ಮೀನಾಕ್ಷಿ ಅಮ್ಮನ ‘ಪೀಟರ್ ಪಾದುಕೆಗಳು' !

ಪ್ರಖ್ಯಾತ ಮಧುರೈ ಮೀನಾಕ್ಷಿ ದೇವಸ್ಥಾನದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿರುವ ಈ ದೇವಸ್ಥಾನ ಹಲವು ಶತಮಾನಗಳಷ್ಟು ಹಳೆಯದ್ದು. ಈ ದೇವಸ್ಥಾನದ ಸುತ್ತ ಇರುವ ಹಲವಾರು ಗೋಪುರಗಳು ಬಹಳ ವೈಶಿಷ್ಟ್ಯಪೂರ್ಣವಾದದ್ದು. ಆ ಗೋಪುರಗಳಲ್ಲಿನ ಕೆತ್ತನೆಗಳು ನೋಡುಗರಲ್ಲಿ ಬಹಳ ಸೋಜಿಗವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ. ನಾನಿಲ್ಲಿ ಹೇಳಹೊರಟಿರುವುದು ಮೀನಾಕ್ಷಿ ದೇವಿ (ಪಾರ್ವತಿ) ಅಥವಾ ಮೀನಾಕ್ಷಿ ಅಮ್ಮನವರ ಪಾದುಕೆಯ ಬಗ್ಗೆ. ಈ ಪಾದುಕೆಯನ್ನು ಕಾಣಿಕೆಯಾಗಿ ನೀಡಿದ್ದು ಓರ್ವ ಕ್ರೈಸ್ತ, ಅದರಲ್ಲೂ ಬ್ರಿಟೀಷ್ ಸರಕಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ!
ಬ್ರಿಟೀಷರು ನಮ್ಮನ್ನು ಆಳುತ್ತಿದ್ದ ಸಂದರ್ಭದಲ್ಲಿ ಮಧುರೈಯಲ್ಲಿ ರೋಸ್ (ರೌಸ್) ಪೀಟರ್ ಎಂಬ ಓರ್ವ ವ್ಯಕ್ತಿ ಕಲೆಕ್ಟರ್ (ಜಿಲ್ಲಾಧಿಕಾರಿ) ಆಗಿ ಸೇವೆ ಸಲ್ಲಿಸುತ್ತಿದ್ದ. ೧೮೧೨ ರಿಂದ ೧೮೨೮ರ ತನಕ ಮಧುರೈಯಲ್ಲಿ ಈತ ಸೇವೆ ಸಲ್ಲಿಸಿದ್ದ ಎಂದು ದಾಖಲೆಗಳು ಹೇಳುತ್ತಿವೆ. ಈತ ಕ್ರೈಸ್ತ ಧರ್ಮೀಯನಾಗಿದ್ದರೂ ಆತ ಅನ್ಯ ಧರ್ಮಗಳನ್ನೂ ಸಮಾನ ದೃಷ್ಟಿಯಿಂದ ನೋಡುತ್ತಿದ್ದ. ಹಿಂದೂ ಧರ್ಮದ ಬಗ್ಗೆ ಆತನಿಗೆ ಬಹಳ ನಂಬಿಕೆ ಹಾಗೂ ಗೌರವ ಇತ್ತು. ಸ್ಥಳೀಯವಾಗಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈತ ಸಕ್ರಿಯವಾಗಿ ಭಾಗವಹಿಸುತ್ತಿದ್ದನು. ಇದರಿಂದಾಗಿ ಮಧುರೈನ ಜನರು ಇವನಿಗೆ ಬಹಳ ಗೌರವ ನೀಡುತ್ತಿದ್ದರು.
ರೋಸ್ ಪೀಟರ್ ನ ಮನೆ ಹಾಗೂ ಕಚೇರಿಯ ನಡುವೆ ಮೀನಾಕ್ಷಿ ಅಮ್ಮನವರ ದೇವಸ್ಥಾನ ಇತ್ತು. ಕಾನೂನಿನ ಶಿಷ್ಟಾಚಾರದ ಪ್ರಕಾರ ಜಿಲ್ಲಾಧಿಕಾರಿಯೇ ದೇಗುಲದ ನಿರ್ವಹಣಾಧಿಕಾರಿಯಾಗಿರುತ್ತಿದ್ದ. ಈ ಕಾರಣದಿಂದ ಮಧುರೈ ಮೀನಾಕ್ಷಿ ಅಮ್ಮನವರ ದೇಗುಲದ ಉಸ್ತುವಾರಿಯ ಹೊಣೆಯೂ ಈತನ ಮೇಲಿತ್ತು. ಈತನನ್ನು ಅಲ್ಲಿಯ ಜನರು ಪ್ರೀತಿಯಿಂದ ‘ಪೀಟರ್ ಪಾಂಡ್ಯನ್' ಎಂದು ಕರೆಯುತ್ತಿದ್ದರು.
ಪ್ರತೀ ದಿನ ಪೀಟರ್ ತನ್ನ ಮನೆಯಿಂದ ಕುದುರೆಯೇರಿ ಕಚೇರಿಗೆ ಹೋಗುವಾಗ ಮೀನಾಕ್ಷಿ ಅಮ್ಮನ ದೇವಾಲಯದ ಎದುರು ಕುದುರೆಯಿಂದ ಇಳಿದು ತನ್ನ ಶೂ ಹಾಗೂ ತಲೆಯ ಮೇಲಿದ್ದ ಟೋಪಿಯನ್ನು ತೆಗೆದು ಗೌರವ ಸಲ್ಲಿಸಿ ಮುಂದಕ್ಕೆ ಸಾಗುತ್ತಿದ್ದ. ದೇವರು ಯಾವುದೇ ರೂಪ, ಧರ್ಮದಾಗಿರಲಿ ನಾವು ಗೌರವ ಸಲ್ಲಿಸುವುದು ಅತೀ ಮುಖ್ಯ ಎಂದು ಆತನ ನಂಬಿಕೆಯಾಗಿತ್ತು.
ಹೀಗೊಂದು ದಿನ ಮಧುರೈ ನಗರದಲ್ಲಿ ಭಾರೀ ಮಳೆ ಸುರಿದು ವೈಗೈ ನದಿ ಉಕ್ಕಿ ಹರಿಯತೊಡಗಿತು. ಹೀಗೆ ಉಕ್ಕಿದ ನದಿ ಮಧುರೈ ಪಟ್ಟಣವನ್ನು ಪ್ರವೇಶಿಸಿತು. ರಾತ್ರಿಯ ಸಮಯವಾದುದರಿಂದ ಎಲ್ಲರೂ ನಿದ್ರೆಯಲ್ಲಿದ್ದರು. ಪೀಟರ್ ಸಹಾ ತನ್ನ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದ. ಅದೇ ಕ್ಷಣ ಗೆಜ್ಜೆಯ ಶಬ್ಧಕ್ಕೆ ಆತನಿಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಓರ್ವ ಪುಟ್ಟ ಹುಡುಗಿ ಅವನನ್ನು ‘ನನ್ನ ಹಿಂದೆ ಬಾ’ ಎಂದು ಕರೆಯುತ್ತಿದ್ದಳು. ಆಕೆ ದೇವಿಯಂತೆ ಸೀರೆ ಉಟ್ಟು, ಬಂಗಾರದ ಆಭರಣಗಳು ಹಾಗೂ ಕಾಲುಗಳಲ್ಲಿ ಗೆಜ್ಜೆಯನ್ನು ಧರಿಸಿದ್ದಳು. ಆಕೆಯ ಧ್ವನಿಗೆ ಮಂತ್ರ ಮುಗ್ಧನಾದಂತೆ ಪೀಟರ್ ಹಿಂದೆಯೇ ಹೋದ. ಆಕೆ ಮನೆಯಿಂದ ಹೊರಗೆ ಓಡಿದಳು. ಈತ ಹಿಂಬಾಲಿಸಿದ. ತಕ್ಷಣ ಆತನ ಹಿಂದೆ ದೊಡ್ಡ ಶಬ್ಧವಾಯಿತು. ಹಿಂದಿರುಗಿ ನೋಡಿದಾಗ ಆತನ ಮನೆ ನೆರೆನೀರಿನಲ್ಲಿ ಕೊಚ್ಚಿಹೋಗಿತ್ತು. ಒಂದು ವೇಳೆ ಆತ ಮನೆಯಿಂದ ಹೊರಗೆ ಬಾರದೇ ಹೋಗಿದ್ದರೆ, ಮನೆಯ ಜೊತೆ ನೆರೆನೀರಿನಲ್ಲಿ ಈತನೂ ಕೊಚ್ಚಿ ಹೋಗುತ್ತಿದ್ದ.
ಪೀಟರ್ ತನ್ನನ್ನು ಕರೆದ ಹುಡುಗಿ ಯಾರು ಎಂದು ಹುಡುಕಾಡಿದ. ಆದರೆ ಅಷ್ಟರಲ್ಲೇ ಆಕೆ ಗಾಳಿಯಲ್ಲಿ ಲೀನಳಾಗಿ ಹೋಗಿದ್ದಳು. ಆದರೆ ಪೀಟರ್ ಗೆ ಆಕೆಯ ಉಡುಗೆ ತೊಡುಗೆ, ಗೆಜ್ಜೆಯ ನಾದವನ್ನು ಮರೆಯಲಾಗಲಿಲ್ಲ. ಅವನಿಗೆ ಆಕೆಯ ಪಾದಗಳು ಬರಿದಾಗಿದ್ದವು ಎಂದು ಅನಿಸಿತು. ಸಾಕ್ಷಾತ್ ಮೀನಾಕ್ಷಿ ಅಮ್ಮನವರೇ ನನ್ನನ್ನು ರಕ್ಷಿಸಲು ಪುಟ್ಟ ಹುಡುಗಿಯ ರೂಪದಲ್ಲಿ ಬಂದಿದ್ದರು ಎಂದು ಅನಿಸಿತು. ತಾನು ದಿನಾ ತೋರುತ್ತಿದ್ದ ಗೌರವಕ್ಕೆ ಅಮ್ಮನವರು ನನ್ನನ್ನು ಸಾವಿನಿಂದ ರಕ್ಷಿಸಿದರು ಎಂದು ನಂಬಿದ ಆತ, ದೇವರಿಗೆ ತನ್ನಿಂದ ಆದ ಕಾಣಿಕೆಯನ್ನು ನೀಡಬೇಕೆಂದು ಬಯಸಿದ.
ಆತ ದೇವಾಲಯದ ಅರ್ಚಕರನ್ನು ಭೇಟಿಯಾಗಿ ತನ್ನ ಮನೋಭಿಲಾಷೆಯನ್ನು ತೋರಿಕೊಂಡ. ‘ತಾನು ದೇವರಿಗಾಗಿ ಬಂಗಾರದ ಪಾದುಕೆ (ಶೂ) ಗಳನ್ನು ನಿರ್ಮಿಸಿ ಕಾಣಿಕೆಯಾಗಿ ನೀಡುವೆ' ಎಂಬ ಆತನ ಕೋರಿಕೆಯನ್ನು ಅರ್ಚಕರು ಮನ್ನಿಸಿದರು. ತನ್ನ ಮಾತಿನಂತೆ ಆತ ವಜ್ರ ಖಚಿತ ಬಂಗಾರದ ಪಾದುಕೆಯನ್ನು ತಯಾರಿಸಿ ಮೀನಾಕ್ಷಿ ಅಮ್ಮನವರ ಚರಣ ಕಮಲಗಳಿಗೆ ಅರ್ಪಿಸಿದ.
ಈ ಪಾದುಕೆಗಳಲ್ಲಿ ೪೧೨ ಮಾಣಿಕ್ಯಗಳು, ೭೨ ಪಚ್ಚೆ ಮತ್ತು ೮೦ ವಜ್ರಗಳನ್ನು ಅಳವಡಿಸಲಾಗಿವೆ. ಈಗಲೂ ಈ ಪಾದುಕೆಗಳು ಮಧುರೈನ ಮೀನಾಕ್ಷಿ ಅಮ್ಮನ ದೇವಸ್ಥಾನದಲ್ಲಿವೆ. ಆ ಪಾದುಕೆಗಳಲ್ಲಿ ಆತನ ಹೆಸರು ‘ಪೀಟರ್' ಎಂದು ಅಚ್ಚೊತ್ತಲಾಗಿದೆ. ರೋಸ್ ಪೀಟರ್ ದೇವಿಯ ಮೇಲಿನ ತನ್ನ ನಂಬಿಕೆಯ ದ್ಯೋತಕವಾಗಿ ನೀಡಿದ ಪಾದುಕೆಯನ್ನು ‘ಪೀಟರ್ ಪಾದುಕಮ್' ಎಂದು ಕರೆಯಲಾಗುತ್ತದೆ.
ಈ ಘಟನೆ ನಡೆದು ೨ ಶತಮಾನಗಳು (೧೮೧೮) ಕಳೆದರೂ ಕ್ರೈಸ್ತ ಧರ್ಮವನ್ನು ನಂಬುವ ಬ್ರಿಟೀಷನೋರ್ವನ ಹಿಂದೂ ಧರ್ಮದ ಕುರಿತಾದ ಆಸ್ಥೆ ಹಾಗೂ ನಂಬಿಕೆಯ ಗುರುತಾಗಿ ಜನಜನಿತವಾಗಿದೆ. ಈಗಲೂ ಪ್ರತೀ ವರ್ಷ ದೇಗುಲದಲ್ಲಿ ನಡೆಯುವ ಚೈತ್ರ ಉತ್ಸವದ ಸಂದರ್ಭದಲ್ಲಿ ಮೀನಾಕ್ಷಿ ಅಮ್ಮನವರ ಉತ್ಸವ ಮೂರ್ತಿಗೆ ಈ ಪಾದುಕೆಗಳನ್ನು ತೊಡಿಸಲಾಗುತ್ತದೆ. ಅದೇ ರೀತಿ ತನ್ನ ನಂಬಿದ ಭಕ್ತರು ಯಾವುದೇ ಧರ್ಮ, ದೇಶದವರಾಗಿದ್ದರೂ ಮೀನಾಕ್ಷಿ ಅಮ್ಮನವರು ಆಶೀರ್ವಾದ ನೀಡುತ್ತಾರೆ ಎಂಬ ಪ್ರತೀತಿ ಇಲ್ಲಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ