ಮಿನ್ನಿ ಕಾಲಂ: ಬೇತಾಳ ಕಥಾ ೨

ಮಿನ್ನಿ ಕಾಲಂ: ಬೇತಾಳ ಕಥಾ ೨

ಬರಹ

"ನಿನ್ನ ರಾಜ್ಯಾಡಳಿತದಲ್ಲಿ ನೀನು ಗೂಗಲ್ ನ್ನು ಒಂದಲ್ಲಾ ಒಂದು ರೀತಿ ಉಪಯೋಗಿಸಿಯೇ ಇರುತ್ತೀಯ! ಅದಕ್ಕೆ ಸಂಬಂಧಿಸಿದ ಒಂದು ಕಥೆ ಹೇಳುವವನಿದ್ದೇನೆ ಇಂದು. ಇಂಟರೆಸ್ಟಿಂಗ್ ಇದೆ ಮಾರಾಯಾ, ಬೇಗಾ ಬಾ. ಎಲ್ಲಿ ಹೋದೆಯಪ್ಪಾ, ಎಲ್ಲಿ ಹಾಳಾಗಿ ಹೋದೆಯೋ ಮಹಾರಾಜ, ಎಲ್ಲೂ ಕಾಣಿಸುತ್ತಲೇ ಇಲ್ಲವಲ್ಲಪ್ಪಾ ?" ಎಂದು ಬೇತಾಳವು ಒಂದು ಕೂಗು ಹಾಕಿತು.  


"ಸ್ವಲ್ಪ ತಡಕೋ, ಬೇತಾಳವೇ! ಬಂದೆ! ಹಳೇಕಾಲದ ಬೇತಾಳವೇ ಪರವಾಗಿರಲಿಲ್ಲ, ನಾನು ನನ್ನ ಪಾಡಿಗೆ ನನಗೆ ಬೇಕಾದಾಗ ಬರ್ತಿದ್ದೆ, ನಿನ್ನ ಹೆಗಲ ಮೇಲೆ ಹಾಕ್ಕೊಂಡು ಆದಮೇಲೆ ನಿಂಗೆ ಸೋ ಕಾಲ್ಡ್ ಜೀವ ಬಂದಿರೋದು. ಈ ಥರ ನೀನು ಮರದ ಮೇಲಿಂದ ಎಲ್ಲ ಕೂಗುತ್ತಿರ್ಲಿಲ್ಲಪ್ಪ ನೀನು," ಎನ್ನುತ್ತಾ, ಹುರಿದ ಗೋಡಂಬಿಯನ್ನು ತನಗೂ, ಬೇತಾಳಕ್ಕೆಂದು, ಹುರಿದ ಬಟಾಣಿಯನ್ನೂ ತರುತ್ತಾನೆ.

ರಾಜನ ಕೈಯಲ್ಲಿರುವ ತಿಂಡಿಯನ್ನು ನೋಡಿದ ಬೇತಾಳವು, "ಹೋಗಲಿ ಬಿಡು, ವಿಕ್ರಮಾದಿತ್ಯ, ಲೇಟ್ ಆಗಿ ಬಂದರೂ ಪರವಾಗಿಲ್ಲ, ಒಂದೆರಡು ಬಟಾಣಿ ಕೊಡು" ಎನ್ನುತ್ತದೆ.

"ಕೊಡುತ್ತೇನೆ, ಮೀನ್ ವೈಲ್, ನೀನು ಕಥೆ ಶುರು ಮಾಡು" ಎನ್ನುತ್ತಾನೆ.


ರಾಜನಿಗೆ ಈ ಸಲ ತನ್ನ ಕಥೆಯಲ್ಲಿರುವ ಆಸಕ್ತಿಯನ್ನು ಗಮನಿಸಿದ ಬೇತಾಳ, "ಆದದ್ದಾಗಲಿ, ನೀನು ತಂದಿರುವ ಬಟಾಣಿಯನ್ನು ಮುಗಿಸಿದ ಮೇಲೆಯೇ, ಕಥೆ" ಎನ್ನುತ್ತದೆ.

"ಸರಿ, ಬಾ ಚಾಪೆ ಹಾಸಿಕೊಂಡು ಕೂರೋಣ, ಸುಮ್ನೆ ನಾನು ನಿನ್ನ ಹೊತ್ಕೊಂಡು ನಡೆಯೋದು, ಆಮೇಲೆ ಅರ್ಧ ದಾರೀಲಿ ನಿನ್ನ ಕಥೆ ಮುಗಿಸಿ, ನೀನು ಪ್ರಶ್ನೆ ಕೇಳೋದು, ನಾನು ಉತ್ತರ ಹೇಳೋದು, ನೀನು ವಾಪಸ್ ಮರಕ್ಕೆ ಹಾರೋದು, ಇವೆಲ್ಲ ನಾಟಕ ಯಾಕೆ? ಸುಮ್ನೆ ಚಾಪೆ ಹಾಸಿಕೊಂಡು ಕೂರೋಣ, ನಿನ್ನ ಕಥೆ ನೀನು ಹೇಳ್ಕೋತಿರು. ಇಲ್ಲೇ ಎದ್ದು-ಕೂತು ಮಾಡೋಣ, ಬಟಾಣಿ ತಿಂದ್ಕೊಂಡು, ಏನು? " ಎನ್ನುತ್ತಾನೆ ವಿಕ್ರಮ "ಈ ಬೇತಾಳ ಹೊತ್ಕೊಂಡು ನಡೆಯೋ ಸ್ಟೈಲ್ ತೀರ ಔಟ್ ಡೇಟೆಡ್ ಅಲ್ವೇ?!" ಎಂದುಕೊಳ್ಳುತ್ತ.

"ಆಯಿತು ಮಾರಾಯ, ಇದೆಲ್ಲ ಎಂಥ ನಿನ್ನದು ಹೊಸ ಹೊಸ ವರಸೆ, ಹೋಗಲಿ ಮೊದಲು ಬಟಾಣಿ ಕೊಡು ಇಲ್ಲಿ, ತಿನ್ನುತ್ತಿರುವೆ, ನೀನು ಚಾಪೆ ಹಾಸು, ಕಥೆ ಹೊಡೆಯುವಾ!" ಎನ್ನುತ್ತದೆ ಬೇತಾಳ, ಯಾವುದೇ ತಕರಾರು ಇಲ್ಲದೆ.

ಕುರುಂ ಕುರುಂ ತಿನ್ನುತ್ತ, ಇಬ್ಬರೂ ಚಾಪೆಯ ಮೇಲೆ ಕೂತರೂ ಕಥೆ ಶುರು ಮಾಡದ ಬೇತಾಳವನ್ನು ರಾಜನೇ ಹೀಗೇ ಲೋಕರೂಢಿಯಾಗಿ ಮಾತನಾಡಿಸಿದನು. 

"ಮೈಕ್ರೋಸಾಫ್ಟ್ ಅಂತೂ ಇಂತೂ ಅದರ ಯೂಸರ್ ಗಳಿಗೆ  ಬ್ರೌಸೆರ್ ಆಪ್ಶನ್ ಕೊಟ್ಟಿದೆಯಂತೆ ಈಗ! ನೀನು ಯಾವುದು ಯೂಸ್ ಮಾಡುತ್ತಿದ್ದೆ ಅಂದ ಹಾಗೆ? ಇಂಟರ್ನೆಟ್ ಎಕ್ಸ್ ಪ್ಲೋರರ್ ಗೆ ನೇತು ಬಿದ್ದಿದ್ದೆ ಅನ್ನಿಸುತ್ತೆ ಅಲ್ಲವೇ? ನನ್ನ ರಾಜ್ಯಾಡಳಿತದಲ್ಲಿ ಬದುಕಿದ್ದವರೆಲ್ಲರೂ ಫೈರ್ಫಾಕ್ಸ್ ನ್ನೇ ಬಳಸುತ್ತಾರೆ. ಇನ್ ಫ್ಯಾಕ್ಟ್ ನಮ್ಮ ರಾಜ್ಯದಲ್ಲಿ ಫೈರ್ಫಾಕ್ಸ್ ಸಾಕ್ಷರತೆ ನೂರಕ್ಕೆ ನೂರು ಇದ್ದುದು ನೋಡಿ, ಪರ ರಾಜ್ಯದವರು ಹೊಟ್ಟೆಕಿಚ್ಚು ಪಟ್ಟಿದ್ದು ಉಂಟು. ಅದಲ್ಲದೆ, ನಾವು 'ಅಲೆಕ್ಸ್' ಎಂಬ ಲಿನಕ್ಸ್ ಬೇಸ್ಡ್ ಕಂಪ್ಯೂಟರ್ ನ್ನು ನಿನ್ನಂಥವರಿಗಾಗಿಯೂ ಅಥವಾ ನಿನ್ನಷ್ಟು ವಯಸ್ಸಾಗಿ ಕಂಪ್ಯೂಟರ್ ಎಂದರೆ ಫ್ರಸ್ಟ್ರೇಟ್ ಆದವರಿಗಾಗಿಯೂ ತರುತ್ತಿದ್ದೇವೆ. ಗೊತ್ತೇ? " ಎಂದು ಕೇಳುತ್ತಾನೆ.

"ಇಂಟರ್ನೆಟ್ ಎಕ್ಸ್ ಪ್ಲೋರರ್ಗೆ ನೇತು ಬೀಳಲು, ಅದು ಗಟ್ಟಿ ಇರಬೇಕಲ್ಲ ಮಹಾರಾಜಾ, ನೀನಾದರೂ ಸ್ವಲ್ಪ ಯೋಚನೆ ಮಾಡಿ ಮಾತಾಡ್ತೀಯಾ ಎಂದುಕೊಂಡಿದ್ದೆ! " ಎಂದು ಬೇತಾಳವು ಪನ್ ಇಂಟೆನ್ಡೆಡ್ ಮಾತುಗಳನ್ನಾಡಿ ವಿಕ್ರಮನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

"ಅದಿರಲಿ, ನೀನು ನಿನ್ನ ಕಥೆಯನ್ನೇ ಶುರು ಮಾಡಿಲ್ಲವಲ್ಲ ಇನ್ನೂ! ಬಟಾಣಿಯೂ ಇನ್ನೇನು ಖರ್ಚಾಗುತ್ತ ಬಂತು" ಎನ್ನುತ್ತಾನೆ ವಿಕ್ರಮ.

"ಅಲ್ಲಯ್ಯ, ನಿನ್ನ ಮೌನ ವ್ರತ ಮುರಿಯಲು ನಾನು ಕಥೆ ಹೇಳಬೇಕಿತ್ತು, ಪ್ರಶ್ನೆಗಳನ್ನು ಕೇಳಬೇಕಿತ್ತು. ನೀನು ಬಾಯಿ ಮುಚ್ಚುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲವಲ್ಲ! ಹೀಗಿರುವಾಗ, ನಾನೇಕೆ ಕಥೆ ಹೇಳುವ ಪರಿಶ್ರಮ ತೆಗೆದುಕೊಳ್ಳಲಿ! " ಅಂದಿತು ಬೇತಾಳ.

ಮೌನ.

ವಿಕ್ರಮಾದಿತ್ಯನು ಮೌನವನ್ನು ಹೊಂದಿದನು. ಬೇತಾಳದ ಕಥೆಯು ಇಂದು ಅವನಲ್ಲಿ ಆಸಕ್ತಿಯನ್ನು ಹುಟ್ಟಿಸಿತ್ತು. ಬಾಯಿಯನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಗೋಡಂಬಿ ತಿನ್ನುವುದನ್ನು ನಿಲ್ಲಿಸಿ, ಪಿಳಿ ಪಿಳಿ ಕಣ್ಣು ಬಿಟ್ಟನು.

" ಗೂಗಲ್ ಡೆಸ್ಕ್ ಟಾಪ್, ಪಿಕಾಸ, ಅರ್ತ್, ಕ್ರೋಮ್, ಮೇಲ್, ನ್ಯೂಸ್ ಇತ್ಯಾದಿಗಳ ಬಗೆಗಲ್ಲ ನನ್ನ ಕಥೆ ಇವತ್ತು. ಇವತ್ತಿನ ನನ್ನ ಕಥೆ ಗೂಗಲ್ ಬುಕ್ ಗಳಿಗೆ ಸಂಭಂದಿಸಿದ್ದು. ಹೇಳುತ್ತೇನೆ, ಕೇಳುವಂಥವನಾಗು, ವಿಕ್ರಮ" ಎಂದಿತು.

ರಾಜನು ತಡೆಯಲಾರದೆ, ಕಣ್ಣನ್ನು ಮತ್ತೊಮ್ಮೆ ಪಿಳಿ ಪಿಳಿಗುಡಿಸಿದನು.

" ಗೂಗಲ್ ಬುಕ್ಸ್, ಈಗಾಗಲೇ ೧೦ ಮಿಲ್ಲಿಯನ್ ಕಿಂತ ಜಾಸ್ತಿ ಪುಸ್ತಕಗಳನ್ನು ಸ್ಕ್ಯಾನ್ ಮಾಡಿಸಿ, ಅವುಗಳ ಫ್ಲೇವರನ್ನು ಕೊಳ್ಳುವ ಮೊದಲೇ ಇಂಟರ್ನೆಟ್ ಲ್ಲಿ ಸವಿಯಲು ಬಿಡುತ್ತದೆ ಅಲ್ಲವೇ? ಎಂಥಹ ರೀಸೋರ್ಸ್! ಯಾವುದೋ ಜಮಾನದಲ್ಲಿ ಯಾರೋ ಬರೆದ ಹಿಸ್ಟರಿ ಪುಸ್ತಕದ ಒಂದು ಪುಟ ನೋಡಲು, ಪಾಸು ತೆಗೆದುಕೊಂಡು ಕಷ್ಟ ಪಟ್ಟು ಆಕ್ಸ್ ಫರ್ಡ್ ಯೂನಿವರ್ಸಿಟಿಯ ಬೋಡ್ಲಇಯನ್ ಲೈಬ್ರರಿ ವರೆಗೆ ಪ್ರಯಾಣ ಬೆಳಸಬೇಕಾಗಿದ್ದಿಲ್ಲ. ಯಾವುದೋ ಪುಸ್ತಕವನ್ನು ಖರೀದಿ ಮಾಡಬೇಕಾದರೆ, ಹೇಗೆ ಇದನ್ನು ಖರೀದಿಸಬಹುದೇ, ಏನೇನಿದೆ ಇದರಲ್ಲಿ ಎನ್ನುವುದನ್ನು ಮನೆಯಲ್ಲಿಯೇ ಕುಳಿತು ನೋಡಿಕೊಳ್ಳಬಹುದು. ಎಂಥ ಅನುಕೂಲ.

ಗೂಗಲ್ ಫಂಡ್ ನಿಂದ ಎಲ್ಲ ಪುಸ್ತಕಗಳ ಸ್ಕ್ಯಾನ್ ಮಾಡುವ ಕೆಲಸ ಎಂಥ ಭರ ವೇಗದಲ್ಲಿ ಆಗುತ್ತಿದೆ ಎಂದರೆ, ಬಲುಬೇಗನೇ, ಈ ಜಗತ್ತಿನಲ್ಲಿರುವ ಎಲ್ಲ ಪುಸ್ತಕಗಳ ಪ್ರಿ-ವ್ಯೂಗಳು ಬೆರಳ ತುದಿಯಲ್ಲಿ ಸಿಗುವುದಷ್ಟೇ! ಎಂಥ ಒಳ್ಳೆಯ ಕೆಲಸ" ಎಂದು ಒಂದು ಕ್ಷಣ ನಿಲ್ಲಿಸಿತು.

ವಿಕ್ರಮನು, ಪ್ರಾಜೆಕ್ಟ್ ಗುಟೆನ್ಬರ್ಗ್ನ್ನು, ಮಿಲ್ಲಿಯನ್ ಬುಕ್ ಪ್ರಾಜೆಕ್ಟ್ ನ್ನೂ ನೆನಸಿಕೊಳ್ಳುತ್ತಾ ಹೌದೆನ್ನುವಂತೆ ತಲೆ ಅಲ್ಲಾಡಿಸಿದನು.

ರಾಜನ ಮನಸ್ಸನ್ನು ಓದಿದಂತೆ, "ಇರಲಿ ರಾಜಾ, ನೀನು ಸಮಯವಾದಾಗ ಬೂಕ್ಸ್.ಗೂಗಲ್.ಕಾಂ ಗೆ ಹೋಗಿ ನೋಡು, ಅದರ ಬಗ್ಗೆ ಜಾಸ್ತಿ ತಿಳಿದುಕೋ ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು. ನನ್ನ ಪ್ರಶ್ನೆಗಳನ್ನೇ ಕೇಳಿಬಿಡುತ್ತೇನೆ ನಾನು ಈಗ ನಿನಗೆ" ಎಂದಿತು!

"೧. ಗೂಗಲ್ ಅನ್ನುವುದು ಒಂದು ಪ್ರಾಫಿಟ್ ಓರಿಯೆನ್ಟೆಡ್ ಸಂಸ್ಥೆ ಮೊದಲೆನೆಯದಾಗಿ. ಅಟ್ ದಿ ಎಂಡ್ ಆಫ್ ದಿ ಡೇ ಅದು ಇದರ ಮೂಲಕವೂ ಪ್ರಾಫಿಟ್ ಮಾಡುತ್ತಿರುತ್ತದೆ. ಇದರ ಬಗ್ಗೆ ನಿನ್ನ ಅಭಿಪ್ರಾಯವೇನು?
೨. ಕಾಪಿ ರೈಟ್ ಇಷ್ಯೂಗಳು. ತುಂಬಾ ಹಳೇ ಪುಸ್ತಕಗಳು ಪರವಾಗಿಲ್ಲ, ಆದರೆ, ಇನ್ನೂ ಮಾರ್ಕೆಟ್ ಗೆ ಬರಬೇಕಾದ ಹೊಸ ಹೊಸ ಪುಸ್ತಕಗಳನ್ನೂ ಗೂಗಲ್ ಸ್ಕ್ಯಾನ್ ಮಾಡುತ್ತಿರುವ ಬಗೆಗೆ ಕೆಲವು ಲೇಖಕರ ಬಿನ್ನಾಭಿಪ್ರಾಯವಿದೆ. ಅಲ್ಲದೇ, ಈ ಪುಸ್ತಕಗಳನ್ನು ಬಳಸಿಕೊಂಡು ಗೂಗಲ್ ಹಣಗಳಿಸುವಾಗ, ಪುಸ್ತಕದ ಲೇಖಕರುಗಳೊಂದಿಗೆ (ಬದುಕಿರುವವರು ಇಫ್ ನಾಟ್ ನನ್ನಂಥವರು) ರೆವೆನ್ಯೂ ಶೇರ್ ಮಾಡಿ ಕೊಳ್ಳಬೇಕೆ ಅಥವಾ ಬೇಡವೇ?!
೩. ಗೂಗಲ್ ನ ಎಲ್ಲ ಪ್ರಾಡಕ್ಟ್ಗಳನ್ನೂ ಕನ್ಸಿಡರ್ ಮಾಡಿದಾಗ, ಮುಂದೊಂದು ದಿನ ಮೊನೋಪೋಲಿ ಆದರೇನು ಗತಿ? ಅದಕ್ಕೆ ಜವಾಬ್ದಾರರು ಯಾರು? "
ಎಂದು ಚಿಂತೆಯ ಮುಖ ಮಾಡಿದ ಬೇತಾಳವು, ತನ್ನ ಮಾಮೂಲಿ "ತಲೆ ಸಾವಿರ ಹೋಳಾಗುತ್ತದೆ" ಅನ್ನೋ ಡೈಲಾಗ್ ನ್ನು ಮರೆತು ಕೂರುತ್ತದೆ!

ಆದರೆ ವಿಕ್ರಮಾದಿತ್ಯನ ಮುಖದ ಮೇಲೆ ಮೂಡುತ್ತಿರುವ ಗೆರೆಗಳನ್ನು ನೋಡಿದರೆ, ಪಿಳಿ ಪಿಳಿ ಬಡಿದು ಕೊಳ್ಳುತ್ತಿರುವ ಕಣ್ಣುಗಳನ್ನು ನೋಡಿದರೆ, ಅವನಿಗೆ ಆ ಡೈಲಾಗ್ನಾ ಅವಶ್ಯಕತೆ ಇದ್ದಂತೆ ಕಾಣುವುದಿಲ್ಲ.

"ಓಕೆ. ಸ್ವಲ್ಪ ಇದರ ಬಗ್ಗೆ ಜಾಸ್ತಿ ತಿಳಿದುಕೊಂಡು, ಯಾವುದಕ್ಕೂ ಉತ್ತರವನ್ನು ಹೇಳುತ್ತೇನೆ ಎಂದು ಯೋಚಿಸುತ್ತ, ಮೈನಾರಿಟಿ ರಿಪೋರ್ಟ್ ನಲ್ಲಿ ಬರುವಂಥ ಟಚ್ ಸ್ಕ್ರೀನ್ಗಳನ್ನು ಎಳೆದುಕೊಂಡು ವಿಕ್ರಮನು ಅಲ್ಲಿಯೇ ಬ್ರೌಸ್ ಮಾಡತೊಡಗಿದನು.

ಗಲ್ಲಕ್ಕೆ ಕೈ ಹಚ್ಚಿ ಕುಳಿತು, ವಿಕ್ರಮನನ್ನೇ ಸ್ವಲ್ಪ ಹೊತ್ತು ದಿಟ್ಟಿಸಿದ ಬೇತಾಳವು, ಮಿಕ್ಕಿರುವ ಬಟಾಣಿಗಳತ್ತ ತನ್ನ ಗಮನ ಹರಿಸಿತು.

ಈ ಕಥೆಯನ್ನು ಇಲ್ಲಿಯ ತನಕ ಓದಿಕೊಂಡು ಬಂದು ಉತ್ತರ ಹೇಳದೆ, ಮುಂದಿನ ಕಂತಿನ ರಾಜನ ಉತ್ತರಕ್ಕಾಗಿ ನೀವು ಕಾಯುತ್ತ ಕುಳಿತರೆ, ನಿಮ್ಮ ಕೀ ಬೋರ್ಡ್ ಪುಡಿ ಪುಡಿಯಾಗಿ ಉರಿಯುತ್ತಿರುವ ಸಿಪಿಯು ಗೆ ಆಹುತಿ ಆಗುವುದರಲ್ಲಿ ಸಂಶಯವಿಲ್ಲ. ಗೊತ್ತಿದ್ದಲ್ಲಿ ಉತ್ತರಹೇಳಿ!