ಮಿನ್ನಿ ಕಾಲಂ: ಬೇತಾಳ ಕಥಾ ೧

ಮಿನ್ನಿ ಕಾಲಂ: ಬೇತಾಳ ಕಥಾ ೧

ಬರಹ

ಎಂದಿನಂತೆ ಬೇತಾಳವನ್ನು ಹೆಗಲಿಗೆ ಏರಿಸಿಕೊಂಡ ವಿಕ್ರಮನು ದಾರಿಯನ್ನು ಸವೆಸುತ್ತಿರಲಾಗಿ, ಬೇತಾಳವು,
" ಮಹಾರಾಜಾ, ದಾರಿ ಖರ್ಚಿಗಾಗಿ ಬಟಾಣಿಯನ್ನಗಲಿ, ಹುರಿದ ಗೋಡಂಬಿಯನ್ನಾಗಲಿ ತಂದಿದ್ದೀಯಾ?" ಎಂದು ಕೇಳಿತು.

ಮೌನ ಮುರಿಯಲು ಈ ಬೇತಾಳವು ಪಡುತ್ತಿರುವ ಶ್ರಮವನ್ನು ಕಂಡು ನಕ್ಕ ರಾಜನು, ಇಲ್ಲ ಎಂದು ನಕಾರವಾಗಿ ತಲೆಯಲ್ಲಾಡಿಸುತ್ತ, ಮನಸ್ಸಿನಲ್ಲಿಯೇ ಛೆ, ಹುರಿದ ಗೋಡಂಬಿ ತರಬಹುದಿತ್ತಲ್ಲವೇ ಎಂದು ನೆನೆದು ಬಾಯಲ್ಲಿ ಜೊಲ್ಲು ಸುರಿಸ ಹತ್ತಿದನು. ರಾಜನ ಬಾಯಲ್ಲಿ ಸುರಿಯುತ್ತಿರುವ ಜೊಲ್ಲು ನೋಡಿದ ಬೇತಾಳವು, ಇಡ್ಲಿ ಸಂಬಾರನ್ನೂ, ಮಜ್ಜಿಗೆ ಹುಳಿ ಅಂಬೋಡೆ ಯನ್ನೂ, ವಿದ್ಯಾರ್ಥಿ ಭವನದ ಮಸಾಲ ದೋಸೆಯನ್ನೂ, ಬ್ರಾಹ್ಮಣರ ಕಾಫಿ ಬಾರಿನ ಕಾಫಿಯನ್ನೂ ಒಂದರ ನಂತರ ಒಂದರಂತೆ ಹೇಳುತ್ತಾ ರುಚಿಯನ್ನು ವರ್ಣಿಸುತ್ತ, ರಾಜನ ಬಾಯಲ್ಲಿ ಸುರಿಯುತ್ತಿರುವ ಜೊಲ್ಲಿನ ರೇಟ್ ಆಫ್ ಇನ್ಕ್ರೀಸ್ ನ್ನು ಲೆಕ್ಕ ಹಾಕುತ್ತಿತ್ತು. ಇದನ್ನು ಗಮನಿಸಿದ ರಾಜನು, ಒಹ್, ನಾನು ಇಷ್ಟೊಂದು ಜೊಲ್ಲು ಸುರಿಸಿದರೆ ಬೇಗ ಬಾಯಿ ಒಣಗಿ ಹೋಗುತ್ತದೆ ಎಂದರಿತು, ಬೇಗ ಬೇಗ ಹೆಜ್ಜೆ ಹಾಕಿದನು.


ರಾಜನಿಗೆ ತನ್ನ ಟ್ರಿಕ್ಕು ತಿಳಿಯಿತೆಂದು ಅರಿತ ಬೇತಾಳವು, " ಇರಲಿ ಜೊಲ್ಲು ಖಾಲಿ ಆಗದ ಶೂರನೆ, ಇದೀಗ ನಾನೊಂದು ಕಥೆಯನ್ನು ಹೇಳುವೆ, ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳುವೆ, ಅದನ್ನು ಅರಿತೂ ಹೇಳದೆ ಇದ್ದಾರೆ, ನಿನ್ನ ತಲೆ ಸಾವಿರ ಹೋಳುಗಳಾಗುತ್ತವೆ" ಎಂದು ತನ್ನೆಲ್ಲ ಹೊಸ ವರಸೆಗಳನ್ನೂ ಬಿಟ್ಟು ಒರಿಜಿನಲ್ ವರಸೆಗೆ ಬಂದು ಕಥೆಯನ್ನು ಹೇಳಹೊರಟಿತು.

ಒಬ್ಬಳು ಹುಡುಗಿ. ಅವಳ ಹೆಸರು ಶ್ಯಾಮಲೆ. ಕನ್ನಡದ ಕುವರಿ. ಅಂತ ಪ್ರತಿಭಾವಂತೆ ಏನಲ್ಲ. ಅಪ್ಪನು ಕೊಡಿಸಿಟ್ಟ ಆಸ್ತಿಯಿದೆ. ಲಂಡನ್ ನ imperial ಕಾಲೇಜ್ನಲ್ಲಿ ಓದಲು ಕಳುಹಿಸಿದ್ದಾನೆ. ಮಗಳೇ, ಲಂಡನ್ ನ ಡಿಗ್ರಿಯನ್ನು ಹೊತ್ತು ತಾ. ಎಂದು.

ವರುಷವೋ, ಎರಡೋ ಕಳೆದಿದೆ imperial ನಲ್ಲಿ. ಮುತ್ತ ಮುತ್ತ.. ಮುತ್ತ.. ಮುತ್ತ.. ಚಿನ್ನಾರಿ ಮುತ್ತ, ಹೇಗಿದ್ದ ಹೇಗಾದ ಗೊತ್ತ ನಮ್ಮ ಚಿನ್ನಾರಿ ಮುತ್ತ, ಎಂದು ಹಾಡಿಕೊಳ್ಳುತ್ತ ಓದಿಕೊಳ್ಳುತ್ತ ಇದ್ದಾಳೆ ಶ್ಯಾಮಲೆ. ಆದರೇನು, ಯಾರಿಗಾದರೂ ಈ ಹಾಡು ಅರ್ಥವಾಗುವುದಾದರೂ ಉಂಟೇ? ಕನ್ನಡ ನಮ್ಮ ಕನ್ನಡ ಎಂದು ಗೊಣಗಿಕೊಳ್ಳುತ್ತಾ, ಆಗೊಮ್ಮೆ ಈಗೊಮ್ಮೆ ಹಾಡಿಕೊಂಡು, ಓದಿಕೊಂಡು ಇದ್ದಾಳೆ. ಬೋರು ಹೊಡೆಯಲು ಶುರು ಆಗಿದೆ. ಮಾತು ಆಡಿಸಿದವರ ಮೇಲೆಲ್ಲಾ ಒಂದು ಪ್ರೀತಿ. ಬಹಳ ಬೋರಾದಾಗ ಹೀಗೆ ಸುಮ್ಮನೆ ಒಂದು ಕಲ್ಲುಬಂಡೆಯನ್ನೇ ಜಾಸ್ತಿ ಹೊತ್ತು ನೋಡುತ್ತಿದ್ದರೆ ಸಾಕು ಅದರ ಮೇಲೆ ಪ್ರೀತಿ ಉಕ್ಕಿ ಬಿಡುತ್ತದೆ. ಹೀಗಿರುವಾಗ ಆಕೆಗೆ ಸಿಕ್ಕಿದ್ದಾನೆ ಅಬಕನ್ನಿನ ವಾದಿಮನು. ಅವನೇನು ಕಲ್ಲು ಬಂಡೆಯಷ್ಟು ಸದರವೇ? ಅಲ್ಲ. ಪ್ರೀತಿಯು ಉಕ್ಕಿದೆ. ಪ್ರೀತಿಸಲು ಶುರು ಮಾಡಿದ್ದಾಳೆ. ಇದನ್ನು ಪ್ರೀತಿ ಎಂದು ಕರೆಯಬಹುದೋ ಇಲ್ಲವೋ ಎನ್ನುವುದು ದೊಡ್ಡವರ ಅರಿವಿಗೆ ಬಿಟ್ಟಿದ್ದು. ಇದೆಲ್ಲ ಅವರಿಗೆ ತಿಳಿಯದು.

ಓದು ಮುಗಿದಿದೆ. ವಾಪಸ್ಸು
ಅವರವರ ಊರಿಗೆ ಹೋಗಿ ಆಗಿದೆ. ರಷ್ಯಾದವನನ್ನು ಪ್ರೀತಿಸಿದ್ದೇನೆ ಎಂದು ಮನೆಯಲ್ಲಿ ಹೇಳಿದ್ದಾಳೆ, ಅಲ್ಲದೆ, ಮದುವೆ ಆಗೋಣ ಎಂದಿದ್ದೇವೆ ಎಂದೂ ಹೇಳಿದ್ದಾಳೆ. 

ವಿಷಯ ತಿಳಿದ ತಂದೆಗೆ ತಲೆ ತಿರುಗಿದೆ.
"ಏನಿದು ತಾಯಿ, ನಮ್ಮದೇ ಯಾವುದೋ ಹಳ್ಳಿ ಹೈದನಿಂದ ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳುತ್ತೇನೆ ಎಂದರೂ ಓಕೆ ಎನ್ನುತ್ತಿದ್ದೆ, ಆದರೆ ಇದೇನಿದು, ಯಾರೋ ಎಲ್ಲಿಯವರೋ ತಿಳಿಯದವನನ್ನು  ತಂದು, ಒಹ್  ರಷ್ಯಾದವನು ಅಂದೆಯಲ್ಲವೇ...  ರಷ್ಯಾ ದವನನ್ನು ಅಳಿಯ ಮಾಡಿಕೋ ತಂದೆ, ಅಂದರೇನಿದು, ಆಟವೇ?" ಎಂದು ಗೋಳಾಟ ಗೈಯುತ್ತಿದ್ದಾನೆ.
ಶ್ಯಾಮಲೆಯನ್ನು ಜಗ್ಗ ಮುಗ್ಗ ಎಳೆದರೂ ಕುಂಯ್ಯೋ ಮರ್ರೋ ಅನ್ನದೆ ಮದುವೆ ಆದರೆ ಈ ಹೈದನ್ನೇ ಅಂತಾ ಪಟ್ಟು ಹಿಡಿದು ಕುಳಿತು ಬಿಟ್ಟಿದಾಳೆ. ಅಪ್ಪ, ಪಾಪ, ತಲೆ ಮಾತ್ರವಲ್ಲದೆ ಹಾರ್ಟು ಕೂಡ ಕೆಡಸಿಕೊಂಡು ನಾಲ್ಕಾರು ಬಾರಿ ಆಸ್ಪತ್ರೆಗೆ ತಿರುಗಿ ತಿರುಗಿ ಹೈರಾಣವಾಗಿದ್ದಾನೆ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶ್ಯಾಮಲೆಯು, ಗೂಗಲ್ ಚಾಟಿನಲ್ಲಿ, ನಮ್ಮ ಮನೆಯಲ್ಲಿ ಓಕೆ ಕಣೋ ವಾದಿಮ, ನೀನು ಯಾವಾಗ ಬರುವೆ ಎನ್ನುತ್ತಿದ್ದಾಳೆ.

ಶ್ಯಾಮಲೆಯ ಪಟ್ಟು ತನ್ನ ಪಟ್ಟಿಗಿಂತ ಜೋರಾಗಿ ಇರುವುದನ್ನು ಅರಿತ ತಂದೆಯು, ಸುಮ್ಮನೆ ಇರೋ ಒಂದು ಹಾರ್ಟು, ಯಾಕೆ ವೇಸ್ಟ್ ಮಾಡಿಕೊಳ್ಳೋಣ, ಬಡಿಯುವಷ್ಟು ದಿನ ಧಬ್- ಧಬ್ ಲಭ್-ಧಬ್ ಅಂತಾ ಬಡಿದು ಕೊಳ್ಳಲಿ, ಈ ತಲೆ ಬಿಸಿ ಬೇಡ ಎಂದು ಮದುವೆಗೆ ಜೈ, ಮಗಳ ಇಷ್ಟಾನೆ ನನ್ ಇಷ್ಟ ಎಂದು ಫಿಲ್ಮಿ ಡೈಲಾಗ್ ಹೊಡೆದಿದ್ದಾನೆ , ಏನೂ ಕೈಲಿ ಹರಿದೇ.

ಈಗ ಶ್ಯಾಮಲೆಗೆ ಅಪ್ಪನ ಮೇಲೆ ಪರಮ ಪ್ರೀತಿ. ಅಯ್ಯೋ ಪಾಪ ನಮ್ಮಪ್ಪ, ಹುಷಾರಿಲ್ಲ, ಅವರನ್ನ ಯಾರೂ ಜೋರಾಗಿ ಮಾತಾಡಿಸಬೇಡಿ, ಅವ್ರಿಗೆ ಮೈ ಸರಿ ಇಲ್ಲ. ಗಟ್ಟಿ ಕಣ್ಣು ಬಿಟ್ಟು ಅವರನ್ನ ನೋಡಬೇಡಿ ಅವ್ರ ಕಣ್ಣಲ್ಲಿ ನೀರು ಬರುತ್ತೆ. ದೊಡ್ಡದಾಗಿ ಮಾತಾಡಬೇಡಿ, ಅವರಿಗೆ ಸಂಕಟ ಆಗುತ್ತೆ. ಇತ್ಯಾದಿ ಇತ್ಯಾದಿ. ಹತ್ತು ಹಲವು ವಿಧದಲ್ಲಿ, ತನಗೆ ತೋಚಿದ ರೀತಿಯಲ್ಲಿ ಪಿತೃ ಸೇವೆ ಗೈಯುತ್ತಿದ್ದಾಳೆ. ಬೀದಿಯಲ್ಲಿ ಹೋಗುವವನನ್ನೂ ಕರೆದು ನಿಲ್ಲಿಸಿ, ನಮ್ಮಪ್ಪನ್ ಹತ್ತಿರ ಜೋರಾಗಿ ಮಾತಾಡಿದ್ರೆ ಹುಷಾರ್ ಅಂತಾ ಗದರುತ್ತಾಳೆ. ಪ್ರೀತಿ ತೋರಿಸುತ್ತಾಳೆ, ತಂದೆಗೆ. ಈಗ ಶ್ಯಾಮಲೆಗೆ , ಅಪ್ಪನ ಆರೋಗ್ಯ ಕ್ಷಯಿಸುವುದರ ಮೂಲ ಕಾರಣ ಮರೆತು ಹೋಗಿದೆ. ಆದರೆ, ಈಗೀಗ ಚಿಕ್ಕ ಪುಟ್ಟ ವಿಷಯದಲ್ಲೂ ಅಪ್ಪನನ್ನು  ಸರಿಯಾಗಿ ನೋಡಿ ಕೊಳ್ಳದೆ ಇರುವವರ ಮೇಲೆಲ್ಲಾ ಕೋಪ.

ಅಪ್ಪನು ಕಣ್ಣೀರು ಸುರಿಸುತ್ತಿದ್ದರೆ, ಬೀದಿಯಲ್ಲಿ ಯಾರು ಹೋಗುತ್ತಿದ್ದಾರೆ ಎಂದು ನೋಡುತ್ತಾಳೆ. ಅವರನ್ನು ಕರೆದು ಉಗಿಯುತ್ತಾಳೆ, ತನಗೆ ತೋಚಿದ ರೀತಿಯಲ್ಲಿ.

ಬೇತಾಳವು ಈ ಕಥೆಯನ್ನು ಹೇಳುತ್ತಲೇ ಇರುವಾಗ, ವಿಕ್ರಮಾದಿತ್ಯನು ಏನು ವೋಳು ಗುರುವೇ ಎಂದು ನಿದ್ದೆ ಮಾಡುತ್ತ, ನಿದ್ದೆಗನ್ನಿನಲ್ಲಿ ತಡಬಡಾಯಿಸಿ ನಡೆಯಲು ತೊಡಗಿದನು. ಇದನ್ನು ನೋಡಿದ ಬೇತಾಳವು ಇನ್ನೇನು ಜಾಸ್ತಿ ಉದ್ದ ಕಥೆ ಹೇಳಿದರೆ, ಇವನು ತನ್ನನ್ನು ಕೆಡವುದರಲ್ಲಿ ಸಂಶಯವಿಲ್ಲವೆಂದು ಅರಿತು, ತನ್ನ ಕಥೆಗೆ ಅಲ್ಲಿಯೇ ಬ್ರೇಕ್ ಹಾಕಿ, ಪ್ರಶ್ನೆಗಳನ್ನುಇಟ್ಟಿತು.

"ರಾಜಾ! ಈ ಪ್ರಶ್ನೆಗಳಿಗೆ ಉತ್ತರಿಸು ಎಂದು ಹೂಂಕರಿಸಿ," ಕೇಳಿತು
 "೧.  ಅಪ್ಪನ ಆರೋಗ್ಯ ನಿಜವಾಗಲೂ ಶ್ಯಾಮಲೆಗೆ ಮುಖ್ಯವೇ? ಹಾಗಿದ್ದಲ್ಲಿ, ಅಪ್ಪನ ಮಾನಸಿಕ ಆರೋಗ್ಯಕ್ಕೆ ಕುಂದು ತರುವಾಗ ಈಕೆಯೇ ಯಾಕೆ ಮುಖ್ಯ ಪತ್ರ ವಹಿಸಲು ಸಾಧ್ಯವೇ?
೨. ತಂದೆಗೆ ಮಗಳ ಇಷ್ಟವೇ, ತನ್ನ ಇಷ್ಟವಾದಲ್ಲಿ, ಆರೋಗ್ಯವನ್ನು ಕಳೆದುಕೊಳ್ಳುವ ಮುನ್ನವೇ ಯಾಕೆ ಈ ನಿರ್ಣಯಕ್ಕೆ ಬರಲಿಲ್ಲ?
೩. ಇಲ್ಲಿ ಇಬ್ಬರದೂ ಸ್ವಾರ್ಥವು ಮಾತ್ರ ಗೋಚರವೇ?
ರಾಜಾ, ವಿಕ್ರಮಾದಿತ್ಯ, ಈ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದೂ, ಹೇಳದೆ ಹೋದರೆ.. " ಎಂದು ಬೇತಾಳವು ಕಥೆಯನ್ನು ಮುಗಿಸುತ್ತದೆ.

ರಾಜನು ತಲೆಯನ್ನು ಕೆರೆದುಕೊಳ್ಳುತ್ತಾ, ಜೊಲ್ಲು ಸುರಿಸುವುದೇ ಉತ್ತಮವಿತ್ತಲ್ಲಪ್ಪ ಎಂದುಕೊಳ್ಳುತ್ತ.. ಉತ್ತರವನ್ನು ಹೇಳುತ್ತಾನೆ. (ಮುಂದಿನ ಕಂತಿನಲ್ಲಿ.)

ಅದಾಗಿ, ಈ ಕಥೆಯನ್ನು ಇಲ್ಲಿಯ ತನಕ ಓದಿಕೊಂಡು ಬಂದು ಉತ್ತರ ಹೇಳದೆ, ಮುಂದಿನ ಕಂತಿನ ರಾಜನ ಉತ್ತರಕ್ಕಾಗಿ ನೀವು ಕಾಯುತ್ತ ಕುಳಿತರೆ, ನಿಮ್ಮ ಕೀ ಬೋರ್ಡ್ ಪುಡಿ ಪುಡಿಯಾಗಿ ಉರಿಯುತ್ತಿರುವ ಸಿಪಿಯು ಗೆ ಆಹುತಿ ಆಗುವುದರಲ್ಲಿ ಸಂಶಯವಿಲ್ಲ. ಉತ್ತರಹೇಳಿ!