"ಮುಂಬೈ ಸಮಾಚಾರ್” ದಿನಪತ್ರಿಕೆಗೆ 200 ವರುಷದ ಸಂಭ್ರಮ

"ಮುಂಬೈ ಸಮಾಚಾರ್” ದಿನಪತ್ರಿಕೆಗೆ 200 ವರುಷದ ಸಂಭ್ರಮ

ಏಷ್ಯಾದ ಅತ್ಯಂತ ಹಳೆಯ ದಿನಪತ್ರಿಕೆಗೆ ೨೦೦ ವರುಷ ತುಂಬಿದೆ. ಅದುವೇ ಮುಂಬೈಯಿಂದ ಪ್ರಕಟವಾಗುತ್ತಿರುವ   "ಮುಂಬೈ ಸಮಾಚಾರ್” ಎಂಬ ಗುಜರಾತಿ ದಿನಪತ್ರಿಕೆ.  ಅದನ್ನು 1822ರಲ್ಲಿ ಶುರು ಮಾಡಿದವರು ಫರ್-ದುನ್‌ಜೀ ಮರ್-ಜಾನ್ ಎಂಬವರು.

14 ಜೂನ್ 2022ರಂದು ಆ ಪತ್ರಿಕೆಯ “ದ್ವಿಶತಮಾನೋತ್ಸವ" ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಆ ಸಂಭ್ರಮದ ನೆನಪಿಗಾಗಿ ವಿಶೇಷ ಅಂಚೆಚೀಟಿ ಬಿಡುಗಡೆಗೊಳಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹೋರಾಟದ ಧ್ವನಿಯಾಗಿದ್ದ ಪತ್ರಿಕೆ, ನಮ್ಮ ದೇಶ ಸ್ವತಂತ್ರವಾದ ನಂತರದ 75 ವರುಷಗಳಲ್ಲಿ ಎಲ್ಲ ವಯಸ್ಸಿನವರನ್ನೂ ತಲಪಿದೆಯೆಂದರು.

ಆರಂಭದ ಹತ್ತು ವರುಷಗಳಲ್ಲಿ ಇದು ವಾರಪತ್ರಿಕೆಯಾಗಿ, ಅನಂತರ ವಾರದಲ್ಲಿ ಎರಡು ದಿನ ಪ್ರಕಟವಾಗುತ್ತಿತ್ತು. 1855ರಿಂದ ದಿನಪತ್ರಿಕೆಯಾಗಿ ಪ್ರಕಟವಾಗುತ್ತಿರುವ ಇದರ ಕಚೇರಿ ಮುಂಬೈಯ ಫೋರ್ಟ್‌ನ ಹಾನಿಮನ್ ವೃತ್ತದ ಹತ್ತಿರದ ಚಾರಿತ್ರಿಕ ಕೆಂಪು ಕಟ್ಟಡದಲ್ಲಿದೆ. ಹಡಗುಗಳ ಸಂಚಾರ ಮತ್ತು ಸರಕುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಈ ಪತ್ರಿಕೆ ಈಗ ಪ್ರಧಾನವಾಗಿ ವ್ಯಾಪಾರವಹಿವಾಟಿನ ಬಗ್ಗೆ ವರದಿ ಮಾಡುತ್ತಿದೆ.

ಬಂಗಾಳಿ ದಿನಪತ್ರಿಕೆ “ಸಮಾಚಾರ ದರ್ಪಣ್” ಪ್ರಕಟಣೆ ಆರಂಭಿಸಿದ 4 ವರುಷ ನಂತರ "ಬೊಂಬಾಯಿ ಸಮಾಚಾರ್” (ಆಗಿನ ಹೆಸರು) ಶುರುವಾಯಿತು. ಇದು ಭಾರತದ ಎರಡನೆಯ ಇಂಗ್ಲಿಷೇತರ ಪತ್ರಿಕೆ ಎಂಬುದು ಇದರ ಹೆಗ್ಗಳಿಕೆ.

ಇದರ ಒಡೆತನ ಹಲವು ಸಲ ಕೈಬದಲಾಗಿದೆ. 1833ರಿಂದ ಕಾಮಾ ಕುಟುಂಬದ ಒಡೆತನದಲ್ಲಿದೆ. ಅದೇ ಒಂದು ರೋಚಕ ಪ್ರಸಂಗ. ಬೆಳಗಾಮ್‌ವಾಲಾ ಕುಟುಂಬದ ಒಡೆತನದಲ್ಲಿದ್ದ ಬೊಂಬಾಯಿ ಸಮಾಚಾರ್ ಪತ್ರಿಕೆಗೆ ಕಾಮಾ ನೋರ್ಟನ್ ಆಂಡ್ ಕಂಪೆನಿ ನ್ಯೂಸ್-ಪ್ರಿಂಟ್ ಮತ್ತು ಶಾಯಿ ಸರಬರಾಜು ಮಾಡುತ್ತಿತ್ತು. ತನಗೆ ಹಣ ಪಾವತಿ ಮಾಡದಿದ್ದ ಕಾರಣ ಕಾಮಾ ಅವರು ಬಾಕಿ ವಸೂಲಿಗಾಗಿ ಕೋರ್ಟಿನಲ್ಲಿ ದಾವೆ ಹೂಡಿದ್ದರು. ದಿನಪತ್ರಿಕೆಯನ್ನು ಮುಚ್ಚುವ ಬದಲಾಗಿ ಕೋರ್ಟ್ ಹೀಗೆ ಸೂಚಿಸಿತು: ಪತ್ರಿಕೆಯ ಉದ್ಯೋಗಿಗಳ ಜೀವನೋಪಾಯ ರಕ್ಷಿಸಲಿಕ್ಕಾಗಿ, ದಿನಪತ್ರಿಕೆಯನ್ನು ಕಾಮಾ ಕುಟುಂಬ ವಶಕ್ಕೆ ಪಡೆದು, ಅದರ ಪ್ರಕಟಣೆ ಮುಂದುವರಿಸಬೇಕು. ಈ ಸೂಚನೆಯನ್ನು ಕಾಮಾ ಕುಟುಂಬ ಒಪ್ಪಿತು.

ಅಂದಿನಿಂದ ದಿನಪತ್ರಿಕೆಯ ಪ್ರಸಾರಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ಅತ್ಯಾಧುನಿಕ ತಂತ್ರಜ್ನಾನವನ್ನು ಬಳಸಿ ದಿನಪತ್ರಿಕೆಯನ್ನು ಮುದ್ರಿಸಲಾಗುತ್ತಿದೆ. ಕಾಮಾ ಕುಟುಂಬವು ಪತ್ರಿಕಾ ಸಂಪಾಕದರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಮುಂಬೈ ಸಮಾಚಾರ್ ದಿನಪತ್ರಿಕೆ ತನ್ನ ವರದಿಗಾರಿಕೆಯಲ್ಲಿ ಭಾವನಾತ್ಮಕ ತಂತ್ರಗಳನ್ನು ಬಳಸುವುದಿಲ್ಲ.

ಈ ದಿನಪತ್ರಿಕೆಯಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡುವ ನಕಲಿ ವೈದ್ಯರ ಜಾಹೀರಾತುಗಳಿಗೆ ಅವಕಾಶ ನೀಡಲಾಗಿಲ್ಲ. ಉದಾಹರಣೆಗೆ: ಕೋವಿಡ್ ವೈರಸನ್ನು ಕೆಲವೇ ದಿನಗಳಲ್ಲಿ ನಾಶ ಮಾಡುತ್ತೇವೆಂಬ ನಕಲಿ ಜಾಹೀರಾತುಗಳು. ಅದಲ್ಲದೆ, ಈ ದಿನಪತ್ರಿಕೆಯಲ್ಲಿ ಜಾಹೀರಾತುಗಳು ಒಟ್ಟು ಪುಟಗಳ ಶೇಕಡಾ 20 ಮಿತಿಯನ್ನು ಯಾವತ್ತೂ ಮೀರಿಲ್ಲ.

ಕೊರೋನಾ ವೈರಸ್ ದಾಳಿಯ ಅವಧಿಯಲ್ಲಿ, ಹಲವಾರು ಕಾರಣಗಳಿಂದಾಗಿ ಈ ದಿನಪತ್ರಿಕೆಯ ಮುಖಬೆಲೆಯನ್ನು 10 ರೂಪಾಯಿಗೆ ಏರಿಸಬೇಕಾಯಿತು. ದಿನಪತ್ರಿಕೆಯ ಪ್ರಸಾರಸಂಖ್ಯೆ ಇಳಿಮುಖವಾದರೂ, 2020-21ರಲ್ಲಿ ಪತ್ರಿಕೆ ಲಾಭವನ್ನೇ ಗಳಿಸಿತು. ಮುಖಬೆಲೆ ಏರಿಕೆ, ಪುಟಗಳ ಸಂಖ್ಯೆ ಇಳಿಕೆ ಮತ್ತು ವೆಚ್ಚ ಕಡಿತ - ಇಂತಹ ಕ್ರಮಗಳಿಂದಾಗಿ ದಿನಪತ್ರಿಕೆಯನ್ನು ಮುಂದುವರಿಸಲು ಸಾಧ್ಯವಾಯಿತು. ಸವಾಲಿನ ಸಮಯದಲ್ಲಿ ದಿನಪತ್ರಿಕೆಯ ಹಿರಿಯ ಅಧಿಕಾರಿಗಳ ವೇತನವನ್ನೂ ಕಡಿಮೆ ಮಾಡಲಾಯಿತು ಮತ್ತು ಯಾವನೇ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಲಿಲ್ಲ ಎಂಬುದು ಗಮನಾರ್ಹ.
ಫೋಟೋಗಳು: ಮುಂಬೈ ಸಮಾಚಾರ ಪತ್ರಿಕೆಯ ಮುಂಬೈ ಕಚೇರಿ ಕಟ್ಟಡದ ನೋಟಗಳು