ಮುಂಬಯಿಯ ತಂಗಿಯೊಬ್ಬರ ಬದುಕಿನ ದಿನಚರಿ...

ಮುಂಬಯಿಯ ತಂಗಿಯೊಬ್ಬರ ಬದುಕಿನ ದಿನಚರಿ...

ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ ಪರಿವರ್ತನೆಗಾಗಿ ಮತ್ತು ಸಮಾಜದಲ್ಲಿ ನಮ್ಮ ಕನಿಷ್ಠ ಕರ್ತವ್ಯದ ನಿರ್ವಹಣೆಗಾಗಿ...

***

ತಲೆ ಸಿಡಿಯುತ್ತಿದೆ, ಕೈ ಕಾಲುಗಳು ತುಂಬಾ ನೋಯುತ್ತಿದೆ. ಜ್ವರವಂತೂ ತನ್ನ ಮಿತಿಯನ್ನೇ ಮೀರುತ್ತಿದೆ. ದೇಹ ಸುಡುತ್ತಿರುವ ಅನುಭವವಾಗುತ್ತಿದೆ. ತೊಡೆಯ ಸಂಧಿಯಲ್ಲಿ ಆಗಿರುವ ರಕ್ತ ಕುರ (ಕೆಟ್ಟ ರಕ್ತ ಗಡ್ಡೆಯಂತೆ ಹೆಪ್ಪಗಟ್ಟುವುದು) ದಲ್ಲಿ ಕೀವು ಸುರಿಯುತ್ತಿದೆ. ಜ್ವರಕ್ಕೊಂದು ಮಾತ್ರೆ, ನೋವು ಕಡಿಮೆಯಾಗಲು ಒಂದು ಮಾತ್ರೆ ತೆಗೆದುಕೊಂಡಿದ್ದೇನೆ. ಈ ಸ್ಥಿತಿಯಲ್ಲೂ ನಾನು ನನ್ನ ಕೆಲಸ ಮಾಡಲೇಬೇಕಿದೆ. ಅದು ಅನಿವಾರ್ಯ. ಏಕೆಂದರೆ ಮಾಂಸದ ದಂಧೆ ನಡೆಸುವ ಈ ಮನೆಯಲ್ಲಿ ಅಲ್ಪಸ್ವಲ್ಪ ಇಂಗ್ಲೀಷ್ ಮಾತನಾಡುವ ಇಪ್ಪತೈದರ ಚೆಲುವೆ ನಾನೊಬ್ಬಳೆ. 

ಒಳ್ಳೆಯ ಮೈಕಟ್ಟು ಹೊಂದಿ ಬೆಳ್ಳಗೆ ಆಕರ್ಷಕವಾಗಿದ್ದೇನೆ. ವಿಐಪಿ ಗಿರಾಕಿಗಳು, ಮನೆಯ ಘರ್ ವಾಲಿ ಮತ್ತು ನನ್ನ ಜೊತೆಗಾತಿಯರು ಹೇಳುವಂತೆ ನಾನು ತುಂಬಾ ಸೆಕ್ಸಿಯಾಗಿದ್ದೇನಂತೆ. ಈ ದಂಧೆಗೆ ತಳ್ಳಲ್ಪಡದಿದ್ದರೆ ಸಿನಿಮಾ ನಟಿಯಾಗಿರುತ್ತಿದ್ದೆ ಎಂದು ಹೇಳುತ್ತಾರೆ.                      

ಈಗ ಸಮಯ ರಾತ್ರಿ 11-30. ಭಾನುವಾರ. ಈ ಏರಿಯಾದಲ್ಲಿ ಸಣ್ಣಪುಟ್ಟ ಗಲಾಟೆ ಮಾಡಿಕೊಂಡಿದ್ದು ಆಮೇಲೆ ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಈಗ ಕಾರ್ಪೊರೇಟರ್ ಆಗಿರುವವನೊಬ್ಬ 2-3 ತಿಂಗಳಿಗೊಮ್ಮೆ ನನ್ನನ್ನು ಬುಕ್ ಮಾಡುತ್ತಾನೆ. ನಾನೆಂದರೆ ಅವನಿಗೆ ತುಂಬಾ ಇಷ್ಟ. ತನ್ನ ಸ್ನೇಹಿತನ ಅಪಾರ್ಟ್‌ಮೆಂಟ್ ಗೆ ನನ್ನನ್ನು ಕರೆಸಿಕೊಳ್ಳುತ್ತಾನೆ. ನನ್ನ ಫರ್ ವಾಲಿಗೂ ಎಲ್ಲಾ ರೀತಿಯ ರಕ್ಷಣೆ ಒದಗಿಸುತ್ತಾನೆ.

ಒಂದು ವಾರ ಮೊದಲೇ ನನ್ನನ್ನು ಬುಕ್ ಮಾಡಿದ್ದ. ಆಗ ಸ್ವಲ್ಪವೇ ಇದ್ದ ರಕ್ತ ಕುರ ಈಗ ವ್ರಣವಾಗಿದೆ. ರಕ್ತ ಕೆಟ್ಟಿರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ದಂಧೆಯ ಪರ್ಮನೆಂಟ್ ಡಾಕ್ಟರ್ ಮಾತ್ರೆ ಇಂಜೆಕ್ಷನ್ ಕೊಟ್ಟಿದ್ದಾರೆ. ಆದರೂ ಕಡಿಮೆಯಾಗಲಿಲ್ಲ. ಹೆಪ್ಪುಗಟ್ಟಿರುವ ಆ ಜಾಗದಲ್ಲಿ ಕೆಟ್ಟ ರಕ್ತ ತೆಗೆದು ಬ್ಯಾಂಡೇಜು ಮಾಡಬೇಕಿದೆ. ಅದು ವಾಸಿಯಾಗಲು 10-15 ದಿನ ಬೇಕಾಗುತ್ತದಂತೆ. ಈ ಬಾರಿ ಇವನನ್ನು ನಿಭಾಯಿಸಿದರೆ ಮುಂದಿನ ಬುಕಿಂಗ್ ವರೆಗೂ ಸಮಯವಿರುತ್ತದೆ. ಇವತ್ತೊಂದು ದಿನ ಹೇಗಾದರೂ ಮ್ಯಾನೇಜ್ ಮಾಡಲು ಘರ್ ವಾಲಿ ಹೇಳಿದ್ದಾಳೆ. ಅವನ ಬುಕಿಂಗ್ ಗೆ ಇಲ್ಲ ಎನ್ನಲು ನನ್ನ ಒಡತಿಗೆ ಧೈರ್ಯವಿಲ್ಲ. ಅದಕ್ಕಾಗಿ ಕ್ರೀಡಾಪಟುಗಳು ಉಪಯೋಗಿಸುವ ನೋವು ನಿವಾರಕ ಸಣ್ಣ ಬ್ಯಾಂಡೇಜನ್ನು ಆ ಜಾಗಕ್ಜೆ ಹಾಕಿ ಕಳಿಸಿದ್ದಾಳೆ. ಏನೋ ಸಣ್ಣ ಪ್ರಮಾಣದ ಗುಳ್ಳೆ ಎಂದು ಯಾಮಾರಿಸಲು ಹೇಳಿದ್ದಾಳೆ.                                

ಯಾವಾಗಲೂ ರಾತ್ರಿ 11 ಗಂಟೆಗೆಲ್ಲಾ ಬರುವವನು ಇವತ್ತು ಇನ್ನೂ ಬಂದಿಲ್ಲ. ಅವನು ನನ್ನನ್ನು ಬುಕ್ ಮಾಡಲು ನನ್ನ ಸೌಂದರ್ಯವೊಂದೇ ಕಾರಣವಲ್ಲ. ನನ್ನ ದೇಹ ಸುಖಕ್ಕಿಂತ ನಾನು ಮಾಡುವ ಬಾಡಿಮಸಾಜ್ ಅವನಿಗೆ ತುಂಬಾ ಇಷ್ಟ. ಬರುವಾಗಲೇ ವಿದೇಶಿ ರಮ್ ಮತ್ತು ನಾನ್ ವೆಜ್ ಪಾರ್ಸಲ್ ತರುತ್ತಾನೆ. ಒಂದು ಪೆಗ್ ಏರುತ್ತಿರುವಂತೆ ಸಂಪೂರ್ಣ ಶರಣಾಗುತ್ತಾನೆ ನನಗೆ. ಪ್ಯಾರಿಸ್‌ನಿಂದ ತರಿಸಿದ ಆಲಿವ್ - ಆಲ್ಮಂಡ್ ಮುಂತಾದ ಆಯಿಲ್ ಗಳ ಮಿಶ್ರಣದ ಬಾಡಿಮಸಾಜ್ ಆಯಿಲ್ ನಿಂದ ಅವನ ಮಸಾಜ್ ಪ್ರಾರಂಭಿಸುತ್ತೇನೆ.                   

ಸುಮಾರು ಎರಡು ಗಂಟೆಯಷ್ಟು ಕಾಲ ಈ ಮಸಾಜ್ ನಡೆಯುತ್ತದೆ. ಕಾಲ ಬೆರಳ ತುದಿಯಿಂದ ನೆತ್ತಿಯವರೆಗೂ ಅತ್ಯಂತ ಶ್ರಮದಿಂದ ಮಸಾಜ್ ಮಾಡುತ್ತೇನೆ. ಮಧ್ಯೆ ಮಧ್ಯ ಒಂದೊಂದೆ ಸಿಪ್ ಡ್ರಿಂಕ್ಸ್ ಕುಡಿಯುತ್ತಿರುತ್ತಾನೆ. ಮಸಾಜ್ ನಂತರ ನಾನೇ ಅವನಿಗೆ ಸ್ನಾನ ಮಾಡಿಸುತ್ತೇನೆ. ಈ ಅಪಾರ್ಟ್ ಮೆಂಟ್ ನಲ್ಲಿ ಸುಸಜ್ಜಿತ ಬಾತ್ ಟಬ್ ಇದೆ.

ನಂತರ ಇಬ್ಬರೂ ಒಟ್ಟಿಗೆ ಊಟ ಮಾಡುತ್ತೇವೆ. ಆ ಕ್ಷಣದಿಂದ ನನ್ನ ಇಡೀ  ದೇಹದ ಅಧಿಕಾರವನ್ನು ಅವನು ಮೃಗದಂತೆ ಆಕ್ರಮಿಸುತ್ತಾನೆ. ಆಹಾ ಆಹಾ......ಕೇಳಲು ಓದಲು ಊಹಿಸಿಕೊಳ್ಳಲು ರೋಮಾಂಚನವಾಗುತ್ತಿದೆಯೇ. ಏಕೆಂದರೆ ಹೇಗಿದ್ದರೂ ನಿಮ್ಮದು ಧಾರ್ಮಿಕ ಮನಸ್ಸುಗಳಲ್ಲವೇ. ಹೆಂಡತಿ ಹೊರತುಪಡಿಸಿ ಇತರ ಎಲ್ಲಾ ಹೆಣ್ಣುಗಳು ನಿಮಗೆ ದೈವಿಕ ಸ್ವರೂಪವಲ್ಲವೇ - ಪೂಜನೀಯವಲ್ಲವೇ. ಈ ಕ್ಷಣದ ನನ್ನ ಪರಿಸ್ಥಿತಿ ಎಷ್ಟೋ ಉತ್ತಮ. ನನ್ನ ಗೆಳತಿಯರ ಸ್ಥಿತಿ ಬೀದಿಯ ಹಂದಿ ನಾಯಿಗಳಿಗಿಂತ ಕೀಳು. ಕೀಚಕರು ಕಿತ್ತು ಕಿತ್ತು ತಿನ್ನುತ್ತಾರೆ. ಕಚ್ಚುವವನಾರೋ,  ಸಿಗರೇಟಿನಿಂದ ಸುಡುವವನಾರೋ,  ಮೈ ಪರಚುವವನಾರೋ?

ಅಬ್ಬಾ.....ಹೋಗುವಾಗ ಅವನು ಕೊಡುವ ಟಿಪ್ಸ್ ಮೇಲಷ್ಟೇ ನಮ್ಮ ಗಮನ. ಅವನಿಗೆ ಮಾತ್ರ ಯಾವ ಕುಂದು ಕೊರತೆಯೂ ಆಗದಂತೆ ನೋಡಿಕೊಳ್ಳಬೇಕು. ನೆನಪಿಸಿಕೊಂಡರೆ ಮೈ ಉರಿದುಹೋಗುತ್ತದೆ. " ಹೊಟ್ಟೆ ಪಾಡಿಗಾಗಿ ವೇಶ್ಯಾವೃತ್ತಿಯಲ್ಲಿರುವ ಹೆಣ್ಣನ್ನು ಭೋಗಿಸುವ  ಎಲ್ಲಾ ಗಂಡಸಿನ ಪ್ರತಿ ಕದಲಿಕೆಯಲ್ಲೂ ಅವನ ನೆನಪಿನಲ್ಲಿ ಅವನ ತಾಯಿ ತಂಗಿ ಅಕ್ಕ ನಿರಂತರವಾಗಿ ಪ್ರತಿ ಕ್ಷಣವೂ ನೆನಪಾಗುತ್ತಿರಲಿ " ಎಂದು ಶಪಿಸಬೇಕೆನಿಸುತ್ತದೆ. ಓ ಬೂಟಿನ ಶಭ್ಧವಾಗುತ್ತಿದೆ. ಅವನು ಬಂದನೆನಿಸಿತ್ತದೆ. ಉಳಿದದ್ದನ್ನು ಮುಂದೆ ಹೇಳುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ