ಮೀಸಲಾತಿ ಬಗ್ಗೆ ಒಂದಿಷ್ಟು...

ಮೀಸಲಾತಿ ಬಗ್ಗೆ ಒಂದಿಷ್ಟು...

ಪ್ರತಿಕ್ರಿಯಿಸುವ ಮುನ್ನ...

ಕೆಲವು ಅಸಮಾನತೆಗಳನ್ನು ಹೋಗಲಾಡಿಸಲು ವ್ಯವಸ್ಥೆ ರೂಪಿಸಿಕೊಂಡ ಒಂದು ವಿಧಾನ ಮೀಸಲಾತಿ.

ಭಾರತದಲ್ಲಿ ಬಹುಮುಖ್ಯ ಮೀಸಲಾತಿಗಳು..

ಜಾತಿ ಆಧಾರಿತ,

ಲಿಂಗ ಆಧಾರಿತ,( ಗಂಡು ಹೆಣ್ಣು ಮತ್ತು ಇದೀಗ ದ್ವಿಲಿಂಗಿ )

ಪ್ರದೇಶದ ಆಧಾರಿತ ( ನಗರ ಮತ್ತು ಗ್ರಾಮೀಣ )

ಅಂಗ ವೈಕಲ್ಯ ಆಧಾರಿತ,

ಆರ್ಥಿಕ ಪರಿಸ್ಥಿತಿ ಆಧಾರಿತ...

ಶಿಕ್ಷಣ, ಉದ್ಯೋಗ, ಭಡ್ತಿ, ಚುನಾವಣೆ, ಪ್ರವೇಶ, ಪ್ರಯಾಣ, ಸೌಲಭ್ಯ ಹಂಚಿಕೆ ಮುಂತಾದ ‌ವಿಷಯಗಳಲ್ಲಿ ಮೀಸಲಾತಿ ನೀಡಲಾಗುತ್ತದೆ. ಸಾಮಾಜಿಕ  ಆರ್ಥಿಕ ಶೈಕ್ಷಣಿಕ ಮತ್ತು ಪ್ರಾಕೃತಿಕ ಅಸಮಾನತೆಯ ಜೊತೆಗೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಶೋಷಣೆಗೆ ಒಳಗಾದಾಗ ಅವರಿಗೆ ಮೀಸಲಾತಿ ಕಲ್ಪಿಸಲಾಗುತ್ತದೆ. ಜಾತಿಯ ಕಾರಣದಿಂದ ಮುಟ್ಟಿಸಿಕೊಳ್ಳದ ವರ್ಗಕ್ಕೆ ನ್ಯಾಯ ದೊರಕಿಸಿಕೊಡಲು ಮೀಸಲಾತಿ ಕೊಡಲಾಗಿದೆ. ನಗರ ಪ್ರದೇಶದ ಸೌಕರ್ಯಗಳನ್ನು ಗಮನಿಸಿ ಇನ್ನೂ ಅದರಿಂದ ವಂಚಿತರಾದ ಗ್ರಾಮೀಣ ಜನರಿಗೆ ಮೀಸಲಾತಿ ನೀಡಲಾಗುತ್ತದೆ.

ಆರೋಗ್ಯವಂತ ಸಾಮಾನ್ಯ ವ್ಯಕ್ತಿಯ ಜೊತೆ ಸ್ಪರ್ಧೆ ಮಾಡಲು ಕಷ್ಟವಾಗುವ ವಿಕಲಚೇತನರಿಗೆ ಮೀಸಲಾತಿ ನೀಡಲಾಗುತ್ತದೆ. ಬಡತನದ ಕಾರಣಕ್ಕಾಗಿ ಶ್ರೀಮಂತರ ಶೋಷಣೆ ತಪ್ಪಿಸಲು ಆರ್ಥಿಕ ಮೀಸಲಾತಿ ನೀಡಲಾಗುತ್ತದೆ.

ನಿರ್ಲಕ್ಷಿತ ದ್ವಿಲಿಂಗಿಗಳಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೋತ್ಸಾಹದಾಯಕವಾಗಿ ಮೀಸಲಾತಿ ನೀಡಲಾಗಿದೆ.

ಹೌದು ಇದೆಲ್ಲವೂ ನ್ಯಾಯಯುತವಾದುದು ಮತ್ತು ಸಮಾಜದ ಶಾಂತಿ ಮತ್ತು ಸಮಾನತೆಗಾಗಿ ಅವಶ್ಯಕತೆ ಇದೆ ಎಂದು ಮೇಲ್ನೋಟಕ್ಕೆ ಎಲ್ಲರಿಗೂ ಅನಿಸುತ್ತದೆ.

ಸಾಹಿತ್ಯ, ಸಂಗೀತ, ಲಲಿತ ಕಲೆ, ವಿಜ್ಞಾನ, ಕ್ರೀಡೆ ಮುಂತಾದ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಮೀಸಲಾತಿ ಇರದೆ ಪ್ರತಿಭೆಯನ್ನು ಆಧರಿಸಲಾಗುತ್ತದೆ. ಆದರೆ ದುರ್ಭಲರನ್ನು ವೇದಿಕೆಗೆ ತರಲು ಪರೋಕ್ಷವಾಗಿ ಮೀಸಲಾತಿಯ ಅವಶ್ಯಕತೆ ಇರುತ್ತದೆ.

ಈಗ ಯೋಚಿಸುವ ಸರದಿ ನಮ್ಮದು.

ಇದರ ಪ್ರಕಾರ ಸಮಾಜವನ್ನು ಸುವ್ಯವಸ್ಥಿತ ಮತ್ತು ಮಾನವೀಯ ನೆಲೆಯಲ್ಲಿ ಮುನ್ನಡೆಸಿಕೊಂಡು ಹೋಗಲು ಅಸಮಾನ ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ಮೀಸಲಾತಿ ಖಂಡಿತ ಕೊಡಬೇಕು.

ಆದರೆ ಸಮಸ್ಯೆ ಇರುವುದು ಅದರ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ...

ಸ್ವಾತಂತ್ರ್ಯ ನಂತರ ನಮ್ಮ ವ್ಯವಸ್ಥೆ ಬಹಳಷ್ಟು ಹಾದಿ ತಪ್ಪಿದೆ. ಯಾವುದೇ ಯೋಜನೆಯಾದರೂ ಅದು‌ ಆ ಸಂದರ್ಭದ ಬಲಿಷ್ಠರ ಪಾಲಾಗುತ್ತದೆ. ಆಡಳಿತಶಾಹಿ ಮತ್ತು ಮಧ್ಯವರ್ತಿ ವರ್ಗ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ. ದುರ್ಬಲರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ.

" ವ್ಯವಸ್ಥೆಯ ಅಸಮಾನತೆಯ ರೋಗಕ್ಕೆ ಮೀಸಲಾತಿ ಎಂಬ ಅಸಮಾನತೆಯ ಔಷಧಿಯನ್ನು ಕೊಡಲಾಗುತ್ತದೆ "

ಬಹಳ ಸಲ ಇದರಿಂದ ರೋಗಿ ಚೇತರಿಸಿಕೊಂಡರು ಕೆಲವೊಮ್ಮೆ ಅಡ್ಡ ಪರಿಣಾಮಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ.

ನಮ್ಮ ರಾಜಕೀಯ ವ್ಯವಸ್ಥೆಯ ದುರಾದೃಷ್ಟ ನೋಡಿ. ಶೋಷಿತರನ್ನು ಮೀಸಲಾತಿಯಿಂದ ಸಮಾನತೆಯೆಡಗೆ ತರುವ ಮುಖಾಂತರ ನಿಧಾನವಾಗಿ ಮೀಸಲಾತಿಯ ಅವಶ್ಯಕತೆಯನ್ನೇ ಇಲ್ಲವಾಗಿಸುವ ಬದಲಿಗೆ ಅದನ್ನೇ ಹೆಚ್ಚು ಹೆಚ್ಚು ಮಾಡುವ ಪರಿಸ್ಥಿತಿಗೆ ತಲುಪಿದ್ದೇವೆ.

ಸಾಮಾನ್ಯ ಸ್ಥಿತಿಯಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದು ಕಷ್ಟ. ಹೇಗೆ ವಿಮರ್ಶಿಸಿದರು ಸ್ಪಷ್ಟ ಉತ್ತರ ದೊರೆಯುವುದಿಲ್ಲ. ಅದರ ಫಲಾನುಭವಿಗಳು ಅದನ್ನು ಸಮರ್ಥಿಸುತ್ತಾರೆ ಮತ್ತು ಅದರಿಂದ ವಂಚಿತರಾದವರು ಅದನ್ನು ವಿರೋಧಿಸುತ್ತಾರೆ.

ಇಡೀ ವ್ಯವಸ್ಥೆಯನ್ನು ಎಲ್ಲಾ ದೃಷ್ಟಿಕೋನದಿಂದ ನಿಷ್ಪಕ್ಷಪಾತವಾಗಿ ನೋಡಿ ಅದರ ಅವಶ್ಯಕತೆಯ ತೀರ್ಮಾನ ಮತ್ತು ಅದರ ಅನುಷ್ಠಾನದ ಬಗ್ಗೆ ಕ್ರಮಕೈಗೊಳ್ಳುವವರು ಸದ್ಯಕ್ಕೆ ಯಾರೂ ಕಾಣುತ್ತಿಲ್ಲ. ಚುನಾವಣಾ ರಾಜಕೀಯ ಅದಕ್ಕೆ ಆಸ್ಪದ ಕೊಡುವುದಿಲ್ಲ. ರಾಜಕೀಯ ಪಕ್ಷಗಳ ಮತ್ತು ಮಾಧ್ಯಮಗಳ ಚರ್ಚೆಗಳೇ ನಮ್ಮ ಅಭಿಪ್ರಾಯ ಮೂಡಿಸುವ ಪ್ರಬಲ ಅಸ್ತ್ರಗಳಾಗಿರುವಾಗ ಸತ್ಯದ ಹುಡುಕಾಟ ಬಹಳ ಕಷ್ಟ.

ಮುಂದೆ...?

ಆದರೂ...... ಎಲ್ಲಾ ರೀತಿಯ ಮೀಸಲಾತಿ ಪಡೆಯುತ್ತಿರುವವರು ನಮ್ಮದೇ ಜನ. ಅದನ್ನು ತೀವ್ರವಾಗಿ ದ್ವೇಷಿಸದೆ ವಿಶಾಲ ಮನೋಭಾವದಿಂದ ಸ್ವೀಕರಿಸೋಣ.

ಆದರೆ ...

ಈ ಅತ್ಯಂತ ಸ್ವಾರ್ಥ ತುಂಬಿದ,

ಕಾವಿ ಸ್ವಾಮಿಗಳ ಸಂಕುಚಿತ ಮನೋಭಾವದ, ರಾಜಕೀಯ ಹಿತಾಸಕ್ತಿಯ, ಮೀಸಲಾತಿಯ ಅರ್ಥವನ್ನೇ ಬುಡಮೇಲು ಮಾಡುವ, ಸಮಾಜ ವಿರೋಧಿ ನಡೆಗಳನ್ನು ಖಂಡಿತ ತಿರಸ್ಕರಿಸಬೇಕಿದೆ. 

  • ಜ್ಞಾನ ಭಿಕ್ಷಾ ಪಾದಯಾತ್ರೆಯ 101 ನೆಯ ದಿನ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿಯೇ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ