ಮಿರ್ಚಿ ಮಂಡಕ್ಕಿ ಮತ್ತೆ ಚಹಾ-2
ಮೊದಲನೇ ಭಾಗದಿಂದಾ.....
ಕೆಲವೋಮ್ಮೆ ಪೇಪರಿನಲ್ಲಿ ಅತ್ಯಂತ ನೀರಸ ಸುದ್ದಿಗಳಾದ "ಎಮ್ಮೆ ಕಳೆದಿದೆ,ಎತ್ತು ಸತ್ತಿದೆ,ವಿದೇಶೀ ಪ್ರವಾಸದ ಸುಖಾಗಮನ,ಶಿವಗಣಾರಾಧನೆ,ವೈಕುಂಠ ಸಮಾರಾಧನೆ" ಹೀಗೆ
ಹತ್ತು ಹಲವು ವಿಷಯಗಳು ಅಲ್ಲಿ ಮೈ ಕೊಡವಿ ನಿಂತುಕೊಂಡಿರುತ್ತವೆ.ಎರೆಡೆರಡು ತಾಸುಗಟ್ಟಲೆ ತದೇಕಚಿತ್ತದಿಂದ ಆ ಪೇಪರ್ ಓದಿ..ಕೊನೆಗೆ "ಎಂಟಾಣಿನೂ ಇಲ್ಲಾ ಪೇಪರ್ನಾಗ.."
ಎಂಬ ಒಂದು ಯಕಸ್ಚಿತ್ ಅಭಿಮತ ವ್ಯಕ್ತಪಡಿಸುವ ಹಿರಿ ಜೀವಗಳು ಅದೇ ಪತ್ರಿಕೆ ಒಂದು ದಿನ ಓದದೇ ಹೋದರೆ ಚಡಪಡಿಸುತ್ತಾರೆ.ಜಗತ್ತಿನ ಎಲ್ಲ ವರ್ತಮಾನ ಪತ್ರಿಕೆಗಳನ್ನು
ತಂದು ಗುಡ್ಡೆ ಹಾಕಿದರೂ,ಸಂಯುಕ್ತ ಕರ್ನಾಟಕ ಓದದೇ ಕೆಲವರಿಗೆ ಮುಂಜಾನೆಯ ಕೆಲ "ಕಾರ್ಯಕ್ರಮಗಳು" ಸಾಂಗವಾಗಿ ನೆರವೇರುವುದಿಲ್ಲಾ.
ಈ ಹೊತ್ತಿನಲ್ಲಿ ಪತ್ರಿಕೆಯ ಪ್ರಿಂಟ್ ಕ್ವಾಲಿಟಿ ಬಗ್ಗೆ ಒಂಚೂರು ಹೇಳಲೇ ಬೇಕು.ಈಗಷ್ಟೆ ಮಿರ್ಚಿ ಪಾರ್ಸೆಲ್ ಕಟ್ಟಿಸಿಕೊಂಡಬಂದ ಎಣ್ಣಿ ಬಸೆಯುವ ಪೇಪರಿಗೂ ಹಾಗು ಬೆಳಗ್ಗೆ ಖರೀದಿಸಿದ
ಇನ್ನೂ ಮಡಿಕೆ ಮುರಿಯದ ಒಂದು ಸಂಯುಕ್ತ ಕರ್ನಾಟಕದ ಪೇಪರಿಗೂ ಹೆಚ್ಚೇನೂ ವ್ಯತ್ಯಾಸವಿರುವುದಿಲ್ಲಾ .ಮನೆಯಲ್ಲಿ,ಹೋಟೆಲ್ಲುಗಳಲ್ಲಿ ಬಹಳಷ್ಟು ಸೊಳ್ಳೆಗಳಿದ್ದರೆ, ಕೆಲವೊಮ್ಮೆ
ಬಲ್ಬಿನ ಪಕ್ಕದಲ್ಲಿ ಎಣ್ಣೆಯಲ್ಲಿ ಮುಳುಗಿಸಿದ ಬಿಳಿ ಹಾಳೆ ಕಟ್ಟಿರುತ್ತಾರೆ, ಸೊಳ್ಳೆಗಳು ಆಲ್ಲಿಯೇ ಬಂದು ಬೀಳಲಿ ಎಂದು,ನನಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಹಾಗೆ ಕಟ್ಟಿದರೆ
ಸಾಕು,ವ್ರಥಾ ಎಣ್ಣೆಯ ಖರ್ಚೇಕೆ ಎಂಬ, "ಸೋ ಮಾರ್ವಾಡಿ-ಏಕ್ ಧಾರ್ವಾಡಿ" ಎಂಬ ನಾನ್ನುಡಿ ಕಲ್ಪನೆಗೆ ಬರುತ್ತದೆ. ಬಹಳಷ್ಟು ಸರ್ತಿ ಅಕ್ಷರಗಳು ಒಂದರಮೇಲೊಂದು
ಹಾಯಾಗಿ ಮಲಗಿಕೊಂಡಿರುತ್ತವೆ.ಪತ್ರಿಕೆಯಲ್ಲಿ ಪ್ರಕಟವಾಗುವ ಚಿತ್ರಗಳು ಇವರದ್ದೆ ಎಂದು ನೀವು ಅದರ ಪೂರಕ ಸುದ್ದಿ ಓದಿಯೇ ಖಾತ್ರಿ ಪಡಿಸಿಕೊಳ್ಳಬೇಕು.ಶುಕ್ರವಾರದ
ಚಿತ್ರ ಸೌರಭದ ಬಣ್ಣ-ಬಣ್ಣದ ಪುಟಗಳಲ್ಲಿ ಪ್ರಕಟವಾದ ಒಂದು "ಹರೆಯದ" ಹುಡುಗಿಯ ಚಿತ್ರ ಮಾಲಾಶ್ರೀಯದ್ದೋ ಅಥವಾ ಉಮಾಶ್ರೀಯದ್ದೋ ಎಂದು ಬಾಜಿಕಟ್ಟಿಯೇ ಪಡ್ಡೆ
ಹುಡುಗರು ನಿರ್ಧರಿಸಬೇಕು.ಕೆಲವೊಮ್ಮೆ ಪಂಢರಿಬಾಯಿಯ ಚಿತ್ರ ಪ್ರಕಟಿಸಿ ಕೊನೆಯ ಗೆಲುವಿನ ನಗೆ ಬೀರುವ ಕೆಲಸ ಸಂಯುಕ್ತ ಕರ್ನಾಟಕ ಮಾಡುತ್ತಿತ್ತು.
ಚಿತ್ರ ಯಾರದಾದರಾಗಲಿ ಎಂದು ಬಹಳ ತಿಣುಕಾಡಿ ಏನೋ ಹುಡುಕಲು ಹೋಗಿ ಕೊನೆಗೆ ಹತಾಷರಾಗಿ ಎಂಟಾಣಿನೂ ಇಲ್ಲ ಪೇಪರ್ನಾಗ ಎನ್ನುವಷ್ಟರ ಮಟ್ಟಿಗೆ ಸಂಯುಕ್ತ
ಕರ್ನಾಟಕ ಅಪ್ಪಟ ಸಸ್ಯಾಹಾರಿಯಾಗಿರುತ್ತಿತ್ತು.
ಇನ್ನು ಎರಡನೆಯ ವಿಷಯಕ್ಕೆ ಬರೋಣಾ... ಧಾರವಾಡ ಓದುವದಕ್ಕೆ ಬಹಳ ಪ್ರಶಸ್ತವಾಗಿದೆ ಎಂದು ಅದ್ಯಾವ ಘಳಿಗೆಯಲ್ಲಿ ಜನರ ತಲೆಗೆ ಹುಳಾ ಬಿಟ್ಟಿದ್ದಾರೋ ಯಾರೋ
ಮಹಾನುಭಾವರು, ಅವರ ಅಡ್ರೆಸ್ ಇನ್ನು ಹುಡುಕುತ್ತಿದ್ದೇನೆ.ಪ್ರತಿ ವರ್ಷ ಬ್ಯಾಚುಗಟ್ಟಲೆ ಹುಡುಗರ ಸಿಹಿ ನಿದ್ದೆಯ ಸಾಮೂಹಿಕ ಮಾರಣ ಹೋಮ ಮಾಡುವ ಸ್ಥಳ ಧಾರವಾಡ.
ನಿದ್ರೆಗೂ ಧಾರವಾಡಕ್ಕೂ ಅಕ್ಕ-ತಂಗಿ ಸಂಬಂಧ.ಅದರಲ್ಲೂ ಟ್ಯುಶನ್ಗಳ ಹಾವಳಿ ಎಷ್ಟಿದೆ ಎಂದರೆ ಬೆಳಿಗ್ಗೆ ಆರು ಘಂಟೆಯಿಂದ ತರಗತಿಗಳು ಶುರುವಾಗುತ್ತವೆ.
ಮನೆಯಿಂದ ಅಲ್ಲಿಗೆ ತಲುಪಲು ಏನಿಲ್ಲಾ ಎಂದರೂ ಅರ್ಧಾ ಘಂಟೆ ಬೇಕು.ಆ ಹೊತ್ತಿನಲ್ಲಿ ಹೊರಗಡೆ ಚಹಾ ಕೂಡಾ ಸಿಗುವುದಿಲ್ಲಾ.ಬೆಳಿಗ್ಗೆ ಎದ್ದು ಮುಖ ತೊಳೆದುಕೊಳ್ಳಲು
ಹೋದರೆ ನೀರು ಹಿಮಾಲಯದಿಂದ ಹರಿಯುವ ಅಲಕನಂದೆಗಿಂತಲೂ ತಣ್ಣಗಾಗಿರುತ್ತದೆ.ದೇಹದ ಪ್ರತಿಯೊಂದು ಭಾಗವೂ ಗರಬಡಿದವರಂತೆ ನಡುಗುತಿರುತ್ತದೆ,
ಹಲ್ಲುಗಳು ಕಟಿಯುವ ಶಬ್ದ ಪಕ್ಕದ ಮನೆಯವರಿಗೂ(ಅವರು ಎದ್ದಿದ್ದರೆ )ಕೇಳಿಸುತ್ತಿರುತ್ತದೆ.ಇಂಥಾ ಸಮಯದಲ್ಲಿ ಮನುಷ್ಯರು ಒತ್ತಟ್ಟಿಗಿರಲಿ,
"ಮನಸ್ಸು ಮತ್ತು ಅದರ ನಿಗ್ರಹ" ಎಂಬ ಪುಸ್ತಕ ಸಹಾ ಕಂಬಳಿ ಹೊದ್ದು ಮಲಗಿಕೊಂಡಿರುತ್ತದೆ.ವಿಶ್ವಾಮಿತ್ರನ ತಪಸ್ಸು ಭಂಗ ಮಾಡುವ ಮೇನಕೆಯಂತೆ
ನಿದ್ರಾದೇವಿ ನಿಮ್ಮ ಭವಿಷ್ಯದ ಜೊತೆಗೆ ಆಗ ಚೆಲ್ಲಾಟವಾಡುತ್ತಾಳೆ.
ನಾನು ಆಗ ಓದುತ್ತಿದ್ದ ವಿದ್ಯಾರ್ಥಿ ನಿಲಯದಲ್ಲಿ ಬೆಳಿಗ್ಗೆ ಐದು ಘಂಟೆಗೆ ಎದ್ದು ಪ್ರಾರ್ಥನೆ ಮಾಡಬೇಕಿತ್ತು.ನಾಳೆ ಬೆಳಗಿನ ಪ್ರೇಯರ್ ಕ್ಯಾನ್ಸಲ್ ಆಗಲಿ ಎಂದು ಹಿಂದಿನ
ರಾತ್ರಿಯೇ ಬಹಳಷ್ಟು ಪ್ರೇಯರ್ಗಳನ್ನು ಮಾಡಿದ್ದಿದೆ.ಪ್ರಾರ್ಥನೆ ಮುಗಿಸಿ ಮತ್ತೆ ಅಭ್ಯಾಸ ಮಾಡುವ ಧೈರ್ಯ,ಸಾಹಸಕ್ಕೆ ನಾವು ಬಹುತೇಕ ಕೈ ಹಾಕುತ್ತಿರಲಿಲ್ಲಾ.
ಬೆಳಿಗ್ಗೆ ಚಳಿ,ಹಗಲಾದರೆ ಧೋ ಎಂದು ಸುರಿಯುವ ಮಳೆ.ಇಂಥಾ ವಾತಾವರಣದಲ್ಲಿ ಓದಿ ಪಾಸಾಗಬೇಕೆಂದರೆ ನಿಮಗೆ ವಿಶೇಷವಾದ
ಆತ್ಮ ಸ್ಥೈರ್ಯ,ಇಂದ್ರಿಯ ನಿಗ್ರಹ,ಜಗತ್ತನ್ನೇ ಗೆಲ್ಲಬಲ್ಲೆ ಎಂಬ ಸಂಕಲ್ಪ ಶಕ್ತಿ ಯಾವುದು ಕೆಲಸಕ್ಕೆ ಬರುವುದಿಲ್ಲಾ.ಅದ್ರಷ್ಟ ಹಾಗು ದೇವರ ದಯೆ ಇರಬೇಕಷ್ಟೇ.
ಹೀಗಾಗಿ ಪ್ರಾರ್ಥನೆಗೆ ವಿಶೇಷ ಮಹತ್ವ.
ಪಿ.ಯೂ.ಸಿ ಮುಗಿಸಿ ಸ್ವಲ್ಪ ದಿನಗಳಾದ ಮೇಲೆ ನನಗೆ ಇಂಜಿನಿಯರಿಂಗ್ ಸೀಟು ಸಿಗುವುದಿಲ್ಲವೆಂಬ ಅನುಮಾನ ನನ್ನ ಅಮ್ಮನಲ್ಲಿತ್ತು.ಅವಳ ಅನುಮಾನದಲ್ಲಿ
ನನಗೆ ಬಲವಾದ ನಂಬಿಕೆಯೂ ಇತ್ತು.ಪರೀಕ್ಷೆಯ ಸಮಯದಲ್ಲಿ ಅಮ್ಮ ನನಗಿಂತ ಬೇಗ ಎದ್ದು,ಚಹಾ ಮಾಡಿಟ್ಟು ನನ್ನನ್ನು ಎಬ್ಬಿಸಲು ಭಗೀರಥ ಪ್ರಯತ್ನಗಳನ್ನು
ಮಾಡುತ್ತಿದ್ದಳು.ನಿದ್ರಾ ದೇವಿಗೂ ಅಮ್ಮನಿಗೂ ಭೀಕರ ಕಾಳಗ ಎರ್ಪಟ್ಟು ಅಮ್ಮ ಎಷ್ಟೋ ಸರ್ತಿ ಸೋತು ಕೊನೆಗೆ ನನಗೆ "ನೀ ಹೆಣ್ಣಾಗ್ಯರ ಹುಟ್ಟಿದ್ರೆ ಚೊಲೋ ಇರ್ತಿತ್ತು ನೋಡು,
ಲಗ್ನಾ ಮಾಡಿ ಅತ್ಲಾಗ ಕೊಟ್ಟ ಬಿಡ್ತಿದ್ವಿ, ಗಂಡಾಗಿ ಹುಟ್ಟಿ ಸ್ವಲ್ಪರೆ ಓದಿನ ಕಡೆ ಲಕ್ಷ್ಯ ಇಲ್ಲಾಂದ್ರೆ ಹ್ಯಂಗ ?" ಎಂದು ನನ್ನ ಧೀ ಶಕ್ತಿಯ ಮೇಲೆ ಪ್ರಹಾರ ಮಾಡುತ್ತಿದ್ದಳು.ಇನ್ನೊಬ್ಬರ
ತಪ್ಪಿನಿಂದ ನೀನು ನೋಡಿ ಕಲಿ ಎಂಬ ಯಾವುದೇ ಮ್ಯಾನೇಜ್ಮೆಂಟಿನ ಪುಸ್ತಕ ಓದದ ನನ್ನ ತಂಗಿ ತನಗರಿವಿಲ್ಲದಂತೆಯೇ ಎದ್ದು ಓದಲು ಕುಳಿತು ಬಿಡುತ್ತಿದ್ದಳು.ಹೀಗಾಗಿ
ಇಂಜಿನಿಯರಿಂಗ್ ಓದಿನ ಬಗ್ಗೆ ಆಸೆ ಬಿಟ್ಟಿದ್ದ ನಾನು ಒಂದು ಸ್ವಲ್ಪ ದಿವಸ ಧಾರವಾಡದ ಪ್ರತಿಷ್ಟಿತ ಜೆ.ಎಸ್.ಎಸ್ ಕಾಲೇಜಿನಲ್ಲಿ ಬಿ.ಎಸ್ಸಿ ಓದಲು ಅಡ್ಮಿಶನ್ ಮಾಡಿಸಿದ್ದೆ.
ಅಸಂಖ್ಯಾತ ಬೆಟ್ಟ ಗುಡ್ಡಗಳನ್ನು ಹತ್ತಿ ಇಳಿದು, ಕೊರೆಯುವ ಚಳಿಯನ್ನು,ಸುರಿಯುವ ಮಳೆಯನ್ನೂ ಲೆಕ್ಕಿಸದೆ ಮಾಳಮಡ್ಡಿ,ಎಮ್ಮಿ ಕೇರಿ ಧಾಟಿ ವಿದ್ಯಾಗಿರಿಯಲ್ಲಿರುವ ಕಾಲೇಜಿಗೆ
ಹೋಗಬೇಕೆನ್ನುವ ಒಂದು ಭೀಕರ ಯೋಚನೆಯಿಂದಲೇ ಸಣ್ಣಗೆ ಮೈ ನಡುಕ ಬರುತ್ತಿತ್ತು.
ಆದರೇ ಮತ್ತೆ ಅದೇ ಪ್ರಾರ್ಥನೆ ಕೆಲಸಕ್ಕೆ ಬಂದು ನನಗೆ ಬೇರೆಕಡೆ ಇಂಜಿನಿಯರಿಂಗ್ ಸೀಟು ಸಿಕ್ಕು ಧಾರವಾಡದಿಂದ ಚಳಿಯಿಂದ ಪಾರಾದೆ..ಅದರೂ ಧಾರವಾಡದ ಕಾವು ಇನ್ನು ಬಿಟ್ಟಿಲ್ಲಾ