ಮುಂಜಾವ ಮಂಜಿನ ಮುತ್ತಂತಹ ನಗುವು

ಮುಂಜಾವ ಮಂಜಿನ ಮುತ್ತಂತಹ ನಗುವು

ಕವನ

ಮುಂಜಾವ ಮಂಜಿನ ಮುತ್ತಂತಹ ನಗುವು
ಸೆಳದಾಯ್ತೀಗ ಷೋಡಶಿಯ ಮನವು,
ಹೊಂಬೆಳಕ ಹರಡೈತಿ ತಂಪಾದ ಮೈಗೆ
ಚಂದದ ಓಕುಳಿ ಚೆಲ್ಲೈತೆ ಅಂಗಳದಿ.

ಹರ‍ಡ್ಯಾವು ಬಾಲೆಯ ಕುಂತಳದ ರಾಶಿ,
ಸ್ವರ್ಣದ ಲೇಪನ ಅದರಲ್ಲಿ ಅಡಗೈತೆ,
ಹೊನ್ನಿನ ನದಿಯು ಉಕ್ಕಿದಾಂಗ ಕಂಡು,
ಕುಣಿದೈತಿ ನೋಡ ಹೆಣ್ಣಿ..ನ ಮನವು....

ಮಂಜಿನ ತಂಪಕ್ಕೆ ಅರಳಿದ ಹೂವಂಗ,
ಕೆನ್ನೆಯ ಮೇಲೋಂದು ಗುಳಿಯಿಟ್ಟ ನಗುವಾಂಗ,
ಕೇದಿಗೆಯ ಗರಿಹಾಂಗ ಬೆಳ್ಳಿಯ ಕವಲು,
ಸೀಳೈತೆ ನೋಡ ಆ ಕಣ್ಣಿನ ಸಿಗ್ಗು.

ಚೆಂದಾದ ಚೆಲುವಿಗೆ ಕೆಂಬೂಟ್ಟು ಇಟ್ಟಾಂಗ,
ಮೈನೆರೆದ ಬಾಲೆಯ ಹಸಿರುಟ್ಟ ಖುಷಿಯಾಂಗ,
ಚೆನ್ನಿಗನ ಅಂದಕ್ಕೆ ಮನ ಸೋತ ಇಳೆಯು,
ಮೈಮುರಿದು ನಲುಗೈತೆ ಆ ಬೆಚ್ಚನೆಯ ಅಪ್ಪುಗೆಗೆ..