ಮುಂಜಾವಿನ ರತ್ನಗಳು

ಮುಂಜಾವಿನ ರತ್ನಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರತ್ನಾ ಕೆ ಭಟ್ ತಲಂಜೇರಿ
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-೫೭೫೦೧೫, ಮೊ: ೯೩೪೧೪೧೦೧೫೩
ಪುಸ್ತಕದ ಬೆಲೆ
ರೂ. ೭೦.೦೦, ಮುದ್ರಣ: ೨೦೨೪

ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಮುಂಜಾವಿನ ರತ್ನಗಳು’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ನುಡಿಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು ಮಾಡಿದ್ದಾರೆ. ಕೆಲವೇ ಕೆಲವು ಸಾಲುಗಳಲ್ಲಿ ನಮಗೆ ಜೀವನ ಮೌಲ್ಯಗಳನ್ನು ಕಲಿಸಬಲ್ಲ ಶಕ್ತಿ ಈ ನುಡಿಗಳಿಗಿವೆ. ಕೆಲವು ನುಡಿಗಳು ೨ ವಾಕ್ಯದಲ್ಲೇ ಮುಗಿದರೆ, ಕೆಲವು ೧೫-೨೦ ವಾಕ್ಯಗಳಿಗೆ ಹಿಗ್ಗಿವೆ. ತಮ್ಮ ಮನದಾಳದ ನುಡಿಗಳನ್ನು ರತ್ನಾ ಭಟ್ ಅವರು ಹಂಚಿಕೊಂಡಿರುವುದು ಹೀಗೆ…

“ ಮೊದಲಿನಿಂದಲೂ ಬರೆಯುವ ಹವ್ಯಾಸವಿಟ್ಟುಕೊಂಡಿದ್ದ ನನಗೆ ಸರಿಯಾದ ರೀತಿಯಲ್ಲಿ ಬರವಣಿಗೆಗೆ ಪ್ರೋತ್ಸಾಹ ದೊರೆತದ್ದು ವಾಟ್ಸಾಪ್ ಬಳಗದ ಓದುಗರು ಹಾಗೂ ಕವಿಬಂಧುಗಳಿಂದ. ಪ್ರತಿನಿತ್ಯ ಇಂದಿಗೊಂದು ನುಡಿ ಬರೆಯುವ ಹವ್ಯಾಸವಿತ್ತು. ಇದೇ ‘ಆನೆಬಲ’ವಾಗಿ ಈ ಹೊತ್ತಗೆ ಸಂಗ್ರಹ ಹೊನ್ನ ನುಡಿ ತಮ್ಮ ಮುಂದೆ ಪ್ರಕಟಿಸಲು ಕಾರಣವಾಯಿತು. ಬರವಣಿಗೆಗೆ ಮೊದಲ ಮೆಚ್ಚುಗೆ ನನ್ನ ಯಜಮಾನರಾದ, ನಿವೃತ್ತ ಮುಖ್ಯೋಪಾಧ್ಯಾರೂ, ಯಕ್ಷಗಾನ ಕಲಾವಿದರೂ ಆದ ತಲಂಜೇರಿ ಕೃಷ್ಣಭಟ್ ರವರದ್ದು. ನನ್ನ ಪ್ರತಿಯೊಂದು ಚಟುವಟಿಕೆಯ ಹಿಂದಿನ ಪ್ರೇರಕ ಶಕ್ತಿ ಅವರದೇ. ಬೇರೆ ಬೇರೆ ಪುಸ್ತಕಗಳನ್ನು ಓದುವ ಹವ್ಯಾಸ, ಸ್ವತಃ ತಾಳಮದ್ದಳೆ, ಯಕ್ಷಗಾನದಲ್ಲೂ ತೊಡಗಿಸಿಕೊಂಡದು ಈ ಬರವಣಿಗೆಗೆ ನಾಂದಿಯಾಯಿತು. ಜೊತೆಗೆ ಶಿಕ್ಷಕ ವೃತ್ತಿಯೂ ಇತ್ತು. ಓದಿದ ಅನುಭವ, ಜೀವನಾನುಭವ, ಕೆಲವೊಂದು ಪುಸ್ತಕಗಳ ನುಡಿ ವಿಸ್ತಾರ, ಕಂಡ ದೃಶ್ಯಗಳು, ನೋವು-ನಲಿವುಗಳ ಪ್ರತಿಬಿಂಬವೇ ಈ ಸಂಕಲನದಲ್ಲಿ ಕಾಣಬಹುದು.”

ಈ ಪುಸ್ತಕದ ಬೆನ್ನುಡಿಯಲ್ಲಿ ಒಂದು ನುಡಿಯನ್ನು ಬಳಸಿಕೊಳ್ಳಲಾಗಿದೆ. ಅದು ಬಹಳ ಸೊಗಸಾಗಿದೆ. “ಎಲ್ಲವೂ ಆತನ ಕೊಡುಗೆ, ನಮ್ಮದೇನಿಲ್ಲ. ಕಡೆಗೆ ಅವನಿಗೇ ಎಲ್ಲವೂ ಸೇರಬೇಕು. ಮಧ್ಯದಲ್ಲಿ ನಮ್ಮ ಶ್ರಮದ ದುಡಿಮೆ ಅಷ್ಟೆ. ಇದುವೇ ಜೀವನ. ಹುಟ್ಟು ಮತ್ತು ಸಾವಿನ ಎರಡು ಮಜಲುಗಳ ಮಧ್ಯೆ ನಾವು ಬದುಕಿಗಾಗಿ ಅನೇಕ ಪಾತ್ರಗಳನ್ನು ನಿರ್ವಹಿಸುತ್ತೇವೆ. ಅದೇ ಓರ್ವ ಕಲಾವಿದ/ದೆ ಹೊಟ್ಟೆಪಾಡಿಗಾಗಿಯೋ, ಕುಟುಂಬ ನಿರ್ವಹಣೆಗಾಗಿಯೋ ಅಥವಾ ತನ್ನ ಮನಸ್ಸಿನ ಸಂತೋಷಕ್ಕಾಗಿಯೋ ರಂಗಭೂಮಿಯನ್ನು ಆಶ್ರಯಿಸಿರಬಹುದು. ತನ್ನ ಬೇನೆ - ಬೇಸರವನ್ನು ಬದಿಗೊತ್ತಿ ಪ್ರೇಕ್ಷಕರನ್ನು ರಂಜಿಸಬಹುದು. ಹಲವು ಜನ ರಂಗಭೂಮಿಯನ್ನೇ ತಮ್ಮ ವೃತ್ತಿಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡು ಅದರಲ್ಲಿ ಬದುಕು ಕಟ್ಟಿಕೊಂಡವರಿದ್ದಾರೆ. ಅವರ ನಟನೆಗೊಂದು ನಮಸ್ಕಾರ. ರಂಗದ ಮೇಲೆ ನಟನೆ ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಚಾಕಚಾಕ್ಯತೆಗೆ ಆದ್ಯತೆ. ಕಪಟ ನಾಟಕ ಸೂತ್ರದಾರ ಭಗವಾನ್ ಶ್ರೀಕೃಷ್ಣನ ನಾಟಕದ ಬಗ್ಗೆ ನಾವೆಲ್ಲಾ ಓದಿ ತಿಳಿದವರೇ. ನಿಜ ಜೀವನದಲ್ಲಿಯೂ ಕೆಲವೊಮ್ಮೆ ಕೆಲವರ ಹತ್ತಿರ ನಾಟಕ ಮಾಡಬೇಕಾಗುತ್ತದೆ.”

ಇಲ್ಲಿರುವ ಬಹಳಷ್ಟು ನುಡಿಗಳು ಲೇಖಕಿಯ ಅನುಭವದ ಮಾತುಗಳೇ ಆಗಿವೆ. ಕೆಲವನ್ನು ಭಗವದ್ಗೀತೆಯಿಂದ, ಮಹಾಭಾರತದಿಂದ, ಸರ್ವಜ್ಞನ ವಚನಗಳಿಂದ ಬಳಸಿಕೊಂಡಿದ್ದಾರೆ. ಹೆಣ್ಣು ಮಗುವಿನ ಬಗ್ಗೆ ಅವರು ಬರೆದ ಪುಟ್ಟ ಹನಿಗವನದ ಸಾಲುಗಳು ಬಹಳ ಮಾಹಿತಿ ಪೂರ್ಣವಾಗಿದೆ.

ಹೆಣ್ಣು ಮನೆಯ ನಂದಾ ದೀಪ

ಆಕೆ ಖಂಡಿತಾ ಆಗಿಲ್ಲ ಶಾಪ

ವಂಶವ ಬೆಳೆಸುವ ಮಹಾರೂಪ

ಮನೆಮನೆಯ ಹೊನ್ನ ರೂಪ

೧೨೫ ಜ್ಞಾನದಾಹಕ ನುಡಿಗಳನ್ನು ಹೊಂದಿರುವ ಈ ಕೃತಿಯ ಕೆಲವೆಡೆ ಸಣ್ಣ ಪ್ರಮಾಣದ ಅಕ್ಷರ ತಪ್ಪುಗಳು ಕಂಡುಬರುತ್ತಿವೆ. ಮುಂದಿನ ಮುದ್ರಣದಲ್ಲಿ ಅವೆಲ್ಲವನ್ನೂ ಸರಿ ಪಡಿಸಿದರೆ ಇದೊಂದು ಅಮೂಲ್ಯವಾದ ಪುಸ್ತಕವಾಗುವುದರಲ್ಲಿ ಸಂದೇಹವಿಲ್ಲ. ಲೇಖಕಿ ಈ ಕೃತಿಯನ್ನು ತಮ್ಮ ತಂದೆ ಪುತ್ರೋಡಿ ಈಶ್ವರ ಭಟ್ ಹಾಗೂ ತಾಯಿ ಪುತ್ರೋಡಿ ಶಂಕರಿ ಅಮ್ಮ ಹಾಲುಮಜಲು ಇವರಿಗೆ ಅರ್ಪಣೆ ಮಾಡಿದ್ದಾರೆ.