ಮಿನುಗುತಾರೆ, ಗುನುಗುತ್ತಾರೆ...

ಮಿನುಗುತಾರೆ, ಗುನುಗುತ್ತಾರೆ...

ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚಣಕಾಲ ಮೆಲುಕು ಹಾಕುವಂತೆ ಮಾಡಿತು. ಆದರೂ ಯಾಕೊ ಕೊನೆಯಲ್ಲಿ ಉಳಿದಿದ್ದು ಆ ದುರಂತ ಅಂತ್ಯದ ವಿಷಾದವೆ. ಆ ಮೆಲುಕನೆಲ್ಲ ಕಲಸಿಟ್ಟ ಒಂದು ಕಿರು ಪದ್ಯ / ಕಾವ್ಯ - ತಮ್ಮ ಬರಹದ ಮೂಲಕ ನೆನಪನ್ನು ಮೆಲುಕಿಸಿದ ಜೇವೂರರಿಗೆ 'ಥ್ಯಾಂಕ್ಸ್' ಹೇಳುತ್ತ...

ಮಿನುಗುತಾರೆ, ಗುನುಗುತ್ತಾರೆ...
_________________________

ಮಿನುಗುತಾರೆ ಕಲ್ಪನ
ಮಿನುಗುತ್ತಾರೆ ;
ಗುನುಗುತಾರೆ ಇಂದಿಗೂ ಜನ
ಗುನುಗುತ್ತಾರೆ!

ಬೆಳ್ಳಿಮೋಡವಾಗಿ ಕಲ್ಪನೆ
ಅರಳಿದ ಬೆಳಕಿನ ಮೇನೆ ;
ದೀಪದಡಿ ಕತ್ತಲೆ ಕೋಣೆ
ಅವಳ ಬದುಕೇಕೊ ಕಾಣೆ!

ಮೂಡಣ ಮನೆಯ ಮುತ್ತಿಗೆ
ಬೆಳ್ಳಿ ಪರದೆಯ ಪುನುಗು ;
ಹಗಲಿರುಳು ಮಿನುಗಿದರು
ಕಪ್ಪುಸೀರೆ ಬಿಳಿಯಂಚಾದರು!

ಕಾವೇರಿದವಳು ನೀರಾಗಲಿಲ್ಲ
ಶರಪಂಜರವೇಕೊ ಬಿಡಲಿಲ್ಲ ;
ಗೆದ್ದೆನೆಂದು ಅರಚಿದವಳ ಜಗಳ
ಸೋಲಿನ ಘನತೆಯನ್ನು ಕೊಡಲಿಲ್ಲ!

ಹದಿನಾಲ್ಕು ವರ್ಷ ವನವಾಸ
ಮುಗಿಸಿಬಂದರು ಬಿಡದ ದೋಷ ;
ಅಲೆದಾಡಿಸುತ್ತರ ದಕ್ಷಿಣ ಧ್ರುವಕೆ
ಬಿಡದೆ ಕಾಡಿ ಶಾಪ, ಹೊತ್ತರು ಹರಕೆ!

ಒಂದಲ್ಲವೆಂದು ಎರಡು ಕನಸು
ಕಂಡರೂ ಬಿಡ ಮುನಿದ ಮನಸು ;
ದಾರಿ ತಪ್ಪಿದ ಮಗನಂತೆ ಚರಣ
ಹಾಡಿಯೂ ಕಾಯದ ಶ್ರೀಮನ್ನಾರಾಯಣ!

ಅಭಿನೇತ್ರಿಯೆ ನಿಗೂಢ ಕಲ್ಪನೆ ವಜ್ರ
ಕತ್ತರಿಸೆ ಬೇಕಾಯ್ತಿನ್ನೊಂದು ವಜ್ರ ;
ದುರಂತ ಬಾಳಿನ ಪಾಲಾದರೆ ಛಿಧ್ರ
ಪುಡಿಯಾಗದುಳಿದೀತೆ ಎಂತಿರಲಿ ವಜ್ರ!

ಎಡವುತಾರೆ ಕಲ್ಪನ 
ಕೊನೆಗೂ ಎಡವುತ್ತಾರೆ ;
ಗೆಜ್ಜೆಪೂಜೆ ಮಾಡಿ ಕೊನೆಗು
ಪಾಪ ಕೆಡವುತ್ತಾರೆ!
 

ಧನ್ಯವಾದಗಳೊಂದಿಗೆ

- ನಾಗೇಶ ಮೈಸೂರು

 

 

Comments

Submitted by kavinagaraj Mon, 09/02/2013 - 11:51

ಲಲ್ಲೆಗರೆಯುತ್ತಾ, ಮುದ್ದುಗರೆಯುತ್ತಾ ನಿಧಾನವಾಗಿ ಮಾತನಾಡುತ್ತಿದ್ದ ಆಕೆಯದು ಕೆಲವು ಸಲ ವಯೋಸಹಜವಲ್ಲದ ಅತಿರೇಕದ ಅಭಿನಯವೆನಿಸುತ್ತಿದ್ದರೂ, ಒಳ್ಳೆಯ ಅಭಿನೇತ್ರಿಯಾಗಿದ್ದಳೆಂಬುದಕ್ಕೆ ಎರಡು ಮಾತಿಲ್ಲ.
Submitted by nageshamysore Tue, 09/03/2013 - 21:18

In reply to by kavinagaraj

ಹೌದು ಕವಿನಾಗರಾಜರೆ, ಆ ದಿನಗಳಲ್ಲಿ (ನಾವು ಹುಡುಗರಾಗಿದ್ದಾಗ) ಕೆಲವೊಮ್ಮೆ ಆಕೆ ಮಾತನಾಡಿದರೆ ದೊಡ್ಡವರಿಗಿಂತ ಯಾರೊ ಚಿಕ್ಕವರು ಮಾತಾಡುತ್ತಿದ್ದ ಹಾಗೆ ಅನಿಸುತ್ತಿತ್ತು. ಆಕೆ ಮಾತಾಡುತ್ತಿದ್ದ ಬಗೆಯೆ ಹಾಗೆ ಎಂದರಿವಾದದ್ದು ಎರಡು ಮೂರು ಚಿತ್ರಗಳಲ್ಲಿ ಅದೆ ರೀತಿಯ ಮಾತಾಡುವಿಕೆಯನ್ನು ನೋಡಿದ ಮೇಲೇಯೆ. ಬಹುಶಃ ಆಕೆ ಅಭಿನಯಿಸಿದ ಚಿತ್ರಗಳು, ಹಾಡುಗಳು, ಪುಟ್ಟಣ್ಣ ತರದ ನಿರ್ದೇಶಕರು - ಹೀಗೆ ಎಲ್ಲಾ ತರದ ಅಂಶಗಳು ಒಟ್ಟಾಗಿ ಸೇರಿ ಒಂದು ವಿಧಧ 'ಸ್ಪೆಷಲ್ ಎಫೆಕ್ಟ್ ' ಉಂಟು ಮಾಡಿತೆನ್ನಬಹುದು!