ಮೀನಿಗೆ ಮುತ್ತಿಟ್ಟದ್ದು ಪ್ರೇಯಸಿಯಲ್ಲ..ಸಾವಿನ ರೂಪದಲ್ಲಿ ಹಾವು!

ಮೀನಿಗೆ ಮುತ್ತಿಟ್ಟದ್ದು ಪ್ರೇಯಸಿಯಲ್ಲ..ಸಾವಿನ ರೂಪದಲ್ಲಿ ಹಾವು!

ಬರಹ

‘ಸರ್.. ಹೇಳಿ-ಕೇಳಿ ಅದು ಮಂಡಿಹಾಳ ಕೆರಿ. ‘ಮಂಡಿ’ ಹಾಳಾದವರು ಮಾತ್ರ ಅಲ್ಲಿಗೆ ಹೋಗಬೇಕ್ರಿ..!? ನೀವು ಹೋಗೋದಲ್ದ ನನ್ನನ್ನೂ ಬ್ಯಾರೆ ಕರಕೊಂಡ ಹೋಗತೇನಿ ಅಂತೀರಿ’ ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬೇರೆ ಊರಿಗೆ ಹೋಗೋಣ ಎಂದೂ ತಮ್ಮ ವಾದ ಮಂಡಿಸಲು ಅನುವಾಗಿದ್ದರು. ಕಾರಣ.. ‘ಅಲ್ಲೇನೂ ಮಣ್ಣು ಸಿಗುದುಲ್ಲ. ಕಲ್ಲು ಮಾತ್ರ’ ಎಂಬುವುದು ಅವರ ವಾದ.
ಆದರೆ ಈ ಪ್ರವಾಸ ನಮಗೊಂದು ಅವಿಸ್ಮರಣೀಯ ಪ್ರಸಂಗ. ಬಹುಶ: ನಮ್ಮ ಜೀವಿತಾವಧಿಯಲ್ಲಿ ಮತ್ತೊಮ್ಮೆ ಆ ಪ್ರಸಂಗವನ್ನು ನಾವು ಅನುಭವಿಸಲಾರೆವು. ಅನಾಯಾಸವಾಗಿ ಮತ್ತು ಅಷ್ಟೇ ಆಯಾಚಿತವಾಗಿ ಬಣ್ಣ-ಬಣ್ಣದ ನುಡಿಚಿತ್ರ ನಮ್ಮೆದುರಿಗೆ ಪ್ರತ್ಯಕ್ಷವಾಗಿತ್ತು. ಬಿರು ಬಿಸಿಲಿನಲ್ಲಿ ಬಸವಳಿದಿದ್ದ ನಮಗೆ ತಂಪೆರೆದಂತಹ ಅನುಭವ. ತೊಟ್ಟು ಹನಿ ನೀರು ಸಿಗುವ ಆಶಾವಾದಿತ್ವ ಉಡಿಗಿರುವ ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕಂತೆ ‘ಥ್ರಿಲ್’ ನಾವು ಅನುಭಸಿದ್ದೆವು. ನಮ್ಮ ರೊಟ್ಟಿ ಜಾರಿ ತುಪ್ಪದೊಳಗೆ ಬಿದ್ದಿತ್ತು!
ಗೆಳೆಯ ಛಾಯಾಪತ್ರಕರ್ತ ಗೋವಿಂದರಾಜ್ ಜವಳಿ ಹಾಗು ನಾನು ಗ್ರಾಮೀಣ ಕೆರೆಗಳ ಪುನರುಜ್ಜೀವನ ಕುರಿತು ವಿಶೇಷ ಮಾಹಿತಿಗಳನ್ನು ಸಂಗ್ರಹಿಸಲು ತೆರಳಿದ್ದೆವು. ಧಾರವಾಡದಿಂದ ೧೩ ಕಿ.ಮೀ ದೂರದಲ್ಲಿರುವ ಮಂಡಿಹಾಳ ಕೆರೆಗೆ ನಮ್ಮ ಪ್ರವಾಸ ದ್ವಿಚಕ್ರ ವಾಹನದ ಮೇಲೆ.

ರಸ್ತೆ ಗುಂಡಿಗಳಲ್ಲಿತ್ತು. ಮೊಣಕಾಲುಗಳ ವರೆಗಿನ ತೆಗ್ಗುಗಳು ನಮ್ಮ ಸೊಂಟ ಬಾಗಿಸಿದ್ದವು. ಆಗಾಗ ನಾಗಾಲೋಟದಲ್ಲಿ ಧೂಳೆಬ್ಬಿಸಿ ಸಾಗುತ್ತಿದ್ದ ಖಡಿ ಟ್ರ್ಯಾಕ್ಟರ್ ಗಳು ಕಣ್ಣು, ಮೂಗು, ಬಾಯಿಗಳಲ್ಲಿ ಯಥೇಚ್ಛವಾಗಿ ಮಣ್ಣು ಸುರಿಯುತ್ತಿದ್ದವು. ಖೆಮ್ಮುತ್ತ, ಕ್ಯಾಕರಿಸುತ್ತ ಅಲ್ಲಲ್ಲಿ ಉಗುಳುತ್ತ ‘ಮಂಡಿ’ ಹಾಳ ಮಾಡಿಕೊಂಡು ಕೆರೆಯಮುಂದೆ ನಿಂತಾಗ ಜೀವ ಹಣ್ಣಾಗಿತ್ತು.
ಅಕ್ಕಪಕ್ಕದಲ್ಲಿ ಅತ್ಯಂತ ಆಳವಾದ ಕಲ್ಲುಗಣಿಗಳು. ದೊಡ್ಡ ಗುಡ್ಡಗಳೆಲ್ಲ ಕರಗಿ ಆಳವಾದ ಪ್ರಪಾತಗಳಾಗಿ ಪರಿವರ್ತನೆ! ಅಲ್ಲಲ್ಲಿ ಅಂತರ್ಜಲ ಮೈದುಂಬಿತ್ತು. ಹಲವೆಡೆ ಸೆಲೆಗಳು ಪುಟಿದೇಳುತ್ತ ಕ್ವಾರಿಗಳಲ್ಲಿ ಕೆರೆ ನಿರ್ಮಿಸಿದ್ದವು. ಕಲ್ಲು ಕಟೆಯುವ ಕೆಲಸಕ್ಕೆ ಧಕ್ಕೆಯಾಗದಂತೆ ದೊಡ್ಡ ಮೋಟಾರ್ ಗಳನ್ನು ಅಳವಡಿಸಿ ಆ ನೀರನ್ನು ರಸ್ತೆಗೆ ಕಾಲುವೆಯ ತೆರದಿ ಹರಿಸಲಾಗುತ್ತಿತ್ತು. ದೊಡ್ಡ ‘ಕಾಂಕ್ರೀಟ್ ಮಿಕ್ಸಿಂಗ್’ ಮಶೀನ್ ಗಳು ಬಂಡೆ ಒಡೆದು ಖಡಿ ಉತ್ಪಾದಿಸಲು ಕಾರ್ಯ ಪ್ರವೃತ್ತವಾಗಿದ್ದವು. ಹಿಮಾಲಯದಲ್ಲಿ ಕಾಣಸಿಗುವ ಬಿಳಿ ಮೋಡದಂತೆ ಬಿಳಿ ಧೂಳೆದ್ದು ಇಡಿ ಕಂದಕವನ್ನು ಆಗಾಗ ಆವರಿಸುತ್ತಿತ್ತು.
ಈ ಅಸಹನೀಯ ವಾತಾವರಣ ಉಸಿರುಗಟ್ಟಿಸುವಂತಿತ್ತು. ಅಷ್ಟರಲ್ಲಿ ಕ್ವಾರಿ ಮ್ಯಾನೇಜರ್ ಹನುಮಂತಪ್ಪ ಅಲ್ಲಿಗೆ ಬಂದರು. ನಮ್ಮ ಪರಿಚಯ ಮಾಡಿಕೊಂಡು, ‘ರಸ್ತೆಗೆ ಹೀಗೆ ನೀರು ಹರಿಸುವ ಬದಲು ಮಂಡಿಹಾಳ ಕೆರೆಗಾದರೂ ಸಾಗಿಸಿ, ಊರ ಜನ ಬಳಸುವಂತೆ ಮಾಡಬಹುದಿತ್ತಲ್ಲ?’ ಎಂದೆ. ‘ಅಲ್ಲಿಯ ವರೆಗೆ (೫೦ ಫೂಟ್) ಪೈಪ್ ಹಾಕುವುದು ವೆಚ್ಚದಾಯಕ. ಸಾಲದ್ದಕ್ಕೆ ಈ ಕೆರೆ ಊರಿನಿಂದ ೨ ಕಿ.ಮೀ ದೂರದಲ್ಲಿ ಇರುವುದರಿಂದ ಯಾರೂ ಸಹ ಇಲ್ಲಿಗೆ ಬಂದು ನೀರು ಹೊತ್ತೊಯ್ಯುವುದಿಲ್ಲ. ಕೇವಲ ದನ-ಕರುಗಳಿಗೆ ಕುಡಿಯಲು ಹಾಗು ಬಹಿರ್ದೆಸೆಗೆ ಹೋಗಲು ಬಳಸಲಾಗುತ್ತದೆ. ಅಲ್ಲಲ್ಲಿ ಹಾವುಗಳಿವೆ. ಜೊತೆಗೆ ಕೆರೆಯ ಒಡ್ಡಿನ ಗುಂಟ ಈಗ ಮಣ್ಣು ಹಾಕಿ ಭದ್ರ ಪಡಿಸಲಾಗುತ್ತಿದೆ. ಇಡೀ ಕೆರೆಯ ನೀರು ರಾಡಿ ನೀರಾಗಿ ಪರಿವರ್ತನೆಗೊಂಡಿದೆ’ ಎಂದರು.
ಮಂಡಿಹಾಳ ಕೆರೆ ನೋಡಬೇಕು ಎಂಬ ಕುತೂಹಲ ಆಗಲೇ ಧೂಳಿಪಟವಾಗಿತ್ತು. ಇಲ್ಲಿಗೆ ನಮ್ಮ ಕನಸಿನ ಗೋರಿ ಕಟ್ಟಿದಂತಾಯಿತು. ಗೆಳೆಯ ಗೋವಿಂದ ಪಟ್ಟ ಕಷ್ಟಕ್ಕೆ ಬೆಲೆ ಸಿಗಲಿಲ್ಲ ಎಂದು ತುಸು ಸಿಟ್ಟಿನಲ್ಲಿಯೇ ಇದ್ದರು. ಆದರೂ ನಾನು ಮನವೊಲಿಸಿ ಕೆರೆಯ ಛಾಯಾಚಿತ್ರ ಕ್ಲಿಕ್ಕಿಸಲು ಹೇಳಿದೆ. ದಂಡೆಯ ಮೇಲೆ ನಿಲ್ಲುತ್ತಲೇ ನಾಲ್ಕಾರು ಕಪ್ಪೆಗಳು ನೀರಿನಲ್ಲಿ ಅಲೆಯ ಉಂಗುರ ಮೂಡಿಸಿದವು. ‘ಅಯ್ಯೋ’ ಎಂದು ಉದ್ಗಾರ ತೆಗೆಯುವ ಮುಂಚೆ ನಾವು ಕಂಡಿದ್ದು ಕಪ್ಪೆಗಳಲ್ಲ ಅವು ಹಾವುಗಳು ಎಂದು ಮನವರಿಕೆಯಾಯಿತು. ಅತ್ಯಂತ ಜಾಗರೂಕರಾಗಿ ಕೆರೆಯ ಒಂಡಿಯ ಮೇಲೆ ಸಾಗುತ್ತಿದ್ದೆವು. ಶಸ್ತ್ರ ಸಜ್ಜಿತ ಯೋಧನಂತೆ ಕ್ಯಾಮೆರ ಕ್ಲಿಕ್ಕಿಸುವ ಆಂಗಲ್ ನಲ್ಲಿ ರೆಡಿಯಾಗಿಟ್ಟು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದರು ಗೋವಿಂದ.
ತಲೆ ಎತ್ತಿ ನಿಂತಿದ್ದ ನಾಗರ ಹಾವೊಂದು ನೀರಿನಲ್ಲಿದ್ದ ಮೀನವನ್ನು ಕಬಳಿಸಲು ಗಾಳ ಹಾಕಿತ್ತು. ಮೀನು ಸಹ ಅಷ್ಟೇ ಯೋಗ್ಯವಾದ ಸ್ಪರ್ಧೆ ಅದಕ್ಕೆ ಒಡ್ಡಿತ್ತು. ತುಸು ದೂರದಲ್ಲಿ ಗೋವಿಂದ್ ಬೆಳವಣಿಗೆಗಳನ್ನು ಕ್ಲಿಕ್ಕಿಸಲು ಸನ್ನದ್ಧರಾದರು. ೨-೩ ಬಾರಿ ಹಾವು ನೀರಿನಲ್ಲಿ ಜೋರಾಗಿ ತನ್ನ ಹೆಡೆ ಎತ್ತಿ ಹೊಡೆಯಿತು. ಆದರೆ ಜಾಣ ಮೀನು ಹಾವಿನ ಹಲ್ಲಿನ ಗಾಳಕ್ಕೆ ಸಿಗದೇ ನೀರು ಮಾತ್ರ ದಂಡೆಗೆ ಸಿಡಿಯಿತು. ವಿಮಾನದ ‘ಸ್ಪ್ಲ್ಯಾಷ್ ಲ್ಯಾಂಡಿಂಗ್’ ನೆನಪಿಸುವಂತಿತ್ತು ಹಾವಿನ ಪ್ರಯತ್ನ. ಸುಮಾರು ೩೦ ನಿಮಿಷಗಳ ಕಾಲ ಈ ಆಟ ನಡೆಯಿತು. ಕೊನೆಗೆ ಒಮ್ಮೆ ಹಾವು ಮೀನನ್ನು ಕಚ್ಚುವಲ್ಲಿ ಯಶಸ್ವಿಯಾತು. ಗಾಳಕ್ಕೆ ಸಿಕ್ಕ ಮೀನಿನಂತೆ ಒದ್ದಾಡುತ್ತ ಮೀನು ಕೆರೆಯ ಆಳಕ್ಕೆ ಜಾರಿತು. ಸರಸರನೇ ತನ್ನ ಬಿಲದಿಂದ ಹೊರಬಂದ ಹಾವು ಲೀಲಾಜಾಲವಾಗಿ ಈಜುತ್ತ ಬೇಟೆ ಹೆಕ್ಕಲು ಆಳಕ್ಕೆ ಇಳಿಯಿತು. ಈಗ ಕಾಯುವ ಸರದಿ ನಮ್ಮದು. ನಮ್ಮ ತಾಳ್ಮೆಯ ಪರೀಕ್ಷೆ ಮಾಡುವಂತೆ ಮಿರಿ ಮಿರಿ ಮಿಂಚುತ್ತಿದ್ದ ಹಾವು ಅರ್ಧ ಗಂಟೆಯ ನಂತರ ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಕೆರೆಯ ಒಡ್ಡಿಗೆ ಬಂತು.
ಟೆಲಿ ಲೆನ್ಸ್ ಹಾಕಿ ಗೋವಿಂದ ಸಿದ್ಧರಾದರು. ಗೋಧೂಳಿಯ ಹೊತ್ತು. ಪಡುವಣ ಕೆಂಪಾಗಿ ಸೂರ್ಯ ದಿನದ ಬವಣೆಯಿಂದ ಬೇಸತ್ತು ಗುಡ್ ಬೈ ಹೇಳುವ ತವಕದಲ್ಲಿದ್ದ. ನೂರಾರು ಆಕಳುಗಳು ನೀರು ಕುಡಿಯಲು ಗೋಪಾಲಕನೊಂದಿಗೆ ಕೆರೆಯತ್ತ ಧಾವಿಸಿ ಬರುತ್ತಿದ್ದವು. ಇತ್ತ ಹಾವು ಮೀನನ್ನು ಬಾಯಲ್ಲಿ ಕಚ್ಚಿಕೊಂಡು ನುಂಗಲು ಹರಸಾಹಸ ಪಡುತ್ತಿತ್ತು. ಅರ್ಧ ನುಂಗಿತ್ತು..ಅದರ ಈಜು ರೆಕ್ಕೆಗಳು ಹಾಗು ಬೆನ್ನಿನ ಮೇಲಿನ ರೆಕ್ಕೆಗಳು ಹಾವಿನ ಬಾಯಿಗೆ ನಡುತ್ತ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಮಾಡಿತ್ತು. ಆದರೂ ಪ್ರಯತ್ನ ಬಿಡದೇ ಮೀನು ನುಂಗಲು ಹಾವು ಪ್ರಯತ್ನಿಸುತ್ತಿತ್ತು. ನಾಲ್ಕಾರು ಬಾರು ಹೆಡೆಯೆತ್ತಿ ನೀರಿನಲ್ಲಿ, ಕೆಸರಿನ ದಂಡೆಗೆ ಅಪ್ಪಳಿಸಿತು. ೪೦ಕ್ಕೂ ಹೆಚ್ಚು ಚಿತ್ರಗಳನ್ನು ವಿವಿಧ ಭಂಗಿಯಲ್ಲಿ ಕ್ಲಿಕ್ಕಿಸುವಲ್ಲಿ ಗೋವಿಂದ ಯಶಸ್ವಿಯಾಗಿದ್ದರು.
ಬಾಲಬಿಟ್ಟು ಮೀನಿನ ಮೂತಿಗೆ ಮುತ್ತಿಟ್ಟಂತೆ ಕಚ್ಚಿ ನುಂಗಲು ಹಾವು ಇತ್ತ ಸಿದ್ಧವಾಗಿತ್ತು. ಅತ್ತ ಸಾವು ಹಾವಿನ ರೂಪದಲ್ಲಿ ಮೀನಿಗೆ ಮುತ್ತಿಟ್ಟಿತ್ತು. ಕೊನೆಗೆ ದನಗಳ ದಟ್ಟಣೆ ಹೆಚ್ಚುತ್ತಿದ್ದಂತೆ ಮೀನನ್ನು ‘ಕೆರೆಯ ಮೀನನು ಕೆರೆಗೆ ಚೆಲ್ಲಿ’ ಎಂಬಂತೆ ಉಪಾಯಗಾಣದೇ ಹಾವು ಬಿಟ್ಟು ಮತ್ತೆ ತನ್ನ ಬಿಲ ಸೇರಿತು. ನಮ್ಮ ಆಯಾಸವೆಲ್ಲ ಮರೆತು ಈ ಕಾಡಿನ ಬೇಟೆ ನೋಡಿದ ಖುಷಿಯಲ್ಲಿ ಬೈಕ್ ನತ್ತ ಹೆಜ್ಜೆ ಹಾಕಿದೆವು. ಅನಾಯಾಸವಾಗಿ, ಆಯಾಚಿತವಾಗಿ ಒದಗಿಬಂದ ಪ್ರಸಂಗ ನಮ್ಮನ್ನು ನಿಬ್ಬೆರಗಾಗಿಸಿತ್ತು. ಭೂಮಿಯ ಮೇಲೆ ತಾನು ಹುಟ್ಟಿಸಿದ ಎಲ್ಲ ಪಶು-ಪಕ್ಷಿಗಳಿಗೆ ಸರ್ವಶಕ್ತನಾದ ಆತ ಅಲ್ಲಲ್ಲಿ ಆಹಾರ ಒದಗಿಸಿದ್ದಾನೆ ಎಂಬ ಮಾತು ನಮಗೆ ಸತ್ಯವಾಗಿ ಗೋಚರಿಸಿತ್ತು.