ಮುಂಡಗೋಡಿನ ಟಿಬೇಟಿಯನ್ ಕಾಲನಿ



ಹಸಿರು ಕಾಡಿನ ಜಿಲ್ಲೆ ಉತ್ತರ ಕನ್ನಡದಲ್ಲೊಂದು 'ಮಿನಿ - ಟಿಬೆಟ್' ಅರಳಿ ಕಂಗೊಳಿಸುತ್ತಿದೆ. ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ತಟ್ಟಹಳ್ಳಿಯ 4ಸಾವಿರ ಎಕರೆ ಪ್ರದೇಶದಲ್ಲಿ ಸುಮಾರು 60 ಸಾವಿರ ಟಿಬೇಟಿಯನ್ನರು ವಾಸಿಸುತ್ತಿದ್ದಾರೆ. ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸಕ್ಕಾಗಿ ಬಂದವರು, ಸನ್ಯಾಸಿಗಳನ್ನು ಸೇರಿಸಿದರೆ ಇವರ ಸಂಖ್ಯೆ ಲಕ್ಷ ಸಮೀಪಿಸುತ್ತಿದೆ.
ಉತ್ತರ ಕನ್ನಡದ ಮುಂಡಗೋಡ ಎಂದರೆ ಇಂದು ಅದು ಟಿಬೇಟಿಯನ್ನರ ಕಾಲೋನಿಯಾಗಿ ಗುರುತಿಸಿಕೊಳ್ಳುವಂತಾಗಿದೆ. ಇಲ್ಲಿನ ವಿಶ್ವವಿಖ್ಯಾತ ಬೌದ್ಧ ಮಠ, ಬೌದ್ಧ ಸನ್ಯಾಸಿಗಳ ಎರಡು ಲಾಮಾ ವಿಶ್ವವಿದ್ಯಾಲಯಗಳು ಆಕರ್ಷಕ ಟಿಬೇಟ್ ಶೈಲಿಯ ವಾಸ್ತು ಕಲಾ ಶೈಲಿಯ ಕಟ್ಟಡಗಳೊಂದಿಗೆ ಮನಮೋಹಕವಾಗಿ ಕಂಗೊಳಿಸುತ್ತಿವೆ. ಇಲ್ಲಿನ ವಿಭಿನ್ನ ಶೈಲಿಯ ಸುಂದರ ಬೌದ್ಧ ಮಠಗಳನ್ನು ನೋಡುವುದಕ್ಕಾಗಿಯೇ ನಿತ್ಯ ಸಾವಿರಾರು ಜನ ಉತ್ತರ ಕನ್ನಡದ ಮುಂಡಗೋಡಕ್ಕೆ ಬರುವಂತಾಗಿದೆ.
ಮುಂಡಗೋಡ ತಾಲ್ಲೂಕಿನ ತಟ್ಟಹಳ್ಳಿ ಪ್ರದೇಶವು ಮೊದಲು ಕಾಡಿನಿಂದ ಆವೃತವಾಗಿ ವಿರಳ ಜನವಸತಿ ಪ್ರದೇಶವಾಗಿತ್ತು. ತಾಲ್ಲೂಕು ಕೇಂದ್ರದ ಹತ್ತಿರದಲ್ಲೇ ಇರುವ ಈ ಪ್ರದೇಶವನ್ನು 1966ರಲ್ಲಿ ಅಂದಿನ ಭಾರತ ಸರ್ಕಾರ ಟಿಬೇಟಿಯನ್ನರಿಗೆ ನೀಡಿತು. ಇದು ಭಾರತದ ಅತಿ ದೊಡ್ಡ ಟಿಬೇಟಿಯನ್ ಆಶ್ರಯ ನೆಲೆಯಾಗಿದೆ. ಸುಮಾರು 60 ವರ್ಷಗಳ ಹಿಂದೆ ಚೀನಾದ ದಾಳಿಯಿಂದ ನಿರಾಶ್ರಿತರಾಗಿ ಆಶ್ರಯ ಕೇಳಿ ಭಾರತಕ್ಕೆ ಬಂದ ಟಿಬೆಟಿಯನ್ನರಿಗೆ ಸರ್ಕಾರ ಭಾರತದ ಕೆಲವು ಪ್ರದೇಶಗಳಲ್ಲಿ ನೆಲೆ ಕಲ್ಪಿಸಿದೆ. ಅವುಗಳಲ್ಲಿ ಮುಂಡಗೋಡದ ತಟ್ಟಹಳ್ಳಿ ಪ್ರದೇಶವೂ ಒಂದು. ಸುಮಾರು 4 ಸಾವಿರ ಎಕರೆ ಪ್ರದೇಶವಿದೆ. 1966ರಿಂದ ಈ ಪ್ರದೇಶದಲ್ಲಿ ಟಿಬೇಟಿಯನ್ನರ ಖಾಯಂ ಆಶ್ರಯ ತಾಣ ಮಾಡಿಕೊಂಡು ವಾಸಿಸುತ್ತಿದ್ದಾರೆ.
ಮುಂಡಗೋಡದ ತಟ್ಟಹಳ್ಳಿ ಪ್ರದೇಶದಲ್ಲಿರುವ ಟಿಬೇಟ್ ಕಾಲೋನಿಯ ಕ್ಯಾಂಪ್ ನಂ.1ನಲ್ಲಿರುವ 'ಗಾದೆನ್ ಜಾಂಗತ್ಸೆ' ಬೌದ್ಧ ಮಠವು ಟಿಬೇಟ್ ಶೈಲಿಯ ಆಕರ್ಷಕ ವಾಸ್ತುಶೈಲಿ, ಕಲೆ, ವರ್ಣ ವೈವಿದ್ಯ, ಅಲಂಕಾರಗಳಿಂದ ಕೂಡಿದ ಭವ್ಯ ಕಟ್ಟಡವಾಗಿದ್ದು, ಈ ಕಟ್ಟಡಕ್ಕಗಿ ಕೋಟ್ಯಾಂತರ ರೂ. ಖರ್ಚು ಮಾಡಲಾಗಿದೆ. 1999ರಲ್ಲಿ ಈ ಕಟ್ಟಡದ ಶಿಲಾನ್ಯಾಸವನ್ನು ಟಿಬೇಟಿಯನ್ನರ ಧರ್ಮಗುರು ದಲಾಯಿ ಲಾಮಾ ನೆರವೇರಿಸಿದ್ದರು. 2002ರಲ್ಲಿ ಅವರೇ ಉದ್ಘಾಟಿಸಿದರು. 'ಗಾದೆನ್ ಜಾಂಗತ್ಸೆ' ಬೌದ್ಧ ಮಠವು 4,05,000 ಚ. ಅಡಿ ವಿಸ್ತೀರ್ಣ ಭೂ ಪ್ರದೇಶದಲ್ಲಿ ಭವ್ಯವಾಗಿ ನಿರ್ಮಾಣಗೊಂಡಿದ್ದು, ಮುಂಡಗೋಡಕ್ಕೆ ಕಿರೀಟಪ್ರಾಯವಾಗಿದೆ.
ಈ ಬೌದ್ಧ ಮಠದಲ್ಲಿ ಬುದ್ಧನ ಕಂಚಿನ ಬೃಹತ್ ಮೂರ್ತಿ, ಶಾಕ್ಯಮುನಿ ಬುದ್ಧನ | ಸಾವಿರ ಕಿರುಮೂರ್ತಿಗಳು ಹಾಗೂ 1 ಸಾವಿರ ಜೆತ್ಸಾಂಗ್ ಖಫಾರ ಕಿರುಮೂರ್ತಿಗಳಿವೆ. ಅಲ್ಲದೇ ಕಟ್ಟಡವು ಟಿಬೇಟ್ ಶೈಲಿಯ ಒಳಾಂಗಣ ಅಲಂಕಾರದೊಂದಿಗೆ ವೈವಿಧ್ಯಮಯ ವರ್ಣ ತೈಲದ ಕಲಾಕೃತಿಗಳೊಂದಿಗೆ ಸೊಬಗನ್ನು ಹೆಚ್ಚಿಸಿಕೊಂಡಿದೆ. ಟಿಬೇಟ್ ಕಾಲೋನಿಯಲ್ಲಿರುವ ಹಲವಾರು ಭವ್ಯ ಕಟ್ಟಡಗಳು ಟಿಬೆಟ್ ಶೈಲಿಯಿಂದ ಕೂಡಿದ್ದು, ಈ ಪ್ರದೇಶದಲ್ಲಿ ಓಡಾಡಿದರೆ ಬೇರೆ ದೇಶಕ್ಕೆ ಹೋದ ಅನುಭವ ತರುತ್ತದೆ.
"ಗಾದೆನ್ ಜಾಂಗತ್ಸೆ" ಬೌದ್ಧ ಮಠವು 1959ರಲ್ಲಿ ಚೀನಾದ ವಸಾಹತು ಆಡಳಿತದಲ್ಲಿ ಸಂಪೂರ್ಣವಾಗಿ ದಾಳಿಗೆ ಒಳಗಾಗಿ ನಾಶವಾಗುವ ಸ್ಥಿತಿಗೆ ಬಂದಾಗ, ಧರ್ಮಗುರುಗಳ ಸಲಹೆಯಂತೆ ಇದನ್ನು ಉತ್ತರ ಕನ್ನಡದ ಮುಂಡಗೋಡದ ಟಿಬೆಟ್ ಕಾಲೋನಿಗೆ ಸ್ಥಳಾಂತರಿಸಿ, ಅಭಿವೃದ್ಧಿಪಡಿಸಲು ತೀರ್ಮಾನಿಸಲಾಯಿತು. ಇಂದು ಈ ಬೌದ್ಧ ಮಠವು 1300 ನೊಂದಾಯಿತ ಬೌದ್ಧ ಸನ್ಯಾಸಿಗಳನ್ನು ಹೊಂದಿದ್ದು, ಇದರಲ್ಲಿ ಕೆಲವರು ಭಾರತದ ಹಿಮಾಲಯದ ಪ್ರದೇಶಗಳಿಂದ ಬಂದ ಬೌದ್ಧ ಸನ್ಯಾಸಿಗಳೂ ಸೇರಿದ್ದಾರೆ.
ಮುಂಡಗೋಡು ಶಿರಸಿ ಮತ್ತು ಹುಬ್ಬಳ್ಳಿಯ ಹೆದ್ದಾರಿ ನಡುವೆ ಬರುತ್ತದೆ. ಶಿರಸಿಯಿಂದ ಮುಂಡಗೋಡಿಗೆ 56 ಕಿ. ಮೀ, ಹಾಗೂ ಹುಬ್ಬಳ್ಳಿಯಿಂದ ಮುಂಡಗೋಡಿಗೆ 51 ಕಿ. ಮೀ ಇದೆ. ಹುಬ್ಬಳ್ಳಿಗೆ ರೈಲು ಮತ್ತು ವಿಮಾನದ ವ್ಯವಸ್ಥೆ ಇದೆ. ರಸ್ತೆಯ ಮೂಲಕವೇ ಹುಬ್ಬಳ್ಳಿ ಮತ್ತು ಶಿರಸಿಯಿಂದ ಮುಂಡಗೋಡಿಗೆ ಪ್ರಯಾಣಿಸಬೇಕು . "ಬೌದ್ಧ ಧರ್ಮದ ನೆಲೆ, ಟಿಬೇಟಿಯನ್ನರ ವಾಸಸ್ಥಾನ, ಸಂಸ್ಕೃತಿ ವಿಭಿನ್ನತೆಯೊಂದಿಗೆ ನಾನಾ ಚಿಂತನ - ಮಂಥನಗಳ ಅನಾವರಣದ ನೆಲೆ ಈ ಮುಂಡಗೋಡು" ಬನ್ನಿ ಪ್ರವಾಸಕ್ಕೆ ಒಮ್ಮೆ.
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು