ಮುಕ್ತ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ನಿಗೂಢ ಪುಟದ ಸವಾಲು
(ಇ-ಲೋಕ-68)(31/3/2008)
ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದು ಕಡಿಮೆ.ಅವರ ಮತ್ತು ಮುಕ್ತವಿಶ್ವವಿದ್ಯಾಲಯದ ನಡುವಣ ಸಂಪರ್ಕಕ್ಕೆ ಹಿಂದೆಲ್ಲಾ ಅಂಚೆಯೇ ಗತಿ.ಈಗ ಅಂತರ್ಜಾಲ ತಾಣಗಳು ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಲು ಸಹಾಯ ಮಾಡುತ್ತವೆ.ಆದರೆ ಮುಕ್ತ ವಿವಿಯ ಅಂತರ್ಜಾಲ ತಾಣದಲ್ಲಿ ನೀಡಿರುವ ಪ್ರಕಟಣೆಯು ಗೂಢ ಭಾಷೆಯಲ್ಲಿದ್ದರೆ,ಅದನ್ನು ವಿದ್ಯಾರ್ಥಿಗಳು ಅಥವ ಸಾರ್ವಜನಿಕರು ಅರ್ಥೈಸಿಕೊಳ್ಳುವುದು ಹೇಗೆ? ಕರ್ನಾಟಕ ರಾಜ್ಯ ಮುಕ್ತ ವಿವಿ ಇತ್ತೀಚೆಗೆ ತನ್ನ ’ಮಾಹಿತಿ ಫಲಕ’ದಲ್ಲಿ ಪ್ರಕಟಣೆಯನ್ನು ನೀಡಿತ್ತು.ಸ್ನಾತಕೋತ್ತರ ಅಧ್ಯಯನದ ಪರೀಕ್ಷೆಗಳ ಬಗೆಗೆ ಇದ್ದ ಕನ್ನಡ ಪ್ರಕಟಣೆ ಪಿಡಿಎಫ್ ಕಡತದ ರೂಪದಲ್ಲಿದೆ.ಇದನ್ನು ತೆರೆದರೆ.ಯಾವುದೋ ನಿಗೂಢ ಲಿಪಿಯಲ್ಲಿ ಪ್ರಕಟಣೆ ಮೂಡುತ್ತದೆ!ಅದನ್ನು ಅರ್ಥೈಸುವುದು ಹೇಗೆ ಎಂದು ತಲೆ ಕೆರೆಯುವ ಪ್ರಸಂಗ.ನಿಟ್ಟೆಯ ಮಂಜುನಾಥರ ಮಡದಿಯೂ ಈ ಪರೀಕ್ಷೆ ತೆಗೆದುಕೊಳ್ಳಬೇಕಿತ್ತು.ಪ್ರಕಟಣೆಯ ಅರ್ಥ ತಿಳಿಯಲು ಅವರು ಸಾಕಷ್ಟು ಬುದ್ಧಿ ಓಡಿಸಿದರು.ಪಿಡಿಎಫ್ ಕಡತದ ಮಾಹಿತಿಯನ್ನು ’ಬರಹ’ಕ್ಕೆ ರವಾನಿಸಿದರೂ ಗೂಢ ಲಿಪಿ ಗುಟ್ಟು ಬಿಟ್ಟು ಕೊಡಲಿಲ್ಲ.ಕೊನೆಗೆ ಅದನ್ನು ವರ್ಡ್ ತಂತ್ರಾಶಕ್ಕೆ ಹಚ್ಚಿ ನೋಡಿದರೂ ಫಲಿತಾಂಶ ಅಷ್ಟೇ. ಕೊನೆಗೆ ವರ್ಡ್‍ನಲ್ಲಿ ’ಬರಹ’ ಲಿಪಿಯನ್ನು ಆಯ್ದಾಗ--ಹುರ್ರೇ..ಕನ್ನಡ ಅಕ್ಷರಗಳು ಮೂಡಿಬಂತು!ತನ್ನ ವಿದ್ಯಾರ್ಥಿಗಳನ್ನು ಪತ್ತೇದಾರರಾಗಲು ತರಬೇತಿ ನೀಡುವತ್ತ ಮುಕ್ತ ವಿವಿ ಹೆಜ್ಜೆ ಹಾಕುತ್ತಿದೆಯೇ ಎನ್ನುವ ಸಂಶಯ ಮೂಡಿಸುವಂತೆ ಮಾಡುತ್ತದಲ್ಲವೇ ಈ ಪ್ರಸಂಗ?
ಐಸಿ:ಮಡಚುವುದೀಗ ಈಸಿ
ಇಲೆಕ್ಟ್ರಾನಿಕ್ ಮಂಡಲಗಳನ್ನುಹೊತ್ತ ಐಸಿ(ಇಂಟಗ್ರೇಟೆಡ್ ಸರ್ಕ್ಯೂಟ್) ಸಿಲಿಕಾನಿಂದ ತಯಾರಿಸಿದ್ದು.ಇದು ಬಲವಾಗಿದ್ದು,ಮಡಚಲು ಆಗದು.ಆದರೆ ಹೊಸ ತಂತ್ರಜ್ಞಾನದಲ್ಲಿ ರಬ್ಬರ್ ಹಾಳೆಗಳ ಮೇಲೆ ಮುದ್ರಿಸಿದ ಚಿಪ್‍ಗಳು ಆಕಾರವನ್ನು ಬದಲಿಸಬಲ್ಲುವು.ಇಲಿನಾಯಿಸ್ ವಿಶ್ವವಿದ್ಯಾಲಯದಲ್ಲಿ ಇಂತಹ ಚಿಪ್‍ಗಳನ್ನು ತಯಾರಿಸಲಾಗಿದೆ.ವೈದ್ಯಕೀಯ ಇಲೆಕ್ಟ್ರ್‍ಆನಿಕ್ಸ್ ಕ್ಷೇತ್ರದಲ್ಲಿ ಇವುಗಳ ಅಗತ್ಯ ಹೆಚ್ಚು.ಮಿದುಳಿನಲ್ಲಿ ಹುದುಗಿಸಿ ಇಡಲು,ದೇಹದ ಪರಿಸ್ಥಿಯ ಮೇಲೆ ಕಣ್ಣಿಡಲು ದೇಹದೊಳಗೆ ಅವಿತಿರಿಸಬಲ್ಲ ಚಿಪ್‍ಗಳನ್ನು ಬಳಸಿದರೆ,ಅವು ಈ ರೀತಿ ಬಗ್ಗಿಸಲಾದರೇ ಹೆಚ್ಚು ಒಳಿತು.ವೈದ್ಯರ ಕೈಗವಸುಗಳಲ್ಲಿ ಈ ರೀತಿಯ ಐಸಿಗಳನ್ನು ಅಳವಡಿಸಿ,ಅವರು ಶಸ್ತ್ರಕ್ರಿಯೆ ಮಾಡುತ್ತಿರುವಂತೆಯೇ,ರಕ್ತದಲ್ಲಿ ಸಕ್ಕರೆ ಪ್ರಮಾಣ,ಆಮ್ಲಜನಕ ಪ್ರಮಾಣ ಇತ್ಯಾದಿಗಳ ಬಗ್ಗೆ ಗಮನವಿರಿಸಿ,ದೇಹ ಸುಸ್ಥಿತಿಯಲ್ಲಿರುವುದನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಚಿಪ್‍ಗಳನ್ನು ದುಡಿಸಿಕೊಳ್ಳುವ ಆಲೋಚನೆಯನ್ನು ಸಂಶೋಧಕರು ಮಾಡುತ್ತಿದ್ದಾರೆ.ಈ ರೀತಿಯ ಐಸಿಗಳು ಮಾಮೂಲಿ ಐಸಿಗಳಷ್ಟು ಚೆನ್ನಾಗಿ ಕೆಲಸ ಮಾಡವು.
ಜನಗಣತಿಗೆ ಕಂಪ್ಯೂಟರ್ ಬಳಕೆ ಇಲ್ಲ
ಎರಡು ವರ್ಷಗಳ ನಂತರ 2010ರಲ್ಲಿ ಜನಗಣತಿ ನಡೆಯುವಾಗ ಕೈಯಲ್ಲಿ ಹಿಡಿಯುವ ಕಂಪ್ಯೂಟರುಗಳ ಬಳಕೆಗೆ ಅಮೆರಿಕಾದಲ್ಲಿ ಯೋಜಿಸಲಾಗಿತ್ತು.ಆದರೆ ಅಣಕು ಗಣತಿಯ ವೇಳೆ ಗಣತಿ ಕೆಲಸಕ್ಕೆ ನಿಯುಕ್ತರಾದ ತಾತ್ಕಾಲಿಕ ನೌಕರರು,ಕಂಪ್ಯೂಟರುಗಳನ್ನು ಬಳಸಲು ಕಷ್ಟ ಪಟ್ಟರು.ಜತೆಗೆ ಆ ಕಿರುಗಣಕಗಳು ಗಣತಿ ಕಾರ್ಯದಲ್ಲಿ ತೊಡಗಿದವರು ಸಂಗ್ರಹಿಸಿದ ಮಾಹಿತಿಯನ್ನು ಕಂಪ್ಯೂಟರ್ ಜಾಲಕ್ಕೆ ಸೇರಿಸಲೂ ಪರದಾಡುವ ಪ್ರಸಂಗ ಬಂತು.ಗಣಕಗಳನ್ನು ಪೂರೈಸಲು ಆದೇಶ ಪಡೆದ ಹ್ಯಾರಿಸ್ ಕೋರ್ಪೊರೇಷನ್ ಬೇಕಾದ ಸಂಖ್ಯೆಯಲ್ಲಿ ಅವನ್ನು ಪೂರೈಸಲು ಅಸಾಧ್ಯವೆಂದು ಹೇಳಿರುವುದು ಮತ್ತಷ್ಟು ಪ್ರಶ್ನೆಗಳು ಏಳಲು ಕಾರಣವಾಗಿದೆ.ಕಂಪ್ಯೂಟರುಗಳನ್ನು ಹಿಡಿದು ಹೊಗುವ ಗಣತಿಕಾರರು,ವಾಸ್ತವ್ಯದ ವಿಳಾಸ ದೃಡೀಕರಿಸಲು,ಜನರ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಸಂಗಹಿಸಿದ ಮಾಹಿತಿಯನ್ನು ಜಾಲಕ್ಕೆ ಸೇರಿಸಲು ಕಂಪ್ಯೂಟರ್ ಬಳಸುವ ಯೋಜನೆಯಿತ್ತು.ಇನ್ನು ಗಣತಿ ಕಾರ್ಯ ನಡೆದಾಗ ಹಳೆಯ ಕಾಗದದಲ್ಲಿ ಬರೆದು ತೆಗೆದುಕೊಳ್ಳುವ ವಿಧಾನಕ್ಕೆ ಶರಣಾಗಬೇಕಾದೀತು. ಈಗ ಅಂದಾಜಿಸಿದ ಹತ್ತು ಬಿಲಿಯನ್ ಡಾಲರುಗಳಿಗೆ ಮೀರಿ ಖರ್ಚು ಬರಬಹುದು ಎಂಬ ಮಾತು ಕೇಳಿ ಬರುತ್ತಿದೆ.ಹೆಚ್ಚಿಗೆ ಬೇಕಾದ ಮೊತ್ತ ಎರಡು ಬಿಲಿಯನ್ ಆಗಬಹುದು.
ವಿಕಿಪೀಡಿಯಾಗೆ ದೊಡ್ದ ಸಹಾಯಹಸ್ತ
ಮೂರು ಮಿಲಿಯನ್ ಡಾಲರು ಸಣ್ಣ ಮೊತ್ತವೇನೂ ಅಲ್ಲ. ಜಗತ್ತಿನ ಮೊದಲ ಜನರೇ ಅಭಿವೃದ್ಧಿ ಪಡಿಸಿದ ವಿಶ್ವಕೋಶಕ್ಕೆ ಮುಂದಿನ ಮೂರು ವರ್ಷಗಳಲ್ಲಿ ಮೂರು ಮಿಲಿಯನ್ ಡಾಲರು ನೆರವನ್ನು
ಪ್ರತಿಷ್ಠಾನವೊಂದು ನೀಡಲಿದೆ.ಜಾಹೀರಾತು ನೆರವು ಇಲ್ಲದೆ,ಜನರ ಕಾಣಿಕೆಯ ಮೂಲಕವೇ ನಿಘಂಟು,ವಿಶ್ವಕೋಶ ರಚಿಸುತ್ತಾ,ಸ್ಥಳೀಯ ಭಾಷೆಗಳಲ್ಲಿಯೂ ಇಂತಹ ಕೆಲಸ ಮಾಡುತ್ತಿರುವ ವಿಕಿಮೀಡಿಯಾ ಪ್ರತಿಷ್ಠಾನಕ್ಕೆ ಈ ಕೊಡುಗೆ ಉತ್ಸಾಹ ಹುಟ್ಟಿಸಿದೆ.2001ರಲ್ಲಿ ಈ ಕೆಲಸಕ್ಕೆ ಕೈಹಚ್ಚಿದ ವಿಕಿಮೀಡಿಯ,ಸದ್ಯ ಅಮೆರಿಕಾದ ಅತ್ಯಂತ ಜನಪ್ರಿಯ ಅಂತರ್ಜಾಲ ತಾಣದ ನಿರ್ಮಾತೃ.ವರ್ಷಕ್ಕೆ ಸುಮಾರು ಐದು ದಶಲಕ್ಷ ಡಾಲರುಗಳನ್ನು ಸರ್ವರ್ ಮತ್ತು ಅಂತರ್ಜಾಲ ಸಂಪರ್ಕಕ್ಕೆ ಖರ್ಚು ಮಾಡಬೇಕಾಗುತ್ತದೆ.ಇದು ವರೆಗೆ ಎರಡು ದಶಲಕ್ಷ ಡಾಲರುಗಳ ಕೊಡುಗೆಯೇ ದೊಡ್ಡದೆನಿಸಿತ್ತು.ಈ ಹೊಸ ಕೊಡುಗೆಯ ಮೂಲಕ ತನ್ನಲ್ಲಿ ಬಳಕೆಯಾಗುವ ತಂತ್ರಾಶವನ್ನು ಸುಧಾರಿಸಿಕೊಳ್ಳುವ ಯೋಚನೆ ಪ್ರತಿಷ್ಠಾನಕ್ಕಿದೆ.ಜತೆಗೆ ಹೆಚ್ಚು ನೌಕರರನ್ನು ನೇಮಿಸಿಕೊಂಡು ಕೆಲಸದಲ್ಲಿ ಹೆಚ್ಚಿನ ವೇಗದಲ್ಲಿ ಸಾಧಿಸಲೂ ಪ್ರಯತ್ನಿಸಲಾಗುತ್ತದಂತೆ.ಕನ್ನಡದ ಸಂಪದವೂ ಜನರ ನೆರವಿನಿಂದಲೇ ನಡೆಯುವ ಪಣ ತೊಟ್ಟಿರುವುದು ನಿಮಗೆ ಗೊತ್ತೇ ಇದೆ.
ಚಿತಾಭಸ್ಮ ಚಂದ್ರನ ಮೇಲೆ ವಿಸರ್ಜಿಸಬಹುದು!
ಚಂದ್ರನ ಮೇಲೆ ಚಿತಾಭಸ್ಮ ವಿಸರ್ಜಿಸುವ ಬಯಕೆ ಇದ್ದವರಿಗೆ ಈಗ ಬಯಕೆ ಈಡೇರಿಸಿಕೊಳ್ಳಲು ಸಾಧ್ಯ.ಹತ್ತು ಸಾವಿರ ಡಾಲರು ನೀಡಿದರೆ ಸರಿ! ಸೆಲೆಸ್ಟಿಸ್ ಇಂಕ್ ಎಂಬ ಕಂಪೆನಿಯು ಅಲ್ಪಪ್ರಮಾಣದಲ್ಲಿ ಮಾನವ ಚಿತಾಭಸ್ಮವನ್ನು ಚಂದ್ರನ ಮೇಲೆ ಚೆಲ್ಲಲು ತಯಾರಿ ನಡೆಸಿದೆ.ರಾಕೆಟುಗಳಲ್ಲಿರುವ ರೊಬೋಟಿಕ್ ಹಸ್ತ ಈ ಕೆಲಸವನ್ನು ನೆರವೇರಿಸಲಿದೆ.
udayavani
ashokworld
*ಅಶೋಕ್‍ಕುಮಾರ್ ಎ