ತಿಮಿಂಗಿಲಗಳ ಬುದ್ಧಿಶಕ್ತಿ ಮನುಷ್ಯನ ಬುದ್ದಿಮತ್ತೆಗೆ ಸರಿ  ಹೊಂದುವುದಿಲ್ಲ. ಆನೆ ಮತ್ತು ತಿಮಿಂಗಿಲಗಳು ಬುದ್ಧಿವಂತ ಜೀವಿಗಳೇ ಆದರೂ ಮಾನವನ ಬುದ್ಧಿಶಕ್ತಿ ಅವುಗಳಿಗಿಂತ ಅಧಿಕ. ಈ ಕಾರಣದಿಂದ ಮಿದುಳಿನ ಮಡಿಕೆ ಅಧಿಕವಾದಷ್ಟು ಬುದ್ಧಿ ಶಕ್ತಿಯೂ ಅಧಿಕವಾಗುತ್ತದೆ ಎಂಬುದುದಕ್ಕೆ ಆಧಾರಗಳಿಲ್ಲ.

ನಮ್ಮ ನಡುವೆ ಬಾಳಿ ಬದುಕಿದ ಹಲವಾರು ಮೇಧಾವಿಗಳ ಮಿದುಳುಗಳನ್ನು ಪರೀಕ್ಷಿಸಿದರೆ ಹಲವರ ಮಿದುಳುಗಳು ಸಣ್ಣದಾಗಿಯೂ, ಕಡಿಮೆ ಮಡಿಕೆಗಳದ್ದಾಗಿಯೂ ಇದ್ದುವು ಎಂದು ಸಂಶೋಧಕರು ಹೇಳುತ್ತಾರೆ. ಹಲವು ಮಂದ ಬುದ್ಧಿಯವರ ಮಿದುಳು ಗಾತ್ರದಲ್ಲಿ ದೊಡ್ಡದಾಗಿರುವುದೂ ಕಂಡು ಬಂದಿದೆ. ಮಾನವನ ಮಿದುಳಿನ ಬಲಭಾಗ ಆ ವ್ಯಕ್ತಿಯ ಎಡಭಾಗವನ್ನೂ, ಮಿದುಳಿನ ಎಡಭಾಗ ಆ ವ್ಯಕ್ತಿಯ ಬಲಭಾಗವನ್ನೂ ನಿಯಂತ್ರಿಸುತ್ತದೆ. ಮಿದುಳು ಒಂದು ಅದ್ಭುತ ರಚನಾವ್ಯೂಹದ ವಸ್ತು ಎಂದು ನಿಸ್ಸಂಶಯವಾಗಿ ಹೇಳಬಹುದು. 

ನಮ್ಮ ಮಿದುಳು ಪ್ರಾಣಿಗಳ ಮಿದುಳಿಗಿಂತಲೂ ಅಧಿಕ ಯೋಚನಾ ಶಕ್ತಿಯನ್ನು ಹೊಂದಿರುವುದು ಯಾಕೆಂದು ಬಲ್ಲಿರಾ? ಖ್ಯಾತ ವಿಜ್ಞಾನಿ ಡಾರ್ವಿನ್ ನ ವಿಕಾಸವಾದದ ಪ್ರಕಾರ ಆನೆಯ ಹೊಟ್ಟೆಯಿಂದ ಆನೆಯೂ, ಮೊಸಳೆಯ ಮೊಟ್ಟೆಯಿಂದ ಮೊಸಳೆಯೂ, ಮನುಷ್ಯನಿಂದ ಮಗುವೂ, ಬೀಜದಿಂದ ಅದೇ ಬೀಜದ ಮರವೂ ಹುಟ್ಟುತ್ತದೆ. ಅಂದರೆ ಪ್ರತಿಯೊಂದು ಜೀವಿಯೂ ಅದರ ತಂದೆ-ತಾಯಿಯನ್ನೇ ಹೋಲುತ್ತದೆ. ಗುಣ ಲಕ್ಷಣಗಳಲ್ಲಿ ಅಲ್ಪ ಸ್ವಲ್ಪ ಬದಲಾವಣೆಯನ್ನು ಹೊಂದಿರಬಹುದು. ತಂದೆ ತಾಯಿಯಲ್ಲಿ ಇಲ್ಲದ ಕೆಲವೊಂದು ಅಂಶ ಮಕ್ಕಳಲ್ಲಿ ಕಂಡು ಬರುವ ಸಾಧ್ಯತೆಯೂ ಇಲ್ಲವೆಂದಿಲ್ಲ. ವಿಕಾಸವಾದದ ಪ್ರಕಾರ ಬದಲಾಗುತ್ತಿರುವ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಳ್ಳಲು ಪ್ರಾಣಿ ಅಥವಾ ಮಾನವ ಕೆಲವೊಂದು ಬದಲಾವಣೆಗೆ ಅನುವಾಗುತ್ತದೆ. ಇದರಿಂದ ಹೊಸ ಸಂತತಿ ಹುಟ್ಟಿದಾಗ ಸ್ವಲ್ಪ ಬೇರೆ ರೀತಿಯ ಗುಣ ಲಕ್ಷಣಗಳು ಕಂಡು ಬರುತ್ತದೆ. ಬದಲಾದ ಪರಿಸ್ಥಿತಿಗೆ ತನ್ನನ್ನು ತಾನು ಬದಲಾಯಿಸದೇ ಹೋದರೆ ಆ ಪ್ರಾಣಿಯ ಸಂತತಿಯೇ ನಶಿಸಿ ಹೋಗುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದಲೇ ಜಿರಾಫೆ ಪ್ರಾಣಿಯ ಕತ್ತು ಉದ್ದವಾಗಲು ಕಾರಣ ಎನ್ನುತ್ತಾರೆ. ನಿಸರ್ಗವು ತನ್ನ ಬದಲಾವಣೆಗೆ ಹೊಂದಿಕೊಳ್ಳುವ ಜೀವಿಗಳನ್ನು ಮಾತ್ರ ಉಳಿಸಿಕೊಳ್ಳುತ್ತದೆ ಎಂಬುವುದು ಸತ್ಯ ಸಂಗತಿ.

ಇತರ ಪ್ರಾಣಿಗಳ ಮಿದುಳಿಗಿಂತ ಮನುಷ್ಯನ ಮಿದುಳಿಗೆ ಅಧಿಕ ಯೋಚನಾ ಶಕ್ತಿ ಇರುವ ಕಾರಣವೂ ಇದೇ ಆಗಿದೆ. ಮಾನವನ ಸಂತತಿ ಬೆಳೆದಂತೆ ಸುತ್ತಮುತ್ತಲಿನ ಪರಿಸರಗಳಿಗೆ ಹೊಂದಿಕೊಂಡು ಬದುಕಲು ಅಭ್ಯಾಸ ಮಾಡಿಕೊಂಡ. ಈ ಕಾರಣದಿಂದ ಆದಿ ಮಾನವನಾಗಿದ್ದ ಮನುಷ್ಯ ಪರಿಪೂರ್ಣ ಮಾನವನಾದ. ಮೊದಲಿಗೆ ಬಗ್ಗಿ ನಡಿಯುತ್ತಿದ್ದ ಮಾನವ ಕ್ರಮೇಣ ಎದ್ದು ನಿಂತು ನೇರಕ್ಕೆ ನಡೆಯಲು ಪ್ರಾರಂಭಿಸಿದ. ಮಿದುಳನ್ನು ಹೊರಗಿನ ಬದಲಾವಣೆಗೆ ಹೊಂದಿಸಿಕೊಳ್ಳಲು ಶುರು ಮಾಡಿದ. ನಿಸರ್ಗವು ಬದಲಾಗುತ್ತಿದ್ದ ಹಾಗೆಯೇ ಅಧಿಕವಾಗಿ ಯೋಚನಾ ಶಕ್ತಿ ಇದ್ದ ಜೀವಿಯಾದ ಮಾನವ ಉಳಿದ ಪ್ರಾಣಿಗಳ ಮಿದುಳಿಗಿಂತ ಅಧಿಕ ಬುದ್ಧಿಶಕ್ತಿಯನ್ನು ಬೆಳೆಸಿಕೊಂಡ.       

ಚಿತ್ರ ಕೃಪೆ: ಅಂತರ್ಜಾಲ ತಾಣ