ಮುಕ್ತ ಆಕರ(ಓಪನ್ ಸೋರ್ಸ್) ತಂತ್ರಾಂಶದ ಬಗೆಗಿನ ಕೆಲವು ವಾಸ್ತವ ಅಂಶಗಳು
ಬರಹ
- ತಂತ್ರಾಂಶವನ್ನು ಮಾರಾಟ ಮಾಡುವ ಕಂಪನಿಗೆ ಹಣ ತೆತ್ತು ಲೈಸೆನ್ಸನ್ನು ಖರೀದಿಸಬೇಕೊ ಅಥವ ಅವರಿಗೆ ತಿಳಿಯದಂತೆ ಕದ್ದು ಅವರ ತಂತ್ರಾಂಶವನ್ನು ಬಳಸಬೇಕೊ (ಅಂದರೆ ಪೈರೆಸಿಗೆ ಮೊರೆಹೋಗುವಿಕೆ) ಎಂಬ ಗೊಂದಲದಲ್ಲಿರುವವರಿಗೆ ಮುಕ್ತ ಆಕರ ತಂತ್ರಾಂಶವು ಮೂರನೆಯ ಆಯ್ಕೆಯನ್ನು ಒದಗಿಸುತ್ತದೆ. ಲೈಸೆನ್ಸನ್ನು ಉಚಿತವಾಗಿ ಪಡೆದುಕೊಂಡು ಕೇವಲ ಮೌಲ್ಯ-ಆಧರಿತವಾದ ಸೇವೆಯಾದಂತಹ ಬೆಂಬಲವನ್ನು(ಸಪೂರ್ಟ್) ಪಡೆಯಲು, ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಲು(ಕಸ್ಟಮೈಸೇಶನ್), ಹಾಗು ತರಬೇತಿಗಾಗಿ ಮಾತ್ರ ಹಣ ತೆತ್ತರಾಯಿತು.
- ೧೯೯೧ ರಲ್ಲಿ, ಹೆಲ್ಸಿಂಕಿಯ ವಿಶ್ವವಿದ್ಯಾಯಲಯದಲ್ಲಿ ಮುಕ್ತ ಆಕರ ತಂತ್ರಾಂಶಗಳಲ್ಲಿ ಒಂದಾದಂತಹ ಲಿನಕ್ಸನ್ನು ಅದರ ಜನಕರಾದ ಲಿನಕ್ಸ್ ಟಾರ್ವೋಲ್ಡ್ಸರಿಂದ ಒಂದು ಪ್ರಾಜೆಕ್ಟ್ ಆಗಿ ಪ್ರಾರಂಭಗೊಂಡಿತು. ಅವರು ಮೊದಲಿಗೆ ಇದರ ಸುಮಾರು ೧೦೦೦೦ ಸಾಲಿನ ಆಕರ ಸಂಕೇತವನ್ನು (ಸೋರ್ಸ್ ಕೋಡ್) ಜನರಲ್ ಪಬ್ಲಿಕ್ ಲೈಸನ್ಸಿನ(ಜಿಪಿಎಲ್) ಅಡಿಯಲ್ಲಿ ಹೊರತಂದರು. ಜಿಪಿಎಲ್ ಲೈಸೆನ್ಸಿನ ಪ್ರಕಾರ, ಈ ತಂತ್ರಾಂಶವನ್ನು ಬಳಸುವವರು ಅದರ ಹೃದಯ ಭಾಗವೆನ್ನಬಹುದಾದ ಸಂಕೇತವನ್ನು(ಕೋಡ್) ಇತರರೊಂದಿಗೆ ಹಂಚಿಕೊಳ್ಳುವ, ಬದಲಾಯಿಸುವ ಅಥವ ಅಭಿವೃದ್ಧಿಪಡಿಸುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಇಂತಹ ಒಂದು ಮುಕ್ತ ಲೈಸೆನ್ಸಿನ ದೆಸೆಯಿಂದಾಗಿ ಹಲವಾರು ಮಂದಿ ಲಿನಕ್ಸನ್ನು ಉತ್ತಮಪಡಿಸುವಲ್ಲಿ ನೆರವಾದರು. ಇದರ ಪರಿಣಾಮವಾಗಿ ಈಗ ಲಿನಕ್ಸಿನ ಸಂಕೇತದ ನೆಲೆಯು(ಕೋಡ್ ಬೇಸ್) ೨೦೪ ಮಿಲಿಯನ್ ಸಾಲುಗಳಷ್ಟು ಬೃಹತ್ತಾಗಿ ಬೆಳೆದಿದೆ. ಒಂದು ಅಂದಾಜಿನ ಪ್ರಕಾರ, ಎಲ್ಲಿಯಾದರೂ ವ್ಯಾಪಾರೀ ಉದ್ದೇಶದಿಂದ ೨೦೪ ಮಿಲಿಯನ್ ಸಾಲುಗಳ ಸಂಕೇತವನ್ನು ಬರೆದಿದ್ದಲ್ಲಿ ಇದಕ್ಕಾಗಿ ಸುಮಾರು ೧೦.೮ ಬಿಲಿಯನ್ ಡಾಲರುಗಳಷ್ಟು ವ್ಯಯಿಸಬೇಕಾಗುತ್ತಿತ್ತು. [೧]
- ಜಗತ್ತಿನಲ್ಲಿ ಪ್ರಸಕ್ತ (ಅಂದರೆ ನವೆಂಬರ್ ೨೦೦೯ ರ ವರೆಗಿನ ಅಂಕಿ ಅಂಶಗಳಂತೆ) ಕಾರ್ಯನಿರ್ವಹಿಸುತ್ತಿರುವ ೫೦೦ ಸೂಪರ್ ಕಂಪ್ಯೂಟರುಗಳಲ್ಲಿ ೪೪೬ ಸೂಪರ್ ಕಂಪ್ಯೂಟರುಗಳು ಗ್ನು/ಲಿನಕ್ಸನ್ನು ಬಳಸುತ್ತಿವೆ. [೨]
- ಅಂತರಜಾಲದಲ್ಲಿಯೆ ಅತ್ಯಂತ ಹೆಚ್ಚಿನ ಮುಕ್ತ ಆಕರ ಉಪಕರಣಗಳು ಹಾಗು ಅನ್ವಯಿಕಗಳ ಸಂಗ್ರಹವನ್ನು ಹೊಂದಿರುವಂತಹ sourceforge.net ಸದ್ಯ ೨೩೦೦೦೦ ಕ್ಕೂ ಹೆಚ್ಚಿನ ಮುಕ್ತ ಆಕರ ಪರಿಯೋಜನೆಗಳನ್ನು(ಓಪನ್ ಸೋರ್ಸ್ ಪ್ರಾಜೆಕ್ಟ್) ಹೊಂದಿದೆ ಹಾಗು ಇದು ೨ ಮಿಲಿಯನ್ಗೂ ಅಧಿಕ ನೋಂದಾಯಿತ ಸದಸ್ಯರುಗಳನ್ನು ಹೊಂದಿದೆ. [೩]
- ಗಾರ್ಟನರ್ ಎಂಬ ಕಂಪನಿಯು ನಡೆಸಿದ ಒಂದು ಸಮೀಕ್ಷೆಯು ೨೦೧೨ ವೇಳೆಗೆ ೮೦ ಪ್ರತಿಶತದಷ್ಟು ವ್ಯಾಪಾರಿ ತಂತ್ರಾಂಶವು(ಕಮರ್ಶಿಯಲ್ ಸಾಫ್ಟ್ವೇರ್) ತನ್ನೊಳಗೆ ಮುಕ್ತ ಆಕರ ತಂತ್ರಾಂಶವನ್ನು ಹೊಂದಿರುತ್ತದೆ ಎಂದು ಹೇಳುತ್ತದೆ. ಅದರ ಪ್ರಕಾರ ”೨೦೧೨ರ ವೇಳೆಗೆ, ೮೦ ಪ್ರತಿಶತದಷ್ಟು ಎಲ್ಲಾ ವ್ಯಾಪಾರಿ ತಂತ್ರಾಂಶಗಳು ಮುಕ್ತ ಆಕರ ತಂತ್ರಜ್ಞಾನದ ತುಣುಕಗಳನ್ನು ಹೊಂದಿರುತ್ತವೆ. ಹಲವು ಮುಕ್ತ ಆಕರ ತಂತ್ರಜ್ಞಾನಗಳು ಪರಿಪಕ್ವ, ಸದೃಢ ಹಾಗು ಉತ್ತಮ ಬೆಂಬಲವನ್ನು(ಸಪೂರ್ಟ್) ಹೊಂದಿವೆ. ಇದರಿಂದಾಗಿ ವ್ಯಾಪಾರಿಗಳು ಹಾಗು ಗ್ರಾಹಕರು ಮಾಲಿಕತ್ವದ ಮೇಲಿನ ವೆಚ್ಚವನ್ನು ಕಡಿಮೆ ಮಾಡಿ ಅದನ್ನು ಹೂಡಿಕೆಯಲ್ಲಿ ತೊಡಗಿಸುವ ಮಹತ್ವದ ಅವಕಾಶವನ್ನು ಒದಗಿಸುತ್ತವೆ. ಇದನ್ನು ಕಡೆಗಣಿಸುವ ಕಂಪನಿಗಳು ಪೈಪೋಟಿಯ ವಿಷಯದಲ್ಲಿ ಗಂಭೀರ ರೀತಿಯ ಅನಾನುಕೂಲತೆಯನ್ನು ಎದುರಿಸಬೇಕಾಗಬಹುದು. ಮುಂದಿನ ಐದು ವರ್ಷಗಳಲ್ಲಿ ಹೆಚ್ಚಿನ ಭಾರಿ ತಂತ್ರಾಂಶ ಮಾರಾಟಗಾರರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಲಾಭವನ್ನು ಕಾಯ್ದುಕೊಳ್ಳಲು ಮುಕ್ತ ಆಕರ ತಂತ್ರಾಂಶವನ್ನು ಅಡಕಗೊಳಿಸುವುದು ಅಗತ್ಯವೆಂದು ಕಂಡುಕೊಳ್ಳುತ್ತವೆ.” [೪]
- ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಒಂದು ವರದಿಯ ಪ್ರಕಾರ, ಭಾರತವು ಮುಕ್ತ ಆಕರ ತಂತ್ರಾಂಶವನ್ನು ಬಳಸಿದಲ್ಲಿ ೨ ಬಿಲಿಯನ್ ಡಾಲರನ್ನು (ಸುಮಾರು ಹತ್ತುಸಾವಿರ ಕೋಟಿ ರೂಪಾಯಿಗಳು) ಉಳಿಸಬಹುದಾಗಿದೆ. [೫]
- ಮುಕ್ತ ಆಕರ ತಂತ್ರಾಂಶಗಳಲ್ಲೆ ಹೆಸರಾಂತ ಅಂತರಜಾಲ ವೀಕ್ಷಕವಾದಂತಹ ಮೋಝಿಲ್ಲಾದ ಫೈರ್ಫಾಕ್ಸ್ ಈವರೆಗೆ ಸುಮಾರು ೧.೩ ಬಿಲಯನ್ (ನಿಖರವಾಗಿ ಹೇಳಬೇಕೆಂದರೆ ೧,೩೧೨,೭೯೭,೭೫೯) ಡೌನ್ಲೋಡ್ಗಳಾಗಿದ್ದು, ಇತಿಹಾಸದಲ್ಲೆ ಅತ್ಯಂತ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾದ ತಂತ್ರಾಂಶವಾಗಿದೆ. [೬]