ಮಿನುಗು ತಾರೆ ಕಲ್ಪನಾ ಇಲ್ಲದ 35 ವರ್ಷಗಳು...!
ಕಲ್ಪನಾ....ಕಲ್ಪನೆಗೂ ನಿಲುಕದ ನಟಿ. ಗೊತ್ತಿರೋರು ಹೇಳೋದು ಹೀಗೆ. ತಿಳಿಯದೇ ಇರೋರು ಹೇಳೋದು ಒಂದೇ. ಕಲ್ಪನಾ ನಟನೆ ತುಂಬಾ ಓವರ್ ಆಗಿತ್ತು. ಇದನ್ನ ಸ್ವತ: ಕಲ್ಪನಾ ರೂಢಿಸಿಕೊಂಡಿದ್ದರೋ. ಇಲ್ಲ ಯಾರಾದರೂ ಹೀಗೆ ಅಭಿನಯಸಿಬೇಕು ಅಂತ ನಿರೀಕ್ಷಸಿದ್ದರು. ಅದರ ಸುತ್ತ ಮಾತನಾಡುತ್ತ ಹೋದರೆ, ಕಲ್ಪನಾರನ್ನ ಹೀಗಿಗೇ ನಟಿಸಬೇಕು ಎಂದು ಹೇಳುತ್ತಿದ್ದವರು, ಅದು ಪುಟ್ಟಣ್ಣ ಕಣಗಾಲ್ ಅವ್ರು ಮಾತ್ರ. ಅವರೂ ಈಗಿಲ್ಲ. ಕಲ್ಪನಾ ಅವರೂ ಇಲ್ಲ. ಕಲ್ಪನಾ ಅಭಿನಯ ಇನ್ನೂ ತೆರೆ ಮಿನುಗುತ್ತಿದೆ...!
ಇದನ್ನ ಹೇಳಲಿಕ್ಕೆ ಈಗ ಕಾರಣವೂ ಇದೆ. ಕಲ್ಪನಾ ಬರ್ತ್ ಡೇ ಇದೆ ಜುಲೈ 8 ಕ್ಕೆ. ಕಲ್ಪನಾ ನಮ್ಮೊಟ್ಟಿಗೆ ಇದ್ದಿದ್ರೇ, ಈಗ ಅವರಿಗೆ 71 ವರ್ಷ. ಆದರೆ, ಕಲ್ಪನಾ ನಮ್ಮನ್ನ ಅಗಲಿ ಈಗ 36 ವರ್ಷಗಳೇ ಕಳೆದಿವೆ. ಈ ವೇಳೆ ಕಲ್ಪನಾ ಅವರ ಬಗ್ಗೆ ಬರೆಯಬೇಕು ಅನಿಸ್ತು. ಅದಕ್ಕೆ, ಹಿರಿಯ ಪತ್ರಕರ್ತೆ ಹಾಗೂ ಕಲ್ಪನಾ ಅವರ ಜೀವದ ಗೆಳತಿ ವಿಜಯಮ್ಮ ಅವರನ್ನ ಫೋನ್ ಮುಖಾಂತರ ಮಾತಾಡಿಸೋ ಅವಕಾಶವೂ ಸಿಕ್ತು. ಆಗ ವಿಜಯಮ್ಮ ಮಾತನಾಡುತ್ತ ಹೋದ್ರು. ಕೇಳಿದ ಒಂದೇ ಒಂದು ಪ್ರಶ್ನೆಗೆ ವಿಜಯಮ್ಮ, ಕಲ್ಪನಾ ಅವರ ಸಂಪೂರ್ಣ ಬದುಕಿನ ಕತೆಯನ್ನೇ ಬಿಚ್ಚಿಟ್ಟರು. ಅವುಗಳಲ್ಲಿ ತುಂಬಾ ಇಂಟ್ರಸ್ಟಿಂಗ್ ಅನಿಸೊ ಒಂದಷ್ಟು ವಿಷ್ಯಗಳಿವೆ. ಅವುಗಳನ್ನ ಇಲ್ಲಿ ಹಂಚಿಕೊಳ್ಳಬೇಕು ಅನಿಸ್ತಾಯಿದೆ. ಮುಂದೆ ಇವೆ ಓದಿ...
ಕಲ್ಪನಾ ಅವರಿಗೆ ವೈಟ್ ಸೀರೆ ಅಂದ್ರೆ ಪಂಚ ಪ್ರಾಣ..ಕಲ್ಪನಾ ಫ್ಯಾಷನ್ ಪ್ರಿಯೇ. ವೈಟ್ ಸೀರೆ ಅಂದರೆ ಪ್ರಾಣ. ಕಾಟನ್ ಸಾರಿ ಅಂದ್ರೆ ತುಂಬಾ ಇಷ್ಟ. ಸದಾ ವೈಟ್ ಸೀರೆಯನ್ನ ಉಡಲು ಇಷ್ಟಪಡುತ್ತಿದ್ದರು. ಸಿನಿಮಾ ತಾರೆ ಆಗಿದ್ದರಿಂದ, ಸಿನಿಮಾದವ್ರು ಬೇಡಿಕೆಯಂತೆ, ಬೇರೆ..ಬೇರೆ ಬಣ್ಣದ ಸಾಡಿ ಉಟ್ಟುಕೊಳ್ಳುತ್ತಿದ್ದರು. ಆದರೆ, ಸಾರಿ ಉಡೋ ಸ್ಟೈಲ್ ಕೂಡ ಭಿನ್ನವಾಗಿರುತ್ತಿತ್ತು. ಕಲ್ಪನಾ ಅವರೇ ಹಾಗೆ, ಮೇಕಪ್ ಮಾಡಿಕೊಂಡು, ಖಾಸಗಿ ಕಾರ್ಯಕ್ರಮಗಳಿಗೆ ಬಂದರೆ, ಅಲ್ಲೊಂದು ಖುಷಿ ವಾತಾವರಣ ನಿರ್ಮಾಣವಾಗುತ್ತಿತ್ತು. ಯಾಕೆಂದರೆ, ಕಲ್ಪನಾ ಶೃಂಗಾರವೇ ಅಷ್ಟು ಆಕರ್ಷಕವಾಗಿರುತ್ತಿತ್ತು..
ಕಲ್ಪನಾ ಕತ್ತಿನ ಮಚ್ಚೆ ರಹಸ್ಯ..! ಕಲ್ಪನಾ ಅವರಿಗೆ ತಮ್ಮನ್ನ ತಾವು ಹೇಗೆ ಪ್ರಸೆಂಟ್ ಮಾಡಿಕೊಳ್ಳಬೇಕೆಂಬೋದು ಚೆನ್ನಾಗಿ ತಿಳಿದಿತ್ತು. ಸೀರೆ ಮತ್ತು ಕುಪ್ಪಸ ಧರಿಸೋದರಿಂದ ಹಿಡಿದು, ಅದನ್ನ ಹೇಗೆ ಕ್ಯಾರಿ ಮಾಡಿದರೇ ಚೆಂದ ಎಂಬ ಸ್ಪಷ್ಟ ಕಲ್ಪನೆನೂ ಇರುತಿತ್ತು. ಉಡುಪಿನ ಬಗ್ಗೆ ಅಷ್ಟು ಕಾನ್ಸಿಯೆಸ್ ಆಗಿಯೇ ಇರುತ್ತಿದ್ದ ಕಲ್ಪನಾ ಅವರಿಗೆ, ಬೇರೆ ಯಾರೂ ಕಾಸ್ಟ್ಯೂಮ್ ಡಿಸೈನರ್ ಇರಲಿಲ್ಲ. ತಮಗೆ ತಾವೇ ಡಿಸೈನರ್. ಮತ್ತು ಹಾಗೆ ಕಲ್ಪನಾ ಧರಿಸಿದ ಅಷ್ಟು ಉಡುಗೆಗಳು ಒಂದು ರೀತಿ ಕಲ್ಪನಾ ಹುಟ್ಟುಹಾಕಿದ್ದ ಟ್ರೆಂಡೇ ಆಗಿ ಹೋಗಿವೆ. ಆದರೆ, ಕಲ್ಪನಾ ಅವರ ಯಾವುದೇ ಚಿತ್ರವನ್ನೇ ತೆಗೆದುಕೊಳ್ಳಿ. ಕಲ್ಪನಾ ಅವರ ಕತ್ತಿನ ಬಳಿವೊಂದು ಕಪ್ಪು ಮಚ್ಚೆ ಇರುತ್ತಿತ್ತು. ಅದು ನಿಜವಾದ ಮಚ್ಚೆ ಅನ್ನೋದೇ ಎಲ್ಲರೂ ಈಗಲೂ ನಂಬಿರೋ ಸತ್ಯ. ಹಾಗಿರೋವಾಗ,ಇದು ಅಸಲಿ ಅಲ್ಲ. ನಕಲಿ ಮಚ್ಚೆ ಅನ್ನೋದು ಅಷ್ಟೇ ನಿಜ. ಕಲ್ಪನಾ ಅವರಿಗೆ ಅದೇಕೋ ಮಚ್ಚೆ ಇಟ್ಟುಕೊಳ್ಳುವ ಒಂದು ಅಭ್ಯಾಸ. ಅದಕ್ಕೇನೆ, ಮಚ್ಚೆ ಆಗಾಗ ಸ್ಥಾನಪಲ್ಲಟ್ಟ ಮಾಡುತ್ತಿತ್ತು..
ಕಲ್ಪನಾ ಬರಹಗಾರ್ತಿನೂ ಹೌದು..! ಕಲ್ಪನಾ ಅವರಿಗೆ ಓದುವ ಹವ್ಯಾಸವೂ ಇತ್ತು. ಎಂ.ಕೆ.ಇಂದ್ರಾ ಅವರ ಕಾದಂಬರಿನೂ ಹೆಚ್ಚು..ಹೆಚ್ಚು ಓದುತ್ತಿದ್ದರು. ತ್ರಿವೇಣಿ ಅವರ ಬರಹ ಅಚ್ಚು-ಮೆಚ್ಚು. ಅಷ್ಟೇ ಅಲ್ಲ.ಬರೆಯುವ ಆಸಕ್ತಿನೂ ತುಂಬಿತ್ತು. ಆದರೆ, ಟೈಮ್ ಸಿಗದೇ ಕಾರಣ ಬರವಣಿಗೆಯ ಹವ್ಯಾಸವನ್ನ ಬೆಳಸಿಕೊಳ್ಳಲು ಆಗಿರಲಿಲ್ಲ. ಆದರೂ, ಕಲ್ಪನಾ ಒಮ್ಮೆ ರಷ್ಯಾಕ್ಕೆ ಹೋಗಿದ್ದರು. ಅಲ್ಲಿಯ ಚಲನ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಆ ಒಂದು ಅನುಭವನ್ನ, ಗೆಳತಿ ವಿಜಯಮ್ಮ ಬರೆದುಕೊಡು ಅಂತ ಕೇಳಿದ್ದರು. ಆಗ ಮಾಸ ಪತ್ರಿಕೆ ‘ಮಲ್ಲಿಗೆ’ ಸಂಪಾದಕರಾಗಿದ್ದ ವಿಜಯಮ್ಮ ಅವರು, ಕಲ್ಪನಾ ಬರೆದ ಲೇಖನವನ್ನ ತಿಂಗಳಿಗೊಂದರಂತೆ, ಸರಣಿಯಾಗಿ ಪತ್ರಿಕೆಯಲ್ಲಿ ಪ್ರಕಟಿಸಿದರು.
ಮಾಸ್ಟರ್ ಹಿರಣಯ್ಯ ಕಂಪನಿಯಲ್ಲೂ ಕಲ್ಪನಾ ನಟನೆ...ಕಲ್ಪನಾ ಅವ್ರು ಮಾಸ್ಟರ್ ಹಿರಣಯ್ಯ ಅವರ ನಾಟಕ ಕಂಪನಿಯಲ್ಲೂ ಅಭಿನಯಿಸಿದ್ದರು. ಆಗಿನ ಕಾಲಕ್ಕೆ ಕಲ್ಪನಾ ಈ ಕಂಪನಿಯಲ್ಲಿ ಹೈಯೆಸ್ಟ್ ಪೇಡ್ ಕಲಾವಿದೆ. 5 ಸಾವಿರದಷ್ಟು ಸಂಭಾವನೆ ಪಡೀತಿದ್ದರು. ಆದರೆ, ಯಾವಾಗ ಗುಡಗೇರಿ ಬಸವರಾಜ್ ಅವರ ಕಂಪನಿಯಲ್ಲಿ ನಟಿಸೋಕೆ ಆರಂಭಿಸಿದರೋ, ಆಗಲೇ, ಕಲ್ಪನಾ ಬದುಕು ಕೆಟ್ಟು ಹೋಯಿತು. ಒಪ್ಪಂದದಂತೆ, ಬಾಕಿ ಉಳಿದ ಮೂರು ನಾಟಕಗಳನ್ನ ಆಡಿ ಬರ್ತಿನಿ ಅಂತ ಹೋದ ಕಲ್ಪನಾ, ಮತ್ತೆ ಬೆಂಗಳೂರಿಗೆ ವಾಪಾಸ್ ಹೆಣವಾಗಿಯೇ ಬಂದರು. ಹೀಗೆ ಕಲ್ಪನಾ ಎಂಬ ಮಿನುಗು ತಾರೆಯ ಬದುಕು ಅಂತ್ಯವಾಗಿದೆ. ದುರಂತ ಅಂತ್ಯ ಕಂಡ ಈ ಮಿನುಗು ತಾರೆ ಜೀವನ ಸ್ಪೂರ್ತಿಯಿಂದ ಕಾದಂಬರಿನೂ ಪ್ರಕಟಗೊಂಡಿದೆ. ‘ಅಭಿನೇತ್ರಿ’ ಹೆಸರಲ್ಲಿ ನಟಿ-ನಿರ್ಮಾಪಕಿ ಪೂಜಾ ಗಾಂಧಿ ಸಿನಿಮಾನೂ ಮಾಡಿದ್ದಾರೆ. ಆದರೆ, ಕಲ್ಪನಾ ಮಾತ್ರ ಈಗ ಇವೆಲ್ಲನ್ನೂ ನೋಡಲು ಇಲ್ಲವೇ ಇಲ್ಲ..
-ರೇವನ್ ಪಿ.ಜೇವೂರ್