ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ!

ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ!

ಬರಹ

ಮುಂಬೈ ದಾಳಿ: ಪ್ರಭುತ್ವಕ್ಕೆ ಕೊನೆಯ ಎಚ್ಚರಿಕೆ!

ಎರಡು ವಾರಗಳ ಹಿಂದಷ್ಟೇ ಇದೇ ಅಂಕಣದಲ್ಲಿ ನಾನು ಹಿಂದೂವಾದಿ ಗುಂಪುಗಳ ಭಯೋತ್ಪಾದನೆಯ ಬಗ್ಗೆ ಬರೆಯುತ್ತಾ, 'ಇದು ರಾಷ್ಟ್ರಕ್ಕೆ ಅಗ್ನಿ ಪರೀಕ್ಷೆಯ ಕಾಲ' ಎಂದಿದ್ದೆ. ಆದರೆ ಅಂತಹ ಅಗ್ನಿ ಪರೀಕ್ಷೆ ಇಷ್ಟು ಬೇಗ ಹೀಗೆ ಎದುರಾಗುತ್ತದೆಂದು ನಾನು ನಿರೀಕ್ಷಿಸಿರಲಿಲ್ಲ. ನಾನೇ ಏನು, ಬಹುಶಃ ಯಾರೂ ನಿರೀಕ್ಷಿಸಿರಲಾರರು. ನವೆಂಬರ್ 26ರ ಸಂಜೆ ಸಮುದ್ರದ ಮೇಲಿಂದ ಬಂದ ಭಯೋತ್ಪಾದಕರ ಗುಂಪೊಂದು ಮುಂಬೈನ ವಿವಿಧೆಡೆ ನಡೆಸಿರುವ ಹಿಂಸಾಚಾರ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ತಾಜ್, ಒಬೆರಾಯ್ ಹೊಟೆಲ್ಗಳು ಮತ್ತು ನಾರಿಮನ್ ಭವನದಲ್ಲಿದ್ದ ಅನೇಕ ವಿದೇಶೀಯರೂ ಸೇರಿದಂತೆ ಸುಮಾರು ಇನ್ನೂರು ಜನರನ್ನು ಕೊಂದು ಸುಮಾರು ಮುನ್ನೂರು ಜನರನ್ನು ಗಾಯಗೊಳಿಸಿರುವ ಈ ಗುಂಪು, ನಮ್ಮ 20 ಜನ ಸಾಮಾನ್ಯ ಪೋಲೀಸರ ಜೊತೆಗೆ ಮೂವರು ಶ್ರೇಷ್ಠ ಪೋಲೀಸ್ ಅಧಿಕಾರಿಗಳನ್ನೂ ರಾಷ್ಟ್ರೀಯ ರಕ್ಷಣಾ ದಳದ ಇಬ್ಬರು ಕಮಾಂಡೋಗಳನ್ನೂ ಬಲಿ ತೆಗೆದುಕೊಂಡಿದೆ. ಭಯೋತ್ಪಾದನೆ ಎಂಬುದೀಗ ಗುಪ್ತ ಕಾರ್ಯಾಚರಣೆಯ ರೂಪವನ್ನು ಕಳಚಿಕೊಂಡು ಬಹಿರಂಗ 'ಯುದ್ಧ'ದ ರೂಪದಲ್ಲಿ ರುದ್ರ ನರ್ತನ ನಡೆಸುವ ಧಾಷ್ಟ್ರ್ಯ ಪ್ರದರ್ಶಿಸಿದೆ.

ಇದರ ಈ ಭಂಡ ಧೈರ್ಯ, ಸುಯೋಜಿತ ರೀತಿ ನೀತಿ, ಶಸ್ತ್ರಾಸ್ತ್ರ ಪರಿಣಿತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇದರ ಛಲವನ್ನು ಗಮನಿಸಿ, ಈ ರುದ್ರ ಕಾರ್ಯಾಚರಣೆಯ ಹಿಂದೆ ಅಲ್ ಖೈದಾದ ಸ್ಫೂರ್ತಿ ಇದೆ, ಲಷ್ಕರ್ ತೊಯ್ಬಾದ ತರಬೇತಿ ಇದೆ ಮತ್ತು ಕೆಲವು ಪಾಕಿಸ್ತಾನಿ ಶಕ್ತಿಗಳ ಬೆಂಬಲವಿದೆ ಎಂದು ಸಂಶಯಿಸಲಾಗುತ್ತಿದೆ. ಆದರೆ ಯಾವುದೂ ಇನ್ನೂ ಖಚಿತವಿಲ್ಲ. ಐದು ಸಾವಿರ ಜನರನ್ನು ಕೊಲ್ಲುವ ಉದ್ದೇಶದಿಂದ ಸಾಕಷ್ಟು ಶಸ್ತ್ರಸಜ್ಜಿತವಾಗಿ ಬಂದಿತ್ತೆಂದು ಹೇಳಲಾದ ಈ ಗುಂಪು, ನಗರದೆಲ್ಲಡೆ ರಕ್ತದ ಕೋಡಿ ಹರಿಸುವ ಮುನ್ನ ಅದರ ಬೆನ್ನು ಮುರಿದ ನಮ್ಮ ಯೋಧರಿಗೆ ಇಡೀ ದೇಶ ಕೃತಜ್ಞವಾಗಬೇಕಿದೆ. ಈ ವೀರ 'ಯೋಧ'ರಲ್ಲಿ ಒಬ್ಬರಾದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ, ಇತ್ತೀಚೆಗೆ ಹಿಂದೂವಾದಿ ಗುಂಪುಗಳ ಭಯೋತ್ಪಾದನೆಯ ತನಿಖೆ ನಡೆಸಿದ್ದ ಹಿನ್ನೆಲೆಯಲ್ಲಿ ಈ ಗುಂಪುಗಳಿಂದ ತೀವ್ರ ಅಪಪ್ರಚಾರಕ್ಕೆ ಮತ್ತು ಕೊಲೆ ಬೆದರಿಕೆಗಳಿಗೆ ಈಡಾಗಿದ್ದರು ಎಂಬುದನ್ನೂ ಗಮನಿಸಬೇಕಿದೆ. ಈ ಹಿನ್ನೆಲೆಯಲ್ಲಿ, ಈ ದಾಳಿಯ ಸಂದರ್ಭವನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ಮುಂಬೈಗೆ ಬಂದಿಳಿದ ನರೇಂದ್ರ ಮೋದಿ ಈ ಯೋಧರಿಗಾಗಿ ಪ್ರಕಟಿಸಿದ ಬೃಹತ್ ಪರಿಹಾರ ಮೊತ್ತವನ್ನು ಸ್ವೀಕರಿಸಲು ಕರ್ಕರೆಯವರ ಪತ್ನಿ ನಿರಾಕರಿಸುವುದು ಸಹಜವೇ ಆಗಿದೆ.

ಮೂರು ದಿನಗಳ ಈ ಅಪೂರ್ವ ಕಾರ್ಯಾಚರಣೆಯಲ್ಲಿ ಬಹುಶಃ ಒಬ್ಬನ ಹೊರತಾಗಿ ಮಿಕ್ಕೆಲ್ಲ ಭಯೋತ್ಪಾದಕರೂ ಸತ್ತಂತಿದೆ. ಹಾಗಾಗಿ, ವಿವಿಧ ರಾಷ್ಟ್ರೀಯತೆಗಳ ಮುಸ್ಲಿಂ ತರುಣರು ಸೇರಿ ನಡೆಸಿದಂತೆ ತೋರುವ ಈ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದನೆಯ ಉದ್ದೇಶವಾದರೂ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೆಲವು ತಿಂಗಳುಗಳ ಹಿಂದೆ ಇಸ್ಲಾಮಾಬಾದ್ನಲ್ಲಿನ ಮ್ಯಾರಿಯೇಟ್ ಹೊಟೆಲ್ನಲ್ಲಿ ನಡೆದ ಆಸ್ಫೋಟದಲ್ಲಿ ವಿದೇಶೀಯರೂ ಸೇರಿದಂತೆ ನೂರಾರು ಜನ ಸಾವೀಗೀಡಾದ ಹಿನ್ನೆಲೆಯಲ್ಲಿ ಹಲವು ರಾಷ್ಟ್ರಗಳು ಆ ದೇಶಕ್ಕೆ ತಮ್ಮ ಕ್ರಿಕೆಟ್ ಪ್ರವಾಸವನ್ನು ರದ್ದುಗೊಳಿಸಿದ್ದವು. ಈಗ ಭಾರತವೂ ತನ್ನ ಪ್ರವಾಸವನ್ನು ರದ್ದುಗೊಳಿಸುವ ಸೂಚನೆ ನೀಡಿ ಆ ದೇಶವನ್ನು ಮುಜುಗರಕ್ಕೊಳಪಡಿಸಿದ್ದು, ಅದರ ಗುಪ್ತಚರ ದಳ ಐಎಸ್ಐನ್ನು ಈ ಕೃತ್ಯವನ್ನೆಸಗಲು ಪ್ರೇರೇಪಿಸಿದೆಯೇ? ಅಥವಾ ಇದು ಮುಸ್ಲಿಂ ಭಯೋತ್ಪಾದಕರ ಗುಂಪು, ಭಾರತದಲ್ಲಿ ಹೊಸದಾಗಿ ತಲೆ ಎತ್ತಲಾರಂಭಿಸಿರುವ ಹಿಂದೂವಾದಿ ಗುಂಪುಗಳ ಮುಸ್ಲಿಂ ವಿರೋಧಿ ಭಯೋತ್ಪಾದಕರಿಗೆ ನೀಡಲು ಯತ್ನಿಸಿದ ಎಚ್ಚರಿಕೆಯೇ? ಅಥವಾ ಪಾಕಿಸ್ತಾನದ ಹೊಸ ಪ್ರಜಾಪ್ರಭುತ್ವವಾದಿ ಸರ್ಕಾರದ ಪ್ರಧಾನಿ ಮತ್ತು ಅಧ್ಯಕ್ಷರಿಬ್ಬರೂ ಭಾರತದೊಂದಿಗೆ ಸ್ನೇಹದ ಹೊಸ ಶಕೆಯನ್ನಾರಂಭಿಸುವ ಆಶಯದೊಂದಿಗೆ ಮಾತುಕತೆಗಳಿಗೆ ಮುಂದಾಗಿರುವುದು, ಆ ದೇಶದ ಮುಸ್ಲಿಂ ಮೂಲಭೂತವಾದಿ ಗುಂಪುಗಳನ್ನು ಕೆರಳಿಸಿದೆಯೇ? ಏಕೆಂದರೆ, ಪಾಕಿಸ್ತಾನ ಸರ್ಕಾರ ಕೂಡ ನಮ್ಮ ಸರ್ಕಾರದಂತೆಯೇ ಮತೀಯ ಮೂಲಭೂತವಾದಿ ಗುಂಪುಗಳ ಭಯೋತ್ಪಾದನೆಯನ್ನು ಎದುರಿಸಲಾಗದೆ ತತ್ತರಿಸುತ್ತಿದೆ ಮತ್ತು ಪಾಕಿಸ್ತಾನದ ಪ್ರಜೆಗಳು ಕೈಗೊಳ್ಳುವ ಎಲ್ಲ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಕಿಸ್ತಾನ ಸರ್ಕಾರದ ಕೈವಾಡವಿರುತ್ತದೆ ಎಂದು ನಂಬುವುದೂ ತಪ್ಪಾಗುತ್ತದೆ ಎಂಬುದನ್ನೂ ನಾವು ಗಮನಿಸಬೇಕು. ಹಾಗಾಗಿ, ಬಂಧನದಲ್ಲಿರುವ ಭಯೋತ್ಪಾದಕನ ವಿವರವಾದ ವಿಚಾರಣೆ ಮತ್ತು ಈವರೆಗೆ ದೊರೆತಿರುವ ಸಾಕ್ಯಗಳ ತಾರ್ಕಿಕ ಜೋಡಣೆಯ ನಂತರವಷ್ಟೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರಕಬಹುದು.

ಆದರೆ ಅದಕ್ಕೆ ಮುನ್ನ ನಮ್ಮ ಕೆಲವು ಕನ್ನಡ ವಾರ್ತಾ ವಾಹಿನಿಗಳು ಮಾಡಲು ಯತ್ನಿಸಿದಂತಹ, ಅಗ್ಗದ ಭಾಷೆಯಲ್ಲಿ ಅವಸರದ ತೀರ್ಮಾನಗಳನ್ನು ಜನರಿಗೆ ಮುಟ್ಟಿಸುವಂತಹ ಕೆಲಸಗಳನ್ನು ಇಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಾಷ್ಟ್ರ ವಿರೋಧಿ ಕೆಲಸಗಳೆಂದೇ ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಒಂದು ವಾಹಿನಿಯ ತಲೆಹೋಕ ನಿರೂಪಕನೊಬ್ಬ, ಸೆರೆ ಸಿಕ್ಕಿರುವ ಭಯೋತ್ಪಾದಕ ಪಾಕಿಸ್ತಾನಿ ಎಂದು ಪ್ರಕಟಿಸುತ್ತಾ; ತನ್ನ ವರದಿಗಾರನಿಗೆ ತಕ್ಷಣ ಕೇಳಿದ ಪ್ರಶ್ನೆ ಇದು: 'ಈ ಪಾಕಿಸ್ತಾನವನ್ನು ಮಟ್ಟ ಹಾಕಲು ಸಾಧ್ಯವಿಲ್ಲವಾ?' ಅದಕ್ಕೆ ಆ ಕಡೆಯಿಂದ ವಿಶೇಷ ವರದಿಗಾರನಿಂದ ಬಂದ ಪರಿಣತ ಉತ್ತರ: 'ಅಮೆರಿಕಾ ಸಹಕಾರ ನೀಡಿದರೆ ಸಾಧ್ಯವಾಗಬಹುದು!' ಜೊತೆಗೆ ಈ ನಿರೂಪಕ, 'ಚೀನಾದಲ್ಲಿ ನೋಡಿ, ಭಯೋತ್ಪಾದನೆಯ ಸುಳಿವೇ ಇಲ್ಲ...' ಎಂದು ತನ್ನ ತನ್ನ ಅಪಾರ ಅಜ್ಞಾನದ ಬಾಗಿಲನ್ನು ಬೇರೆ ತೆರೆದಿಟ್ಟ. ಇನ್ನೊಂದು ವಾಹಿನಿ ತನ್ನ ಉಗ್ರ ರಾಷ್ಟ್ರೀಯ ವಾರ್ತೆಯಲ್ಲಿ, ಇಂಗ್ಲೆಂಡ್ ತಂಡ ತನ್ನ ಕ್ರಿಕೆಟ್ ಪ್ರವಾಸವನ್ನು ಮುಂಬೈ ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮೊಟಕುಗೊಳಿಸಿದ್ದನ್ನು ವರ್ಣಿಸಿದ್ದು ಹೀಗೆ: 'ಸೋತು ಸುಣ್ಣವಾದ ಇಂಗ್ಲೆಂಡ್ ತಂಡದ ಪಲಾಯನ!' ಬೀದಿಯಲ್ಲಿ ಹೋಗುವವರನ್ನೆಲ್ಲ ಅಗ್ಗದ ಸಂಬಳಕ್ಕೆ ಕರೆತಂದು ನಿರೂಪಕರೆಂದೋ, ವರದಿಗಾರರೆಂದೋ ತಂದು ಕೂರಿಸುತ್ತಿರುವ ನಮ್ಮ ಕೆಲವು ವಾಹಿನಿಗಳು ಅಂತರಾಷ್ಟ್ರೀಯ ಸಂಬಂಧಗಳ ರಾಜಕಾರಣವನ್ನು ಕಡ್ಲೇಕಾಯಿ ವ್ಯಾಪಾರದ ಮಟ್ಟಕ್ಕೆ ಇಳಿಸಿರುವುದು ಹೀಗೆ.

ಅಷ್ಟೇ ಅಲ್ಲ, ಈ ವಾಹಿನಿಗಳು ಭಯೋತ್ಪಾದನೆಯ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮರಣವನ್ನಪ್ಪಿದ ವೀರ ಪೋಲೀಸ್ ಅಧಿಕಾರಿಗಳ ಮತ್ತು ಯೋಧರ ಅಂತಿಮ ಯಾತ್ರೆಯ ಸಂದರ್ಭಗಳನ್ನು; ಅವುಗಳ ವಿಷಾದ-ಗಾಂಭೀರ್ಯಗಳನ್ನು ಲೆಕ್ಕಿಸದೆ, ಮಧ್ಯಯುಗೀನ ಯುದ್ಧ ವರ್ಣನೆಯ ಪರಿಭಾಷೆಯಲ್ಲಿ ನಿರೂಪಿಸುತ್ತಾ, ಸಂಭ್ರಮಪೂರ್ಣ ದೇಶಪ್ರೇಮ ಗೀತೆಗಳ ತುಣುಕುಗಳ ಮೂಲಕ 'ಆಚರಿಸಿದ' ಶೈಲಿ ಮತ್ತು ಕೋಮುವಾದಿ ಸಂಘಟನೆಯ ಜಾಲವೊಂದು ಚಲಾಯಿಸಿದ ಎಸ್ಎಂಎಸ್ಗಳನ್ನು, ಅವು ಇಡೀ ದೇಶದ ಭಾವನೆಯನ್ನು ಪ್ರತಿಬಿಂಬಿಸುವಂತೆ ಪ್ರಸಾರಿಸಿದ ವಿಶೇಷ ರೀತಿ, ನಮ್ಮ ರಾಷ್ಟ್ರಪ್ರೇಮ ಹೇಗೆ ತನ್ನೆಲ್ಲ ಘನತೆಯನ್ನು ಕಳೆದುಕೊಂಡು ಅಗ್ಗದ ಮಾತಿನ ರಾಜಕಾರಣವಾಗಿ ಅವನತಿಗೊಂಡಿದೆ ಎಂಬುದನ್ನು ಸೂಚಿಸುವಂತಿತ್ತು. ಹಾಗೇ ಇದೇ ಸಮಯವೆಂದು, ದೇಶ ರಕ್ಷಿಸಬೇಕಾದ ಕಮಾಂಡೋಗಳು ಸರ್ಕಸ್ನಲ್ಲಿನ ವಿದೂಷಕರಂತಿರುವ ರಾಜಕಾರಣಿಗಳ ಅಂಗರಕ್ಷಕರಾಗುತ್ತಿದ್ದಾರೆ ಎಂದು ತೆರೆಯ ಹಿಂದೆ ಕೂತು ಹೇಳಿಸುವ ಟಿ.ವಿ.ವಾಹಿನಿಯ ಸುದ್ದಿ ಸಂಪಾದಕನ ಸಿನಿಕತೆ ಮತು ಬೇಜವಾಬ್ದಾರಿತನ ಕೂಡಾ ಇಂತಹ ಅಗ್ಗದ ಮತ್ತು ಸುಲಭ ಮಾತಿನ ದೇಶಪ್ರೇಮದಿಂದ ಹುಟ್ಟಿದುದೇ ಆಗಿದೆ. ಮಾಧ್ಯಮಗಳ ಖಾಸಗೀಕರಣದ ನಿಜವಾದ ಅಪಾಯಗಳೇನು ಎಂಬುದು ನಮ್ಮ ಗಮನಕ್ಕೆ ಬರುವುದು ಇಂತಹ ರಾಷ್ಟ್ರ ಪರೀಕ್ಷೆಯ ಕಾಲದಲ್ಲೇ ಇರಬಹುದು....

ರಾಷ್ಟ್ರ ಮತ್ತೆ ಮತ್ತೆ ಭಯೋತ್ಪಾದನೆಗೆ ಬಲಿಯಾಗುತ್ತಿರುವುದಕ್ಕೂ, ಇಂತಹ ಅಗ್ಗದ ಮತ್ತು ಸುಲಭ ಮಾತಿನ ಉಗ್ರ ರಾಷ್ಟ್ರಪ್ರೇಮಕ್ಕೂ ಸಂಬಂಧವಿದೆ ಎನ್ನುವುದು ಇಲ್ಲಿ ಮುಖ್ಯ ಸಂಗತಿ. ನಿಜವಾಗಿ ರಾಷ್ಟ್ರವನ್ನು ಹೇಗೆ ಮತ್ತು ಯಾರಿಗಾಗಿ ಕಟ್ಟಲಾಗುತ್ತಿದೆ, ಈ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯಾರ ಯಾರ ಮತ್ತು ಯಾವ ಯಾವ ಆಶಯಗಳು ಅಭಿವ್ಯಕ್ತಗೊಳ್ಳುತ್ತಿವೆ ಎಂಬುದರ ಸೂಕ್ಷ್ಮ ಅವಲೋಕನವನ್ನು ಆಧರಿಸದ ಬರೀ ಟೊಳ್ಳು ಘೋಷಣೆಗಳ ರಾಷ್ಟ್ರ ಪ್ರೇಮ, ನಮ್ಮಲ್ಲಿ ಆತ್ಮಘಾತುಕವಾದ ಅಮಲನ್ನು ಮಾತ್ರ ಸೃಷ್ಟಿಸಬಲ್ಲುದು. ಈಗ ಆಗುತ್ತಿರುವಂತೆ. ಸದ್ಯದ ಮುಂಬೈ ಭಯೋತ್ಪಾದನಾ ಪ್ರಕರಣ ನಮ್ಮನ್ನು ಇಂತಹ ಆತ್ಮಘಾತುಕ ರಾಷ್ಟ್ರಪ್ರೇಮದ ಅಮಲಿನಿಂದ, ಮಂಪರಿನಿಂದ ಎಚ್ಚರಿಸಬೇಕು. ಮುಂಬೈ ನಗರವನ್ನು ಹೊಕ್ಕಿದ್ದ ಭಯೋತ್ಪಾದಕರನ್ನು ನಮ್ಮ ವೀರ ಪೋಲೀಸರು ಮತ್ತು ಕಮಾಂಡೋಗಳು ಹುಲಿಗಳಂತೆಯೋ, ಸಿಂಹಗಳಂತೆಯೋ ಕಾದಾಡಿ ಮಣಿಸಿದ್ದಾರೆಂದು 'ಭಾರತ್ ಮಾತಾ ಕಿ ಜೈ' ಎಂದೋ, 'ವಂದೇ ಮಾತರಂ' ಎಂದೋ ಘೋಷಣೆ ಕೂಗಿ ಸುಲಭ ಮತ್ತು ಸುಕ್ಷೇಮ ವೀರಾವೇಶ ಪ್ರಕಟಿಸುವ ಬದಲು, ಈ ಭಯೋತ್ಪಾದನೆ ಮತ್ತೆ ಮತ್ತೆ ಏಕೆ ನಮ್ಮನ್ನು ಕಾಡುತ್ತಿದೆ ಮತ್ತು ಇದನ್ನು ಏಕೆ ಶಾಶ್ವತವಾಗಿ ನಿರ್ಮೂಲನ ಮಾಡಲಾಗುತ್ತಿಲ್ಲ ಎಂಬುದನ್ನು ಯೋಚಿಸಿ, ಅ ಬಗ್ಗೆ ಕ್ರಮ ಕೈಗೊಳ್ಳುವಂತಹ ವಾತಾವರಣವನ್ನು ನಿರ್ಮಿಸುವುದು ಇಂದಿನ ಸಂದರ್ಭದಲ್ಲಿ ನಿಜವಾದ ದೇಶಪ್ರೇಮದ ಅಭಿವ್ಯಕ್ತಿ ಎನಿಸಿಕೊಳ್ಳುತ್ತದೆ. ಈ ದೃಷ್ಟಿಯಿಂದ ಸದ್ಯದ ಮುಂಬೈ ಭಯೋತ್ಪಾದನೆ ಪ್ರಕರಣ ನಮ್ಮನ್ನು ಈ ಎರಡೂ ಪ್ರಶ್ನೆಗಳ ಸಮೀಪಕ್ಕೆ ಕೊಂಡೊಯ್ಯುತ್ತದೆ.

ಈ ಭಯೋತ್ಪಾದಕರು ಎಷ್ಟು ಆರಾಮವಾಗಿ ಮುಂಬೈ ನಗರವನ್ನು ಪ್ರವೇಶಿಸಿ ಬಹಿರಂಗ ಹಿಂಸಾಚಾರಕ್ಕೆ ಇಳಿದರು ಎಂದರೆ, ಈ ದೇಶ ಮತ್ತು ಈ ನಗರ ಭಯೋತ್ಪಾದನೆಯ ತಲ್ಲಣವನ್ನು ಈ ಮುಂಚೆ ಎದುರಿಸಿಯೇ ಇಲ್ಲವೇನೋ ಎಂಬಷ್ಟು ನಿರಾಂತಕದಲ್ಲಿತ್ತು ಎಂಬುದನ್ನು ನಾವು ಗಮನಿಸಬೇಕು. ಸಾಮಾನ್ಯ ಜನರ, ಆಡಳಿತಗಾರರ, ರಾಜಕಾರಣಿಗಳ ಸಾರ್ವಜನಿಕ ನಿರ್ಲಕ್ಷ್ಯದ ಪರಮಾವಧಿ ಇದು. ಇದರ ಹಿಂದೆ ಇತ್ತೀಚೆಗೆ ಕಟ್ಟಲಾಗುತ್ತಿರುವ ಒಂದು ರಾಷ್ಟ್ರೀಯ ಜೀವನ ದೃಷ್ಟಿಕೋನದ ದೊಡ್ಡ ದೋಷವೇ ಇದೆ. ವಿಶೇಷವಾಗಿ ನಮ್ಮ ನಗರ - ಪಟ್ಟಣಗಳಲ್ಲಿ ಇದು ಎದ್ದು ಕಾಣುವಂತಿದೆ. ಅದೆಂದರೆ, ಜೀವನ ಇರುವುದು ಸ್ಪರ್ಧಾತ್ಮಕ ದುಡಿಮೆಯಲ್ಲಿ ಮುಳುಗಿ ಆದಷ್ಟೂ ಹೆಚ್ಚು ಸಂಪಾದಿಸುವುದು ಮತ್ತು ಇದಕ್ಕೆ ತಕ್ಕ ಹಾಗೆ ಸೃಷ್ಟಿಯಾಗುತ್ತಿರುವ ಹೊಸ ಹೊಸ ರೀತಿಯ ಮೋಜು - ಮಸ್ತಿಗಳಲ್ಲಿ ತೊಡಗಿ ಮೈಮರೆಯುವುದು. ಇದು ಎಲ್ಲರಿಗೂ ಸಾಧ್ಯವಾಗಿಲ್ಲ ಎನ್ನುವುದು ನಿಜವಾದರೂ, ಈ 'ತೀಟೆ' ಎಲ್ಲರ ಮೈ ಹೊಕ್ಕಿದೆ ಎಂಬುದಂತೂ ನಿಜ. ಹಾಗಾಗಿಯೇ ಭಯೋತ್ಪಾದಕರು ರಾಜಾರೋಷವಾಗಿ ಜನರ ಮಧ್ಯೆಯೇ ದೋಣಿಗಳಲ್ಲಿ ಬಂದಿಳಿದು, ಜನರ ಮಧ್ಯೆಯೇ ಶಸ್ತ್ರಾಸ್ತ್ರಗಳ ಚೀಲಗಳನ್ನು ಹೊತ್ತುಕೊಂಡು ತಂತಮ್ಮ ಕಾರ್ಯಾಚರಣೆಗಳ ಜಾಗಗಳನ್ನು ಸೇರಿದ್ದಾರೆ. ಅಷ್ಟೇ ಅಲ್ಲ, ತೆರೆದಿಟ್ಟಿದ್ದ ಪೋಲೀಸ್ ಜೀಪುಗಳನ್ನು ಹೊಕ್ಕು ಪರಾರಿಯಾಗಲೂ ಅವರಿಗೆ ಸಾಧ್ಯವಾಗಿದೆ. ಕುತೂಹಲಗೊಂಡ ಒಂದಿಬ್ಬರು ಭಯೋತ್ಪಾದಕರನ್ನು ನೀವು ಯಾರೆಂದು ವಿಚಾರಿಸುವ ಪ್ರಯತ್ನ ಮಾಡಿದರಾದರೂ, ಅವರು ಕೊಟ್ಟ 'ನಿಮ್ಮ ಕೆಲಸ ನೀವು ನೋಡಿಕೊಳ್ಳಿ' ಎಂಬ ಉತ್ತರದಿಂದ ಸಂತೃಪ್ತಗೊಂಡು, ಇದನ್ನು ಪೋಲೀಸರಿಗೂ ತಿಳಿಸದಷ್ಟು ನಿರಾತಂಕಿತರಾಗಿ ತಮ್ಮ ದಾರಿ ಹಿಡಿದಿದ್ದಾರೆ! ಇಂತಹ ಲೋಕಾಭಿರಾಮೀ ಜನರಿರುವ ದೇಶವನ್ನು ಭಯೋತ್ಪಾದನೆ ಪೀಡಿತ ದೇಶವೆಂದು ಕರೆಯುವುದಾದರೂ ಹೇಗೆ?

ನಗರಗಳೇ ಹಾಗೆ. ಅದರ ಕೈ ಕಾಲು, ಬಾಯಿ ಇತ್ಯಾದಿ ಅಂಗಗಳು ಸದಾ ಕ್ರಿಯಾಶೀಲವಾಗಿದ್ದರೂ, ಮನಸ್ಸು ಮಾತ್ರ ಸ್ಥಗಿತಗೊಂಡಿರುತ್ತದೆ. ನಮ್ಮ ಮಾಧ್ಯಮ ತಜ್ಞರು ಮತ್ತು ಸಾಮಾಜಿಕ ಮುಖಂಡರು ಇದನ್ನು ನಗರಜೀವನದ ವಿಶಿಷ್ಠ 'ಸ್ಥೈರ್ಯ'ವೆಂದೂ ಕರೆಯುವುದುಂಟು! ಈ ಹಿಂದಿನ ಭಯೋತ್ಪದನಾ ಪ್ರಕರಣಗಳ ಸಂದರ್ಭದಲ್ಲಿ, ಭಯೋತ್ಪಾದನೆಯ ಅನಾಹುತಗಳೆಲ್ಲ ಮುಗಿದ ಒಂದೇ ದಿನದಲ್ಲೋ, ಒಂದೇ ತಾಸಿನಲ್ಲೋ ನಗರದ ಜನಜೀವನ ಮತ್ತೆ ಮಾಮೂಲು ಸ್ಥಿತಿಗೆ ಮರಳಿದೆ ಎಂದು ತಮ್ಮ ನಗರದ spiritನ್ನು ಹಾಡಿ ಹೊಗಳಿದವರೇ ಇವರೆಲ್ಲ. ಅಂದರೆ, ಇವರ ಪ್ರಕಾರ ಇವರು ಪ್ರತಿನಿಧಿಸುವ ಹಿತಾಸಕ್ತಿಗಳ ವ್ಯಾಪಾರ-ವ್ಯವಹಾರಗಳಿಗೆ ಯಾವುದೇ ಅಡೆ - ತಡೆಯಾಗದಿರುವುದೇ ನಗರದ spirit! ಇಂತಹ ಆತ್ಮಘಾತುಕ spiritನಲ್ಲಿ ಅಂತರ್ಗತವಾಗಿರುವ ವೇಗ ಮತ್ತು ಗದ್ದಲಗಳೇ ಇಂದು ಮುಂಬೈಯನ್ನು ಯುದ್ಧಭೂಮಿಯಾಗಿಸಲು ಕಾರಣವಾಗಿದ್ದುದು. ಈ ವೇಗ ಮತ್ತು ಗದ್ದಲಗಳು ನಿಂತಿರುವುದೇ ನಾವೊಂದು ಸಮಾಜ ಮತ್ತು ರಾಷ್ಟ್ರ ಎಂಬ ಮರೆವಿನ ಮೇಲೆ. ಈ ಮರೆವೇ ನಮ್ಮ ವ್ಯವಸ್ಥೆಯ ಎಲ್ಲ ಅಸಮಾನತೆ, ಭ್ರಷ್ಟತೆ, ಸಿನಿಕತೆ, ಹಿಂಸೆ ಮತ್ತು ಕೋಮುವಾದಗಳಿಗೆ ಕಾರಣವಾಗಿರುವುದು

ಈ ರೋಗಗಳಿಗೆ ಒಳಗಾದ ವ್ಯವಸ್ಥೆ, ಎಲ್ಲ ರೀತಿಯಲ್ಲೂ ಅಸೂಕ್ಷ್ಮವಾಗಿ, ಬೇಜವಾಬ್ದಾರವಾಗಿ ಹೊರಗಿನ ಆಕ್ರಮಣವನ್ನು ಎದುರಿಸುವ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ, ಇಂತಹ ಆಕ್ರಮಣಗಳ ಸಾಧ್ಯತೆಗೂ ಜಡವಾಗುವ ಸ್ಥಿತಿಗೆ ಈಡಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಇಂದಿನ ಅಭೂತಪೂರ್ವ ಎಂದು ಹೇಳಲಾಗುತ್ತಿರುವ 'ಪ್ರಗತಿ'ಯ ರೀತಿ ನೀತಿಗಳು ಮನುಷ್ಯರನ್ನು ಹಂದಿಗಳನ್ನಾಗಿ ಮಾಡುತ್ತಿದೆ. ಇವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಬುದ್ಧಿಜೀವಿಗಳು, ಉದ್ಯಮಿಗಳು, ನೌಕರರು, ಬೇಹುಗಾರರು, ಸಾಮಾನ್ಯ ಜನ ಎಲ್ಲ ಸೇರಿದ್ದಾರೆ. ಹೀಗಾಗಿ, ಅನಿವಾರ್ಯವಾದಾಗಲಾದರೂ ಒಂದಿಷ್ಟು ಮೌನಕ್ಕೆ, ಆತ್ಮಾವಲೋಕನಕ್ಕೆ ಅವಕಾಶವಿಲ್ಲದ 'ನಿರಂತರ ದುಡಿಮೆ ಮತ್ತು ಮಜಾ' ಸಂಸ್ಕೃತಿಯೇ ಇಂದು ರಾಷ್ಟ್ರದ ಹೆಮ್ಮೆಯ 'ಅಭಿವೃದ್ಧಿ ಸಂಸ್ಕೃತಿ' ಎನ್ನಿಸಿಕೊಂಡುಬಿಟ್ಟಿದೆ. ಅದು ನಮ್ಮ ಇಡೀ ವ್ಯವಸ್ಥೆಯನ್ನು ಬುಡದಿಂದ ತುದಿವರೆಗೆ ನೈತಿಕವಾಗಿ ದಿವಾಳಿ ಎಬ್ಬಿಸಿ, ನಮ್ಮ ನಗರಗಳು ಪದೇ ಪದೇ ಭಯೋತ್ಪಾದನೆಗೆ ಬಲಿಯಾಗುತ್ತಿರುವುದಕ್ಕೆ ಕಾರಣವಾಗಿದೆ. ಇದಕ್ಕೆ ಯಾವುದೇ ಅಪವಾದವಿಲ್ಲದೆ, ನಮ್ಮ ಎಲ್ಲ ರಾಜಕೀಯ ಪಕ್ಷಗಳ ಸಮಾನ ಕೊಡುಗೆ ಇದೆ ಎಂಬುದನ್ನೂ ನಾವು ಮರೆಯಬಾರದು

ಇನ್ನು ಈ ಬಾರಿ ಭಯೋತ್ಪಾದಕರನ್ನು ಹಿಡಿಯಲು, ಕೊಲ್ಲಲು ನಮ್ಮ ರಕ್ಷಣಾ ದಳ ಪಟ್ಟ ಪರಿಶ್ರಮವನ್ನೇ ಗಮನಿಸಿ. ಚಲಿಸುತ್ತಲೇ ಇರುವ ದಟ್ಟ ಜನಸಂದಣಿ, ಶಾಖೋಪಶಾಖೆಗಳಾಗಿ ಒಡೆದು ವಿಸ್ತರಿಸಿಕೊಳ್ಳುತ್ತಲೇ ಹೋಗುವ ರಸ್ತೆಗಳು, ಒತ್ತೊತ್ತಾಗಿ ಕಟ್ಟಲ್ಪಟ್ಟಿರುವ ಬೃಹತ್ ಕಟ್ಟಡಗಳು, ಅಂತಾರಾಷ್ಟ್ರೀಯ ಆಡಳಿತ ಜಾಲಕ್ಕೆ ಸೇರಿದ ಮತ್ತು ಜಟಿಲ ವಾಸ್ತು ವಿನ್ಯಾಸದ ಹಲವು ಅಂತಸ್ತುಗಳ ನೂರಾರು ಕೋಣೆಗಳ ಹೋಟೆಲ್ಗಳು ಮತ್ತು ಭವನಗಳು. ಇವುಗಳ ಒಳಹೊಕ್ಕ ಹತ್ತು ಜನ ಭಯೋತ್ಪಾದಕರನ್ನು ಹಿಡಿಯಲು, ಕೊಲ್ಲಲು ನಮ್ಮ ಕಮಾಂಡೋಗಳಿಗೆ ನೂರಕ್ಕೂ ಹೆಚ್ಚು ಜನ ಅಮಾಯಕರ ಸಾವು ಮತ್ತು ಮೂರು ದಿನಗಳು ಬೇಕಾದವು! ಹಾಗೆ ನೋಡಿದರೆ, ನಮ್ಮ ನಗರಗಳ ಸ್ವರೂಪವೇ ಭಯೋತ್ಪಾದಕರಿಗೆ ಆಹ್ವಾನ ನೀಡುವಂತಿದೆ. ಗಾಂಧಿ ತಮ್ಮ 'ಹಿಂದ್ ಸ್ವರಾಜ್'ನಲ್ಲಿ ನಗರಗಳು ಎಂದರೆ ಹಾವಿನ ಹುತ್ತಗಳು ಇದ್ದಂತೆ ಎಂದಿದ್ದುದು ಈ ಅರ್ಥದಲ್ಲಿಯೇ. ನಗರ ಎಂದರೆ, ಎಲ್ಲ ಕಳ್ಳಕಾಕರು, ದುಷ್ಟರು, ಭ್ರಷ್ಟರು, ತಲೆಹಿಡುಕರು ಒಬ್ಬರನ್ನೊಬ್ಬರು ಅವಲಂಬಿಸಿಕೊಂಡು ಸುರಕ್ಷಿತವಾಗಿರಲು ವಿನ್ಯಾಸ ಮಾಡಿಕೊಂಡಿರುವ ವ್ಯವಸ್ಥೆ ಎಂದು ವರ್ಣಿಸಿ, ಇಂತಹ ನಗರೀಕರಣವನ್ನು ಪ್ರೋತ್ಸಾಹಿಸುವ-ಆಕಾಶಕ್ಕೆ ಏಣಿ ಹಾಕಿಕೊಂಡ - ಕೈಗಾರಿಕೀಕೃತ ಅಭಿವೃದ್ಧಿಗೆ ಬದಲಾಗಿ, ತನ್ನ ಮಿತಿಗಳಲ್ಲೇ ನೆಮ್ಮದಿಯನ್ನು ಸೃಷ್ಟಿಸಬಲ್ಲ - ಈ ಭೂಮಿಗೇ ಅಂಟಿಕೊಂಡ-ಕೃಷಿ ಸಂಸ್ಕೃತಿ ಆಧಾರಿತ ಗ್ರಾಮ 'ಸ್ವರಾಜ್ಯ'ದ ಹಾದಿಯಲ್ಲಿ ನಡೆಯಬೇಕೆಂದು ಸೂಚಿಸಿದ್ದರು. ಅವರ ಮಾತುಗಳನ್ನು ಕೇಳಿ ನಕ್ಕಿದ್ದ ಭಾರತ, ಇಂದು ಆ ನಗುವಿನ ಹಿಂದಿದ್ದ ವ್ಯಂಗ್ಯಕ್ಕೆ ತಾನೇ ಈಡಾಗುತ್ತಿದೆ!

ಇಂದು ಆಧುನಿಕ ಭಾರತ 'ಪ್ರಗತಿ'ಯ ಹೆಸರಿನಲ್ಲಿ ಚಲಿಸುತ್ತಿರುವ ದಿಕ್ಕಿನಲ್ಲೇ, ಆ ಚಲನೆಯನ್ನು ನಿರ್ದೇಶಿಸುತ್ತಿರುವ ರಾಜಕಾರಣದಲ್ಲೇ ಹಿಂಸೆ ಅಂತರ್ಗತವಾಗಿದೆ. ಅದು ಎಲ್ಲ ರೂಪಗಳ ಮೂಲಕ ಹಾದುಹೋಗಿ ಈಗ ಭಯೋತ್ಪಾದನೆಯ ಅಂತಿಮರೂಪ ತಾಳಿದೆ. ಆದರೆ ಇಂದಿನ ಈ ಪ್ರಗತಿಯ ವೇಗಕ್ಕೆ ಸಿಕ್ಕಿರುವ ನಾವು, ಆ ವೇಗ ಹುಟ್ಟಿಸಿರುವ ಮನಸ್ಸಿನ 'ಗದ್ದಲ'ದಲ್ಲಿ ಇದನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನವಾಗಲೀ, ಸಹನೆಯಾಗಲೀ ಇಲ್ಲದೆ, ಇದಕ್ಕೆ ಬೇರೇನೋ - Short cutಗಳ - ಪರಿಹಾರಗಳನ್ನು ಹುಡುಕುವ ಯತ್ನದಲ್ಲಿದ್ದೇವೆ. ಮತ್ತು ಈ ಪರಿಹಾರಗಳು ಪದೇ ಪದೇ ವಿಫಲಗೊಳ್ಳುತ್ತಿರುವುದನ್ನು ನೋಡಿ, ಇನ್ನಷ್ಟು ಹತಾಶರಾಗುತ್ತಿದ್ದೇವೆ. ಈ ಹತಾಶೆಯಲ್ಲಿ ಮನಸ್ಸಿನಲ್ಲಿ ಅಡಗಿದ್ದ ಭೂತಗಳೆಲ್ಲ ಎದ್ದು ಮನಸ್ಸಿನ ಕೋಮುವಾದೀಕರಣ, ವಿಕ್ಷಿಪ್ತೀಕರಣ, ಹಿಂಸೀಕರಣಗಳಿಗೆ ಕಾರಣವಾಗುತ್ತಿವೆ. ಮುಸ್ಲಿಂ ಭಯೋತ್ಪಾದನೆಯನ್ನು ಎದುರಿಸಲು ಹಿಂದೂ ಭಯೋತ್ಪಾದನೆಯ ಸೃಷ್ಟಿ, ಪಾಕಿಸ್ತಾನದ ನಾಶಕ್ಕೆ ಕರೆ, ಎಕೆ-47 ಬಂದೂಕು ಇತ್ಯಾದಿ ಆಧುನಿಕ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಅನುಮತಿ ನೀಡುವಂತೆ ಖಾಸಗಿ ಕಂಪನಿಗಳು ಇಡಲಾರಂಭಿಸಿರುವ ಬೇಡಿಕೆ ಇತ್ಯಾದಿಗಳು ಇದಕ್ಕೆ ಉದಾಹರಣೆಗಳಷ್ಟೆ. ಇವು ಭಯೋತ್ಪಾದನೆ ಹೊಸ ಹೊಸ ರೂಪಗಳನ್ನು ತಾಳಿ ಮತ್ತು ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗುತ್ತವಷ್ಟೆ. ಎಷ್ಟು ದಿಕ್ಕುಗಳಲ್ಲಿ ಎಷ್ಟು ಜನರನ್ನು ಕಾಯುತ್ತೀರಿ? ಎಷ್ಟು ಜನರನ್ನು ಎಷ್ಟು ದಿನಗಳವರೆಗೆ ಕೊಲ್ಲುತ್ತಾ ಹೋಗುತ್ತೀರಿ? ಎಕೆ-47 ಕೊಳ್ಳಬಲ್ಲವರಿಗಷ್ಟೆ ರಕ್ಷಣೆ ಸಾಕೆ? ಸದಾ ಆತಂಕದಲ್ಲಿ, ಎಚ್ಚರಿಕೆಯಲ್ಲಿರಬೇಕಾದ ಮನಸ್ಸಿಗೆ ಶಾಂತಿ ಎಲ್ಲಿ?

ಹಾಗಾಗಿ, ಮತ್ತೆ ಮತ್ತೆ ಎದುರಾಗುವ ಭಯೋತ್ಪಾದನಾ ಪ್ರಕರಣಗಳನ್ನು ಸಶಕ್ತವಾಗಿ ಎದುರಿಸುತ್ತಲೇ, ಇದರ ಕಾರಣಗಳನ್ನು ಕೂಲಂಕಶವಾಗಿ ಪರಿಶೀಲಿಸುವ ಸಹನೆ ಮತ್ತು ವ್ಯವಧಾನವನ್ನೂ ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಆಗ ಈ ಗಾಂಧಿ ಸತ್ಯಗಳು ಗೋಚರವಾಗಬಹುದು: ಹಾವಿನ ಹುತ್ತಗಳಂತಹ ನಗರಗಳನ್ನು ಕಟ್ಟುವ ಅಭಿವೃದ್ಧಿ ಪಥವನ್ನು ಆದಷ್ಟು ಬೇಗ ತ್ಯಜಿಸಬೇಕು. ಜನರಲ್ಲಿ ಮಿತಿ ಮೀರಿದ ಸುಖಾಪೇಕ್ಷೆಗಳನ್ನು ಹುಟ್ಟಿಸುವಂತಹ ಸ್ಪರ್ಧಾತ್ಮಕ ದುಡಿಮೆಯ ಮಾದರಿಗಳಿಗೆ ಕಡಿವಾಣ ಹಾಕಬೇಕು. ಭಾರತ ಜಾಗತಿಕ ಶಕ್ತಿಯಾಗಿ ಮೆರೆಯುವ ಕನಸನ್ನೂ, ಹಂಬಲವನ್ನೂ ಕೈ ಬಿಡಬೇಕು. ಇದರ ಭಾಗವಾಗಿ, ತನ್ನ ನೆರೆಹೊರೆಯ ಎಲ್ಲ ದೇಶಗಳೊಂದಿಗೆ ಸಮಾನತೆಯ ಆಧಾರದ ಮೇಲೆ ಸಂಬಂಧಗಳನ್ನು ಪುರ್ನವಿನ್ಯಾಸಗೊಳಿಸಿಕೊಳ್ಳಬೇಕು. ವಿಶೇಷವಾಗಿ ಪಾಕಿಸ್ತಾನದೊಡನೆಯ ಗಡಿಯನ್ನು ಅಪ್ರಸ್ತುತಗೊಳಿಸಿಕೊಳ್ಳುವ ರೀತಿಯಲ್ಲಿ, ಎರಡೂ ಕಡೆ ವಿಶ್ವಾಸವನ್ನು ಕುದುರಿಸುವ ನಿರ್ಣಾಯಕ 'ದುಸ್ಸಾಹಸ'ಕ್ಕೆ ಸಿದ್ಧವಾಗುವ ಧೈರ್ಯ ತೋರಬೇಕು. ಸಂಪತ್ತು ಮತ್ತು ಸೇನೆಯ ಶಕ್ತಿಗಿಂತ ಹೆಚ್ಚಾಗಿ ನೈತಿಕ ಶಕ್ತಿಯ ಆಧಾರದ ಮೇಲೆ ಜಾಗತಿಕವಾಗಿ ತನ್ನ ಸ್ಥಾನದ ಮಹತ್ವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕು. ಪಶ್ಚಿಮದ ಕೈಗಾರಿಕಾ ನಾಗರೀಕತೆ ವೈವಿಧ್ಯಮಯ ಹಿಂಸೆಯನ್ನು ಜಗತ್ತಿನಾದ್ಯಂತ ಹುಟ್ಟುಹಾಕಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಇದರಿಂದಾಗಿಯೇ ಸ್ವತಃ ಅಸಹನೀಯ ಹಿಂಸೆಗೆ ಗುರಿಯಾಗಿರುವ ಭಾರತ; ಹೀಗೆ ಜಗತ್ತಿಗೆ ಒಂದು ಪರಿಹಾರದ ಮಾದರಿಯನ್ನು ನಿರ್ಮಿಸಬಹುದಾಗಿದೆ. ಇದು ಗಾಂಧಿ ಕಂಡ ಕನಸೂ ಆಗಿತ್ತು. ಅದನ್ನು ಸ್ವಲ್ಪ ತಡವಾಗಿಯಾದರೂ ಗಾಂಧಿ ನಾಡು ಮಾಡಿ ತೋರಿಸಬಹುದಾಗಿದೆ.

ಇದೊಂದೇ-ಅಸಾಧ್ಯವೆನಿಸುವಷ್ಟು-ದೂರದಲ್ಲಿಯಾದರೂ ಕಾಣುತ್ತಿರುವ ಪರಿಹಾರವಾಗಿದೆ.