ಮುಂಗಾರು ಮಳೆ - ಹಾಗೇ ಸುಮ್ಮನೆ
ಯೋಗರಾಜ್ ಭಟ್ ನಿರ್ದೇಶನದ, ಗಣೇಶ್ ಹಾಗೂ ಪೂಜಾ ಗಾಂಧಿ ಅಭಿನಯದ ‘ಮುಂಗಾರು ಮಳೆ' ಸಿನೆಮಾ ಬಿಡುಗಡೆಯಾಗಿ, ಸೂಪರ್ ಹಿಟ್ ಆದದ್ದು ಈಗ ಇತಿಹಾಸ. ಆ ಸಮಯದಲ್ಲಿ ಮಳೆಯಲ್ಲಿ ನೆನೆಯುತ್ತಾ, ಸುಂದರ ಪರಿಸರದಲ್ಲಿ ವಿಹರಿಸುತ್ತಾ, ಕರ್ಣ ಮನೋಹರವಾದ ಹಾಡುಗಳನ್ನು ಕೇಳುತ್ತಾ ಆನಂದಿಸಿದ್ದು ಈಗ ನೆನಪಾಗುತ್ತದೆ. ‘ಪ್ರೀತಿ ಮಧುರ ತ್ಯಾಗ ಅಮರ' ಎಂದು ಹೇಳುವ ಕೊನೇ ದೃಶ್ಯ ಬಹುತೇಕರ ಕಣ್ಣಂಚನ್ನು ಒದ್ದೆ ಮಾಡಿದ್ದು ಸುಳ್ಳಲ್ಲ. ಮುಂಗಾರು ಮಳೆ ಸಿನೆಮಾದ ಹಿಂದಿನ ಕಥೆಯನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ಬರವಣಿಕೆಯ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಇದೊಂದು ರೀತಿಯ ಹೊಸತನ.
ಸಿನೆಮಾ ತಯಾರಿಕೆಯ ಹಿಂದಿನ ನೋವು-ನಲಿವುಗಳು ಯಾರಿಗೂ ಗೊತ್ತಾಗುವುದಿಲ್ಲ. ಚಿತ್ರೀಕರಣ ಸಮಯದ ಕಷ್ಟಗಳು, ವಾತಾವರಣದ ತೊಂದರೆ, ಮೂಲ ಸೌಕರ್ಯಗಳ, ಸಲಕರಣೆಗಳ ಕೊರತೆ, ನಟ ನಟಿಯರ ಅನಾರೋಗ್ಯ, ಕೋಪ ಸಿಟ್ಟು ಇತ್ಯಾದಿ ಇತ್ಯಾದಿಗಳು ನಮಗೆ ಚಿತ್ರ ನೋಡುವಾಗ ಅರಿವಾಗುವುದೇ ಇಲ್ಲ. ಅದಕ್ಕಾಗಿಯೇ ಯೋಗರಾಜ್ ಭಟ್ ಅವರು ತಮ್ಮ ಮುಂಗಾರು ಮಳೆ ಚಿತ್ರದ ಹಿಂದಿನ ದೃಶ್ಯಗಳನ್ನು ಬರವಣಿಗೆಯಲ್ಲಿ ನೀಡಿದ್ದಾರೆ.
ಯೋಗರಾಜ್ ಭಟ್ ಅವರೇ ಹೇಳುವಂತೆ “ಓದುವುದು ನನ್ನ ಪ್ರಿಯ ಅಭಿರುಚಿ, ಬರವಣಿಗೆ ನನಗೆ ಹೊಸತು. ಓದುಗ ಎಲ್ಲಿ ಸಿಟ್ಟಿಗೇಳುತ್ತಾನೆ, ಎಲ್ಲಿ ಅವನಿಗೆ ಬೋರು ಹೊಡೆಯುತ್ತದೆ ಎಂದೆಲ್ಲಾ ಚಿಂತಿಸುತ್ತಾ, ಚಿತ್ರ ತಯಾರಿಕೆಗೆ ಸಂಬಂಧಿಸಿದಂತೆ ಈ ರೀತಿಯ ಬರವಣಿಗೆ ಹ್ಯಾಗಿರಬಹುದೆಂಬ ಕುತೂಹಲದಿಂದ ಇದೆಲ್ಲಾ ಬರೆದೆ. ‘ಸುಧಾ’ ಪತ್ರಿಕೆಯವರು ಆದರದಿಂದ ಪ್ರಕಟಿಸಿದರು.”
ಮುಂಗಾರು ಮಳೆ ಚಿತ್ರದ ಚಿತ್ರೀಕರಣ ಸಂದರ್ಭದ ಒಂದು ಪ್ರಸಂಗವನ್ನು ಯೋಗರಾಜ್ ಭಟ್ ಅವರು ಹೀಗೆ ವಿವರಿಸುತ್ತಾರೆ “ತಂಡದ ಎಲ್ಲರ ಕಾಲುಗಳೂ ಬಿಳಿಚಿಕೊಳ್ಳಲು ಪ್ರಾರಂಭಿಸಿ ಸದಾ ಮಳೆಯ ನೀರಿನಲ್ಲೇ ಇರುವ ಎಲ್ಲರ ಪಾದಗಳ ಚರ್ಮ ಪದರು ಪದರಾಗಿ ಕಳಚುತ್ತಿತ್ತು. ಬೂಟುಗಳನ್ನು ಕಾಲಿನ ರಕ್ಷಣೆಗೆಂದು ಹಾಕಿಕೊಳ್ಳುತ್ತಿದ್ದ ನಾವುಗಳೆಲ್ಲ ಕೆಲವೇ ದಿನಗಳಲ್ಲಿ ಬೂಟುಗಳನ್ನು ಬಿಸಾಕಿ ಸಕಲೇಶಪುರದ ಮಾರ್ಕೆಟ್ ನಲ್ಲಿ ಸಿಕ್ಕ ಸಿಕ್ಕ ಚಪ್ಲಿಗಳನ್ನು ಖರೀದಿಸಿ ಸೈಜು ಕೂಡ ಗಮನಿಸದೇ ಚಪ್ಪಲಿ ಹಾಕತೊಡಗಿದ್ದೆವು. ಕಾರಣ ಬೂಟಿನೊಳಗೆ ಸೇರಿ ಕೊಳ್ಳುವ ನೀರು -ಕೊಚ್ಚೆಗಳಿಂದಾಗಿ ಪಾದಗಳು ಫ್ರಿಡ್ಜಿನಲ್ಲಿ ಇಟ್ಟಂತಾಗಿ ಸ್ವಲ್ಪ ಹೊತ್ತಿಗೆಲ್ಲ ಪಾದಗಳೇ ಇಲ್ಲವೆಂಬ ಭಾವ ಹುಟ್ಟಿ ಬಿಡುತ್ತಿತ್ತು."
"ಇದೆಲ್ಲದರ ಮಧ್ಯೆ ಊಟ - ತಿಂಡಿಗೆಂದು ನಾವು ಎಲ್ಲೇ ಮಳೆ ಸುರಿಯದ ‘ಮರ' ಹುಡುಕಿ ಕುಳಿತರೂ ಪ್ಲೇಟುಗಳ ತುಂಬ ಮಳೆ ನೀರು ತುಂಬಿಬಿಡುತ್ತಿತ್ತು. ಒಂದು ದಿನ ಕನಕರಾಜು ಹಾಗೂ ಅವನ ಶಿಷ್ಯಂದಿರು ತಿಂಡಿ ತಿನ್ನುವಾಗ ತಟ್ಟೆಗೆ ನೀರು ತುಂಬಿತೆಂದು ಕಾಣುತ್ತದೆ... ಅವರೆಲ್ಲ ಸೇರಿ ಇಡ್ಲಿಯನ್ನೂ, ಮಳೆಯನ್ನೂ, ತಿಂಡಿ ತಯಾರಿಸಿದ ಭಟ್ಟನನ್ನೂ ಕೊನೆಗೆ ಇಡೀ ಶೂಟಿಂಗನ್ನೇ ಎಂಬಂತೆ ‘ಅಮ್ಮ' 'ಅಕ್ಕ' ಎಂಬಿತ್ಯಾದಿ ಪದಗಳ ಜೊತೆ ಮಂತ್ರೋಚ್ಛಾರಣೆ ಮಾಡುತ್ತಿದ್ದುದು ಕಾಣಿಸಿತು. ಅವರ ಬಳಿ ಹೋದ ನಾನು ‘ನಂಗೂ ಸ್ವಲ್ಪ ಸಪರೇಟಾಗಿ ಬೈದುಬಿಡ್ರೋ ಅತ್ಲಾಗೆ' ಎಂದು ನಕ್ಕೆ.”
ಇಂತಹ ಹಲವಾರು ಅನುಭವಗಳನ್ನು ತಮ್ಮ ನೆನಪಿನ ದೋಣಿಯಿಂದ ಹೆಕ್ಕಿ ಕೊಟ್ಟಿದ್ದಾರೆ ಯೋಗರಾಜ್ ಭಟ್ ಅವರು. ಪ್ರತೀ ಅಧ್ಯಾಯದ ಪ್ರಾರಂಭದಲ್ಲಿ ಶೂಟಿಂಗ್ ಸಮಯದ ಭಾವಚಿತ್ರವನ್ನು ಕೊಟ್ಟಿದ್ದಾರೆ. ಚಿತ್ರೀಕರಣದ ಜಾಗದ ಹುಡುಕಾಟ, ಮೊಲದ ಬಗ್ಗೆ, ಮಳೆಯ ಫಜೀತಿ, ಹಾಡಿನ ಚಿತ್ರೀಕರಣದ ಬಗ್ಗೆ ಎಲ್ಲಾ ಸೊಗಸಾಗಿ ಬರೆದಿದ್ದಾರೆ. ಪುಸ್ತಕದ ಕೊನೆಯಲ್ಲಿ ಮುಂಗಾರು ಮಳೆಯ ಸೂಪರ್ ಹಿಟ್ ಹಾಡುಗಳನ್ನು ಅದರ ಸಾಹಿತಿಯ ಕೈಬರಹದಲ್ಲೇ ಮುದ್ರಿಸಿದ್ದಾರೆ. ಜಯಂತ್ ಕಾಯ್ಕಿಣಿ, ಹೃದಯ ಶಿವ, ಕವಿರಾಜ್ ಅವರ ಕೈಬರಹ ಹಾಗೂ ಹಾಡುಗಳನ್ನು ಗಮನಿಸಬಹುದು.
ಯೋಗರಾಜ್ ಭಟ್ ಅವರು ಈ ಪುಸ್ತಕವನ್ನು ‘ಕರ್ವಾಲೋ’ ಕಾದಂಬರಿಯಲ್ಲಿ ಬರುವ ಮಂದಣ್ಣನಿಗೆ ಅರ್ಪಿಸಿದ್ದಾರೆ. ಸುಮಾರು ನೂರು ಪುಟಗಳ ಈ ಪುಸ್ತಕವನ್ನು ಚಲನಚಿತ್ರವೊಂದರ ಹಿನ್ನೋಟವನ್ನು ತಿಳಿಯಲು ಓದಬಹುದಾಗಿದೆ.