ಮುಂಬೈಯ ನಾನ್-ಎಸಿ ಡಬಲ್-ಡೆಕರ್ ಬಸ್‌ಗಳಿಗೆ ವಿದಾಯ
ಮುಂಬೈ ಎಂದೊಡನೆ ನೆನಪಾಗುವುದು “ಗೇಟ್ ವೇ ಆಫ್ ಇಂಡಿಯಾ". ಹಾಗೆಯೇ ಅಲ್ಲಿನ ಕೆಂಬಣ್ಣದ ಡಬಲ್-ಡೆಕರ್ ಬಸ್‌ಗಳು. ಯಾಕೆಂದರೆ 1937ರಿಂದ ಅಲ್ಲಿನ ವಾಸಿಗಳಿಗೂ ಪ್ರವಾಸಿಗಳಿಗೂ ಸೇವೆ ಒದಗಿಸುತ್ತಿದ್ದವು ಈ ಬಸ್‌ಗಳು.
ಆದರೆ ಇನ್ನು ಅವು ನೆನಪು ಮಾತ್ರ. ಯಾಕೆಂದರೆ, ನಾನ್-ಎಸಿ (ಹವಾನಿಯಂತ್ರಿತವಲ್ಲದ) ಡಬಲ್-ಡೆಕರ್ ಬಸ್ 15 ಸಪ್ಟಂಬರ್ 2023ರಂದು ರಾತ್ರಿ 9.30 ಗಂಟೆಗೆ ತನ್ನ ಕೊನೆಯ ಟ್ರಿಪ್ ಮುಗಿಸಿ ಯಾನ ನಿಲ್ಲಿಸಿತು. 1990ರ ದಶಕದ ಆರಂಭದಲ್ಲಿ 900 ಡಬಲ್-ಡೆಕರ್ ಬಸ್‌ಗಳು ಮುಂಬೈಯಲ್ಲಿ ಸಂಚರಿಸುತ್ತಿದ್ದವು ಎಂಬುದಿನ್ನು ಚರಿತ್ರೆ.
ಕೊನೆಯ ದಿನ ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆಸ್ಟ್ (ಬೃಹನ್ಮುಂಬಯಿ ಇಲೆಕ್ಟ್ರಿಸಿಟಿ ಸಪ್ಲೈ ಆಂಡ್ ಟ್ರಾನ್ಸ್-ಪೋರ್ಟ್) ಬಸ್ ಕಂಡಕ್ಟರ್ ಗೋಪಾಲ್ ಸುಕ್ಟೆ ನೀಡುತ್ತಿದ್ದ ಸೂಚನೆ: “ಇವತ್ತು ಈ ಬಸ್ಸಿನ ಕೊನೆಯ ದಿನ. ಹಾಗಾಗಿ ಪ್ರತಿಯೊಬ್ಬರೂ ಹಳೆಯ ಟೈಪಿನ ಟಿಕೆಟ್ ತಗೊಳ್ಳಿ - ಇವತ್ತಿನ ನಿಮ್ಮ ಪ್ರಯಾಣ ನೆನಪಿನಲ್ಲಿ ಉಳಿಯಲಿಕ್ಕಾಗಿ."
ಮುಂಬೈಯ ಡಬಲ್-ಡೆಕರ್ ಬಸ್ಸಿನೊಂದಿಗೆ ಅಲ್ಲಿನ ಹಲವು ನಿವಾಸಿಗಳಿಗೆ ಅವಿನಾಭಾವ ಸಂಬಂಧ. ಆದ್ದರಿಂದ ಕೊನೆಯ ದಿನ ಹಲವರು ಧಾವಿಸಿ ಬಂದಿದ್ದರು. ಕೆಲವರಿಗೆ ಆ ಬಸ್ಸಿನೊಂದಿಗೆ ನಿಂತು ಅಥವಾ ಬಸ್ ಪ್ರಯಾಣಿಸುತ್ತಿರುವಾಗ ಸೆಲ್ಫಿ ತೆಗೆದುಕೊಳ್ಳುವ ಸಂಭ್ರಮ. ಇನ್ನು ಕೆಲವರಿಗೆ ಆ ಬಸ್ಸಿನಲ್ಲಿ “ವಿದಾಯ ಪ್ರಯಾಣ” ಮಾಡುವ ತವಕ. ಅವತ್ತು ಬಸ್ಸಿನ ಕೆಳಗಿನ ಡೆಕ್ಕಿನಲ್ಲಿ ಪ್ರಯಾಣಿಸಿದವರು ಕೆಲವೇ ಕೆಲವರು. ಯಾಕೆಂದರೆ, ಎಲ್ಲರಿಗೂ ಬಸ್ಸಿನ ಮೇಲಿನ ಡೆಕ್ಕಿನಲ್ಲಿ ಕುಳಿತು ಮುಂಬೈಯ ಪ್ರಯಾಣದ ನೋಟಗಳನ್ನು ಕೊನೆಗೊಮ್ಮೆ ನೆನಪಿನ ಖಜಾನೆಯಲ್ಲಿ ತುಂಬಿಕೊಳ್ಳುವ ಬಯಕೆ.
ಆ ದಿನ ವೃದ್ಧ ಗಜಾನನ ಕಂಬಾಡಿ (71 ವರುಷ) ನೆನಪಿನ ಲೋಕಕ್ಕೆ ಜಾರುತ್ತಾ ಹೇಳಿದ ಮಾತುಗಳು: “ಜನರಿಗೆ ಈ ಬಸ್ಸಿನ ಮಧುರ ನೆನಪುಗಳು ಹಲವು…. ಪ್ರತಿಯೊಬ್ಬರಿಗೂ ಈ ಬಸ್ಸಿನಲ್ಲಿ ಜಾಗವಿತ್ತು. ನನಗಂತೂ ಇದರ ಮೇಲಿನ ಡೆಕ್ಕಿನಲ್ಲಿ ಕುಳಿತು ಬೀಸುವ ಗಾಳಿಗೆ ಮುಖವೊಡ್ಡುತ್ತಾ, ಬಸ್ಸಿನ ಎತ್ತರದಿಂದ ಕಾಣಿಸುವ ದೃಶ್ಯಗಳನ್ನು ನೋಡುತ್ತಾ ಪ್ರಯಾಣ ಮಾಡುವುದೆಂದರೆ ಬಹಳ ಖುಷಿ. ಈ ಬಸ್‌ಗಳ ಸೇವೆ ನಿಲ್ಲಿಸುವ ನಿರ್ಧಾರವನ್ನು ಸರಕಾರ ಪುನರ್ ಪರಿಶೀಲಿಸಬೇಕು.”
ಅರಿಂದಮ್ ಮಹಾಪಾತ್ರ “ಈ ಬಸ್ಸಿನಲ್ಲಿ ನಾನು 2006ರಿಂದ ಪ್ರಯಾಣ ಮಾಡುತ್ತಿದ್ದೇನೆ. ಇವುಗಳಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಇವುಗಳ ಪ್ರಯಾಣ ನಿಂತೇ ಹೋಗುತ್ತದೆಂದು ನಾನು ಕಲ್ಪಿಸಿರಲಿಲ್ಲ. ಇವತ್ತು ವಿಷಯ ತಿಳಿಯುತ್ತಲೇ ಧಾವಿಸಿ ಬಂದಿದ್ದೇನೆ - ಇನ್ನಷ್ಟು ನೆನಪುಗಳನ್ನು ಬಾಚಿಕೊಳ್ಳಲಿಕ್ಕಾಗಿ” ಎನ್ನುತ್ತಾ ಭಾವುಕರಾದರು.
ಮುಂಬೈಯಲ್ಲಿ ವಾಸವಿದ್ದರೂ ಈ ವರೆಗೆ ಈ ಬಸ್ಸಿನಲ್ಲಿ ಪ್ರಯಾಣಿಸದಿದ್ದ ಕೆಲವರೂ ಕೊನೆಯ ದಿನ ಧಾವಿಸಿ ಬಂದಿದ್ದರು - ಇನ್ನು ಮುಂದೆ ಡಬಲ್-ಡೆಕರ್ ಬಸ್ಸಿನಲ್ಲಿ ಪ್ರಯಾಣಿಸುವ ಅವಕಾಶ ಸಿಗೋದಿಲ್ಲ ಎಂಬ ಕಾರಣಕ್ಕಾಗಿ. ಕೆಲವು ಪ್ರಯಾಣಿಕರು ಕೊನೆಯ ದಿನ ಪ್ರಯಾಣಿಸುತ್ತಾ ಪ್ರಸಿದ್ಧ "ಮುಂಬೈ ಮೇರಿ ಜಾನ್” ಹಾಡನ್ನು ಹಾಡುತ್ತಾ ಸಂಭ್ರಮಿಸಿದರು.
ಅಂಧೇರಿಯಲ್ಲಿ ಸಮಾನ ಮನಸ್ಕರ ಸಂಘಟನೆಯೊಂದು ಬಸ್ಸಿನ ಕೊನೆಯ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿತು. ಜೊತೆಗೆ ಬಸ್ಸನ್ನು ಹೂವಿನ ಹಾರ ಮತ್ತು ಬಲೂನುಗಳಿಂದ ಅಲಂಕರಿಸಿತು. ಅದರ ಅಧ್ಯಕ್ಷ ರೂಪೇಶ್ ಶೆಲೆಟ್‌ಕರ್ ಈ ಬಸ್ಸನ್ನು ಗುಜರಿಗೆ ಕೊಡಬಾರದು; ಸಿಯೋನ್‌ನಲ್ಲಿರುವ ಆರ್-ನಿಕ್ ಮ್ಯೂಸಿಯಂನಲ್ಲಿ ಬೆಸ್ಟ್ ಆಡಳಿತವು ಇದನ್ನು ರಕ್ಷಿಸಿಡಬೇಕೆಂದು ಆಗ್ರಹಿಸಿದರು.
ಈ ಡಬಲ್-ಡೆಕರ್ ಬಸ್‌ಗಳಿಗೆ 15 ವರುಷವಾಗಿದ್ದು ಆರ್.ಟಿ.ಓ. ನಿಯವದ ಅನುಸಾರ ಅವುಗಳ ಸೇವೆ ನಿಲ್ಲಿಸಲಾಯಿತು ಎಂದು ಬೆಸ್ಟ್ ಅಧಿಕಾರಿಗಳು ತಿಳಿಸಿದ್ದಾರೆ. ಅದೇನಿದ್ದರೂ ಡಬಲ್-ಡೆಕರ್ ಬಸ್ಸುಗಳು ಮುಂಬೈ ರಸ್ತೆಗಳಿಂದ ಕಣ್ಮರೆ ಆಗೋದಿಲ್ಲ. ಯಾಕೆಂದರೆ, ಈಗಾಗಲೇ ವಿವಿಧ ರೂಟುಗಳಲ್ಲಿ ಸಂಚರಿಸುತ್ತಿರುವ 19 ಹವಾನಿಯಂತ್ರಿತ ಡಬಲ್-ಡೆಕರ್ ಬಸ್‌ಗಳು ತಮ್ಮ ಸೇವೆ ಮುಂದುವರಿಸುತ್ತವೆ. ಜೊತೆಗೆ, "ಮುಂಬೈ ದರ್ಶನ”ಕ್ಕಾಗಿ ಇನ್ನೂ 20 ಹವಾನಿಯಂತ್ರಿತ ಬಸ್‌ಗಳ ಸೇವೆ ಆರಂಭಿಸಲಾಗುವುದೆಂದು ಬೆಸ್ಟ್ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.
ಒಂದು ಮಾತಂತೂ ನಿಜ: ಮುಂದಿನ ತಲೆಮಾರಿನವರು ನಾನ್-ಎಸಿ ಡಬಲ್-ಡೆಕರ್ ಬಸ್‌ಗಳನ್ನು ಮ್ಯೂಸಿಯಂನಲ್ಲಿ ಮಾತ್ರ ನೋಡಲು ಸಾಧ್ಯ.
ಎರಡು ಫೋಟೋ: ನಾನ್-ಎಸಿ ಡಬಲ್-ಡೆಕರ್ ಬಸ್ಸಿನ ಕೊನೆಯ ದಿನದ ಪ್ರಯಾಣ
ಫೋಟೋಗಳ ಕೃಪೆ: ದ ಹಿಂದೂ ಮತ್ತು ಇಂಡಿಯನ್ ಎಕ್ಸ್-ಪ್ರೆಸ್