ಮುಂಗಾರಿನ ಕರೆ

ಮುಂಗಾರಿನ ಕರೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೧೮

ಮಲೆನಾಡಿನ ರೋಚಕ ಕತೆಗಳು ಸರಣಿಯ ೭ನೇ ಭಾಗವೇ ‘ಮುಂಗಾರಿನ ಕರೆ'. ಮಲೆನಾಡಿನ ಗುಡ್ಡ ಬೆಟ್ಟಗಳಲ್ಲೇ ತಮ್ಮ ಜೀವನವನ್ನು ಸಾಗಿಸುತ್ತಿರುವ ಗಿರಿಮನೆ ಶ್ಯಾಮರಾವ್ ಅವರು ಬರೆಯುವ ಪ್ರತೀ ಕಾದಂಬರಿಯನ್ನು ಅನುಭವಿಸಿಯೇ ಬರೆದಿದ್ದಾರೆ ಅನಿಸುತ್ತೆ. ಪುಸ್ತಕದ ಪ್ರತೀ ಪುಟದಲ್ಲಿ ಪರಿಸರವಿದೆ, ಕಾಡು ಇದೆ, ಗುಡ್ಡ ಬೆಟ್ಟಗಳಿವೆ, ಆನೆ, ಜಿಂಕೆ, ನರಿ, ಕಾಡು ಕೋಣ, ದನ ಮುಂತಾದ ಪ್ರಾಣಿಗಳಿವೆ. ಏಲಕ್ಕಿ, ಕಾಫಿಯ ಘಮವಿದೆ, ಹರಿಯುವ ತೊರೆ, ನದಿಗಳಿವೆ, ಪುರಾತನ ಬಂಗಲೆಯಿದೆ, ರಕ್ತ ಹೀರುವ ಜಿಗಣೆಗಳಿವೆ, ಕಾಡುವ ನೆನಪುಗಳೂ ಇವೆ. ಇವೆಲ್ಲದರ ನಡುವೆ ಭಯಂಕರ ಮಾನವರೂ ಇದ್ದಾರೆ. ಮಾನವೀಯ ಮುಖದ ವ್ಯಕ್ತಿಗಳ ಇರುವಿಕೆಯೂ ಇದೆ.

ಪುಸ್ತಕದ ಬೆನ್ನುಡಿಯಲ್ಲಿರುವ ಮಾತುಗಳು ಪುಸ್ತಕ ಓದಲೇ ಬೇಕೆಂಬ ಅದಮ್ಯ ಆಸೆಯನ್ನು ಹುಟ್ಟಿಸಿ ಬಿಡುತ್ತದೆ. “ಜೀವ ಸೆಲೆ ಇರುವುದೇ ಮಲೆನಾಡಿನಲ್ಲಿ! ಗುಡ್ಡ ಬೆಟ್ಟ, ನದಿಗಳ ಅದ್ಭುತ, ಹಸಿರಿನ ನಾಡಿದು. ಇಲ್ಲಿನ ಮನಮೋಹಕ ದೃಶ್ಯಗಳಿಗೆ ಮನಸೋಲದವರೇ ಇಲ್ಲ. ಸೃಷ್ಟಿಕರ್ತ ತನ್ನ ಸೃಷ್ಟಿಸುವ ಜಾಣ್ಮೆಯನ್ನೆಲ್ಲಾ ಇಲ್ಲೇ ತೋರಿಸಿ ‘ಬೇಕೆನ್ನುವವರು ಇಲ್ಲೇ ಬಂದು ನೋಡಿಕೊಳ್ಳಲಿ' ಎನ್ನುವಂತೆ ಮಾಡಿದ್ದಾನೆ. ಆಕಾಶದಲ್ಲಿ ದಟ್ಟ ಮೋಡ ಕೂಡಿಕೊಂಡು ವಾತಾವರಣ ತಂಪಾಗಿ, ಕಾಗೆಗಳು ಕಾ, ಕಾ, ಎನ್ನುತ್ತಿರುವಾಗಲೇ ಹನಿ ಹನಿಯಾಗಿ ಪಶ್ಚಿಮದ ಕಡೆಯಿಂದ ಬೀಸಿ ಬರುವ ತಂಗಾಳಿಯೊಂದಿಗೆ ಶುರುವಾಗುವ ಇಲ್ಲಿನ ಮುಂಗಾರು ಮಳೆಯ ಸೊಗಸೇ ಬೇರೆ. ಅದರ ನೆನಪು ಎಲ್ಲಿ ಹೋದರೂ ಮಾಸುವುದಿಲ್ಲ.

ಇಲ್ಲಿ ಮಲೆನಾಡು ಎಂದರೆ  ನಾನು ಹುಟ್ಟಿ ಬೆಳೆದ ಕಾಫಿನಾಡು. ಕಾಫಿತೋಟ ಎಂದರೇನು? ಹೇಗಿರುತ್ತದೆ? ಅದರ ಏಳು-ಬೀಳುಗಳೇನು? ಇಲ್ಲಿನ ಬದುಕು, ಮಳೆಗಾಲದ ಪ್ರಕೃತಿ ಹೇಗಿರುತ್ತದೆ? ಜನ ಎಂಥವರು? ಅದೆಲ್ಲದರ ವೈವಿಧ್ಯಮಯವಾದ ಪ್ರಕೃತಿ ಮತ್ತು ಕಾಫಿತೋಟದ ನೈಜ ಚಿತ್ರಣ ಇದರಲ್ಲಿದೆ. ಜೊತೆಗೆ ಒಬ್ಬಳು ವಿದ್ಯಾವಂತ, ವಿಚಾರವಂತ ಮಲೆನಾಡಿನ ಯುವತಿ ಕ್ಲಿಷ್ಟ ಸನ್ನಿವೇಶಗಳಲ್ಲಿ ತೆಗೆದುಕೊಳ್ಳುವ ಸರಿ ನಿರ್ಧಾರಗಳ ರೋಚಕ ಕತೆಯೂ ಇದರಲ್ಲಿದೆ.”

ಲೇಖಕರ ಮುನ್ನುಡಿಯಾದ ‘ಆತ್ಮೀಯ ಓದುಗರೊಂದಿಗೆ' ಇಲ್ಲಿ ಮಲೆನಾಡಿನ ಇನ್ನಷ್ಟು ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಮಲೆನಾಡಿನ ಮುಗಿಯಲಾರದಷ್ಟು ಆತ್ಮೀಯತೆ ಮತ್ತು ನೆನಪುಗಳು ಪುಸ್ತಕದ ಉದ್ದಕ್ಕೂ ಕಂಡು ಬರುತ್ತವೆ. ಈ ಕಾದಂಬರಿಯು ಮಂಗಳ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಬೆಳಕು ಕಂಡಿತ್ತು. ಪಶ್ಚಿಮ ಘಟ್ಟಗಳ ಒಳಗನ್ನು ಇಂಚಿಂಚಾಗಿ ಬೇರೆ ಬೇರೆ ರೀತಿಯಲ್ಲಿ ತೆರೆದಿಡುವ ಮತ್ತೊಂದು ಪ್ರಯತ್ನ. ಹಿಂದಿನ ರೋಚಕ ಕಥೆಗಳಂತೆ ಇದೂ ನಿಮ್ಮನ್ನು ಬೇರೆಯೇ ಆದ ಅದ್ಭುತ ಲೋಕಕ್ಕೆ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ.

ಅಪ್ಪ ಸುಂದರ ಗೌಡರು ತಮ್ಮ ಕೊನೆಯ ಸಮಯದಲ್ಲಿದ್ದಾಗ ಅನಿವಾರ್ಯವಾಗಿ ನಿಧಿ ಬೆಂಗಳೂರಿನಿಂದ ತನ್ನ ಊರಾದ ಸಕಲೇಶಪುರದ ‘ಕಾಡುಗುಂಬ ಕಾಫೀ ಎಸ್ಟೇಟ್' ಗೆ ಬರುತ್ತಾಳೆ. ಅವಳ ತಂದೆ ಅವಳ ಮಡಿಲಲ್ಲೇ ಜೀವ ಬಿಡುತ್ತಾರೆ. ಮುನ್ನೂರಾ ಇಪ್ಪತ್ತು ಎಕರೆಯಷ್ಟು ದೊಡ್ಡ ಎಸ್ಟೇಟ್ ನ ಒಡತಿಯಾಗುವ ಅನಿವಾರ್ಯ ಪರಿಸ್ಥಿತಿ ಅವಳಿಗೆ ಎದುರಾಗುತ್ತದೆ. ಮೊದಲೆಲ್ಲಾ ಅಪರೂಪಕ್ಕೊಮ್ಮೆ ಊರಿಗೆ ಬರುತ್ತಿದ್ದ ನಿಧಿ ಆಗ ತಾನೇ ಎಂಬಿಬಿಎಸ್ ಮುಗಿಸಿ ಎಂಡಿ ಮಾಡಿ ಉತ್ತಮ ವೈದ್ಯಳಾಗುವ ಕನಸು ಕಂಡವಳು. ಅದರೆ ಅವಳ ಬದುಕು ಈ ರೀತಿಯಾಗಿ ಅನಿರೀಕ್ಷಿತ ತಿರುವು ಪಡೆದುಕೊಳ್ಳುತ್ತದೆ. ತಂದೆಯ ಎಲ್ಲಾ ಕಾರ್ಯ ಮುಗಿಸಿ ಒಂದೆರಡು ತಿಂಗಳು ಊರಿನಲ್ಲಿದ್ದು ಮರಳಿ ಬೆಂಗಳೂರಿಗೆ ಹೋಗುವ ಯೋಚನೆಯಲ್ಲಿದ್ದ ನಿಧಿಗೆ ತನ್ನ ಎಸ್ಟೇಟ್ ನ ಕೆಲಸ ಕಾರ್ಯಗಳನ್ನು ನೋಡುತ್ತಾ ನೋಡುತ್ತಾ ಚಕ್ರವ್ಯೂಹದಲ್ಲಿ ಸಿಲುಕಿದ್ದು ಗೊತ್ತೇ ಆಗುವುದಿಲ್ಲ. ತನ್ನ ತಾಯಿ ಕವಿತ ತನ್ನ ತಂದೆ ಸುಂದರ ಗೌಡರ ಎರಡನೇ ಹೆಂಡತಿ. ಮೊದಲ ಹೆಂಡತಿ ಸತ್ತು ಹೋದಾಗ ಕವಿತಳನ್ನು ಮದುವೆಯಾಗಿದ್ದರು. ಕವಿತ ಯಾವುದೇ ವ್ಯವಹಾರ ಜ್ಞಾನವಿಲ್ಲದ ಮಹಿಳೆ. ಸುಂದರ ಗೌಡರ ಮೊದಲ ಹೆಂಡತಿಯ ಮಗ ಲೋಕೇಶ್ ಅಕಾಲ ಮರಣಕ್ಕೆ ಈಡಾದ ಬಳಿಕ ಸುಂದರ ಗೌಡರು ತಮ್ಮ ಮಗಳಾದ ನಿಧಿಯನ್ನು ಅಪಾರವಾಗಿ ಹಚ್ಚಿಕೊಂಡು ಬಿಟ್ಟಿದ್ದರು.

ತಮಗೆ ಇರುವ ತೋಟದ ವಿಸ್ತಾರದ ಬಗ್ಗೆ, ಕಾಫಿಯ ಬಗ್ಗೆ, ಏಲಕ್ಕಿ ಬೆಳೆಯ ಬಗ್ಗೆ, ಆಕಾಶಕ್ಕೆ ಬೆಳೆದು ನಿಂತ ಹಳೆಯ ಕಾಲದ ಮರಗಳ ಬಗ್ಗೆ ಏನೇನೂ ಗೊತ್ತಿಲ್ಲದ ಪೇಟೆಯಲ್ಲಿ ಬೆಳೆದ ಹುಡುಗಿ ನಿಧಿ ಹೇಗೆ ಇವುಗಳನ್ನೆಲ್ಲಾ ನಿರ್ವಹಿಸಿಕೊಂಡು ಹೋಗುತ್ತಾಳೆ ? ಎಂಬುವುದೇ ಈ ಕಾದಂಬರಿಯ ವೈಶಿಷ್ಟ್ಯತೆ. ಕೆಲಸದಾಳು ತಮ್ಮಯ್ಯ. ಏನೂ ಗೊತ್ತಿಲ್ಲದ ಅಮಾಯಕ ಹುಡುಗಿ ಎಂದು ಮರದ ಲೆಕ್ಕದಲ್ಲಿ ಯಾಮಾರಿಸಲು ನೋಡುವ ಎಸ್ಟೇಟ್ ಮ್ಯಾನೇಜರ್ ರಂಗದೊರೆ, ಅವನೊಂದಿಗೆ ಅನೈತಿಕ ಸಂಬಂಧದಲ್ಲಿರುವ ಕೆಲಸದಾಳು ವಲ್ಲಿ, ಹತ್ತಿರದ ಎಸ್ಟೇಟ್ ನ ಸುಂದರ ಇಂಜಿನಿಯರ್ ಯುವಕ ಶಶಾಂಕ್ ಇವರೆಲ್ಲರ ಪಾತ್ರವು ಈ ಕಾದಂಬರಿಯಲ್ಲಿ ಸೊಗಸಾಗಿ ಮಿಶ್ರಣವಾಗಿದೆ. ಕಾದಂಬರಿ ಓದಲು ಪ್ರಾರಂಭಿಸಿದರೆ ಮುಗಿಸುವ ತನಕ ಕೆಳಗಿಡಲು ಮನಸ್ಸಾಗುವುದಿಲ್ಲ. ಗಿರಿಮನೆ ಶ್ಯಾಮರಾವ್ ಅವರ ಬರವಣಿಗೆಯ ಶೈಲಿ ಅಷ್ಟೊಂದು ಸೊಗಸಾಗಿದೆ. 

ಅಜಿತ್ ಎಸ್ ಅವರ ಆಕರ್ಷಕ ಮುಖಪುಟ ಈ ಕಾದಂಬರಿಯ ಪ್ರಮುಖ ಆಕರ್ಷಣೆ. ಸುಮಾರು ೨೨೫ ಪುಟಗಳ ಈ ಕಾದಂಬರಿಯನ್ನು ಮುಗಿಸುವ ಹೊತ್ತಿಗೆ ನೀವು ಮಲೆನಾಡಿನಲ್ಲಿ ತಿರುಗಾಡಿ ಬಂದ ಅನುಭವಕ್ಕೆ ಒಳಗಾಗುತ್ತೀರಿ.