ಮಿಲ್ಟ್ರಿ ಟ್ರಂಕು

ಮಿಲ್ಟ್ರಿ ಟ್ರಂಕು

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಲಕ್ಷ್ಮಣ ವಿ ಎ
ಪ್ರಕಾಶಕರು
ಅಮೂಲ್ಯ ಪುಸ್ತಕ, ಚಂದ್ರಾ ಲೇಔಟ್, ಬೆಂಗಳೂರು-೫೬೦೦೭೨
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೨

“ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ,'' ಎನ್ನುತ್ತಾರೆ "ಮಿಲ್ಟ್ರಿ ಟ್ರಂಕು' ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಲೇಖಕ, ವಿಮರ್ಶಕ ರಹಮತ್ ತರೀಕೆರೆ. “ಮೂಲತಃ ವೈದ್ಯರಾದ ಲಕ್ಷ್ಮಣ ಅವರು, ತಮ್ಮ ನೆನಪುಗಳನ್ನು ಪುಟ್ಟಪುಟ್ಟ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಈ ಸ್ಮೃತಿಚಿತ್ರಗಳು ಹಲವು ಕಾರಣಗಳಿಂದ ವಿಶಿಷ್ಟವಾಗಿವೆ. ಕರ್ನಾಟಕದ ಎರಡು ತುದಿಯಲ್ಲಿರುವ ಅಥಣಿ ಸೀಮೆ ಹಾಗೂ ಬೆಂಗಳೂರು ಸೀಮೆಯ ಬದುಕನ್ನು ಒಟ್ಟಿಗೆ ಹಿಡಿದುಕೊಡುವುದಕ್ಕೆ; ಪುಟ್ಟ ಹಳ್ಳಿಯ ಮತ್ತು ಧಾರವಾಡ ಬೆಂಗಳೂರುಗಳಂತಹ ಮಹಾ ನಗರಗಳ ಬದುಕನ್ನು ಜತೆಗಿಟ್ಟು ನೋಡುವುದಕ್ಕೆ; ಹಳ್ಳಿಯ ಕೃಷಿಕ ಸಂಸ್ಕೃತಿಯನ್ನು ಮತ್ತು ವೈದ್ಯಕೀಯ ಕ್ಷೇತ್ರ ಅನುಭವಗಳನ್ನು ಬೆರೆಸುವುದಕ್ಕೆ; ಬಾಲ್ಯದ ಅನುಭವಗಳ ಜತೆ ಪ್ರಾಯದ ಚಿಂತನೆಗಳ ಅಭಿನ್ನಗೊಳಿಸಿರುವುದಕ್ಕೆ. ಸಾಮಾನ್ಯವಾಗಿ ಆತ್ಮಕಥೆಗಳಲ್ಲಿ, ಬಾಲ್ಯದ ನೆನಪುಗಳು ಬಂದಾಗ ಆಪ್ತವೂ ಗಾಢವೂ ಆಗುವ ಬರೆಹ, ವೃತ್ತಿ ಬದುಕಿನ ಅಥವಾ ನಡು ವಯಸ್ಸಿನ ಬದುಕಿನ ದಾಖಲೆಯಾಗುವಾಗ ಅಳ್ಳಕಗೊಳ್ಳುವುದು.

ಕಳೆದುಹೋದ ಬದುಕಿನ ನೆನಪುಗಳು ರಮ್ಯವಾಗಿ ಸಿಹಿಯಾಗಿ, ಬಾಳಿನ ವೈರುಧ್ಯಗಳನ್ನು ಕಳೆದುಕೊಳ್ಳುವುದೂ ಉಂಟು.ಆದರೆ ಇಲ್ಲಿ ಹಾಗಾಗಿಲ್ಲ. ಬಾಲ್ಯ ಕಾಲದ ಸಿಹಿ ನೆನಪುಗಳ ಜತೆಗೆ ಅಲ್ಲಿನ ದಾರುಣವಾದ ಚಿತ್ರಗಳೂ ಸೇರಿಕೊಳ್ಳುತ್ತವೆ ಎಂತಲೇ ಇಲ್ಲಿನ ಚಿತ್ರಗಳು ಮತ್ತು ಪಾತ್ರಗಳು ಸಂಕೀರ್ಣವಾಗಿವೆ. ಇಲ್ಲಿರುವ ಅನುಭವವನ್ನು ಪಡೆದ ಪ್ರದೇಶ, ಕಾಲ, ಸಂಸ್ಕೃತಿ ಸನ್ನಿವೇಶಗಳು ಬೇರೆಬೇರೆಯಾದರೂ, ಪ್ರೀತಿ ದ್ವೇಷ ಸಿಟ್ಟು ಅಸೂಯೆ ದೊಡ್ಡತನ ಸಣ್ಣತನವುಳ್ಳವುಗಳ ಇಲ್ಲಿನ ಮನುಷ್ಯರು ಮಾತ್ರ ಒಂದೇ. ಅವರನ್ನು ಅವರ ಸ್ವಭಾವದ ಒರೆಕೊರೆಗಳೊಂದಿಗೆ ಸೆರೆ ಹಿಡಿಯುವುದರಿಂದ ಪಾತ್ರಗಳು ಜೀವಂತವಾಗಿವೆ. ಅದರಲ್ಲೂ ಘನವಾದ ಪಾತ್ರಗಳಾಗಿ ನಿಲ್ಲುವವರು ಲೇಖಕರ ಅಪ್ಪ ಮತ್ತು ಅಮ್ಮ. ಇಲ್ಲಿನ ಪಂಡರಪುರದ ಯಾತ್ರೆ, ಅಪ್ಪ ಅಮ್ಮನ ಸಂಬಂಧವನ್ನು ಚಿತ್ರಿಸುವ ನೆನಪುಗಳು ಸಣ್ಣಕತೆಗಳೂ ಆದಂತಿವೆ. ಜಾತ್ರೆಯ ದಿನ ಅಪ್ಪ ಅಮ್ಮ ನಿಗೂಢವಾಗಿ ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷವಾಗುವುದನ್ನು ವಾಚ್ಯಗೊಳಿಸಿ ಚಿತ್ರಿಸಲಾಗಿದೆ. ಯಾವುದಾದರೂ ಕಾದಂಬರಿಯೊಳಗೆ ಮೈತಳೆಯಬೇಕಾದ ಅನುಭವಲೋಕವು ಹೀಗೆ ಬಿಡಿ ಚಿತ್ರಗಳಾಗಿ ಪರ್ಯವಸಾನಗೊಂಡಿತೇ ಎಂದು ಅನಿಸುವುದುಂಟು.

ಇಲ್ಲಿರುವ ಮೊದಲ ನೆನಪು, ಮಲೆನಾಡಿನ ಸ್ನೇಹಿತೆಯೊಬ್ಬಳು ಗುಬ್ಬಿ ಕಾಯುವುದು ಎಂದರೇನು? ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಸಂಗದಿಂದ ಆರಂಭವಾಗುವುದು ಸಾಂಕೇತಿಕವಾಗಿದೆ. ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸ ಮಾಡುತ್ತದೆ.

ಹೀಗಾಗಿ ಇಲ್ಲಿನ ಸ್ಮತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು, ಬಡತನ, ದುಡಿಮೆ, ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ. ತನ್ನನ್ನು ರಕ್ಷಿಸಿಕೊಳ್ಳದ ಊರದೇವರನ್ನು ಕುರಿತು ದುಃಖಿಸುವ ಜನರ ಬಗ್ಗೆ ವ್ಯಂಗ್ಯ ಮಾಡುತ್ತವೆ. ಕಾಣೆಯಾದ ಗುಬ್ಬಿಗಳನ್ನು ಮತ್ತು ಊರವರೆಲ್ಲ ಸೇರಿ ಕೊಲ್ಲುವ ಹುಲಿಯನ್ನು ವಿಷಾದದಲ್ಲಿ ಕಾಣಿಸುತ್ತವೆ.

ವೈರುಧ್ಯಗಳನ್ನು ಮುಂದಿಡುವ ಮೂಲಕ ಸುಡುಬಾಳಿನ ಬಗ್ಗೆ ಚಿಂತಿಸಲು ಪ್ರೇರೇಪಿಸುತ್ತವೆ. ಬಾಲ್ಯಕಾಲದ ಮುಗ್ಧ ನಂಬಿಕೆಗಳು ಭಗ್ನವಾದ ಬಳಿಕ ಮತ್ತು ವೈಚಾರಿಕ ದೂರದಿಂದ ಪರಿಸರವನ್ನು ನೋಡುವುದರಿಂದ ಹುಟ್ಟಿರುವ ಚಿಂತನಶೀಲತೆ, ಇಲ್ಲಿನ ಬರೆಹವನ್ನು ರೂಪಿಸಿದೆ. ಅನುಭವವು ಚಿಂತನೆಗೆ ಬುನಾದಿಯಾಗುವ ಅಥವಾ ಚಿಂತನೆಯು ಅನುಭವಕ್ಕೆ ಚೌಕಟ್ಟೊಂದನ್ನು ಕಟ್ಟುವ ಕಡೆಯಲ್ಲೆಲ್ಲ ಬರೆಹ ದಾರ್ಶನಿಕವಾಗುತ್ತದೆ. ಸಹಜವಾದ ವಿವರಗಳು ದೊಡ್ಡ ಅರ್ಥವನ್ನು ಕೊಡುವ ಸಂಕೇತಗಳಾಗುತ್ತವೆ. ಉದಾ.ಗೆ, ಮಗನನ್ನುಆಸ್ಪತ್ರೆಗೆ ಕರೆದೊಯ್ಯುವ ತಂದೆ ರಸ್ತೆಬದಿ ವಾಹನಕ್ಕೆ ಕಾಯುವ ಪ್ರಸಂಗವನ್ನು ಗಮನಿಸಬಹುದು. ಬುತ್ತಿಕಟ್ಟುವ, ಚಪ್ಪಲಿ ಕಳೆದುಹೋಗದಂತೆ ವಿಶಿಷ್ಟ ಗುರುತು ಮಾಡುವ, ಪಂಡರಪುರಕ್ಕೆ ಯಾತ್ರೆ ಹೋಗುವ, ಹೈನ ಮುಗಿದರೂ ಹಾಲುತುಪ್ಪದ ವಾಸನೆ ಪರಿಮಳ ಬೀರುವ ಕಪಾಟುಗಳು, ಪರಿಮಳ ಬೀರುವ ಮಿಲಿಟರಿ ಟ್ರಂಕು ಇತ್ಯಾದಿ ಪ್ರಸಂಗಗಳಲ್ಲಿ, ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಶ್ರದ್ಧೆಯಿಂದ ಇಲ್ಲಿನ ನೆನಪುಗಳಿಗೆ ಒಂದು ಬಗೆಯ ಜೈವಿಕ ಸಮೃದ್ಧತೆ ಒದಗಿದೆ.

ಕೆಲವು ನೆನಪುಗಳಂತೂ ಕಾವ್ಯಾತ್ಮಕವಾಗಿಯೂ ದಾರ್ಶನಿಕವಾಗಿಯೂ ಆಗಿದ್ದು, ಸುಂದರ ಪ್ರಬಂಧಗಳಾಗಿವೆ. ಆದರೆ ನೆನಪುಗಳ ಜತೆ ಜೀವನದ ಅರ್ಥವೊಂದನ್ನು ಹುದುಗಿಸುವ ವಿಷಯದಲ್ಲಿ ನಿರಾಸಕ್ತವಾಗಿರುವ ಲೇಖನಗಳೂ ಇಲ್ಲಿವೆ. ಅವು ಲಘುವಾಗಿವೆ, ವಾಚಾಳಿಯಾಗಿವೆ ಮತ್ತು ಶಿಥಿಲವಾಗಿವೆ. ಇಲ್ಲಿನ ನೆನಪುಗಳು ಲವಲವಿಕೆಯಿಂದ ಕೂಡಿದ್ದು, ಪುಸ್ತಕವೂ ಬಿಡದೆ ಓದಿಸಿಕೊಳ್ಳುತ್ತದೆ. ಇದಕ್ಕೆ ಲೇಖಕರ ವಿನೋದಪ್ರಜ್ಞೆಯೂ ಆ ಪ್ರಜ್ಞೆಯ ಹಿಂದಿರುವ ಜೀವನಪ್ರೀತಿಯೂ ಕಾರಣವಾಗಿದೆ. ಬದುಕನ್ನು ಅದರ ಸಮೃದ್ಧಿ ವೈರುಧ್ಯ ದುರಂತಗಳ ಸಮೇತ ಹಿಡಿದಿಡುವ ಸಹನೆ ಮತ್ತು ಪ್ರತಿಭೆಯುಳ್ಳ ಲೇಖಕರಿಗೆ, ಇಂತಹ ಬಿಡಿಬಿಡಿ ನೆನಪುಗಳಾಚೆ ದೊಡ್ಡದಾದ ಬರೆಹವನ್ನು ಮಾಡುವ ಶಕ್ತಿಯಿದೆ. ಅಂತಹ ಬರೆಹಕ್ಕೆ ಈ ಪುಸ್ತಕ ಪೂರ್ವಪೀಠಿಕೆ ಆದರೂ ಆದೀತು.” ಎಂದಿದ್ದಾರೆ.