ಮೀನು ತಿನ್ನುವ ಕೊಳದ ಬಕ

ಮೀನು ತಿನ್ನುವ ಕೊಳದ ಬಕ

“ರಾವೋ ರಾ ಕೊರುಂಗು ರಾವೇರೆನೇ ಕೇನುಜಲೇ....” ಈ ತುಳು ಹಾಡನ್ನು ನೀವೆಲ್ಲಾ ಕೇಳಿರ್ತೀರಿ. ಅಲ್ಲಿ ಹೇಳಿದ ಕೊರುಂಗು ಅಂದರೆ ಇದೇ ಹಕ್ಕಿ. ಸಣ್ಣಪುಟ್ಟ ತೋಡಿನ ಬದಿಗಳಲ್ಲಿ, ಕೆರೆಗಳ ಹತ್ತಿರ, ಗದ್ದೆಗಳ ಸುತ್ತ, ನೀವು ಈ ಹಕ್ಕಿಯನ್ನು ಖಂಡಿತಾ ನೋಡಿರುತ್ತೀರಿ. 

ಈಗ ಅಂದ್ರೆ ಮಳೆಗಾಲದಲ್ಲಿ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ. ಮರಗಳ ಮೇಲೆ ಒಣಗಿದ ಕಡ್ಡಿಗಳನ್ನು ಬಳಸಿ ಗೂಡು ಮಾಡುತ್ತವೆ. ವಿಶೇಷ ಅಂದ್ರೆ ಪೇಟೆಯ ನಡುವೆ ಮರಗಳ ಮೇಲೆ ಗೋವಕ್ಕಿಗಳ ಜೊತೆಗೆ ಗೂಡು ಮಾಡುವುದನ್ನೂ ನಾನು ನೋಡಿದ್ದೇನೆ. ಮಳೆಗಾಲದಲ್ಲಿ ಇದರ ಬೆನ್ನು ಕಡು ಕಂದು ಬಣ್ಣಕ್ಕೆ ತಿರುಗುತ್ತದೆ. ತಿಳಿಕೆಂಪು ಬಣ್ಣದ ಕಾಲುಗಳು, ಹೊಟ್ಟೆಯ ಭಾಗ ಬಿಳಿ ಬಣ್ಣ, ತಲೆಯ ಮೇಲೊಂದು ಬಿಳಿ ಜುಟ್ಟು, ಕೊಕ್ಕಿನ ತುದಿ ಬಣ್ಣದಲ್ಲಿ ಅದ್ದಿದ ಬ್ರಷ್ ನ ಹಾಗೆ ಕಪ್ಪು ಬಣ್ಣ. ಇವು ಈ ಹಕ್ಕಿಯ ಗುರುತುಗಳು. ಮಳೆಗಾಲ ದಾಟಿದ ಮೇಲೆ ಇವುಗಳು ಮಣ್ಣಿನ ಬಣ್ಣ ಅಂದ್ರೆ ತಿಳಿ ಕಂದು ಬಣ್ಣಕ್ಕೆ ತಿರುಗುತ್ತವೆ.  

ಎಲ್ಲಾದ್ರೂ ಸಣ್ಣ ನೀರಿನ ಆಶ್ರಯ ಇರುವಲ್ಲಿ ಕಾಲು ಮುಳುಗುವಷ್ಟು ನೀರಿನಲ್ಲಿ ಅಥವಾ ಅದರ ಬದಿಯಲ್ಲಿ ನೀವಿದನ್ನು ಸುಲಭವಾಗಿ ನೋಡಬಹುದು. ಕುತೂಹಲಕ್ಕಾದರೂ ಗಮನಿಸಿ. ನೀರಿನ ಬದಿಯಲ್ಲಿ ಕತ್ತು ಮುಂದೆ ಮಾಡಿ ಸ್ವಲ್ಪವೂ ಅಲುಗಾಡದೆ ತಪಸ್ಸಿಗೆ ನಿಂತಂತೆ ನಿಂತಿರುತ್ತದೆ. ಮೀನು ಕಂಡ ತಕ್ಷಣ ತನ್ನ ಚೂಪಾದ ಕೊಕ್ಕುಗಳನ್ನು ಬಾಣದಹಾಗೆ ಬಳಸಿ ತಕ್ಷಣ ಹಿಡಿದುಬಿಡುತ್ತದೆ. ಇದು ಮೀನು ಹಿಡಿಯೋದನ್ನು ನೋಡುವುದೇ ಚಂದ. 

ಬೇಸಗೆಯಲ್ಲಿ ನೀರು ಕಡಿಮೆ ಆದಾಗ ಗದ್ದೆಗಳಲ್ಲಿ, ಹುಲ್ಲಿನ ನಡುವೆ, ಒಣಗಿದ ಭೂಮಿಯಲ್ಲಿ ಹಾತೆ, ಮಿಡತೆ ಮುಂತಾದ ಕೀಟಗಳನ್ನು ಹಿಡಿದು ತಿನ್ನುತ್ತದೆ. ಕೆಲವೊಮ್ಮೆ ಸಣ್ಣ ಕಪ್ಪೆ, ಓತಿಕ್ಯಾತ, ಹಾವುರಾಣಿ (ಅರಣೆ) ಗಳನ್ನೂ ಹಿಡಿದು ತಿನ್ನುತ್ತವೆ.

 ಮುಂದಿನ ಬಾರಿ ಇದನ್ನು ನೋಡಿದಾಗ ಈ ಹಕ್ಕಿ ಏನು ಮಾಡ್ತಾ ಇರ್ತದೆ, ನೀವಿದನ್ನು ಎಲ್ಲಿ ನೋಡಿದ್ರಿ, ಇದು ಏನನ್ನು ಹಿಡಿದು ತಿನ್ತಾ ಇತ್ತು, ಅಂತ ಗಮನಿಸಿ ಮತ್ತು ಬರೆದಿಡಿ. ನಿಮ್ಮ ಮನೆ ಹತ್ರ ಮರದಲ್ಲಿ ಈ ಹಕ್ಕಿ ಗೂಡು ಮಾಡಿದ್ರೆ ಅದಕ್ಕೆ ಭಯ ಆಗದ ಹಾಗೆ ಮರೆಯಲ್ಲಿ ನಿಂತು ಗಮನಿಸಿ. ಅದು ಮರಿಗಳಿಗೆ  ಏನೇನು ಆಹಾರ ತಂದು ಕೊಡುತ್ತದೆ, ಗೂಡುಕಟ್ಟಲು ಏನೇನನ್ನು ಬಳಸುತ್ತದೆ ಎಂದು ಗಮನಿಸಿ. ನಿಮ್ಮ ಮೊಬೈಲ್ ಕ್ಯಾಮರಾದಲ್ಲಿ ಇದರ ಫೋಟೋ ತೆಗೀಲಿಕ್ಕೆ ಆಗ್ತದಾ ನೋಡಿ. ಸಾಧ್ಯ ಆಗೋದಾದ್ರೆ ಈ ಹಕ್ಕಿಯ ಚಿತ್ರ ಬರೀಲಿಕ್ಕೆ ಪ್ರಯತ್ನ ಮಾಡಿ.. 

ಹಾಂ.. ಹೇಳೋದನ್ನೇ ಮರೆತಿದ್ದೆ.. 

ಈ ಹಕ್ಕಿಯ ಕನ್ನಡ ಹೆಸರು : ಕೊಳದ ಬಕ

ENGLISH Name : Indian Pond Heron

Scientific name : Ardeola grayii

ನಿಮ್ಮ ಊರಿನಲ್ಲಿ ಈ ಹಕ್ಕಿಗೆ ಏನಂತ ಕರೀತಾರೆ, ನಂಗೂ ಹೇಳ್ತೀರಾ?

ಚಿತ್ರ – ಬರಹ : ಅರವಿಂದ ಕುಡ್ಲ, ಬಂಟ್ವಾಳ