ಮುಂಜಾವಿನ ಧ್ವನಿ

ಮುಂಜಾವಿನ ಧ್ವನಿ

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೧೦೦.೦೦, ಮುದ್ರಣ: ೨೦೨೪

ವೃತ್ತಿಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಈಗ ನಿವೃತ್ತಿ ಜೀವನವನ್ನು ಅನುಭವಿಸುತ್ತಿರುವ ರತ್ನಾ ಕೆ ಭಟ್ ತಲಂಜೇರಿ (ರತ್ನಕ್ಕ) ಇವರು ಬರೆದ ಗಝಲ್ ಗಳ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. “ಗಝಲ್ ಬರವಣಿಗೆಯಲ್ಲಿ ನುರಿತವಳು ನಾನಲ್ಲ" ಎಂದು ಪ್ರಾಮಾಣಿಕವಾಗಿಯೇ ಹೇಳುವ ರತ್ನಕ್ಕ ಇದುವರೆಗೆ ಬರೆದ ಗಝಲ್ ಗಳನ್ನೆಲ್ಲಾ ಸೇರಿಸಿ ಸಂಕಲನದ ರೂಪದಲ್ಲಿ ಹೊರತಂದಿದ್ದಾರೆ. ಇವರ ಈ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಇವರ ಸಹೋದರ ಹಾಗೂ ಸಾಹಿತಿ ಹಾ ಮ ಸತೀಶ ಮತ್ತು ಕಥಾಬಿಂದು ಪ್ರಕಾಶನದ ಪ್ರದೀಪ್ ಕುಮಾರ್ ಇವರು. ರತ್ನಕ್ಕನವರ ಯಾವುದೇ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಅವರ ಪತಿ ತಲಂಜೇರಿ ಕೃಷ್ಣ ಭಟ್ ಅವರನ್ನು ಹಾಗೂ ವಾಟ್ಸಾಪ್ ಬಳಗ ‘ಗಝಲ್ ವಾಹಿನಿ' ಇದರ ಸದಸ್ಯೆಯಾಗಿದ್ದು ತಾವು ಬರೆದ ಗಝಲ್ ಗಳ ತಪ್ಪು ಒಪ್ಪುಗಳನ್ನು ತಿದ್ದಿದ ಹಿರಿಯ ಗಝಲ್ ಬರಹಗಾರರಾದ ಡಾ. ಸುರೇಶ್ ನೆಗಳಗುಳಿಯವರನ್ನು ತಮ್ಮ ಲೇಖಕರ ನುಡಿಯಲ್ಲಿ ನೆನಪಿಸಿಕೊಂಡಿದ್ದಾರೆ. 

ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಯುವ ಕವಿ ಲತೀಶ್ ಎಂ ಸಂಕೋಳಿಗೆಯವರು. ಲತೀಶ್ ಅವರು ತಮ್ಮ ಬೆನ್ನುಡಿಯಲ್ಲಿ ಬರೆದ ಕೆಲವು ಸಾಲುಗಳು ನಿಮ್ಮ ಓದಿಗಾಗಿ..." ಇವರ ಬಹುತೇಕ ಕವಿತೆಗಳು ಬಾನಲ್ಲಿ ಮೂಡುವ ತುಂಬುಪೆರೆಯಂತೆ ಕಂಗೊಳಿಸಿ ಓದುಗರ ಹೃದಯಕ್ಕೆ ಲಗ್ಗೆಯಿಟ್ಟು, ಸುತ್ತಲೂ ಮಲಯಾನಿಲ ಪಸರಿಸಿದಂತೆ ಒಂದು ರೀತಿಯ ಅವ್ಯಕ್ತ ಅನುಭವವನ್ನು ನೀಡುತ್ತದೆ. ಈಗಾಗಲೇ ಬಿಡುಗಡೆಗೊಂಡಿರುವ ಪುಷ್ಯರಾಗ ಪುತ್ಥಳಿಯಂತಿರುವ ಸ್ವಪ್ನ ಸುಂದರಿ ಕವನ ಸಂಕಲನದ ಕೆಲವೊಂದು ಕವನಗಳನ್ನು ಓದುವಾಗ ಈ ರೀತಿಯ ಸ್ವಾನುಭಾವ ಅರಿವಿಗೆ ಬರುತ್ತದೆ. ತನ್ನ ವೈಯಕ್ತಿಕ ಜಂಜಡಗಳ ನಡುವೆಯೂ ಸಾಹಿತ್ಯ ಕೃಷಿಯನ್ನು ಬಹಳವಾಗಿ ಪ್ರೀತಿಸುವ ಹಿರಿಯಮಾತೆ ಇದೀಗ ಮುಂಜಾವಿನ ಧ್ವನಿ ಗಝಲ್ ಸಂಕಲನವನ್ನು ಪ್ರಕಟಣೆಗೆ ಸಿದ್ಧಪಡಿಸಿದ್ದು ಅತ್ಯಂತ ಸಂತೋಷದ ವಿಷಯ. ಈ ಸಂಕಲನದಲ್ಲಿರುವ ಬಹುತೇಕ ಗಝಲ್ ಗಳು ಮುನ್ನೇಸರಿನ ಮುಂಜಿನಿಂದ ಹೊರಬಂದ ಮೂಡಣದ ಮಿಹಿರನಂತೆ ಕಂಗೊಳಿಸಿ, ಚಿಪ್ಪಿನೊಳಗಿಹ ಮುತ್ತಿನಂತೆ ಹೊನ್ನಕಾಂತಿಯ ಹರಿಸಿದಂತೆ ಭಾಸವಾಗುತ್ತದೆ. ಇವರ ಗಝಲ್ ನಲ್ಲಿ ನೋವಿದೆ, ನಲಿವಿದೆ, ಸಿಹಿಕಹಿಯ ಮಿಶ್ರಣವಿದೆ, ಅಂತಿಮವಾಗಿ ಸಮಾಜದಲ್ಲಿನ ಅಂಕುಡೊಂಕುಗಳ ವಿರುದ್ಧ ಹೋರಾಡುವ ಗಟ್ಟಿ ಧ್ವನಿಯಿದೆ. “

ಈ ಗಝಲ್ ಕೃತಿಯ ಲೇಖಕಿಯ ಖಾಸಾ ತಮ್ಮನಾದ ಸಾಹಿತಿ, ಗಝಲ್ ಕವಿ ಹಾ ಮ ಸತೀಶ್ ಅವರು ತಮ್ಮ ಅಕ್ಕನ ಗಝಲ್ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ. ಅವರು “ ಸುಮಾರು ೪ ವರುಷಗಳಿಂದ ಇವರು ಗಝಲ್ ಬರೆಯಲು ಪ್ರಾರಂಭಿಸಿದ್ದು ಅಲ್ಪ ಸಮಯದಲ್ಲೇ ಅದರ ಒಳ ಹೊರಗನ್ನು ಅಭ್ಯಾಸಮಾಡಿ, ಅರ್ಥೈಸಿಕೊಂಡು ಸುಂದರವಾದ ಗಝಲ್ ಗಳನ್ನು ಓದುಗರಿಗೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಇನ್ನೊಂದು ಗುಣ ನನಗಿಷ್ಟ. ಗೊತ್ತಿಲ್ಲದ ವಿಷಯಗಳನ್ನು ಹಿರಿಯರಿರಲಿ, ಕಿರಿಯರಿರಲಿ ಕೇಳಿ ತಿಳಿದುಕೊಳ್ಳುವ ಸ್ವಭಾವ ಇಂದಿಗೂ ಇದೆ. 

ಸುಮಾರು ೬೦ ಗಝಲ್ ಗಳುಳ್ಳ ಈ ಸಂಕಲನದಲ್ಲಿ 'ಪ್ರಕೃತಿ ಪ್ರೀತಿ ಬದುಕು' ಈ ವಿಷಯದ ಮೇಲಿಂದ ಅನೇಕ ಗಝಲ್ ಗಳನ್ನು ಕಾಣಬಹುದು. ಜೊತೆಗೆ ವೈವಿಧ್ಯಮಯ ಗಝಲ್ ಗಳೂ ಇವೆ. ‘ಸ್ನೇಹದ ಮೊಸರಿಗೆ ಕಳಂಕದ ಕಲ್ಲನ್ನು ಎಸೆಯದಿರು ನೀನು' ಇಲ್ಲಿ ಸ್ನೇಹ ಅಮರವಾದದ್ದು ಅದಕ್ಕೆ ಕಳಂಕ ಹಚ್ಚದಿರು ಎಂಬುವುದಕ್ಕೆ ಉಪಮೇಯ ಕೊಡುವ ಮುಖಾಂತರ ಒಂದು ಅದ್ಭುತ ಸಂದೇಶವನ್ನು ಓದುಗರಿಗೆ ತನ್ನ ಗಝಲ್ ಮೂಲಕ ಕೊಟ್ಟಿದ್ದಾರೆ. ಹಾಗೇ ತಾಯಿಯ ಬಗೆಗಿನ ಮತ್ತೊಂದು ಗಝಲ್ ಹೀಗಿದೆ-

‘ಸಹನೆಯ ಮುರಿದು ಅತ್ತಿರುವ ಹೊತ್ತುಗಳ ಜಗಕೆ ಬಿತ್ತರಿಸು ಅವ್ವಾ’ ಹೆತ್ತತಾಯಿಗೆ ಮಗು ಹೇಳುವ ಮಾತು ಸತ್ಯವಲ್ಲವೇ? ಹೀಗೆ ಇಂತಹ ಮನಸ್ಸನ್ನು ಸೆರೆ ಹಿಡಿಯುವಂತಹ ಅನೇಕ ಗಝಲ್ ಗಳು ಈ ಸಂಕಲನದಲ್ಲಿವೆ. ಗಝಲ್ ನಿಯಮ ಮೀರದಂತೆ ಸುಂದರವಾಗಿ ಬರೆಯುವ ಕಲೆ ಕರಗತವಾಗಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸುಮಾರು ೪೪ ಪುಟಗಳ ಈ ಪುಟ್ಟ ಪುಸ್ತಕವನ್ನು ಲೇಖಕಿ ತಮ್ಮ ತಂದೆ ತಾಯಿಯವರಾದ ಪುತ್ರೋಡಿ ಈಶ್ವರ ಭಟ್ ಹಾಲುಮಜಲು ಮತ್ತು ಪುತ್ರೋಡಿ ಶಂಕರಿ ಅಮ್ಮ ಹಾಲುಮಜಲು ಇವರಿಗೆ ಅರ್ಪಣೆ ಮಾಡಿದ್ದಾರೆ.