ಮಿನ್ನಿ ಕಾಲಂ: ಬೇತಾಳ ಕಥಾ ೨ - ವಿಕ್ರಮನ ಉತ್ತರಗಳು!
ಬ್ರೌಸ್ ಮಾಡಿ ಮಾಡಿ ದಣಿದ ವಿಕ್ರಮಾದಿತ್ಯನು, ಇದೆಂಥ ವಿಶಾಲ ಜಗತ್ತಪ್ಪ ಗುರುವೇ! ಎಷ್ಟೊಂದು ಇನ್ಪುಟ್ ಗಳು, ಎಷ್ಟು ಇನ್ಫೋಗಳು. ಒಂದೊಂದು ಪುಟಗೋಸಿ ಶಬ್ದಗಳಿಗೆ ಎಷ್ಟೊಂದು ಸರ್ಚ್ ರಿಸಲ್ಟ್ ಗಳು. ಒಂದೊಂದು ಡಿಬೇಟ್ ಗೆ ಎಷ್ಟೊಂದು ನಮೂನೆ ವ್ಯೂ ಪಾಯಿಂಟ್ಗಳು. ಅಲ್ಲ, ಜಗತ್ತೆಲ್ಲ ಬ್ಲಾಕ್ ಅಂಡ್ ವೈಟ್ ಆಗಿದ್ದಾಗಲೇ ಚೆನ್ನಾಗಿತ್ತಪ್ಪ! ಇದು ಸರಿ, ಇದು ತಪ್ಪು. ಅಷ್ಟೇ. ಝೀರೋ ಅಥವಾ ಒಂದು. ಮಧ್ಯೆ ಫಜಿ ಲಾಜಿಕ್ ನ ಕೊಂಪ್ಲಿಕೇಶನ್ ನ ಅವಾಂತರವಿರಲಿಲ್ಲ ಎಂದುಕೊಂಡನು.
ಆದರೂ, ಇದು ಸರಿ ಅಥವಾ ಇದು ತಪ್ಪು ಎನ್ನುವುದು ನಮ್ಮ ನಮ್ಮ ತಿಳುವಳಿಕೆಯ ಮೇರೆಯ ಮೇಲೆ ನಿರ್ಣಯವಾಗುವಂಥ ವಿಷಯಗಳಷ್ಟೇ. ಹೀಗಿರುವಾಗ, ಇದು ಸರಿ, ಅಥವಾ ಇದು ತಪ್ಪು: ಇದಮಿತ್ಥಂ ಎಂದು ಹೇಳುವುದರ ಕೋರೋಲರೀಯು, ನಮ್ಮ ತಿಳುವಳಿಕೆಯ ಲಿಮಿಟ್ ನ್ನು ತೋರುವುದಲ್ಲವೇ, ಎಂದು ಯೋಚಿಸುತ್ತಾನೆ. ವ್ಯಕ್ತಿಯ ತಿಳುವಳಿಕೆಯ ಬೆಳವಣಿಗೆಗೆ ಅನುಗುಣವಾಗಿ ಆತನ ವ್ಯೂ ಪಾಯಿಂಟ್ಗಳು ಸರಿ-ತಪ್ಪಿನ ಸ್ಕೇಲಿನಲ್ಲಿ ಬೇರೆ ಬೇರೆ ಅಬ್ಸೋಲ್ಯೂಟ್ ವಾಲ್ಯೂಗಳನ್ನೂ ಬೇರೆ ಬೇರೆ ಟೈಮ್ನಲ್ಲಿ ಪಡೆದುಕೊಳ್ಳುತ್ತಿರಲೇ ಬೇಕಷ್ಟೇ? ಅದೇನೇ, ಇರಲಿ, ಇವತ್ತಿಗೆ, ನನಗಿರುವ ತಿಳುವಳಿಕೆಯ ಫಿಕ್ಸ್ಡ್ ವಾಲ್ಯೂ ಮೇಲೆ ಅವಲಂಬಿತವಾದ ನನ್ನ ವ್ಯೂ ಅನ್ನು ಬೇತಾಳಕ್ಕೆ ಹೇಳುವುದು ಸಮಂಜಸವೇ ಆಗಿದೆ. ಗೂಬೆ ಬೇತಾಳ, ನನ್ನ ಕೇಳೋದ್ರ ಬದಲು, ಬಟಾಣಿ ತಿನ್ಕೊಂಡು ಬ್ರೌಸ್ ಮಾಡಿಕೊಂಡಿದ್ರೆ, ಅದಿಕ್ಕೆ ಜಾಸ್ತಿ ವಿಷ್ಯ ತಿಳ್ದಿರೋದು, ಎಂದು ಯೋಚಿಸುತ್ತ, ಗೊರಕೆ ಹೊಡೆಯುತ್ತಿರುವ ಬೇತಾಳವನ್ನು ಕರೆಯುತ್ತಾನೆ.
" ಬೇತಾಳವೇ, ಕ್ಷಮಿಸು, ನಿನ್ನನ್ನು ಬಹಳ ಹೊತ್ತು ಕಾಯಿಸಿಬಿಟ್ಟೆ" ಎನ್ನುತ್ತಾ ಕಣ್ಣು ಬಿಡದ ಬೇತಾಳವನ್ನು ಅಲುಗಾಡಿಸುತ್ತಾನೆ. ಯಾವುದರ ಅರಿವಿಲ್ಲದ ಬೇತಾಳ, ಕಣ್ಣು ಬಿಡದೆ, ಅಲ್ಲಾಡದೆ ತನ್ನ ನಿದ್ದೆಯನ್ನು ಮುಂದುವರೆಸುತ್ತದೆ. ವಿಕ್ರಮನು ಬೇತಾಳವನ್ನು ಮತ್ತೊಮ್ಮೆ ಜೋರಾಗಿ ತಿವಿಯುತ್ತಾನೆ. ಗೊರಕೆಯ ಸದ್ದು ಒಂದು ಕ್ಷಣ ನಿಲ್ಲುತ್ತದೆ. " ಆಹ್, ಸ್ಸಾರಿ, ಬೇತಾಳವೇ, ಜಾಸ್ತಿ ಹೊತ್ತು ಬ್ರೌಸ್ ಮಾಡಿಬಿಟ್ಟೆ" ಎಂದು ರಾಜನು ಹೇಳಿ ಮುಗಿಸುವ ಮುನ್ನವೇ, ಬೇತಾಳದ ಗೊರಕೆಯ ಸದ್ದು ಮತ್ತೆ ಶುರು ಆಗುತ್ತದೆ.
"ಅಯ್ಯಪ್ಪಾ! ಇದೆಂಥ ನಿದ್ದೆ ಇದರದು? ಬೇತಾಳವು ನೆಕ್ಷ್ಟ್ ಬಾರಿ ಕಥೆ ಶುರು ಮಾಡುವ ಮುನ್ನ, ಇದರ ಸ್ಟೋರಿಯನ್ನ ಸ್ವಲ್ಪ ವಿಚಾರಿಸಿಕೊಳ್ಳಬೇಕು. ಇದು ಕುಂಭಕರ್ಣನ ಬೇತಾಳವೋ ಹೇಗೆ?" ಎಂದು ಒಂದು ಕ್ಷಣ ಯೋಚಿಸುತ್ತಾನೆ, " ರಾವಣನ ಬೇತಾಳವಾಗಿದ್ದರೆ, ಇಷ್ಟು ಹೊತ್ತಿಗೆ ನನ್ನನ್ನು ಚಚ್ಚಿ ಬಿಡುತ್ತಿತ್ತೋ ಏನೋ!, ಯಾವ್ದಕ್ಕೂ ಹುಷಾರಾಗಿ ಇರ್ಬೇಕಪಾ!" ಎಂದು ಕೊಳ್ಳುತ್ತಾ, ಬೇತಾಳದ ಕಿವಿಯಲ್ಲೊಮ್ಮೆ ತನಗಿರುವ ಶಕ್ತಿಯನ್ನೆಲ್ಲಾ ಹಾಕಿ, ೧೧೦ ಡೆಸಿಬೆಲ್ಲ್ಸ್ ಲೆವೆಲ್ ನಲ್ಲಿ ಕೂಗುತ್ತಾನೆ, ಟು ಬಿ ಸ್ಪೆಸಿಫಿಕ್, ಕಿರುಚುತ್ತಾನೆ.
ಗಡಬಡಿಸಿ, ತಡಬಡಾಯಿಸಿ ಎದ್ದು ಕೂರುವ ಬೇತಾಳಕ್ಕೆ ತಲೆಯಲ್ಲೆಲ್ಲ ಘಂಟೆ ಹೊಡೆದ ಶಬ್ದ. ಎಲ್ಲಿದ್ದೇನೆ, ಏನಾಗುತ್ತಿದೆ ತನಗೆ ತೋಚುವುದಿಲ್ಲ. ತನ್ನೆದುರು ಕುಳಿತ ವಿಕ್ರಮನನ್ನು ಕಂಡೊಡನೆ, ನಿಧಾನವಾಗಿ ಅರಗಿಸಿಕೊಳ್ಳತೊಡಗುತ್ತದೆ. ಸಡನ್ ಆಗಿ ನಿದ್ದೆ ಹಾರಿ ಹೋಗುತ್ತದೆ! ಗೂಗಲ್ ಬುಕ್ ಗಳ ಬಗೆಗೂ ಗೂಗಲ್ ಒಂದು ಮೊನೋಪೋಲಿಯಾಗಿ ಬೆಳೆಯುವ ಬಗೆಗೂ ವಿಕ್ರಮನ ಅಭಿಪ್ರಾಯವನ್ನು ಕೇಳಲು ಕಾತರಗೊಂಡು, ತನ್ನ ಕಿವಿಯಲ್ಲಿ ಕಿರುಚಿ ತನ್ನನ್ನು ಎಬ್ಬಿಸಿದ ವಿಕ್ರಮನ ಮೇಲೆ ಕೋಪಗೊಳ್ಳದೆ, ಮುಖವರಳಿಸಿ ಹಲ್ಲು ಕಿರಿಯುತ್ತದೆ!
ವಿಕ್ರಮನು, "ಕ್ಷಮೆ ಇರಲಿ ಭೂತ ರಾಜ, ನಿನ್ನನ್ನು ಕಾಯಿಸಿದ್ದಕ್ಕೆ ಮೊದಲನೆಯದಾಗಿ. ಆಮೇಲೆ ನಿನ್ನ ಕಿವಿಯು ಹರಿದುಹೋಗುವಂತೆ ಕೂಗಿ ಎಬ್ಬಿಸಿದ್ದಕ್ಕೆ!" ಎನ್ನುತ್ತಾನೆ, "ಯಾವುದಕ್ಕೂ, ಇದು ಯಾರ ಭೂತ ಎನ್ನೋದೊಂದು ಕೇಳಲೇ ಬೇಕು" ಎಂದುಕೊಳ್ಳುತ್ತ.
"ಬಿಡಯ್ಯ, ವಿಕ್ರಮ, ಅವೆಲ್ಲ ಫಾರ್ಮಾಲಿಟಿ, ಬೇಡ. ವಿಷಯಕ್ಕೆ ಬಾ, ಗೂಗಲ್ ಬುಕ್ ಗಳ ವಿಷಯ. ಏನ್ ಅನ್ನಿಸುತ್ತೆ ನಿಂಗೆ?,
೧. ಗೂಗಲ್ ಅನ್ನುವುದು ಒಂದು ಪ್ರಾಫಿಟ್ ಓರಿಯೆನ್ಟೆಡ್ ಸಂಸ್ಥೆ ಮೊದಲೆನೆಯದಾಗಿ. ಅಟ್ ದಿ ಎಂಡ್ ಆಫ್ ದಿ ಡೇ ಅದು ಇದರ ಮೂಲಕವೂ ಪ್ರಾಫಿಟ್ ಮಾಡುತ್ತಿರುತ್ತದೆ. ಇದರ ಬಗ್ಗೆ ನಿನ್ನ ಅಭಿಪ್ರಾಯವೇನು?
೨. ಕಾಪಿ ರೈಟ್ ಇಷ್ಯೂಗಳು. ತುಂಬಾ ಹಳೇ ಪುಸ್ತಕಗಳು ಪರವಾಗಿಲ್ಲ, ಆದರೆ, ಇನ್ನೂ ಮಾರ್ಕೆಟ್ ಗೆ ಬರಬೇಕಾದ ಹೊಸ ಹೊಸ ಪುಸ್ತಕಗಳನ್ನೂ ಗೂಗಲ್ ಸ್ಕ್ಯಾನ್ ಮಾಡುತ್ತಿರುವ ಬಗೆಗೆ ಕೆಲವು ಲೇಖಕರ ಬಿನ್ನಾಭಿಪ್ರಾಯವಿದೆ. ಅಲ್ಲದೇ, ಈ ಪುಸ್ತಕಗಳನ್ನು ಬಳಸಿಕೊಂಡು ಗೂಗಲ್ ಹಣಗಳಿಸುವಾಗ, ಪುಸ್ತಕದ ಲೇಖಕರುಗಳೊಂದಿಗೆ (ಬದುಕಿರುವವರು ಇಫ್ ನಾಟ್ ನನ್ನಂಥವರು) ರೆವೆನ್ಯೂ ಶೇರ್ ಮಾಡಿ ಕೊಳ್ಳಬೇಕೆ ಅಥವಾ ಬೇಡವೇ?!
೩. ಗೂಗಲ್ ನ ಎಲ್ಲ ಪ್ರಾಡಕ್ಟ್ಗಳನ್ನೂ ಕನ್ಸಿಡರ್ ಮಾಡಿದಾಗ, ಮುಂದೊಂದು ದಿನ ಮೊನೋಪೋಲಿ ಆದರೇನು ಗತಿ? ಅದಕ್ಕೆ ಜವಾಬ್ದಾರರು ಯಾರು? " ಎಂದು ತನ್ನ ಪ್ರಶ್ನೆಗಳನ್ನು ರಿಪೀಟ್ ಮಾಡುತ್ತದೆ.
ಬೇತಾಳವನ್ನು, ಅರೆ ಕ್ಷಣ ದಿಟ್ಟಿಸಿ ನೋಡಿ, ಅದಕ್ಕಿರುವ ಆಸಕ್ತಿಯನ್ನು ಪ್ರಶಂಸಿಸದಿರಲಾರದೆ, ಬೇತಾಳವನ್ನು ಕುರಿತು, " ಅಯ್ಯಾ ಬೇತಾಳವೇ! ಗೂಗಲ್, ಗೂಗಲ್ ಬುಕ್ ಗಳ ಮೂಲಕವೂ ಪ್ರಾಫಿಟ್ ಮಾಡುತ್ತಿರುತ್ತದೆ, ಇದರ ಬಗ್ಗೆ ನಿನ್ನ ಅಭಿಪ್ರಾಯವೇನು? ಎನ್ನುತ್ತೀಯ, ನಿನ್ನ ಮೊದಲೆನೆಯ ಪ್ರಶ್ನೆಯಲ್ಲಿ. ಗೂಗಲ್ ಏನಾದರೂ, ಇದು ಧರ್ಮ ಕಾರ್ಯ, ಇಲ್ಲಿ ನಾನು ಆಡ್ ಹಾಕುವುದಿಲ್ಲ, ಎಂದು ಹೇಳಿತ್ತೆ?
ಹಾಗಿಲ್ಲ, ಎಂದಾದಲ್ಲಿ, ಇದರಿಂದ ಪ್ರಾಫಿಟ್ ಮಾಡುವುದರ ಬಗ್ಗೆ ನನಗೇನೂ ತಪ್ಪು ಕಾಣದು. ಅಲ್ಲಯ್ಯ, ಒಂದು ಕೆಲಸವನ್ನು ಮಾಡುವಾಗ, ಕೆಲಸ ತಂತಾನೇ ಆಗಿ ಬಿಡುವುದಿಲ್ಲವಷ್ಟೇ? ಅದಕ್ಕೆ, ಸ್ಕಿಲ್ಡ್ ಪೀಪಲ್ ನ್ನು ಹೈರ್ ಮಾಡಬೇಕು, ಅವರಿಗೆ ಸಂಬಳ ಕೊಡಬೇಕು. ಏನು ಆಟವೇ? ಇಷ್ಟಾಗ್ಯೂ, ಗೂಗಲ್, ತನ್ನ ಬೇರೆ ಕಡೆ ಬಂದಿರುವ ಇನ್ ಕಂ ನ್ನು, ಯಾವುದೇ ಲಾಭಾಪೇಕ್ಷೆ ಇಲ್ಲದೆ, ಈ ಕೆಲಸದಲ್ಲಿ ತೊಡಗಿಸುತ್ತೇನೆ, ಎಂದು ಹೇಳಿಕೊಂಡು, ಈಗ ಅಮಜೊನ್ ಲಿಂಕ್ ನ್ನು, ಇತರ ಸೆಲ್ಲರ್ಸ್ ಲಿಂಕ್ಗಳನ್ನು ಪಕ್ಕದಲ್ಲಿ ಕೊಟ್ಟಿದ್ದಾರೆ ತಪ್ಪಾಗುತ್ತಿತ್ತೇನೋ.
ಕಸ್ಟಮರ್ ಪಾಯಿಂಟ್ ಆಫ್ ವ್ಯೂದಿಂದ ಕೂಡ ಪ್ರಾಬ್ಲಂ ಇಲ್ಲವಲ್ಲ. ಬುಕ್ ನ್ನು ಹುಡುಕುತ್ತಿರುವವನಿಗೆ, ಅದು ಲಭ್ಯವಿರುವ ತಾಣ ಪಕ್ಕದಲ್ಲೇ ಲಭ್ಯ. ಅನಾನುಕೂಲಕ್ಕಿಂತ ಅನುಕೂಲವೇ ಹೆಚ್ಚಷ್ಟೇ? ಒಂದು ಉತ್ತಮ ಕೆಲಸವನ್ನು ಬುಡದಿಂದ ತುದಿಯವರಿಗೆ ಹಿಡಿದು ಮಾಡಬೇಕೆಂದರೆ, ಅದನ್ನು ಮಾಡುತ್ತಿರುವವರು ಸಸ್ತೈನ್ ಆಗುವುದು ಮುಖ್ಯ ಅಲ್ಲವೇ?
ಅದಾಗಿ, ನಿನ್ನ ಎರಡೆನೆಯ ಪ್ರಶ್ನೆಯ ರೆವೆನ್ಯೂ ಶೇರ್ ಪಾರ್ಟ್ ನ್ನು ಮೊದಲು ಉತ್ತರಿಸುತ್ತೇನೆ . ಒಬ್ಬನು ಪ್ರಿಂಟೆಡ್ ಮ್ಯಾಪ್ ನಲ್ಲಿ, ನಿನ್ನ ಮನೆ ಇರುವ ಜಾಗವನ್ನೂ ಮುದ್ರಿಸಿದ್ದಾನೆ ಎಂದು ತಕರಾರು ತೆಗೆದಂತೆ ಅನ್ನಿಸುವುದಿಲ್ಲವೇ ಇದು? ಆನ್ ದಿ ಆದರ್ ಹ್ಯಾಂಡ್, ನಿನ್ನ ಮನೆ ಹುಡುಕಿಕೊಂಡು ಬರುವವರಿಗೆ ಆ ಮಾಪ್ ಅನುಕೂಲ!
ನಿನ್ನ ಪುಸ್ತಕದಲ್ಲಿ ಇರುವ ವಿಷಯದ ಬಗೆಗೆ ಯಾರು ಸರ್ಚ್ ಮಾಡುತ್ತಿರುತ್ತಾರೋ, ಅವರನ್ನು ಗೂಗಲ್ ನಿನ್ನ ಪುಸ್ತಕದ ಬಾಗಿಲಿಗೆ ತಂದು ನಿಲ್ಲಿಸುತ್ತದೆ. ಹಾಗಾಗಿ ನಿನ್ನ ಪುಸ್ತಕವು ಸೇಲ್ ಆಗುವ ಸಂಭವನೀಯತೆ, ಮೊದಲಿಗಿಂತ ಜಾಸ್ತಿ ಆಯಿತಷ್ಟೆ? ಇಲ್ಲಿ ರೆವೆನ್ಯೂ ಶೇರ್ ಮಾಡುವುದು ಎಷ್ಟು ಪ್ರಸ್ತುತ? ಗೂಗಲ್ ನಿನ್ನ ಪುಸ್ತಕವನ್ನೇ ಅವನಿಗೆ ದಾನವಾಗಿ ಕೊಡುತ್ತಿಲ್ಲವಷ್ಟೇ? ಅನಲೋಜಿ ಕೊಡಬೇಕೆಂದರೆ ದಾರಿ ಕೇಳಿದ ದಾರಿಹೋಕನಿಗೆ ದಾರಿ ತೋರಿದೆ ಅಷ್ಟೇ? ಹಾಗೆ ನೋಡಿದರೆ, ದಾರಿ ಹುಡುಕುತ್ತಿದ್ದ ದಾರಿಹೋಕನೂ, ಅತಿಥಿಯನ್ನು ಆಹ್ವಾನಿಸಿದ ಮನೆಯ ಯಜಮಾನನೂ ದಾರಿ ತೋರಿದವನಿಗೆ incentive ಕೊಡಬೇಕು ಅಲ್ಲವೇ? ಗೂಗಲ್ ಇಲ್ಲಿ ಹಾಗೆ! ದಾರಿ ತೋರಿಸುವ ಕೆಲಸವನ್ನೇ ಆಯ್ತ್ದುಕೊಂಡಂತೆ! ಆದರೆ ಗೂಗಲ್ ಗೆ incentive ಸಲ್ಲುತ್ತದೆ. ನಾವು ಸರ್ಚ್ ಮಾಡಿ ಗೂಗಲ್ ನ ಲಿಂಕ್ಗಳ ಮೂಲಕ ಸೆಲ್ಲರ್ಸ್ ಸೈಟ್ ಗೆ ಹೋಗಿ buy ಮಾಡಿದಾಗ. ಆದರೆ ಇಲ್ಲಿ ಗೂಗಲ್ ಗೆ ಸಲ್ಲುವ incentive ನ್ನು ಪುಸ್ತಕ ಕೊಳ್ಳುವವನೂ, ಬರೆದವನೂ ಕೊಡಬೇಕಾಗಿಲ್ಲ, ಮಾರುವವನು ಕೊಡುತ್ತಾನೆ! ರೆವೆನ್ಯೂ ಶೇರ್ಯಾರು ಯಾರೊಂದಿಗೆ ಮಾಡಬೇಕೋ ಅವರು ಮಾಡುತ್ತಿದ್ದಾರಷ್ಟೇ!
ಉತ್ತರಗಳನ್ನು ಕೇಳಿದ ಬೇತಾಳವು, ಇನ್ನೇನು ಸೊಂಯ್ಯನೆ ಮರಕ್ಕೆ ಹಾರಬೇಕು, ಅಷ್ಟರಲ್ಲಿ, ಏನೋ ನೆನಪಾದಂತೆ, " ರಾಜಾ, ಸ್ವಲ್ಪ extra ಬಟಾಣಿ/ಗೋಡಂಬಿ ಏರ್ಪಾಡು ಮಾಡು. ಅಷ್ಟರೊಳಗೆ ಮುಂದಿನ ಕಥೆಯನ್ನು ಯೋಚಿಸುತ್ತೇನೆ" ಎಂದೆನ್ನುತ್ತ, ಅಲ್ಲೇ, ಯೋಚನಾ ಮಗ್ನ ಬೇತಾಳನ ಸೋಗು ಹಾಕಿ ಕೂರುತ್ತದೆ!