ಮುಕ್ತಾಯ..
ಕವನ
ಡುಂ ಟಕ ತಮಟೆಯ ಬಡಿಯುತ ತಿರುಗಿದೆ
ಸುತ್ತಲು ಪಸರಿಸಿ ಸುದ್ದಿಗಳ
ಅಂತೆ ಕಂತೆಯ ಸಂತೆಯೊಳಗಿನ
ಗುಟ್ಟು ಕೆಡಿಸಿದೆ ನೆಮ್ಮದಿಯ..
ಏದುಸಿರ ಬದುಕಿನಲಿ ಗುಳಿಗೆಗಳ ನುಂಗಿ
ಅವರಿವರ ಸುಳ್ಳುಗಳ ರಾಶಿಯಲಿ ಮುಳುಗಿ
ಸತ್ಯವಂತ ನಾನೆಂಬ ಭ್ರಮೆಯಲ್ಲಿ ಬೆಳೆದು
ಶಯ್ಯೆಯಲಿ ಮಲಗಿರುವೆ ಎಲ್ಲ ತೊರೆದು..
ಹೆಸರಿಗೊಂದು ಮೊಗವಾಗಿ ಗುರುತಿಸುವ ಕಣವಾಗಿ
ತನ್ನವರ ಹಿತವೊಂದೆ ನಿನ್ನ ಗುರಿಯೆಂದು
ಉಳಿದವರ ನೋವುಗಳು ನಿನಗೇನು ಬೇಕಿಲ್ಲ
ಸ್ವಾರ್ಥಿಯೆಂದು ನಿನ್ನ ಮನ ಒಪ್ಪುತ್ತಿಲ್ಲ..
ಹೊರಡಲಿರೊ ಯಾತ್ರೆಯನು ಮರೆತು ನೀ ಬಾಳಿದೆ
ಕರಗಳಿಗೆ ದಾನದ ಕೆಲಸವನು ಕೊಡದೆ
ಒಂದಿನಿತು ಪುಣ್ಯವನು ಗಳಿಸದಾ ಮನುಜನೇ
ಉಸಿರೇಕೆ ಚೆಲ್ಲಿಬಿಡು ಭೂಮಿಯೊಳಗೆ..
ಹೊಸತೊಂದು ಬೀಜವದು ಬೆಳೆಯುತ್ತ ಮರವಾಗಿ
ನೆರಳಾಗಿ ಬರಲಿ ನಮ್ಮ ಪಾಲಿಗೆ
ಸಂಸ್ಕಾರ ಸಂಪತ್ತು ಎದೆಯೊಳಗೆ ಚಿಗುರಲಿ
ಸ್ವಾರ್ಥ ಸಾಧನೆ ಮುಕ್ತಾಯವಾಗಲಿ..
-ಶಮೀರ್ ನಂದಿಬೆಟ್ಟ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್