ಮಿಶ್ರಫಲದ ಕ್ಯಾಲೆಂಡರ್

ಮಿಶ್ರಫಲದ ಕ್ಯಾಲೆಂಡರ್

ನಮ್ಮ ಸಂಬಂಧಿಕರನ್ನು ನಾವು ಆಯ್ಕೆ ಮಾಡಿಕೊಳ್ಳಲು ಆಗುವುದಿಲ್ಲವಂತೆ. ನಿಜವೇ. ಏಕೆಂದರೆ , ಮದುವೆ ಆದ ತಕ್ಷಣ ವಧು / ವರರಿಗೆ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ. ಸೋದರಮಾವ, ಸೋದರತ್ತೆ ಇವರಿಂದ ಹಿಡಿದು ಆಗಷ್ಟೇ ಹುಟ್ಟಿರುವ ಅಥವಾ ಮುಂದೊಂದು ದಿನ ಹುಟ್ಟಲಿರುವ ಮಗು ಸಹ ಸಂಬಂಧಿ ಆಗುತ್ತಾರೆ - ಈ ಮಂದಿ ಹೇಗಾದರೂ ಇರಲಿ.
ಅದರಂತೆ ಕ್ಯಾಲೆಂಡರ್ ಸಹ. ಛೆ ! ಛೆ ! ನಾನು ಹೇಳುತ್ತಿರುವುದು ಕ್ಯಾಲೆಂಡರ್ ಮೇಲಿರುವ ಚಿತ್ರಗಳ ಬಗ್ಗೆ ಅಲ್ಲ . ಅದನ್ನು ನಾವು ಆಯ್ಕೆ ಮಾಡಿಕೊಳ್ಳಲು ಸಾಧ್ಯ. ನಾನು ಹೇಳಹೊರಟಿರುವುದು ಕ್ಯಾಲೆಮಡರ್ ನಲ್ಲಿ ನಮೂದಾಗಿರುವ ತಿಥಿ, ವಾರ, ನಕ್ಷತ್ರ, ದಿನ, ರಜಾದಿನಗಳ ಬಗ್ಗೆ. ಅವನ್ನು ನಾವು ಆಯ್ಕೆ ಮಾಡಿಕೊಳ್ಳಲು ಸಾಧ್ಯವೆ? Fait accompli ಎಂಬಂತೆ ನಮೂದಾಗಿರುವುದನ್ನು ಒಪ್ಪಲೇಬೇಕು, ವಧು / ವರರು ತಮ್ಮ ನೆಂಟರಿಷ್ಟರನ್ನು ಒಪ್ಪಿದಂತೆ. ಆದುದರಿಂದಲೇ ಡಿಸೆಂಬರ್ ಬಂದಿತೆಂದರೆ ನಾನು ಮರುವರ್ಷದ ಕ್ಯಾಲೆಂಡರ್ ಹಿಡಿದು ಅದನ್ನು ಕೂಲಂಕುಷ ಪರೀಕ್ಷೆಗೆ ಒಳಪಡಿಸುತ್ತೇನೆ. ಹಬ್ಬ, ಸರ್ಕಾರಿ ಉತ್ಸವಗಳು, ಜಯಂತಿಗಳು ಎಂದು ಬರುತ್ತವೆ ಎಂದು ತಿಳಿಯಲು. ಒಂದು ಜಯಂತಿಯೋ/ಹಬ್ಬವೋ/ ಉತ್ಸವವೋ ಭಾನುವಾರವಾದರೆ ನನಗೆ ನಿರಾಸೆಯೋ ನಿರಾಸೆ. ಏಕೆಂದರೆ ಒಂದು ರಜ ನಷ್ಟವಾಗುವುದಲ್ಲವೆ? ಶುತ್ರವಾರವೋ ಅಥವಾ ಸೋಮವಾರವೋ ಬಂದರೆ ಖುಷಿಯೋ ಖುಷಿ. ಶನಿವಾರ/ ಭಾನುವಾರ ಸೇರಿಸಿ ಮೂರು ದಿನದ ರಜೆ ಮಾಡಿ ಪಿಕ್ ನಿಕ್ ಎಂದು ಬಸ್ / ರೈಲು ಏರಲು ಸಾಧ್ಯ.
ಈ ದೃಷ್ಟಿಕೋನದಿಂದಲೇ ನಾನು ಪ್ರತಿ ತಿಂಗಳ ರಜಾಸ್ಥಿತಿಯನ್ನು ಅಧ್ಯಯನ ಮಾಡುತ್ತೇನೆ.
ಜನವರಿಯನ್ನು ನೋಡಿ - ಇಲ್ಲಿ ಎರಡು ರಜೆ ಗ್ಯಾರಂಟಿ. ಒಂದು ಸಂಕ್ರಾಂತಿ, ಇನ್ನೊಂದು ಛಬ್ಬೀಸ್ ಜನವರಿ. ಇವೆರಡರಲ್ಲಿ ಯಾವುದು ಭಾನುವಾರ ಬಂದರೂ ಈ ಮೊದಲೇ ಹೇಳಿದಂತೆ ಒಂದು ರಜೆ ತುಂಬಲಾಗದ ನಷ್ಟ. ಶುಕ್ರವಾರ ಅಥವಾ ಸೋಮವಾರ ಬಂದರೆ ಮೂರು ದಿನ ರಜೆ..
ಫೆಬ್ರುವರಿ ಎಂದರೆ ನನಗೆ ಯಾವಾಗಲೂ ಇಷ್ಟ. ಈ ತಿಂಗಳಿನಲ್ಲಿ ಯಾವುದೇ ರಜೆ ಇಲ್ಲದಿದ್ದರೂ ದಿನಗಳು 29 ಮಾತ್ರ. ಒಮ್ಮೊಮ್ಮೆ 28 ದಿನಗಳಷ್ಟೇ ಇರುತ್ತವೆ. ಆದರೆ ಈ ಉದಾರತನ ನಾಲ್ಕು ವರ್ಷಗಳಿಗೊಮ್ಮೆ ಮಾತ್ರ. 28-29 ಯಾವುದೇ ಇರಲಿ, ಸಂಬಳ ಸ್ವಲ್ಪ ಬೇಗ ಸಿಗುತ್ತದೆ ಎಂಬುದಂತೂ ಗ್ಯಾರಂಟಿ. ಇಂತಹ ಫೆಬ್ರುವರಿಗಳು ಇನ್ನಷ್ಟು ಇರಲಿ ಒಂದು ವರ್ಷ ದಲ್ಲಿ ಎಂದು ಕ್ಯಾಲೆಂಡರ್ ಕರ್ತೃ ವಿನೊಂದಿಗೆ ಅಡ್ಜಸ್ಟ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ, ಕ್ಯಾಲೆಂಡರ್ Fait accompli. ಮಾರ್ಚಿ ವಸಂತ ಮಾಸ, ಋತುಗಳ ರಾಜ ತಾ ಬಂದ ಎಂಬ ಸಂಭ್ರಮ. ಆದರೆ ರಜೆಯ ದೃಷ್ಟಿಯಿಂದ ನೀರಸ ದೃಶ್ಯಾವಳಿ. ಏಕೆಂದರೆ, ಹೋಳಿ ಒಂದೇ ಈ ತಿಂಗಳು. ಆದರೆ ಹೋಳಿಗೆ ರಜೆ ಸಹ ಇಲ್ಲ. ಹೋಳಿಗೆ ತಿಂದು ಆಫೀಸಿಗೆ ಹೋಗಬೇಕು, ಅಷ್ಟೆ ಶಿವರಾತ್ರಿಗೂ ರಜೆ ಇಲ್ಲ.
ಏಪ್ರಿಲ್ - ಮೇ ಬೇಸಿಗೆ ಕಾಲ. ಎಲ್ಲೆಡೆ ಬಿಸಿಲು, ಬೆವರು. ಮನೆಯಲ್ಲಿ ಕೂರಲು ಮನ ಬಯಸುತ್ತದೆ. ಆದರೆ ಏಪ್ರಿಲ್ ನಲ್ಲಿ ರಜೆ ಎರಡು ದಿನ ಮಾತ್ರ. ಭಾನುವಾರದಂದು ಈ ರಜೆ ಬಾರದಿರಲಿ ಎಂದು ದೇವರನ್ನು ಪ್ರಾರ್ಥಿಸಬೇಕಷ್ಟೆ . ಮುಂದಿನ ತಿಂಗಳು, ಅಂದರೆ ಮೇನಲ್ಲಿ ಪರಿಸ್ಥಿತಿ ಶೋಚನೀಯ. ಇದ್ದ "ಮೇ ಡೇ" ರಜೆ ಸಹ ಕಮೈನಿಸಂ ಸರ್ಕಾರಗಳ ಜತೆ ಹೋಗಿದ್ದು, ಅಂದೂ ಸಹ ಕಾರ್ಮಿಕರು "ಲಾಲ್ ಸಲಾಂ" ಎಂದು ಮನೆಯಲ್ಲಿ ಕೂರುವಂತಿಲ್ಲ. ಕೆಲಸಕ್ಕೆ ಹಾಜರಾಗಬೇಕು . ಒಂದೇ ನೆಮ್ಮದಿ ಎಂದರೆ ಯಾವ ರಜೆಯೂ ಭಾನುವಾರ ಬರುವುದಿಲ್ಲ. ಏಕೆಂದರೆ ರಜಗಳೇ ಇಲ್ಲವಲ್ಲ!
ಜೂನ್ - ಜುಲೈ ಆಷಾಢ ಮಾಸ. ಮಳೆಯ ಅಬ್ಬರ. ಎಲ್ಲೆಡೆ ವರ್ಷ ಧಾರೆ ಆಗುತ್ತಿದ್ದರೆ ರಜೆಯ ವಿಷಯದಲ್ಲಿ ಮಾತ್ರ ಬರಗಾಲ. ಕ್ಯಾಲೆಂಡರ್ ಕರ್ತೃಗಳಿಗೆ ಅದೇನು ಕೋಪವೋ ಏನೋ, ಈ ಎರಡೂ ತಿಂಗಳಲ್ಲಿ ಒಂದಾದರೂ ರಜೆ ಬೇಡವೆ? ಊಹೂಂ! ಇಲ್ಲವೇ ಇಲ್ಲ. ಜೂನ್ - ಜುಲೈ ಮುಗಿಯಿತು ಎಂದರೂ ರಜೆಗಾಗಿ ಇನ್ನೂ 15 ದಿನ ಕಾಯಬೇಕಷ್ಟೆ. ಪಂದ್ರ ಆಗಸ್ಟ್ ರಜೆ ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಆದರೆ ಅದು ಭಾನುವಾರ ಬಿದ್ದರೆ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಏನೂ ಸಂಭ್ರಮವೇ ಇರುವುದಿಲ್ಲ. ಆದರೆ ಅದು ಶುಕ್ರವಾರ / ಸೋಮವಾರ ಬಂದರೆ ಸಂತೋಷ ದ್ವಿಗುಣ – ಮೂರು ದಿನಗಳ ರಜೆ ಬಂತಲ್ಲ!
ಕೆಲವು ಬಾರಿ ಕ್ಯಾಲೆಂಡರ್ ಎಷ್ಟು ಕ್ರೂರವಾಗಿರುತ್ತದೆ ಎಂದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಒಂದೂ ರಜೆ ಇರದೆ ಒಂದು ಮಾಸದ ಬರಗಾಲ ಕಳೆದ, ಅಕ್ಟೋಬರ್ 2ರ "ಗಾಂಧಿ ಜಯಂತಿ" ಯನ್ನು ಎದುರು ನೋಡಬೇಕಾಗಿಬಬರುತ್ತದೆ. ಈ ಬಾರಿ ಸೆಪ್ಟೆಂಬರ್ ನಲ್ಲೇ ಗಣೇಶನ ಹಬ್ಬ ಬಂದಿದ್ದರೂ , ಅಂದು ರವಿವಾರ ಆಗಿರುವುದರಿಂದ ರಜೆಗೆ ವಿಘ್ನ ಬಂದಿದೆ. ಈ ವಿಘ್ನ ವನ್ನು ಗಣೇಶನೇ ನಿವಾರಿಸಲು ಆಗಿಲ್ಲ ಎಂದರೆ ಅವನ ಯಃಕಶ್ಚಿತ್ ಭಕ್ತರೇನು ಮಾಡಲು ಸಾಧ್ಯ? ಆದರೆ "ಗಾಂಧಿ ಜಯಂತಿ" ಯೂ ಭಾನುವಾರ ಬಂದಿದೆ! ಗಾಂಧಿಯೂ ಇಷ್ಟು ಕ್ರೂರಿಯಾಗಲೂ ಸಾಧ್ಯವೆ?
"ಆಯುಧ ಪೂಜೆ" ಬುಧವಾರ, ದೀಪಾವಳಿ ಗುರುವಾರ, ನವೆಂಬರ 1ರ ರಾಜ್ಯೋತ್ಸವ ಮಂಗಳವಾರ – ಕ್ಯಾಲೆಂಡರ್ ತುಸು ಅನುಕೂಲಕರ. ಅಕ್ಟೋಬರ್ 28ರ ಶುಕ್ರವಾರ ರಜೆ ಮಾಡಿದರೆ, ಶನಿ-ಭಾನುವಾರ ಸೇರಿಸಿ ಸೋಮವಾರವೂ ರಜೆ ಹಾಕಿದರೆ, ರಾಜ್ಯೋತ್ಸವದ ರಜೆಯೂ ಸೇರಿ ಬುಧವಾರ ಆಫೀಸಿಗೆ ಒಲ್ಲದ ಮನಸ್ಸಿನಿಂದ ಬರಬಹುದು. ನವೆಂಬರ್ ನಲ್ಲೂ ಪರಿಸ್ಥಿತಿ ಆಶಾದಾಯಕವಾಗಿದೆ. 7ನೇ ತಾರೀಖು ಸೋಮವಾರ ಬಕ್ರೀದ್, ಮತ್ತೆ 14ರಂದು ಸೋಮವಾರ – ಕನಕ ಜಯಂತಿ, ಶನಿವಾರ/ ಭಾನುವಾರಗಳು ಅಫಿಕ್ಸ್/ ಸಫಿಕ್ಸ್ ಆದರೆ ಮಜವೋ ಮಜ.
ವರ್ಷದ ಅಂತ್ಯಕ್ಕೆ ಬಂದರೆ ಡಿಸೆಂಬರ್ ನಲ್ಲಿ 25 ರಜೆ ಇದ್ದೇ ಇದೆ. ಆದರೆ ಈ ಬಾರಿ ಕ್ರಿಸ್ ಮಸ್ ಭಾನುವಾರ ಬಂದಿದೆ. ಅಂದಹಾಗೆ , ಮೊಹರಂಗೆ ರಜೆ ಇದೆಯೆ? ಅದು ಮಂಗಳವಾರ. ಸೋಮವಾರ ರಜೆ ಹಾಕಿದರೆ...
ಕ್ಯಾಲೆಂಡರ್ ಗಳದ್ದು ಯಾವಾಗಲೂ ಮಿಶ್ರಫಲ. ಬಂದಿದ್ದನ್ನು ಸ್ವೀಕರಿಸಲೇಬೇಕು - ಅತ್ತೆ ಸೊಸೆಯನ್ನು, ಸೊಸೆ ಅತ್ತೆಯನ್ನು ಸ್ವೀಕರಿಸುವಂತೆ.
 
(ಚಿತ್ರ ಕೃಪೆ : ಗೂಗಲ್)