ಮುಂಜಾನೆದ್ದು ಪುಟ್ಟ ವಾಕಿಂಗ್ ಹೊರಟಾಗ...!

ಮುಂಜಾನೆದ್ದು ಪುಟ್ಟ ವಾಕಿಂಗ್ ಹೊರಟಾಗ...!

ಬಹಳ ದಿನಗಳ ಬಳಿಕ ವಾಕಿಂಗ್ ಮಾಡಲು ಮೂಡ್ ಬಂದು ಬೆಳಿಗ್ಗೆ ೬ ಗಂಟೆಗೆ ಎದ್ದು ಮೈದಾನಕ್ಕೆ ಹೊರಟೆ. ಈ ಸಲದ ಮಳೆಗಾಲ ಸ್ವಲ್ಪ ದೀರ್ಘವಾದುದರಿಂದ, ಮತ್ತೆ ಪ್ರತೀ ದಿನ ಬೆಳಿಗ್ಗೆ ಮಳೆ ಬರುತ್ತಿದ್ದುದರಿಂದ ವಾಕಿಂಗ್ ತಪ್ಪಿಸಲು ಬೇಕಾದ ನೂರು ನೆಪಗಳನ್ನು ನನ್ನಲ್ಲಿ ನಾನೇ ಹೇಳಿಕೊಳ್ಳುತ್ತಾ, ಬೆಚ್ಚಗೆ ಕಂಬಳಿ ಹೊದ್ದು ಮಲಗಿ, ಸೂರ್ಯ ಎದ್ದ ಬಳಿಕ, ಎದ್ದು ದೈನಂದಿನ ಕೆಲಸಗಳಿಗೆ ತಯಾರಾಗುತ್ತಿದ್ದೆ. ಆದರೆ ಏಕೋ ಎರಡು ದಿನಗಳಿಂದ ವಾಕಿಂಗ್ ಹೋಗ ಬೇಕೆಂಬ ಕನವರಿಕೆ, ಅದರೊಂದಿಗೆ ನನ್ನ ಅರ್ಧಾಂಗಿಯ ಒತ್ತಾಯ ಬೇರೆ..ಹೀಗೆ ಕೊನೆಗೂ ಎದ್ದು ಮೈದಾನಕ್ಕೆ ಬಂದು ತಲುಪಿದೆ.

ಹಿಂದಿನ ದಿನ ಸ್ವಲ್ಪ ಮಳೆ ಬಂದಿದ್ದ ಕಾರಣ ಮೈದಾನದ ಒಂದು ಬದಿಯಲ್ಲಿ ನೀರು ನಿಂತು ಪುಟ್ಟ ಕೊಳದಂತೆ ಭಾಸವಾಗುತ್ತಿತ್ತು. ಮಳೆಯಲ್ಲಿ ಕಾರು, ಬೈಕು ಮುಂತಾದ ವಾಹನಗಳನ್ನು ಕಲಿಯಲು ಬಂದವರು ಮನಸೋ ಇಚ್ಚೆ ಮೈದಾನದಲ್ಲಿ ವಾಹನಗಳನ್ನು ಓಡಿಸಿ ಕಂಬಳದ ಗದ್ದೆಯನ್ನಾಗಿ ಮಾಡಿಬಿಟ್ಟಿದ್ದರು. ಇನ್ನೂ ಸಮಯ ೬ ಗಂಟೆಯಷ್ಟೇ ಆಗಿದ್ದುದರಿಂದ ಮೈದಾನದಲ್ಲಿ ಜನರ ಸಂಖ್ಯೆ ಕಡಿಮೆಯೇ ಇತ್ತು. ಸ್ವಲ್ಪ ವೃದ್ಧರು ಮಾತ್ರ ಜೊತೆಯಾಗಿ ಸೇರಿ ‘ನಗುವಿನ ಹೊಳೆ’ಯನ್ನು ಹರಿಸುವ ಆಲೋಚನೆಯಲ್ಲಿದ್ದರು. ಅವರದ್ದು ಲಾಫಿಂಗ್ ಕ್ಲಬ್ ಅಂತೆ. ‘ನಗುವವರ ಸಂಘ' ಉತ್ತಮ ಹೆಸರಲ್ಲವೇ? 

ನಾವು ಅತ್ತಾಗ ಮುಖದಲ್ಲಿನ ಸುಮಾರು ೨೦ ಸ್ನಾಯುಗಳು ಕೆಲಸ ಮಾಡುತ್ತವೆಯಂತೆ, ಅದೇ ನಕ್ಕಾಗ ೪೦ಕ್ಕೂ ಅಧಿಕ ಸ್ನಾಯುಗಳು ಕೆಲಸ ಮಾಡುತ್ತವೆ ಎಂದು ಎಲ್ಲೋ ಓದಿದ ನೆನಪು. ಆ ಕಾರಣದಿಂದ ನಾವು ಮುಖಕ್ಕೆ ವ್ಯಾಯಾಮ ಮಾಡಿಸುವುದಾದರೆ ನಗುವುದು ಉತ್ತಮ ಎಂದು ಹೇಳುತ್ತಾರೆ. ಅದೇ ಕಾರಣಕ್ಕೆ ಆ ವೃದ್ಧರೂ ಜೋರಾಗಿ ‘ಹಹ ಹ್ಹ ಹ' ಎಂದು ನಗಲು ಪ್ರಾರಂಭ ಮಾಡಿದರು. ಹಲವಾರು ಸಮಯದಿಂದ ನಾನು ಅವರ ಚಟುವಟಿಕೆಗಳನ್ನು ಗಮನಿಸುತ್ತಿದ್ದೇನಾದರೂ ಅವರ ಜೊತೆ ಸೇರಲು ನನಗ್ಯಾಕೋ ಮುಜುಗರ. ಸುಮ್ಮನೇ ಹೇಗಪ್ಪಾ ನಗುವುದು ಎಂಬ ಚಿಂತೆ ಒಂದೆಡೆಯಾದರೆ, ಪರಿಚಿತರು ಯಾರಾದರೂ ಗಮನಿಸಿ, ಏನಪ್ಪಾ ಇದು ನಿನ್ನ ಹೊಸ ಆಟ ಎಂದರೆ... ಕಷ್ಟ. ಅದಕ್ಕೆ ನಾನು ನನ್ನಷ್ಟಕ್ಕೇ ನಡೆದಾಡುವುದು.

ಮಳೆಗಾಲಕ್ಕಿಂತ ಮೊದಲು ಈ ಮೈದಾನ ಬಹಳ ಸುಂದರವಾಗಿತ್ತು. ಮಳೆ ಬಂದ ಸಮಯದಲ್ಲಿ ನೀರು ಎಲ್ಲೆಡೆ ಹರಿದಾಡಿ ಕೆಸರುಮಯವಾಗಿದೆ ಎಂದು ಅನಿಸಿತು. ಅದರ ಜೊತೆಗೆ ಮೈದಾನದ ಸುತ್ತಲೂ ನೆಟ್ಟ ಗಿಡಗಳು ನನ್ನ ಗಮನವನ್ನು ಸೆಳೆದವು. ಮೊದಲ ಮಳೆ ಬಿದ್ದ ಕೂಡಲೇ ಕೆಲವು ಸ್ವಯಂ ಸೇವಾ ಸಂಘಗಳಿಗೆ ವನ ಮಹೋತ್ಸವ ಆಚರಿಸುವ ಹುಮ್ಮಸ್ಸು ಹತ್ತಿಕೊಂಡು ಬಿಡುತ್ತದೆ. ಸಂಘ ಸಂಸ್ಥೆಗಳಿಗೆ ಗಿಡ ನೆಟ್ಟು ಅದರ ಫೋಟೊ ಹಾಗೂ ವರದಿಯನ್ನು ಮಾಧ್ಯಮಗಳಿಗೆ ಸಲ್ಲಿಸುವ ಧಾವಂತ. ಗಿಡ ನೆಟ್ಟ ಜಾಗ, ಅಲ್ಲಿ ಆ ಗಿಡವು ಬೆಳೆದು ದೊಡ್ಡದಾಗಲು ಸ್ಥಳಾವಕಾಶ ಇದೆಯೇ? ನೆಟ್ಟ ಗಿಡಕ್ಕೆ ಮಳೆಗಾಲದ ಬಳಿಕ ನೀರು ಹಾಕುವವರು ಯಾರು? ಎಂಬೆಲ್ಲಾ ಯೋಚನೆ ಮಾಡುವುದೇ ಇಲ್ಲ. ಈ ವರ್ಷ ಇಂತಿಷ್ಟು ಗಿಡಗಳನ್ನು ನೆಡಲಾಗಿದೆ ಎಂಬ ವರದಿ ನೀಡಿದರಾಯಿತು. ಬರುವ ವರ್ಷ ಮತ್ತೆ ಗಿಡ ನೆಟ್ಟ ಅದೇ ಹೊಂಡದಲ್ಲಿ ಮತ್ತೆ ಗಿಡ ನೆಡುವ ಕಾರ್ಯಕ್ರಮ ಮಾಡಲಾಗುತ್ತದೆ. ಏಕೆಂದರೆ ಇವರು ನೆಟ್ಟ ಒಂದೋ ಸತ್ತು ಹೋಗಿರುತ್ತದೆ ಅಥವಾ ದನ-ಎಮ್ಮೆಗಳ ಪಾಲಾಗಿರುತ್ತದೆ. ಎಲ್ಲೋ ಬೆರಳಿಕೆಯಷ್ಟು ಸಸ್ಯಗಳು ಉಳಿದು ಕೊಂಡಿರುತ್ತವೆ. ಅವುಗಳು ಬೆಳೆದು ದೊಡ್ದದಾದಾಗ ವಿದ್ಯುತ್ ಇಲಾಖೆಯವರು (ಮೆಸ್ಕಾಂ) ಬಂದು ತಮ್ಮ ಕರೆಂಟ್ ಕಂಬದ ತಂತಿಗಳಿಗೆ ತಗಲುತ್ತವೆ ಎಂದು ಗೆಲ್ಲನ್ನು ಕಡಿದು ಹಾಕಿ ಹೋಗಿ ಬಿಡುತ್ತಾರೆ. ಆ ಕಡೆಯಿಂದ ಬದುಕಲೂ ಆಗದೆ, ಇತ್ತ ಕಡೆ ಸಾಯಲೂ ಆಗದೇ ತ್ರಿಶಂಕು ಸ್ಥಿತಿಯಲ್ಲಿ ಮರ ಇರುತ್ತದೆ. ಏಕೆಂದರೆ ನೆಡುವ ಸಂದರ್ಭದಲ್ಲಿ ಮೇಲುಗಡೆ ವಿದ್ಯುತ್ ತಂತಿ ಹಾದು ಹೋಗಿದೆ ಎಂಬ ವಿಚಾರವನ್ನು ಗಮನಿಸುವ ಪ್ರಾಥಮಿಕ ಜ್ಞಾನವನ್ನೂ ನೆಡುವವರು ಹೊಂದಿರುವುದಿಲ್ಲ. ಮಂಗಳೂರಿನಾದ್ಯಂತ ವಿದ್ಯುತ್ ತಂತಿಯ ಕೆಳಗಡೆ ನೆಟ್ಟ ನೂರಾರು ಮರಗಳನ್ನು ನಾವು ಕಾಣಬಹುದು. ಈ ಸಮಸ್ಯೆ ಮಂಗಳೂರು ಮಾತ್ರವಲ್ಲ ಎಲ್ಲಾ ಊರುಗಳಲ್ಲಿ ಇರುವಂಥದ್ದೇ.

ನಾನು ವಾಕ್ ಹೋಗುವ ಮೈದಾನದಲ್ಲಿ ನೆಟ್ಟ ಗಿಡಗಳ ನಡುವಿನ ಅಂತರವನ್ನು ನೋಡಿ ದಂಗಾಗಿ ಹೋದೆ. ಅಲ್ಲಿ ನೆಟ್ಟ ಗಿಡಗಳಲ್ಲಿ ಬಹುತೇಕ ಸಸಿಗಳು ದೊಡ್ದ ಮರಗಳಾಗುವ ಜಾತಿಯವು. ಒಂದು ಸಸಿಯಿಂದ ಮತ್ತೊಂದು ಸಸಿಗೆ ಎರಡು ಅಡಿ ಅಂತರವಿರಬಹುದೇನೋ? ಹೀಗೆ ನೆಟ್ಟ ಗಿಡಗಳು ಬೆಳೆದು ದೊಡ್ದದಾಗುವುದಾದರೂ ಹೇಗೆ? ಅಲ್ಲಿ ನೆಟ್ಟ ಸಸಿಗಳಲ್ಲಿ ಆಲ, ಹೆಬ್ಬಲಸು, ಹಲಸು ಮುಂತಾದ ದೊಡ್ಡದಾಗಿ ಬೆಳೆದು ಮರಗಳಾಗುವ ಗಿಡಗಳೂ ಇದ್ದುವು. ಹೀಗೆ ಸೂಕ್ತ ಅಂತರವಿಲ್ಲದೆ ಗಿಡಗಳನ್ನು ನೆಟ್ಟರೆ ಮುಂದಿನ ವರ್ಷ ಮತ್ತೆ ಅದೇ ಜಾಗದಲ್ಲಿ ‘ವನ ಮಹೋತ್ಸವ’ ಮಾಡಬಹುದೇನೋ? ಎಂದು ನನಗನಿಸಿತು. ಯಾರು ಈ ರೀತಿ ಗಿಡಗಳನ್ನು ನೆಟ್ಟರು ಎಂಬ ವಿಚಾರ ತಿಳಿದು ಬರಲಿಲ್ಲ. ಆದರೆ ಹೀಗೆ ನೂರು ಗಿಡಗಳನ್ನು ನೆಡುವ ಬದಲು ಸೂಕ್ತವಾಗಿ ಇಪ್ಪತ್ತು ಗಿಡಗಳನ್ನು ನೆಟ್ಟರೂ ಸಾಕಿತ್ತು ಎಂದು ನಾನು ಯೋಚನೆ ಮಾಡಿದೆ. ಈ ಗಿಡಗಳಿಗೆ ಯಾವುದೇ ಬೇಲಿಯ ರಕ್ಷಣೆ ಇಲ್ಲ. ಕದ್ದುಕೊಂಡು ಹೋಗುವವರು, ದನಕರುಗಳು ತಿಂದು ಮುಗಿಸಿದರೆ ಎಷ್ಟು ಗಿಡ ಉಳಿದೀತು? ಕೆಲವೊಮ್ಮೆ ಇಂತಹ ಯೋಜನೆಗಳನ್ನು ಗಮನಿಸಿದಾಗ ನೋವಾಗುತ್ತದೆ.

ಈ ಬಗ್ಗೆ ಯೋಚನೆ ಮಾಡುತ್ತಾ ಒಂದು ಗಂಟೆ ವಾಕಿಂಗ್ ಮಾಡಿದ್ದೇ ಗೊತ್ತಾಗಲಿಲ್ಲ. ಬಹಳ ಸಮಯದ ನಂತರ ವಾಕಿಂಗ್ ಮಾಡಿದ್ದರಿಂದ ಕಾಲುಗಳು ನೋಯುತ್ತಿದ್ದವು. ಆದರೆ ಅದಕ್ಕಿಂತ ಅಧಿಕ ಮನಸ್ಸಿಗೆ ನೋವಾಗಿತ್ತು. ಕೊನೆಗೆ ಮನೆಗೆ ತೆರಳುವಾಗ ಗಾಢವಾದ ವಿಷಾದ ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿತ್ತು.

ಚಿತ್ರ ಕೃಪೆ: ಅಂತರ್ಜಾಲ ತಾಣ