ಮುಂಜಾನೆ ಬೇಗನೇ ಏಳಬೇಕೆಂದರೆ...

ಮುಂಜಾನೆ ಬೇಗನೇ ಏಳಬೇಕೆಂದರೆ...

ಪ್ರತಿಯೊಬ್ಬರಿಗೂ ಬೆಳಿಗ್ಗೆ ಬೇಗನೇ ಏಳಬೇಕು, ವಾಕಿಂಗ್ ಹೋಗಬೇಕು, ಜಿಮ್ ಗೆ ಹೋಗಬೇಕು, ಯೋಗ ಮಾಡಬೇಕು, ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಇಂದಿನ ಧಾವಂತದ ಯಾಂತ್ರಿಕ ಜೀವನದಲ್ಲಿ ರಾತ್ರಿ ಮಲಗುವಾಗಲೇ ಬೆಳಿಗ್ಗೆಯಾದರೆ, ಅಂದರೆ ನಡುರಾತ್ರಿ ೧೨ ಗಂಟೆ ಕಳೆದರೆ ಮತ್ತೆ ಮುಂಜಾನೆ ಬೇಗನೇ ಏಳುವುದಾದರೂ ಹೇಗೆ? ನಿದ್ರೆ ಬಿಡಬೇಕಲ್ವಾ? ಅದಕ್ಕೇ ಹಿರಿಯರು ಹೇಳುತ್ತಿದ್ದುದು ‘ಬೇಗನೇ ಮಲಗಿ, ಬೇಗನೇ ಏಳಿ' ಎಂದು. ಆದರೆ ಇಂದಿನ ಯುಗದಲ್ಲಿ ಇದು ಸ್ವಲ್ಪ ಕಷ್ಟ ಸಾಧ್ಯ. ಆದರೂ ನಾವು ಕೆಲವೊಂದು ಉಪಾಯಗಳನ್ನು ನಮ್ಮ ನಿತ್ಯ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಬೇಗನೇ ಏಳುವ ಅಭ್ಯಾಸ ಮಾಡಬಹುದು. 

* ವಾರಾಂತ್ಯ (ವೀಕೆಂಡ್) ಸೇರಿದಂತೆ ಪ್ರತಿದಿನ ಒಂದೇ ನಿಗದಿತ ಸಮಯದಲ್ಲಿ ಮಲಗುವ ಮತ್ತು ಏಳುವ ಅಭ್ಯಾಸವನ್ನು ಅಳವಡಿಸಿಕೊಂಡಿರಿ. ಈ ರೀತಿಯ ವೇಳಾಪಟ್ಟಿಯು ನಿಮ್ಮ ದೇಹದ ಆಂತರಿಕ ಗಡಿಯಾರವನ್ನು ನಿಯಂತ್ರಿಸಲು ಸಹಕರಿಸುತ್ತದೆ. ಮತ್ತು ಬೆಳಿಗ್ಗೆ ನಿಗದಿತ ಸಮಯಕ್ಕೆ ಏಳಲು ಸಹಕಾರಿಯಾಗುತ್ತದೆ.

* ವಾರದ ಯಾವುದೇ ದಿನವಾದರೂ ಮಲಗುವ ಸಮಯವನ್ನು ಪದೇ ಪದೇ ಬದಲಾಯಿಸ ಬೇಡಿ. ವಾರದ ಅಂತ್ಯಕ್ಕೆ ಮರುದಿನ ರಜೆ ಇದೆ ಎಂದು ತಡವಾಗಿ ಮಲಗಲು ಹೋಗಬೇಡಿ. ಮಲಗುವ ಮುನ್ನ ಲಘು ಸಂಗೀತ ಅಥವಾ ಪುಸ್ತಕಗಳನ್ನು ಓದಿ. ಧ್ಯಾನ ಮಾಡುವುದೂ ಒಂದು ಉತ್ತಮ ಅಭ್ಯಾಸ.

* ನೀವು ಬೆಳಿಗ್ಗೆ ಬೇಗನೇ ಏಳಲು ಅಲರಾಂ ಹೊಂದಿಸುವಿರಾದರೆ ಮೊಬೈಲ್ ಅಥವಾ ಗಡಿಯಾರವನ್ನು ನಿಮ್ಮ ಹಾಸಿಗೆಯಿಂದ ತುಸು ದೂರ ಇಡಿ. ಇದರಿಂದ ಅಲರಾಂ ಧ್ವನಿ ನಿಮ್ಮನ್ನು ಎಚ್ಚರಿಸುವಾಗ ನೀವು ಎದ್ದು ಹೋಗಿಯೇ ಅದನ್ನು ಬಂದ್ ಮಾಡಬೇಕಾಗುತ್ತದೆ. ಹಾಸಿಗೆಯ ಪಕ್ಕದಲ್ಲೆ ಇದ್ದರೆ ನೀವು ಅದನ್ನು ಬಂದ್ ಮಾಡಿ ಮತ್ತೆ ಮಲಗಿ ಬಿಡುವ ಸಾಧ್ಯತೆ ಇದ್ದೇ ಇರುತ್ತದೆ.

* ಅಲರಾಂ ಗಂಟೆ ನಿಮ್ಮನ್ನು ಬೆಳಿಗ್ಗೆಯ ನಿದ್ರೆಯಿಂದ ಎಬ್ಬಿಸುವಲ್ಲಿ ಸಹಕಾರಿಯಾಗುತ್ತಿಲ್ಲವಾದರೆ, ಪ್ರತೀ ೫-೧೦ ನಿಮಿಷಕ್ಕೆ ಹೊಂದಿಕೆಯಾಗುವಂತೆ ಅಲರಾಂ ಇಡಿ. ಇದರಿಂದ ನಿಮ್ಮ ನಿರಂತರ ನಿದ್ರೆಗೆ ಭಂಗವಾಗುತ್ತದೆ ಮತ್ತು ನೀವು ಬೇಗನೇ ಏಳಬೇಕಾದ ಪ್ರಸಂಗ ಉದ್ಭವಿಸುತ್ತದೆ. ಕೆಲವೇ ದಿನಗಳಲ್ಲಿ ನಿಮಗೆ ಇದು ಅಭ್ಯಾಸವಾಗಿ ಹೆಚ್ಚಿನ ಅಲರಾಂ ಗಳ ಅಳವಡಿಕೆ ತಪ್ಪುತ್ತದೆ.

* ಬೇಗನೇ ಏಳಲು ಯಾವುದಾರೂ ಒಂದು ಕಾರಣ ಹುಡುಕಿ. ಉದಾಹರಣೆಗೆ ವಾಕಿಂಗ್, ಸೈಕ್ಲಿಂಗ್, ಆಟಗಳು, ಯೋಗ ಇತ್ಯಾದಿ. ಇವುಗಳ ನೆಪದಿಂದಾದರೂ ನಿಮಗೆ ಬೇಗನೇ ಏಳುವ ಮನಸ್ಸಾಗುತ್ತದೆ. ನೀವು ಈ ಮೇಲಿನ ಯಾವುದೇ ಚಟುವಟಿಕೆಗಳನ್ನು ಮಾಡಲು ನಿಮ್ಮ ಗೆಳೆಯನ ಸಹಾಯ ಪಡೆಯಿರಿ. ಆಗ ಆತ ನಿಮ್ಮನ್ನು ಎದ್ದು ಬರುವವರೆಗೆ ಫೋನ್ ಮಾಡುತ್ತಲೇ ಇರುತ್ತಾನೆ. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ದೇವಸ್ಥಾನಕ್ಕೆ ಅಥವಾ ಪ್ರಾರ್ಥನಾ ಸ್ಥಳಗಳಿಗೆ ಹೋಗುವುದೂ ಉತ್ತಮ ಅಭ್ಯಾಸ.

*  ಬೆಳಿಗ್ಗೆ ಬೇಗನೇ ಏಳದಂತೆ ಮಾಡುವ ಗೊಂದಲಮಯ ವಿಷಯಗಳನ್ನು ದೂರವಿಡಿ. ತಡ ರಾತ್ರಿಯ ತನಕ ಟಿವಿಯಲ್ಲಿ ಸಿನೆಮಾ, ಕ್ರೀಡೆಗಳನ್ನು ನೋಡುವುದು. ಮೊಬೈಲ್ ನಲ್ಲಿ ಏನಾದರೂ ವಿಷಯವನ್ನು ವೀಕ್ಷಣೆ ಮಾಡುವುದು. ಇದರಿಂದ ನೀವು ರಾತ್ರಿ ಮಲಗುವಾಗ ತಡವಾಗುತ್ತದೆ. ಈ ಕಾರಣದಿಂದ ಏಳಲೂ ತಡವಾಗುತ್ತದೆ. ಮೊಬೈಲ್ ಅನ್ನು ಹಾಸಿಗೆ ಪಕ್ಕದಲ್ಲಿ ಇಡಲೇ ಬೇಡಿ.

* ಬೇಗನೇ ಏಳುವ ನಿಮ್ಮ ಗೆಳೆಯರು ಅಥವಾ ಸಂಬಂಧಿಕರ ಜೊತೆ ಸಂಪರ್ಕದಲ್ಲಿರಿ. ಅವರು ಏಳುವಾಗ ನಿಮ್ಮನ್ನೂ ಎಬ್ಬಿಸುವಂತೆ ತಿಳಿಸಿ. ಅವರು ನಿಮ್ಮ ಪಕ್ಕದವರೇ ಆಗಿದ್ದರೆ, ಅವರು ಎದ್ದು ವಾಕ್ ಮಾಡುವಾಗ ಅಥವಾ ಯೋಗ ಮಾಡುವಾಗ ನೀವೂ ಅವರ ಜೊತೆ ಸೇರಿಕೊಂಡು ಬಿಡಿ. ಬೆಳಿಗ್ಗೆ ಎದ್ದು ನಿಮ್ಮ ಹೂದೋಟಕ್ಕೆ ನೀರನ್ನು ಸಹಾ ಹಾಕಬಹುದಲ್ಲಾ!

* ನಿಮಗೆ ರಾತ್ರಿ ತಡವಾಗಿ ಮಲಗೋದು ಅನಿವಾರ್ಯವಾಗಿದ್ದರೆ, ನೀವು ಬೆಳಿಗ್ಗೆ ಏಳೋದು ಯಾವಾಗಲೂ ತಡವಾಗುವುದಾದರೆ ನೀವು ಯಾವಾಗಲೂ ಏಳುವ ಸಮಯಕ್ಕಿಂತ ೧೦-೧೫ ನಿಮಿಷ ಬೇಗನೇ ಏಳುವುದನ್ನು ಅಭ್ಯಾಸ ಮಾಡಿ. ಅದಕ್ಕೆ ಸರಿಯಾಗಿ ಅಲರಾಂ ಇಡಿ. ನೀವು ಬೆಳಿಗ್ಗೆ ೭ ಅಥವಾ ೮ ಗಂಟೆಗೆ ಏಳುವಿರಾದರೆ ಅಲರಾಂ ಅನ್ನು ೬.೪೫ ಕ್ಕೆ ಅಥವಾ ೭.೪೫ಕ್ಕೆ ಇಡಿ. ಇದರಿಂದ ದಿನಗಳು ಸರಿದಂತೆ ಬೇಗನೇ ಏಳುವ ಅಭ್ಯಾಸ ಆಗುತ್ತದೆ.

* ನೀವು ಬೇಗನೇ ಎದ್ದಾಗ ನಿಮ್ಮ ಇಷ್ಟದ ಹಾಡು ಕೇಳುವುದೋ, ಒಂದು ಕಪ್ ಚಹಾ/ಕಾಫಿ ಕುಡಿಯೋದೋ ಮಾಡಿ. ಇದರಿಂದ ನಿಮ್ಮ ಮನಸ್ಸು ಉಲ್ಲಾಸಭರಿತವಾಗುತ್ತದೆ. ನಿಮ್ಮ ಮಕ್ಕಳು ಬೇಗನೇ ಎದ್ದು ಶಾಲೆಗೆ ಹೋಗುತ್ತಿದ್ದರೆ, ಅವರನ್ನು ನೀವು ತಯಾರು ಮಾಡಿ. ಅವರ ಟಿಫಿನ್ ನೀವೇ ತುಂಬಿಸಿ ಅಥವಾ ತಯಾರು ಮಾಡಿ. ಪ್ರತೀ ದಿನ ಬೇರೆ ಬೇರೆ ತಿಂಡಿ ಮಾಡುವುದು ನಿಮಗೆ ಹವ್ಯಾಸವಾಗಿ ಬಿಟ್ಟರೆ, ನೀವು ಬಹು ಬೇಗನೇ ಏಳಲು ಶುರು ಮಾಡುವಿರಿ.

* ರಾತ್ರಿ ಮಲಗುವಾಗ ನಿದ್ರೆ ಬರಲು ನಿದ್ರೆ ಮಾತ್ರೆ ತೆಗೆದುಕೊಳ್ಳುವುದು ಅಥವಾ ಮದ್ಯಪಾನ ಮಾಡುವುದು ಅಭ್ಯಾಸ ಮಾಡಬೇಡಿ. ಇವುಗಳು ಒಂದೆರಡು ದಿನ ಆರಾಮದಾಯಕವಾಗಿ ಕಂಡರೂ ನಂತರ ಚಟವಾಗಿ ಪರಿವರ್ತನೆಯಾಗುತ್ತವೆ. ಚಟದಿಂದ ಚಟ್ಟ ಹತ್ತಲು ತುಂಬಾ ದಿನ ಬೇಡ ಅಲ್ಲವೇ? ಬೆಳಿಗ್ಗೆ ಬೇಗ ಏಳಲು ನಿಮ್ಮದೇ ಆದ ಕಾರ್ಯಸೂಚಿಗಳನ್ನು ಅವಲಂಬಿಸಿ, ಆರೋಗ್ಯದಾಯಕವಾದ ಬದುಕನ್ನು ನಿಮ್ಮದಾಗಿಸಿಕೊಂಡು ಬಿಡಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ