ಮುಕ್ತಕಗಳು
ಅಷ್ಟದಳ
ಮನವನವು ಸವಿಯಿರಲು ಬೆಸುಗೆಯೊಳು ಹಿತವಿಹುದು
ಕನಸಿನಲು ಸುಖವಿಹುದು ತಿಳಿಯೆಂದು ನೀ ಮನುಜ
ಜನರೊಳಗಿನಾ ನಂಟು ಅಂಟಾಗದೇಯಿರಲು
ನನಸೆಂದು ಹರುಷದಲಿ ನೋಡಿರೈ ತೇಲುವುದು
ಕನಲಿಕೆಯ ಗುಣವದನು ಬಿಡುತಲೀ ಸಾಗಿದರೆ
ಬನದೊಳಗಿನಾ ಹೂವ ರೀತಿಯಲಿ ಸುಖಬದುಕು
ಹೊನಲದುವು ತುಂಬಿರಲು
ಹರುಷವದು ತೇಲುವುದು
ಜನಮನಕೆ ಸವಿಬೆಳಕು --- ಛಲವಾದಿಯೆ||
***
ಸವಿಯೊಲುಮೆ
ಚೆಲುವಿನಲಿ ಗೆಲುವಿಹುದು ತಿಳಿಯುತಲೆ ಬದುಕಿನಲಿ
ಛಲಬಿಡದೆ ಸಾಗುತಿರು ಸೌಖ್ಯದೊಳು ಬಾಳಿನಲಿ
ಬಲವಿಹುದು ಗೆಳೆತನದಿ ಚಿರಕಾಲ ಸವಿಯಿರಲು
ಬೆಲೆಬರಲು ಪರಿಸರದಿ ಗುಣವಂತ ನೀನೆಂದು
ಕಲಿಗಾಲ ಇದುವೆಂದು ಜಾಗ್ರತೆಯ ಮಾಡಿದರೆ
ದಳಪತಿಯು ನೀನಪ್ಪೆ -- ಛಲವಾದಿಯೆ ||
***
ಸವಿಯೊಲುಮೆ
ಜಯವೆನುವೆ ಭವದೊಳಗೆ ಕಾಯಕವ ಮಾಡುತಲಿ
ದಯವಿರುವ ಜನರಲ್ಲಿ ಹರಡುತಲಿ ಒಲುಮೆಯನು
ಭಯವಿರದ ರೀತಿಯಲಿ ಕೈಪಿಡಿಯುತ |
ಮಯಣದಂತಹ ಜನರ ದೂರವಿರಿಸುತ ಹೋಗೆ
ಲಯವಿರುವ ಜೀವನದ ಏಣಿಯನು ಏರುತಲೆ
ಜಯಕಿರಣ ನನ್ನೊಳಗೆ ---- ಛಲವಾದಿಯೆ||
***
ಪಂಚದಳ
ಜನಮನವ ಅರಿಯುತಲೆ ಸಾಗುತಿರೆ ಬದುಕಿನಲಿ
ಕನಸುಗಳು ಜೊತೆಯಾಗಿ ಬರವುದನು ನೀ ತಿಳಿಯು
ಹನನವಾಗದೆ ಸವಿಯು ಬೆರೆತಾಗ ಎಲ್ಲರೊಳು
ಅನುಮಾನ ಬಾಳುವರ ಜೊತೆಗೆಂದು ಇರದಯ್ಯ
ನನಸಿನೊಳು ಫಲವಿಹುದು -- ಛಲವಾದಿಯೆ||
***
ಏಕದಳ
ಸವಿಮನಸು ಇದ್ದರೂ ಕಹಿಯನ್ನೆ ನೀಡುವರು --- ಛಲವಾದಿಯೆ||
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ