ಮಿಶ್ರಬೇಸಾಯದಿಂದ ಯಶಸ್ಸು ಸಾಧಿಸಿದ ರೈತರು

ಮಿಶ್ರಬೇಸಾಯದಿಂದ ಯಶಸ್ಸು ಸಾಧಿಸಿದ ರೈತರು

ಕೇರಳದ ಕುಂಜಂಬು ಅವರು  ವರುಷ ವೃದ್ಧ ರೈತರು. ತೆಂಗಿನ ಬೆಳೆಯಿಂದ ಅವರು ಗಳಿಸುವ ವಾರ್ಷಿಕ ಆದಾಯ ಕೇವಲ ರೂ.5,000. ಆದರೆ, ತೆಂಗಿನ ತೋಟದಲ್ಲಿ ಎಡೆಬೆಳೆಗಳನ್ನು ಬೆಳೆಸಿ ಹೆಚ್ಚುವರಿ ಆದಾಯ ಗಳಿಸುವ ಜಾಣ್ಮೆ ಅವರದು: ಬಾಳೆಯಿಂದ ರೂ.7,850; ಕೆಸುವಿನಗಡ್ಡೆಯಿಂದ ರೂ.4,000; ಬೆಂಡೆ ಮತ್ತು ಅವರೆಯಿಂದ ರೂ.2,000; ಒಟ್ಟು ರೂ.13,850 ಹೆಚ್ಚುವರಿ ಆದಾಯ.

ಅಂತರರಾಷ್ಟ್ರೀಯ ಜೀವವೈವಿಧ್ಯ ಸಂಸ್ಥೆಯ (ಏಷ್ಯನ ಡೆವಲಪ್‌ಮೆಂಟ್ ಬ್ಯಾಂಕಿನ ಆರ್ಥಿಕ ನೆರವಿನ) “ತೆಂಗು ಕೃಷಿಕರ ಸಮುದಾಯಗಳಲ್ಲಿ ಬಡತನ ತಗ್ಗಿಸುವಿಕೆ” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಕುಂಜಂಬು. ಎಂಟು ದೇಶಗಳ ಅಂತಹ ಕೃಷಿಕರಲ್ಲಿ ಕುಂಜಂಬು ಅವರಿಗೆ “ಅತ್ಯುತ್ತಮ ಅಂತರಬೇಸಾಯ ಕೃಷಿಕ” ಎಂಬ ಪುರಸ್ಕಾರ ಒಲಿದು ಬಂತು. ಸರ್ಟಿಫಿಕೇಟಿನ ಜೊತೆಗೆ 250 ಡಾಲರ್ ಬಹುಮಾನ.

ಕೇರಳದ ಪಿ.ವಿ. ಕೊರಾನ್ ಅವರದೂ ಮಿಶ್ರಬೇಸಾಯದಲ್ಲಿ ಇಂತಹದೇ ಸಾಧನೆ. ತನ್ನ ತೆಂಗಿನ ತೋಟದಲ್ಲಿ ಹೈನುಗಾರಿಕೆ ಆರಂಭಿಸಿದರು ಅವರು. ಹಾಲು, ಮೇವಿನ ಹುಲ್ಲು, ಬಾಳೆ, ಕರಿಮೆಣಸು, ತೆಂಗಿನಕಾಯಿ ಇವೆಲ್ಲದರ ಮಾರಾಟದಿಂದ ಅವರು ಗಳಿಸಿದ ವಾರ್ಷಿಕ ಆದಾಯ ರೂ.93,775. ಅದೇ ಕಾರ್ಯಕ್ರಮದಲ್ಲಿ ಅವರಿಗೂ ಅದೇ ಪುರಸ್ಕಾರ.

ವಿ. ಧನರಸು ಅವರು ತೆಂಗಿನ ತೋಟದಿಂದ ಗಳಿಸುತ್ತಿದ್ದ ಆದಾಯ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಅಂತರಬೆಳೆಗಳ ಕೃಷಿ ಶುರು ಮಾಡಿದ ನಂತರ ಇವರ ವಾರ್ಷಿಕ ಆದಾಯ ರೂ.25,000ಕ್ಕೆ ಏರಿತು. ಬೆಂಡೆ, ಬದನೆ, ಹರಿವೆ, ಹಾಗಲ, ಪಡುವಲಕಾಯಿ, ಬಾಳೆ, ಮರಗೆಣಸು ಹಾಗೂ ಸೇವಂತಿಗೆ ಕೃಷಿಯಿಂದ ಸಾಧ್ಯವಾಯಿತು ಈ ಆದಾಯ ಹೆಚ್ಚಳ.

ಪತಿ-ಪತ್ನಿ ಇಬ್ಬರೂ ತಮ್ಮ ತೋಟದಲ್ಲಿ ದುಡಿದು ಏನು ಸಾಧಿಸಬಹುದೆಂದು ತೋರಿಸಿಕೊಟ್ಟವರು ಕೇರಳದ ಅಶೋಕನ್ ಮತ್ತು ಮಡದಿ ಮಿನಿ. ಅಂತರಬೆಳೆ ಮತ್ತು ಮಿಶ್ರಬೇಸಾಯ ಅಳವಡಿಸಿಕೊಂಡರು ಅವರು. ವಿವಿಧ ಬೆಳೆಗಳ ಕೃಷಿ ಮತ್ತು ದನ, ಆಡು ಹಾಗೂ ಕೋಳಿ ಸಾಕಣೆಯಿಂದ ಅವರ ವಾರ್ಷಿಕ ಆದಾಯ ರೂ.1,14,700.

ಯೂಸುಫ್ ಖಾನ್ ರಾಜಸ್ಥಾನದ ಒಬ್ಬ ಕೃಷಿಕ. ಅವರು ನಿರ್ಮಿಸಿದ ಒಂದು ಮಣ್ಣು ಒಕ್ಕುವ ಯಂತ್ರ ಈಗ ಜನಪ್ರಿಯ. ಇದರಿಂದಾಗಿ ನೆಲಗಡಲೆಯ ಕೊಯ್ಲಿನ ಕೆಲಸ ಸುಲಭ. ಅದಲ್ಲದೆ, ಈ ಯಂತ್ರದಿಂದ ಕೊಯ್ಲು ಮಾಡಿದಾಗ ಫಸಲಿಗೆ ಆಗುವ ಹಾನಿ ಕಡಿಮೆ. ಈ ಯಂತ್ರದಿಂದಾಗಿ ಕೊಯ್ಲಿನ ವೆಚ್ಚವೂ ಕಡಿಮೆ. ಕೃಷಿಕಾರ್ಮಿಕರ ಕೊರತೆಯ ಸಮಸ್ಯೆಗೂ ಈ ಯಂತ್ರ ಒಂದು ಪರಿಹಾರ. ತನ್ನ ಯಂತ್ರವನ್ನು ಇತರ ಕೃಷಿಕರಿಗೆ ಬಾಡಿಗೆಗೂ ಕೊಡುತ್ತಾರೆ ಯೂಸುಫ್ ಖಾನ್. ಒಂದೆಕ್ರೆ ಕೊಯ್ಲಿಗೆ ಕೃಷಿಕಾರ್ಮಿಕರ ಮಜೂರಿ ರೂ.4,000. ಆದರೆ ಯಂತ್ರ ಬಳಸಿದರೆ ಆ ಕೊಯ್ಲಿಗೆ ಬಾಡಿಗೆ ಕೇವಲ ರೂ.1,500.

ಎನ್. ಶಕ್ತಿಮೈಂಥನ್ ತಮಿಳ್ನಾಡಿನ ಭತ್ತದ ಬೆಳೆಗಾರ. ಕೈಯಿಂದಲೇ ಚಲಾಯಿಸುವ ನೀರೆತ್ತುವ ಯಂತ್ರವನ್ನು ರೂಪಿಸಿದ್ದಾರೆ ಅವರು. ಇದರಿಂದ ಸಣ್ಣ ರೈತರಿಗೆ ಭತ್ತದ ಹೊಲಗಳಿಗೆ ನೀರುಣಿಸಲು ಅನುಕೂಲ. ಭತ್ತದ ಸಸಿ ಪುಳ್ಳೆ ಒಡೆಯುವ ಮತ್ತು ತೆನೆಯಲ್ಲಿ ಹಾಲು ತುಂಬುವ ಹಂತದಲ್ಲಿ ನೀರಿನ ಕೊರತೆಯಾದರೆ ಇಳುವರಿ ಕಡಿಮೆ. ಆ ಸಂದರ್ಭಗಳಲ್ಲಿ ವಿದ್ಯುತ್ ಇಲ್ಲವದ್ದರೂ ಭತ್ತದ ಹೊಲಕ್ಕೆ ನೀರುಣಿಸಿ, ಇಳುವರಿ ಪರಿಮಾಣ ಕಾಪಾಡಲು ಈ ಯಂತ್ರದಿಂದ ಸಹಾಯ. ರೈತರು ಸ್ವತಃ ಚಲಾಯಿಸಬಹುದಾದ ಈ ಸರಳ ಯಂತ್ರ ದೇಸಿ ತಂತ್ರಜ್ನಾನದ ಒಳ್ಳೆಯ ಉದಾಹರಣೆ.

ಕೃಷಿಕರು ಹತಾಶರಾಗಬೇಕಾಗಿಲ್ಲ; ತಮ್ಮ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರ ಎಂದು ಭಾವಿಸಬೇಕಾಗಿಲ್ಲ. ಅಂತರ ಬೆಳೆಗಳ ಕೃಷಿ, ಮಿಶ್ರಬೇಸಾಯ ಪದ್ಧತಿ, ವೆಚ್ಚ ಮತ್ತು ಶ್ರಮ ಉಳಿಸುವ ಸೂಕ್ತ-ತಂತ್ರಜ್ನಾನದ ಬಳಕೆ - ಇಂತಹ ವಿಧಾನಗಳಿಂದ ಈಗಲೂ ಕೃಷಿಯಿಂದ ಉತ್ತಮ ಆದಾಯ ಗಳಿಸಿ, ಗೌರವದ ಜೀವನ ನಡೆಸಲು ಸಾಧ್ಯ ಎಂಬುದಕ್ಕೆ ಈ ಎಲ್ಲ ಕೃಷಿಕರು ಜೀವಂತ ನಿದರ್ಶನ. ಹತಾಶ ರೈತರಿಗೆ ಇಂಥವರು ಸ್ಫೂರ್ತಿಯಾಗಲಿ.
ಪ್ರಾತಿನಿಧಿಕ ಫೋಟೋ: ಮಿಶ್ರಬೇಸಾಯ … ಕೃಪೆ: ಡೆಕ್ಕನ್ ಕ್ರಾನಿಕಲ್.ಕೋಮ್