ಮಿನಿ ಐಪ್ಯಾಡ್ ಮಿನುಗಲಾರಂಭಿಸಿದೆ!
ವಿಂಡೋಸ್ 8:ಭಡ್ತಿಗೆ ಏಳ್ನೂರು ರೂಪಾಯಿ
ಅಕ್ಟೋಬರ್ ಇಪ್ಪತ್ತಾರರಿಂದ ವಿಂಡೋಸ್ 8 ಆಪರೇಟಿಂಗ್ ವ್ಯವಸ್ಥೆಯು ಲಭ್ಯವಾಗಿದೆ.ಮೈಕ್ರೋಸಾಫ್ಟ್ ಕಂಪೆನಿಯು ಎರಡು ವರ್ಷಗಳ ತರುವಾಯ ಹೊಸ ಆಪರೇಟಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಿದೆ.ವಿಂಡೊಸ್ 8 ಹೊಸ ಕಂಪ್ಯೂಟರುಗಳಲ್ಲಿ ಮೊದಲೇ ಅನುಸ್ಥಾಪನೆಯಾಗಿ ಬರಲಿದೆ.ಟೊಶಿಬಾ,ಏಸರ್,ಎಚ್ಪಿಯೂ ಸೇರಿ ಹೆಚ್ಚಿನ ತಯಾರಕರು ಇದನ್ನು ಒದಗಿಸಲಿದ್ದಾರೆ.ಇನ್ನು ಇತ್ತೀಚೆಗೆ ಹೊಸ ಕಂಪ್ಯೂಟರ್ ಕೊಂಡು,ಅದರಲ್ಲಿ ವಿಂಡೋಸ್ 7 ವ್ಯವಸ್ಥೆಯನ್ನು ಪಡೆದಿದ್ದರೆ ಏಳುನೂರು ರೂಪಾಯಿ ಪಾವತಿಸಿ,ಹೊಸ ವ್ಯವಸ್ಥೆಗೆ ಭಡ್ತಿ ಹೊಂದುವ ಆನ್ಲೈನ್ ಅನುಸ್ಥಾಪನಾ ವ್ಯವಸ್ಥೆಯು ಲಭ್ಯವಿದೆ.ಇನ್ನು ಡಿವಿಡಿಯಲ್ಲಿ ಆಪರೇಟಿಂಗ್ ವ್ಯವಸ್ಥೆಯನ್ನು ಪಡೆಯಲು ಬಯಸುವಿರಾದರೆ,ಮೂರುಸಾವಿರ ಚಿಲ್ಲರೆ ಬಿಚ್ಚಬೇಕಾಗುತ್ತದೆ.ಹಳೆಯ ಆಪರೇಟೀಂಗ್ ವ್ಯವಸ್ಥೆಗೆ ಮೈಕ್ರೋಸಾಫ್ಟ್ ಬೆಂಬಲ ಮುಂದಿನ ವರ್ಷದವರೆಗೆ ಲಭ್ಯವಿದೆ.
--------------------------------------------
ಮಿನಿ ಐಪ್ಯಾಡ್ ಮಿನುಗಲಾರಂಭಿಸಿದೆ!
ಆಪಲ್ 7.9 ಇಂಚಿನ ತೆರೆಯ ಮಿನಿ ಐಪ್ಯಾಡ್ಗಳನ್ನು ಬಿಡುಗಡೆ ಮಾಡಿದೆ.ಸ್ಪಷ್ಟತೆಯು ಹತ್ತಿಂಚು ಐಪ್ಯಾಡಿನಷ್ಟೇ ಇದೆ.ಇದರಲ್ಲಿ ವಿಡಿಯೋ ಕರೆಗೆ ಮಿಸಲಾದ ಕ್ಯಾಮರಾ ಜತೆಗೆ 5 ಮೆಗಾಪಿಕ್ಸೆಲ್ ಕ್ಯಾಮರಾವೂ ಇದೆ.ಇದರಲ್ಲಿ ಐಓಎಸ್ ಆಪರೇಟಿಂಗ್ ವ್ಯವಸ್ಥೆಯು ಬಳಕೆಯಾಗಿದೆ.ಹದಿನಾರು ಜೀಬಿಯ ವೈಫೈ ಮಾದರಿಯು 329 ಡಾಲರು ಬೆಲೆಯಿದೆ.32ಜೀಬಿಯ ಮಾದರಿಗೆ 429ಡಾಲರೂ,ಐವತ್ತನಾಲ್ಕು ಜೀಬಿಯದ್ದಕ್ಕೆ 529 ಡಾಲರು ಬೆಲೆಯೂ ನಿಗದಿಯಾಗಿದೆ.ವೈಫೈ ಮತ್ತು 4ಜಿ ಸಂಪರ್ಕ ಬೇಕಿದ್ದರೆ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
-------------------------------------------
ಆನ್ಲೈನ್ ಖರೀದಿಯ ಲಾಭನಷ್ಟ
ವಸ್ತುಗಳನ್ನು ಆನ್ಲೈನಿನಲ್ಲಿ ಖರೀದಿಸಲು ಅನುವು ಮಾಡುವ ಇ-ವಾಣಿಜ್ಯ ದಿನೇ ದಿನೇ ಜನಪ್ರಿಯವಾಗುತ್ತಿದೆ.ವಸ್ತುಗಳ ಬಟವಾಡೆ ಕೊರಿಯರ್ ಸೇವೆಯ ಮೂಲಕ ಆಗಬೇಕಿರುವುದು ಈ ವ್ಯವಸ್ಥೆಯ ಮುಖ್ಯ ತೊಂದರೆ.ದೊಡ್ಡ ಗಾತ್ರದ ಪ್ಯಾಕೆಟುಗಳ ವಿಲೇವಾರಿ ದುಬಾರಿಯಾಗುತ್ತದೆ.ಭಾರತದಲ್ಲೂ ಬ್ಯಾಗಿಟ್ಟುಡೇ(ಇಂಡಿಯಾಟುಡೇ ಬಳಗ),ಫ್ಲಿಪ್ಕಾರ್ಟ್ ಮುಂತಾದ ತಾಣಗಳು ಜನಪ್ರಿಯವಾಗಿವೆ.ಅವುಗಳ ಬಗ್ಗೆ ಜನಾಭಿಪ್ರಾಯವೂ ಚೆನ್ನಾಗಿ ಮೂಡುತ್ತಿದೆ.ಗುಣಮಟ್ಟದ ಉತ್ಪನ್ನಗಳ ಪೂರೈಕೆ,ನಿಗದಿತ ಸಮಯಕ್ಕೆ ಸರಿಯಾಗಿ ವಸ್ತುಗಳ ಬಟವಾಡೆ,ವಿವಿಧ ತೆರನ ಆನ್ಲೈನ್ ಪಾವತಿ ವ್ಯವಸ್ಥೆಯ ಲಭ್ಯತೆ,ಜತೆಗೆ ವಸ್ತುವನ್ನು ಸ್ವೀಕರಿಸಿದ ನಂತರವೂ ಪಾವತಿಗೆ ಅವಕಾಶ,ಮೊಬೈಲ್ ಕಿರುಸಂದೇಶಗಳ ಮೂಲಕ ಗ್ರಾಹಕರ ಜತೆ ಸತತ ಸಂಪರ್ಕ,ಮಿಂಚಂಚೆ ಬಳಕೆ ಇವೆಲ್ಲವುಗಳ ಮೂಲಕ ಇವು ತಮ್ಮ ಸೇವೆಯಿಂದ ಗ್ರಾಹಕರನ್ನು ತೃಪ್ತಿ ಪಡಿಸಲು ಸಮರ್ಥವಾಗಿವೆ.
ಆನ್ಲೈನ್ ಖರೀದಿಯಲ್ಲಿ ವಸ್ತುಗಳನ್ನು ಮುಟ್ಟಿ,ಗುಣಮಟ್ಟ ಪರೀಕ್ಷಿಸುವ ಅವಕಾಶ ಇಲ್ಲವೆನ್ನುವುದು ನಿಜ.ಆದರೇನು ವಸ್ತುವಿನ ವಿವಿಧ ಕೋನಗಳ ಚಿತ್ರ ವೀಕ್ಷಣೆ,ಲಭ್ಯವಿರುವ ವಿಸ್ತೃತ ಶ್ರೇಣಿಗಳು,ಅವುಗಳ ಗಾತ್ರ,ಯಾವ ವಸ್ತುವಿನಿಂದ ತಯಾರಿಸಲಾಗಿದೆ ಇತ್ಯಾದಿ ವಿವರಗಳು ಅನುಮಾನಕ್ಕೆಡೆಯಿಲ್ಲದಂತೆ ಸಿಗುತ್ತದೆ.ಇನ್ನು ಇಲೆಕ್ಟ್ರಾನಿಕ್ ಸಾಧನಗಳ ಸಮಗ್ರ ವಿವರಗಳು ಸಿಗುವ ಕಾರಣ,ಕೊಂಡು ಬೇಸ್ತು ಹೋಗುವ ಅವಕಾಶವಿಲ್ಲ.ಮೊಬೈಲ್ ಅಂತಹ ವಸ್ತುಗಳನ್ನು ಖರೀದಿಸುವಾಗ,ಅಂಗಡಿಗೆ ಹೋದರೂ ನಿಮಗೆ ಅವನ್ನು ಬಳಸಿ ನೋಡುವ ಅವಕಾಶವಿಲ್ಲ,ಜತೆಗೆ ಅಂಗಡಿಯಲ್ಲಿ ಗ್ರಾಹಕನಿಗೆ ಬೇಕಾದ ಎಷ್ಟೋ ವಿವರಗಳ ಬಗ್ಗೆ ಅಧಿಕಾರಯುಕ್ತವಾಗಿ ಮಾಹಿತಿ ನೀಡಲು ಮಾರಾಟ ಪ್ರತಿನಿಧಿಗಳಿಗೆ ನೀಡಲು ಸಾಧ್ಯವಾಗುವುದಿಲ್ಲವೆನ್ನುವ ತೊಂದರೆಯಿದ್ದೇ ಇದೆ.
ಈ ವ್ಯವಸ್ಥೆಯಲ್ಲಿ ನಿಜವಾದ ಜಾಗ್ರತೆ ಅಗತ್ಯವಾಗಿರುವುದು ಪಾವತಿ ವ್ಯವಸ್ಥೆಯಲ್ಲಾಗಿದೆ.ಈಗ ಇಂತಹ ಇ-ವಾಣಿಜ್ಯ ಕಂಪೆನಿಗಳು ಗೇಟ್ವೇ ವ್ಯವಸ್ಥೆಯ ಮೂಲಕ ಸುಭದ್ರ ಸೇವೆ ಲಭ್ಯವಾಗಿಸಿವೆ.ಗ್ರಾಹಕನ ಖಾತೆ ವಿವರಗಳು ಗೌಪ್ಯವಾಗಿಡಲು ಅವುಗಳ ನೇರ ವಿನಿಮಯ ನಡೆಯದೆ, ಗುಪ್ತ ಸಂಕೇತಗಳ ಮೂಲಕ ನಡೆಯುವ ವ್ಯವಸ್ಥೆಯಿದೆ.ಆದರೂ ಕೀಲಿಮಣೆಯ ಒತ್ತುವಿಕೆಯನ್ನು ಮಾಹಿತಿಯನ್ನು ಹ್ಯಾಕರುಗಳನ್ನು ಮುಟ್ಟಿಸುವಂತಹ ತಂತ್ರಾಂಶಗಳ್ಳುಳ್ಳ ಕಂಪ್ಯೂಟರ್ ಅಥವಾ ಸಾಧನಗಳ ಮೂಲಕ ಹಾನಿಯಾಗಬಹುದು.ಅದಕ್ಕೂ ಮಿಥ್ಯಾಕೀಲಿ ಮಣೆಯ ಬಳಕೆಯಂತಹ ಆಯ್ಕೆ ಲಭ್ಯವಿದೆ.ಜತೆಗೆ ಪದರುಗಳಲ್ಲಿ ಸುಭದ್ರತೆಗೆ ವ್ಯವಸ್ಥೆಯನ್ನು ಒದಗಿಸಿ,ಹಲವು ವಿಧದ ಮಾಹಿತಿಯನ್ನು ಪಡೆದು,ಎಲ್ಲವೂ ತಾಳೆಯಾದರೆ ಮಾತ್ರಾ ಪಾವತಿಯಾಗುವುದನ್ನು ಖಾತರಿ ಮಾಡಿ,ಮೋಸವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
---------------------------------------------
ಇಂಟರ್ನೆಟ್ ಬಾಧಿತ
ಪ್ರಸ್ತುತ ವಾರ ಹಲವು ಇಂಟರ್ನೆಟ್ ಸೇವೆಗಳು ಬಾಧಿತವಾದುವು.ಯುಟ್ಯೂಬ್ ಕೆಲವು ನಿಮಿಷಗಳ ಕಾಲ ಕೆಲಸ ಮಾಡಲಿಲ್ಲ.ನಂತರ ಅಮೇಜಾನ್ ಕಂಪೆನಿಯು ತೊಂದರೆ ಅನುಭವಿಸಿ,ಅದರ ಸೇವೆ ಪಡೆವ ರೆಡಿಟ್,ಪಿಂಟರೆಸ್ಟ್,ಫೋರ್ಸ್ಕ್ವೇರ್ ಮುಂತಾದ ತಾಣಗಳು ಬಳಕೆದಾರರಿಗೆ ಕೈಕೊಟ್ಟುವು.ಈ ತೊಂದರೆ ತಾಸೆರಡು ಕಾಯಿಸಿತು.ನಂತರ ಗೂಗಲ್ ಕ್ಲೌಡ್ ಕೈಕೊಟ್ಟು ಡ್ರಾಪ್ಬಾಕ್ಸ್,ಟ್ಯುಂಬ್ಲರ್ ಅಂತಹ ಸೇವೆಗಳು ತೊಂದರೆಗೀಡಾದುವು.ಈ ಕಂಪೆನಿಗಳು ಗ್ರಾಹಕರಿಗೆ ಟ್ವಿಟರ್ ಮೂಲಕ ತಮ್ಮ ಸೇವೆಯು ಬಾಧಿತವಾದುದರ ಬಗ್ಗೆ ತಿಳಿಯಪಡಿಸಿದುವು.
------------------------------------------------------
ಮೊಬೈಲ್ ವಿಕಿರಣ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ:ಪರಿಸರ ಇಲಾಖೆಗೆ ಟೆಲಿಕಾಂ ಇಲಾಖೆ ಸೂಚನೆ
ಕಳೆದ ಆಗಷ್ಟ್ನಲ್ಲಿ ಪರಿಸರ ಇಲಾಖೆಯು ಮೊಬೈಲ್ ಗೋಪುರಗಳ ವಿಕಿರಣಶೀಲತೆಯ ಅಧ್ಯಯನ,ಇವುಗಳು ಸೂಕ್ಷ್ಮ ಪರಿಸರದ ಮೇಲೆ ಬೀರುವ ಪ್ರಭಾವ ಇದರ ಬಗ್ಗೆ ಸಾಮಾಜಿಕ ಪರಿಶೋಧನೆಗೆ ಕರೆ ನೀಡಿತ್ತು.ಮೊಬೈಲ್ ಗೋಪುರಕ್ಕೆ ಅರಣ್ಯ ಇಲಾಖೆಯ ಒಪ್ಪಿಗೆ ಪಡೆಯುವುದು ಅಗತ್ಯ.ಒಂದು ಕಿಲೋಮೀಟರ್ ತ್ರಿಜ್ಯದಲ್ಲಿ ಗೋಪುರವಿದ್ದರೆ,ಹೊಸ ಗೋಪುರಕ್ಕೆ ಅನುಮತಿ ಕೂಡದು ಎಂದು ಸೂಚಿಸಿತ್ತು.ಇವಕ್ಕೆಲ್ಲಾ ಟೆಲಿಕಾಂ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ.ಜನಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯ ಮೇಲೆ ಹೊಸ ಗೋಪುರಗಳಿಗೆ ಅನುಮತಿ ನೀಡಬೇಕಾಗುತ್ತದೆ.ಹಾಗಿಲ್ಲವಾದರೆ ಮೊಬೈಲ್ ಸೇವೆಯ ಗುಣಮಟ್ಟ ಕುಸಿಯುತ್ತದೆ.ಇನ್ನು,ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ತನ್ನ ಇಲಾಖೆಯೇ ಮಾಡುತ್ತಿದೆ.ಇನ್ನೊಂದು ಸಚಿವಾಲಯವೂ ಇದನ್ನು ಮಾಡಿದರೆ,ಅದು ಹಸ್ತಕ್ಷೇಪ,ವಿರೋಧಾಭಾಸ ಸೃಷ್ಟಿಯಾಗಲು ಕಾರಣವಾದೀತು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.ತಾನು ನಿಗದಿ ಪಡಿಸಿರುವ ಹೊಸ ವಿಕಿರಣ ಮಟ್ಟಗಳು ಅತ್ಯಂತ ಕಡಿಮೆಯಾಗಿದ್ದು ಸುರಕ್ಷಿತ ಮಟ್ಟವಾಗಿದೆಯೆಂದು ಟೆಲಿಕಾಂ ಇಲಾಖೆ ಸ್ಪಷ್ಟ ಪಡಿಸಿದೆ.ಇದೇ ವೇಳೆ ರಾಜಸ್ತಾನ ಸರಕಾರವು ಜೈಪುರದಲ್ಲಿ ಆಸ್ಪತ್ರೆಗಳ ಸುತ್ತ ಐನೂರು ಮೀಟರ್ ಪಾತಳಿಯಲ್ಲಿ ಗೋಪುರಗಳಿಗೆ ನಿಷೇಧ ಹೇರುವ ಪ್ರಸ್ತಾಪವನ್ನು ಮಾಡಿದೆ.ಹಾಗೆ ಮಾಡಿದರೆ,ವೈದ್ಯರುಗಳನ್ನು ಸಂಪರ್ಕಿಸಲು ರೋಗಿಗಳಿಗೆ ಸಮಸ್ಯೆಯಾಗಲಿದೆ ಎಂದು ಟೆಲಿಕಾಂ ಇಲಾಖೆ ಎಚ್ಚರಿಸಿದೆ.
------------------------------------------------
ಮೈಕ್ರೋಸಾಫ್ಟ್ನಿಂದ ಹೊಸ ತಂತ್ರಾಂಶ
ಮೈಕ್ರೋಸಾಫ್ಟ್ ಮೊದಲ ಬಾರಿಗೆ ಕಂಪ್ಯೂಟಿಂಗ್ ಸಾಧನವನ್ನು ಮಾರಾಟಕ್ಕೆ ಒದಗಿಸಲಾರಂಭಿಸಿದೆ.ಐಪ್ಯಾಡ್ ಅಂತಹ ಸಾಧನಗಳ ಯಶಸ್ಸು,ಮೈಕ್ರೋಸಾಫ್ಟನ್ನೂ ಯಂತ್ರಾಂಶದತ್ತ ಸೆಳೆದಿದೆ.ಸರ್ಫೇಸ್ ಎನ್ನುವ ಟ್ಯಾಬ್ಲೆಟ್ ಮೈಕ್ರೋಸಾಫ್ಟ್ನ ಚೊಚ್ಚಲ ಯಂತ್ರಾಂಶವಾಗಲಿದೆ.ಇದರಲ್ಲಿ ಅಳವಡಿಸಿರುವುದು ವಿಂಡೋಸ್8 ಆಪರೇಟಿಂಗ್ ವ್ಯವಸ್ಥೆಯೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?ಮೈಕ್ರೋಸಾಫ್ಟ್ ಹೀಗೆ ಏಕಾಏಕಿ ಯಂತ್ರಾಂಶ ಕ್ಷೇತ್ರಕ್ಕಿಳಿದಿರುವುದು,ಇತರ ಯಂತ್ರಾಂಶ ಕಂಪೆನಿಗಳಾದ ಸ್ಯಾಮ್ಸಂಗ್,ಡೆಲ್,ಏಸರ್ ಮುಂತಾದ ಕಂಪೆನಿಗಳಿಗೆ ಮುಜುಗರ ತರುವುದು ನಿಶ್ಚಯ.ಪಿಸಿ,ಲ್ಯಾಪ್ಟಾಪ್ಗಳಿಗೆ ಬಂದಾಗ,ಈ ಕಂಪೆನಿಗಳ ಯಂತ್ರಾಂಶಕ್ಕೆ ಮೈಕ್ರೋಸಾಫ್ಟ್ ತಂತ್ರಾಂಶ-ಅಂದರೆ ಆಪರೇಟಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿದೆ.ಅಲ್ಲಿ ಅವುಗಳ ಪಾಲುದಾರಿಕೆ ಪರಸ್ಪರ ಕೊಡುಕೊಳ್ಳುವಿಕೆಯ ಮೇಲೆ ನಡೆದಿದೆ.ಈಗ ಟ್ಯಾಬ್ಲೆಟ್ಗಳ ಮಟ್ಟಿಗೆ ಮೈಕ್ರೋಸಾಫ್ಟ್ ಆ ಕಂಪೆನಿಗಳ ಜತೆಯೇ ಸ್ಪರ್ಧಿಸಬೇಕಿದೆ!ಹಾಗಾಗಿ ಈ ಸಮೀಕರಣಕ್ಕೆ ಹೊಸ ಭಾಷ್ಯ ಬರೆಯಬೇಕಿದೆ.ಹಳೆಯ ಸಂಬಂಧಗಳನ್ನು ಹೊಸ ಜಾಡಿನ ನಡುವೆ ಉಳಿಸಿಕೊಳ್ಳುವುದು ನಿಜಕ್ಕೂ ನಾಜೂಕಿನ ಕೆಲಸವಾಗಿದೆ.
------------------------------------------
UDAYAVANI
----------------------------------------
*ಈ ಅಂಕಣ ಬರಹಗಳು http://ashok567.blogspot.comನಲ್ಲೂ ಲಭ್ಯವಿವೆ.
*ಅಶೋಕ್ಕುಮಾರ್ ಎ
Comments
ಪ್ರಿಯ ಅಶೋಕಕುಮಾರ ರವರೇ.