ಮಿಹಿರಕುಲಿ

ಮಿಹಿರಕುಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಸದ್ಯೋಜಾತ ಭಟ್ಟ
ಪ್ರಕಾಶಕರು
ಸಮನ್ವಿತ, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೫೬೦೦೭೬.
ಪುಸ್ತಕದ ಬೆಲೆ
ರೂ.೨೫೦.೦೦, ಮುದ್ರಣ: ಜುಲೈ ೨೦೨೧

‘ಮಿಹಿರಕುಲಿ' ಎನ್ನುವ ವಿಶಿಷ್ಟ ಹೆಸರನ್ನು ಹೊಂದಿರುವ ಈ ಪುಸ್ತಕವನ್ನು ಬರೆದವರು ಸದ್ಯೋಜಾತ ಭಟ್ಟ ಇವರು. ಇವರ ಹಾಗೂ ಈ ಪುಸ್ತಕದ ಬಗ್ಗೆ ಎಸ್.ಎನ್.ಸೇತುರಾಮ್ ಇವರು ತಮ್ಮ ಬೆನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ “ಸದ್ಯೋಜಾತ ಭಟ್ಟರ ಹೊಸ ಪುಸ್ತಕ ‘ಮಿಹಿರಕುಲಿ', ಮೊದಲ ಮೂರು ಪುಸ್ತಕಗಳಾದ ‘ಶಿಲೆಯಲ್ಲಡಗಿದ ಸತ್ಯ', ‘ನಾಸತ್ಯ' ಮತ್ತು ‘ಕಾಲಯಾನ' ಕೆದಕಿ ಬಿಟ್ಟಂತಹ ಭಾವಗಳಿಗೆ, ಈ ಪುಸ್ತಕ ಮೂರ್ತರೂಪ ಕೊಟ್ಟಿದೆ. ಓದಿ ಮುಗಿಸಿದಾಗ ಮೊದಲು ಕಾಡುವ ಭಾವ ವಿಷಾದ.

ಭಾರತದ ಪ್ರಜೆಯಾದ ನನಗೆ, ದೇಶ ನನ್ನ ತಾಯಿ, ಬಂದವರೆಲ್ಲಾ ಬಗೆದಿದ್ದಾರೆ, ಬರಡಾಗಿಸುವ ಪ್ರಯತ್ನ ಮಾಡಿದ್ದಾರೆ. ಅವರವರ ಮಾಪನಗಳಲ್ಲಿ ಅಳೆದಿದ್ದಾರೆ. ಸೆರೆಗೆಳೆದವರೆಷ್ಟೋ, ಬಳಸಿಕೊಂಡವರೆಷ್ಟೋ, ಆಳ್ವಿಕೆಯ, ಆಡಳಿತದ ನೆಪದಲ್ಲಿ ನಡೆದದ್ದು ಲೂಟಿ ಮತ್ತು ಲಂಪಟತನ. ಅವನು ನನ್ನ ಚರಿತ್ರೆ ಬರೀತಾನೆ. ನನ್ನಪ್ಪ ಯಾರು ಅನ್ನೋದನ್ನ ಅವನು ತೋರಿಸ್ತಾನೆ. ಅದನ್ನು ನಂಬಿ ನಾನು ಬದುಕ್ತೀನಿ. ಅವನ್ಯಾರೋ ದಂಡು ಕಟ್ಟಿಕೊಂಡು ಲೂಟಿಗೆ ಬಂದು, ಇಲ್ಲಿಯ ಭಂಡಾರವನ್ನು ಕದ್ದು, ಮೆದ್ದು, ಹೆಣ್ಣುಗಳನ್ನು ಭೋಗಿಸಿ, ಅಧರ್ಮ ಅನೈತಿಕತೆಯನ್ನು ಪ್ರಜ್ಞೆಯಲ್ಲಿ ಬಿತ್ತಿ, ವೇದ ಉಪನಿಷತ್ತು ಒಂದು ಅನಾಗರೀಕ ಸಮಾಜದ ಒಡಬಡಿಕೆ ಮತ್ತು ರಾಮಾಯಣ ಮಹಾಭಾರತ ಅಷ್ಟೇನೂ ಸ್ವಸ್ಥವಲ್ಲದ, ಬಲಿಯದ, ಮೆದುಳಿನ ಕಲ್ಪನೆ ಅಂತಾನೆ ಇದನ್ನು ನಾನು ನಂಬುತ್ತೀನಿ, ಬೋಧಿಸುತ್ತೀನಿ.

ಪುಸ್ತಕ ಓದಿದ ನಂತರ ಮೊದಲು ಮನಸ್ಸಿಗೆ ಬಂದ ಭಾವ, ಷಂಡತನದ ಅರಿವೂ ಇಲ್ಲದ ಒಂದು ನಿರ್ಬೀಜ ತಳಿಯ ಭಾಗ ನಾನೂ ಹೌದಾ? ಈ ಷಂಡತನದ ಅರಿವಾಗಿ ಅದನ್ನು ತೊಡೆದುಕೊಳ್ಳುವ ಭಾವ ಶುರುವಾದರೆ, ಈ ಪುಸ್ತಕ ಸಾರ್ಥಕ.” 

ಹಿರಿಯ ಸಾಹಿತಿ ಡಾ.ನಾ.ಸೋಮೇಶ್ವರ ಇವರು ತಮ್ಮ ‘ಮನದ ಮಾತು' ಹೇಳುತ್ತ ನಮ್ಮ ಶಾಪ ವಿಮೋಚನೆ ಎಂದು? ಪ್ರಶ್ನೆ ಮಾಡುತ್ತಾರೆ. ದೇಶದ ಭವ್ಯ ಪರಂಪರೆಯನ್ನು ಮರೆತ ನಮ್ಮ ಪಾಪಕ್ಕೆ ಕ್ಷಮೆಯಿದೆಯೇ ಎನ್ನುವುದು ಇವರ ಪ್ರಶ್ನೆ. 

"ನಮ್ಮ ಪರಂಪರೆಯನ್ನು ನಾವು ಮರೆಯುವಂತೆ ಮಾಡಿದವರು ಯಾರು ಎನ್ನುವ ಪ್ರಶ್ನೆಯು ನಮ್ಮ ಮುಂದೆ ಬರುತ್ತದೆ. ಮೊದಲನೆಯದಾಗಿ ಭಾರತವನ್ನು ೧೧೪೫ ವರ್ಷಗಳ ಕಾಲ ಆಳಿದ ಮುಸ್ಲೀಮರು. ೧೯೦ ವರ್ಷಗಳ ಕಾಲ ಆಳಿದ ಬ್ರಿಟೀಷರು ಹಾಗೂ ಕಳೆದ ೧೦೦ ವರ್ಷಗಳಿಂದ ಭಾರತೀಯ ಸಂಸ್ಕೃತಿಯನ್ನು ವ್ಯವಸ್ಥಿತವಾಗಿ ನಾಶ ಮಾಡಿಕೊಂಡು ಬಂದಿರುವ ಕಮ್ಯೂನಿಸ್ಟರು. ಅವರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೆರವನ್ನು ನೀಡುತ್ತಿರುವ ಕಾಂಗ್ರೆಸ್ಸಿಗರು.

ವಾಸ್ತವ ಏನೆಂದರೆ, ಇವರೆಲ್ಲರೂ ಒಟ್ಟಿಗೆ ಎದುರಿಗೆ ನಿಂತರೂ ಅವರನ್ನು ಸದೆಬಡೆಯುವ ಸಾಮರ್ಥ್ಯವು ಭಾರತೀಯರಿಗೆ ಇತ್ತು. ಆದರೂ ಸಹಾ, ಭಾರತೀಯರು ಸಾವಿರಾರು ವರ್ಷಗಳಿಂದ ಇವರೆಲ್ಲರ ಗುಲಾಮರಾಗಿ ಬದುಕು ನಡೆಸಿದರು ಹಾಗೂ ನಡೆಸುತ್ತಿರುವರು, ಇದಕ್ಕೆ ಕಾರಣ ಬೇರಾರೂ ಅಲ್ಲ, ಸ್ವಯಂ ಭಾರತೀಯರು. ! ದೀಪದ ಕೆಳಗೆ ನೆರಳು ಇರುವಂತೆ, ಭಾರತೀಯರಲ್ಲಿ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಕೆಲವು ನೆರಳುಗಳಿವೆ. ಈ ನೆರಳುಗಳ ವಾಸ್ತವತೆಯನ್ನು ಅರಿಯಲು ಪ್ರಯತ್ನಿಸದೆ, ಆ ನೆರಳುಗಳ ನೆಪಎದದಲ್ಲಿ ಸಮಸ್ತ ಹಿಂದೂಧರ್ಮವನ್ನು ‘ಖಳನಾಯಕ'ನನ್ನಾಗಿ ಮಾಡಿರುವುದನ್ನು ಹಾಗೂ ಮಾಡುತ್ತಿರುವುದನ್ನು ಮೂಕ ಪ್ರೇಕ್ಷಕನಂತೆ ನೋಡುತ್ತಿರಬೇಕಾಗಿದೆ.” ಎಂದು ಬರೆಯುತ್ತಾರೆ ಡಾ. ನಾ.ಸೋಮೇಶ್ವರ ಇವರು.

ಪುಸ್ತಕದ ಲೇಖಕರಾದ ಸದ್ಯೋಜಾತ ಭಟ್ಟರು ತಮ್ಮ ನಾಲ್ಕು ಮಾತಿನಲ್ಲಿ ಬರೆದಿರುವುದು ಹೀಗೆ “ಹೌದು, ನಾಲ್ಕನೇ ಸಲ ನಾನು ನಿಮ್ಮೆಲ್ಲರ ಮುಂದೆ ಬಂದಿರುವೆ. ಮಿಹಿರಕುಲಿ ಎನ್ನುವ ಸ್ವಲ್ಪ ಜಿಡುಕಿನ ವಿಷಯವನ್ನು ಹಿಡಿದು ಹೊರಟು ಅಂತೂ ಒಂದು ಹಂತದಲ್ಲಿ ಮುಗಿಸಿದೆ. ಕೇವಲ ದೆಹಲಿಯನ್ನು ಕೇಂದ್ರಿತವಾಗಿಟ್ಟುಕೊಂಡು ಬರೆದ ವಿಷಯ, ಉಜ್ಜಯಿನಿಯನ್ನು ಸುತ್ತಾಡಿ ಬಂದಿದೆ. ಇಲ್ಲಿ ನಾನು ನನ್ನದೆನ್ನುವ ವಿಷಯಕ್ಕಿಂತ ಇದ್ದ ವಿಷಯವನ್ನು ಪ್ರಸ್ತಾಪಿಸಿದ್ದೇನೆ. ಈ ಪುಸ್ತಕ ಬರೆಯಲು ಅನೇಕ ಗ್ರಂಥಗಳನ್ನು ಬಳಸಿಕೊಂಡಿರುವೆ. ಎಪಿಗ್ರಾಫಿಯಾ ಇಂಡಿಕಾ, ಇಂಡಿಯನ್ ಆಂಟಿಕ್ವೆರಿ ಮತ್ತು ಇನ್ನೂ ಅನೇಕ ಗ್ರಂಥಗಳನ್ನು ಮತ್ತು ರಿಪೋರ್ಟ್ ಗಳನ್ನು ಬಳಸಿಕೊಂಡಿರುವೆ. ಅವರೆಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ವಿಶೇಷವಾಗಿ ವರಾಹ ಮಿಹಿರನ ಕುರಿತಾಗಿ ಬರೆಯುವಾಗ ಬೃಹಜ್ಜಾತಕವನ್ನು, ಜ್ಯೋತಿರ್ವಿದಾಭರಣವನ್ನೂ ಹಾಗೂ ವಿದ್ವಾನ್ ನಾಗೇಂದ್ರ ಭಟ್ಟ ಹಿತ್ಲಳ್ಳಿಯವರ ವರಾಹ ಮಿಹಿರ ಗ್ರಂಥದ ಮಾಹಿತಿಗಳನ್ನು ಬಳಸಿಕೊಂಡಿರುವೆ.” ಎಂದಿದ್ದಾರೆ.

ಮುಖಪುಟ ಚಿತ್ರ ಕೋಟೆಗದ್ದೆ ಎಸ್. ರವಿಯವರದ್ದು.  ೨೨೪ ಪುಟಗಳ ಈ ಪುಸ್ತಕವನ್ನು ಓದಿದರೆ ಭಾರತದ ಇತಿಹಾಸದ ಅಡಗಿರುವ ಸತ್ಯಗಳು ಕಾಣಿಸಬಹುದೇನೋ? ಪುಸ್ತಕದಲ್ಲಿ ಇರುವ ಮಾಹಿತಿಯ ಜೊತೆಗೆ ಉಲ್ಲೇಖಿಸಲಾದ ಶಾಸನಗಳ ಸೂಕ್ತವಾದ ಚಿತ್ರಗಳನ್ನು ನೀಡಲಾಗಿದೆ.