ಮುಖ್ಯಮಂತ್ರಿ ಚಂದ್ರು ಅವರಿಗೊಂದು ಬಹಿರಂಗ ಪತ್ರ

ಮುಖ್ಯಮಂತ್ರಿ ಚಂದ್ರು ಅವರಿಗೊಂದು ಬಹಿರಂಗ ಪತ್ರ

ಬರಹ

ಮುಖ್ಯಮಂತ್ರಿ ಚಂದ್ರು ಅವರಿಗೊಂದು ಬಹಿರಂಗ ಪತ್ರ

ಪ್ರಿಯ ಶ್ರೀ 'ಚಂದ್ರು' ಅವರೇ,

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಬಹು ಉತ್ಸಾಹದಿಂದ ಕೆಲಸ ಆರಂಭಿಸಿರುವ ಸೂಚನೆ ನೀಡಿರುವ ನಿಮಗೆ 'ವಿಕ್ರಾಂತ ಕರ್ನಾಟಕ'ದ ಓದುಗರ ಪರವಾಗಿ ಅಭಿನಂದನೆಗಳು. ನೀವು ಇತ್ತೀಚಿನ ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಹೇಳಿದಂತೆ, ಕನ್ನಡ ನಾಡಿನಲ್ಲಿ 'ಕನ್ನಡ ಅಭಿವೃದ್ಧಿ ಪ್ರಾಧಿಕಾರ'ವೆಂಬುದೊಂದು ಇದೆ ಎನ್ನುವುದೇ ಕನ್ನಡದ ಸ್ಥಿತಿಗತಿಯನ್ನು ಸೂಚಿಸುವಂತಿದೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾದ ಎರಡು ದಶಕಗಳ ನಂತರವೂ ಅದರ ಸ್ಥಾಪನೆಯ ಉದ್ದೇಶಗಳು ಅಲ್ಪ ಪ್ರಮಾಣದಲ್ಲಾದರೂ, ನಿಜಾರ್ಥದಲ್ಲಿ ಈಡೇರಿರುವ ಸಾಕ್ಷ್ಯಗಳು ನಮಗಿನ್ನೂ ದೊರೆಯಬೇಕಾಗಿದೆ ಎಂದರೆ ಏನು ಹೇಳುವುದು? ಬದಲಿಗೆ ವರ್ಷೇ ವರ್ಷೇ, ಸಾರ್ವಜನಿಕವಾಗಿ ಕನ್ನಡದ ಸ್ಥಾನ ಮಾನ ಅವನತಿಯತ್ತಲೇ ಸಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೀಗಾಗಿಯೇ ರಾಜ್ಯದಲ್ಲಿ ಸರ್ಕಾರದ 'ಪ್ರಯತ್ನ'ಗಳಿಗೆ ಪರ್ಯಾಯವಾಗಿ, ಕನ್ನಡ ರಕ್ಷಣೆಯ ವೀರ ಪ್ರತಿಜ್ಞೆಗೈಯುತ್ತಾ ಹಲವು ಸಂಘ ಸಂಸ್ಥೆಗಳು, ವೇದಿಕೆಗಳು, ಸೇನೆಗಳು ಒಂದೇ ಸಮನೆ ತಲೆಯೆತ್ತುತ್ತಿವೆ. ಅಲ್ಲದೆ, ಈವರೆಗೆ ಪ್ರಾಧಿಕಾರದ ಅಧ್ಯಕ್ಷರಾಗಿದ್ದವರಲ್ಲಿ ಅನೇಕರು 'ಕನ್ನಡ ವೀರ'ರೇ ಆಗಿದ್ದರೂ, ಈ ಸ್ಥಿತಿ ಏಕುಂಟಾಯಿತೆಂದು ನೀವು ಯೋಚಿಸಬೇಕಿದೆ. ಅಧಿಕಾರ ಕೊಡುವ ಸುಖ - ಸವಲತ್ತುಗಳು ಯಾರನ್ನಾದರೂ ಮೆತ್ತಗಾಗಿಸಬಲ್ಲುದು. ಇದನ್ನು ಮರೆಮಾಚಲು ಅಧಿಕಾರ ಬಿಡುವ ಹೊತ್ತಿನಲ್ಲಿ, ತಾವು ಕೈಗೊಳ್ಳಲು ಸಾಧ್ಯವಾದ ಕೆಲವು ಔಪಚಾರಿಕ ಕಾರ್ಯಕ್ರಮಗಳನ್ನು ಒಳಗೊಂಡ ಪ್ರಗತಿ ನಕ್ಷೆಯೊಂದನ್ನು ಬಿಡುಗಡೆ ಮಾಡುವ ಹಾಸ್ಯಾಸ್ಪದ ಕ್ರಮಕ್ಕೆ ಕೆಲವರು ಕೈಹಾಕಿದ್ದೂ ಉಂಟು! ಇಂತಹ ಅಸಹಾಯಕತೆಗೆ ಒಳಗಾಗದಂತೆ, ಆರಂಭದಿಂದಲೇ ನಿಮ್ಮದೇ ಕಾರ್ಯಕ್ರಮಗಳ ನಕ್ಷೆಯೊಂದನ್ನು ತಯಾರು ಮಾಡಿಕೊಂಡು ನೀವು ಕೆಲಸ ಆರಂಭಿಸಬೇಕಿದೆ. ನಿಮ್ಮ ಈ ಕಾರ್ಯಕ್ರಮಗಳ ಹಿಂದೆ ಒಂದು ಸ್ಪಷ್ಟ ಮುನ್ನೋಟ, ಚಿಂತನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಹಠ ಇರುವುದು ಅತ್ಯಗತ್ಯ.

ನಾನು ಹೀಗೆ ನಿಮ್ಮನ್ನು ವೈಯುಕ್ತಿಕವಾಗಿ ಉದ್ದೇಶಿಸಿ ಬರೆಯಲೂ ಒಂದು ಕಾರಣವಿದೆ. ಕನ್ನಡ ಸಿನೆಮಾಗಳಲ್ಲಿ ಹಾಸ್ಯ (ಮತ್ತು ಕೆಲವೊಮ್ಮೆ ಹಾಸ್ಯಾಸ್ಪದ) ಪಾತ್ರಗಳಲ್ಲಿ ಮಾತ್ರ ನೋಡುತ್ತಿದ್ದ ನಿಮ್ಮನ್ನು ನಾನು ಇತ್ತೀಚೆಗೆ ಬೆಂಗಳೂರಲ್ಲಿ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಭೇಟಿಯಾದಾಗ, ನೀವು ಆ ಸಿನೆಮಾಗಳಲ್ಲಿ ಕಂಡಂತೆ 'ಹಗುರ' ವ್ಯಕ್ತಿತ್ವದವರೇನಲ್ಲ ಎಂಬುದು ಗೊತ್ತಾಯಿತು. ಜೊತೆಗೆ, ಈ ಹಿಂದೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕನ್ನಡ ಕಲಿಸುವ ಆಜ್ಞೆಗೆ ಸಿದ್ಧತೆ ನಡೆಯುತ್ತಿದ್ದಾಗ ಶಾಸನ ಸಭೆಯಲ್ಲಿ ಅದನ್ನು ದಿಟ್ಟವಾಗಿ ವಿರೋಧಿಸಿದ ಕೆಲವೇ ಕೆಲವರಲ್ಲಿ ನೀವೂ ಒಬ್ಬರು ಎಂಬುದು ನೆನಪಿಗೆ ಬಂತು. ಕನ್ನಡದ ಬಗ್ಗೆ ಆಳವಾದ ನಿಷ್ಠೆ - ನಂಬಿಕೆಯುಳ್ಳವರು ಮಾತ್ರ ಹೀಗೆ, ಹಲವು ವಕ್ರ ವಿವರಣೆಗಳೊಂದಿಗೆ ಇಂದು ಸೃಷ್ಟಿಸಲಾಗುತ್ತಿರುವ ಕನ್ನಡ ವಿರೋಧಿ ಪ್ರವಾಹದ ವಿರುದ್ಧ ಈಜಬಲ್ಲರು. ನಿಮ್ಮನ್ನು ಆ ಸಮಾರಂಭದಲ್ಲಿ ಸಂಘಟಕರೊಬ್ಬರು 'ಕೋಮುವಾದಿ ಪಕ್ಷದ ಸದಸ್ಯರಾದರೂ...' ಎಂಬ ಮಾತುಗಳೊಂದಿಗೆ ಪರಿಚಯಿಸಿದ್ದಕ್ಕೆ ನೀವು ಪ್ರತಿಕ್ರಿಯಿಸುತ್ತಾ, 'ಅದೆಲ್ಲ ಇಂದಿನ ರಾಜಕೀಯದ ಸನ್ನಿವೇಶದಲ್ಲಿ ಅಪ್ರಸ್ತುತವಾದ ಮಾತು. ನಾನು ಮೂಲತಃ ಸಮಾಜವಾದಿ' ಎಂದು ಹೇಳಿದ್ದೂ ನನ್ನ ಮನದಲ್ಲಿದೆ. ಏಕೆಂದರೆ, ಇಂದು ಯಾರಾದರೂ ಸಮಾಜವಾದಿ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯಬೇಕಾದಂತಹ ಪರಿಸ್ಥಿತಿ ಇರುವಾಗ, ನೀವು ಹಾಗೆ ಹೇಳಿಕೊಳ್ಳುವಲ್ಲಿ ತೋರಿದ ಧೈರ್ಯದಲ್ಲಿ ಒಂದಷ್ಟು ಮುಗ್ಧತೆಯ ಜೊತೆಗೆ ಸಮಾಜವಾದಿ ತತ್ವದ ಬಗ್ಗೆ ಆಳವಾದ ನಂಬಿಕೆಯೂ ಇದೆ ಎಂದು ಭಾವಿಸಿದ್ದೇನೆ. ಒಂದು ಕಾಲದಲ್ಲಿ ಕನ್ನಡ ಚಳುವಳಿಗೆ ಒಂದು ತಾತ್ವಿಕ ಭಿತ್ತಿ ಒದಗಿಸಿ, ಆ ಮೂಲಕ ಅದಕ್ಕೊಂದು ಘನತೆಯನ್ನೂ ಪ್ರದಾನ ಮಾಡಿದ ಸಮಾಜವಾದಿಗಳೇ; ಇಂದು ಬಹಿರಂಗದಲ್ಲದಿದ್ದರೂ, ಅಂತರಂಗದಲ್ಲಿ ಕನ್ನಡದ ಕಾಲ ಮುಗಿಯಿತೋ ಏನೋ ಎಂಬ ಅನುಮಾನದಿಂದ ಇಂಗ್ಲಿಷ್ ಕೈಯನ್ನು ಹಿಡಿದು ಹೊರಟಿರುವಾಗ, ನಿಮ್ಮ ಈ ಸಮಾಜವಾದಿ ಕನ್ನಡ ಬದ್ಧತೆ ನನ್ನಲ್ಲಿ ಒಂದಿಷ್ಟು ಆಸೆ ಹುಟ್ಟಿಸಿದೆ. ಅದಕ್ಕಾಗಿ ಈ ಪತ್ರ.

ಸಮಾಜವಾದಿ ಕನ್ನಡ ಬದ್ಧತೆ ಎಂದೆ. ಇದರರ್ಥ ಇಷ್ಟೆ: ಸ್ವಾತಂತ್ರ್ಯೋತ್ತರ ಭಾರತದ ಪುನಾರಚನೆಗೆ, ಅದೆಂದೂ ಮತ್ತೆ ಯಾವುದೇ ರೀತಿಯ ಗುಲಾಮಗಿರಿಗೆ ಅಥವಾ ವಸಾಹತು ಶೋಷಣೆಗೆ ಒಳಗಾಗದಂತೆ ರಾಷ್ಟ್ರಜೀವನವನ್ನು ರೂಪಿಸಲು, ಭಾರತೀಯ ಸಮಾಜವಾದ ಅತ್ಯಗತ್ಯವೆಂದು ಕಂಡುಕೊಂಡ ಮೂಲಾಧಾರಗಳಲ್ಲಿ ಒಂದು, ಭಾರತೀಯ ಭಾಷಾ ಆಂದೋಲನ. ಇದರ ಬೀಜ, ಸ್ವಾತಂತ್ರ್ಯ ಹೋರಾಟದ ಮೊದಲ ಮಜಲಿನಂತಿರುವ ಅಸಹಕಾರ ಸತ್ಯಾಗ್ರಹದ ಅಂಗವಾಗಿ ಆರಂಭಿಸಲಾಗಿದ್ದ ದೇಶಿ ಶಿಕ್ಷಣ ಆಂದೋಲನದಲ್ಲಿಯೇ ಇದೆ. ಆದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ನೆಹರೂ ಸರ್ಕಾರ ಜನ ಸಾಮಾನ್ಯರ ನಿರೀಕ್ಷೆಗೆ ವಿರುದ್ಧವಾಗಿ ದೇಶಾದ್ಯಂತ ಏಕ ಸ್ತರದ ಸಾಮಾನ್ಯ ಶಿಕ್ಷಣವನ್ನು ಜಾರಿಗೆ ತರಲು ವಿಫಲವಾದಾಗ, ಸಮಾಜವಾದಿಗಳು ಸಮಾನ ಶಿಕ್ಷಣದ ಆದರ್ಶದೊಂದಿಗೆ 'ಆಂಗ್ರೇಜಿ ಹಠಾವೋ!' ಚಳುವಳಿಯನ್ನು ಹಮ್ಮಿಕೊಳ್ಳಬೇಕಾಯಿತು. ಈ ಚಳುವಳಿಯ ಹಿಂದೆ ಇಂಗ್ಲಿಷ್ ಭಾಷೆಯ ವಿರೋಧಕ್ಕಿಂತ, ಅದು ಪ್ರತಿನಿಧಿಸುತ್ತಿದ್ದ ಪ್ರತ್ಯೇಕತಾ ಸಾಮಾಜಿಕ ಪ್ರತಿಷ್ಠೆ, ಜನದೂರವಾದ ಆಡಳಿತ ಮತ್ತು ದೇಶೀ ವಿವೇಕವನ್ನು ಹತ್ತಿಕ್ಕುವ ಮೂಲಕ ಬೆಳೆಯುವ ಬಂಡವಾಳಶಾಹಿ ತಂತ್ರಜ್ಞಾನದ ರಾಕ್ಷಸೀ ಪರಿಣಾಮಗಳ ಬಗೆಗಿನ ಆತಂಕವಿತ್ತು.

ಇಂದು ಈ ಪರಿಣಾಮಗಳು ಇಷ್ಟು ವರ್ಷಗಳ ನಂತರ, ಮನುಷ್ಯರನ್ನು ಹಂದಿಗಳನ್ನಾಗಿ ಮಾಡುತ್ತಿರುವ ಜಾಗತೀಕರಣವೆಂಬ ಹೊಸ ಆರ್ಥಿಕ ನೀತಿಯ ಹೆಸರಲ್ಲಿ ಅವತಾರ ತಾಳಿ ನಮ್ಮ ಮುಂದೆ ನಿಂತಿವೆ. ಅವು ಬಡವ - ಶ್ರೀಮಂತರ ಅಂತರದ ಸ್ಫೋಟಕ ಹೆಚ್ಚಳ, ಅಶ್ಲೀಲ ಶ್ರೀಮಂತಿಕೆಯ ದ್ವೀಪಗಳು ಉಂಟು ಮಾಡುತ್ತಿರುವ ಆತಂಕಕಾರಿ ಸಾಮಾಜಿಕ ವಿಕ್ಷಿಪ್ತತೆಗಳು, ಒಂದೇ ಸಮನೆ ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಅಪರಾಧ ವೈವಿಧ್ಯಗಳು ಮತ್ತು ಇವುಗಳಿಗೆ ಸಾಮಾನ್ಯ ಜನತೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಧಿಕ್ಕರಿಸಿ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆಗಳ ವ್ಯಗ್ರ ರೂಪಗಳಲ್ಲಿ ಕಾಣತೊಡಗಿವೆ. ಒಟ್ಟಾರೆಯಾಗಿ ಇವುಗಳು ಉಂಟು ಮಾಡುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಒತ್ತಡಗಳನ್ನು ತಾಳಲಾರದೆ, ಭಾರತೀಯ ಸಮಾಜದ ಅಡಿಗಲ್ಲಿನಂತಿರುವ ರೈತ ಸಮುದಾಯ ಒಂದೇ ಸಮನೆ ಆತ್ಮಹತ್ಯೆಗೆ ಶರಣಾಗುತ್ತಿದೆ. ಈ ಪ್ರಕ್ರಿಯೆಗೆ ತನ್ನದೇ ತರ್ಕವಿದ್ದು, ಅದು ತಂತಾನೇ ಹಿಮ್ಮೊಗವಾಗಲಾರದು ಎಂಬುದನ್ನು ಸದ್ಯದ ಅಭೂತಪೂರ್ವ ಜಾಗತಿಕ ಹಣದುಬ್ಬರದ ಹಿಂದಿನ ಕಾರಣಗಳು ಸೂಚಿಸುತ್ತಿವೆ.

ರಾಷ್ಟ್ರಜೀವನದ ಈ ಅನಾಹುತಕಾರಿ ಸ್ಥಿತ್ಯಂತರದ ಹಿಂದೆ, ಸಾರತಃ ಸಾಂಸ್ಕೃತಿಕವೆಂದು ಕರೆಯಬಹುದಾದ ಒಂದು 'ವಿಸ್ಮೃತಿ' ಇದೆ. ಈ ವಿಸ್ಮೃತಿ ಉಂಟಾಗಿರುವುದು 'ನಮ್ಮತನ'ವೆಂಬ ನಿಜವಾದ ಸಂಪನ್ಮೂಲವನ್ನು ಕಡೆಯಾಗಿ ನೋಡಿ, 'ಪರತನ'ದ ಆಕರ್ಷಣೆಗೆ ಒಳಗಾಗಿದ್ದರಿಂದ. ಈ ನಮ್ಮತನವನ್ನು ಖಂಡಿತ ನಾನು ಒಂದು ಒಣ ಅಭಿಮಾನದ ವಿಷಯವಾಗಿ ಪ್ರಸ್ತುತಪಡಿಸುತ್ತಿಲ್ಲ. ಬದಲಾಗಿ ಅದು, ಈ ನೆಲದೊಡನೆಯ, ನಮ್ಮ ಸಮಾಜದೊಡನೆಯ ನಮ್ಮ ಸಂಬಂಧಗಳ ಸಮತೋಲನ ಶಕ್ತಿಯೇ ಆಗಿದೆ. ಮೇಲೆ ವಿವರಿಸಿದಂತಹ ಇಂದಿನ ಅಭಿವೃದ್ಧಿ ಅನಾಹುತಗಳಿಗೆ ಈ ಸಮತೋಲನ ಶಕ್ತಿಯ ನಾಶವೇ ಕಾರಣವಾಗಿದೆ. ಈ ಸಮತೋಲನ ಶಕ್ತಿ ಹರಳುಗಟ್ಟಿರುವುದು, ಈ ನೆಲ ಹಾಗೂ ಇಲ್ಲಿನ ಜನಗಳ ಸಂಬಂಧಗಳಲ್ಲಿ ವಿನ್ಯಾಸಗೊಂಡಿರುವ ಸ್ಥಳೀಯ ವಿವೇಕದಲ್ಲಿ ಮತ್ತು ಅದು ಅಭಿವ್ಯಕ್ತಿಗೊಂಡಿರುವ ಭಾಷಾ ಮಾತೃಕೆಗಳಲ್ಲಿ. ಹಾಗಾಗಿ ಚರಿತ್ರೆಯ ನಡಿಗೆಯಲ್ಲಿ ನಮ್ಮ 'ಸ್ಥಿತಿ'ಯನ್ನು ಸ್ವಯಂಮರುಕಕ್ಕೊಳಪಡಿಸಿ ಪರಾಕರ್ಷಣೆಯ ಹಪಾಹಪಿಯನ್ನು ಸೃಷ್ಟಿಸದೆ, ಸಮತೋಲಿತ 'ಪ್ರಗತಿ'ಯೆಡೆಗೆ ನಮ್ಮನ್ನು ಒಯ್ಯಬಲ್ಲ ಶಕ್ತಿ ಇರುವುದು ನಮ್ಮ ಭಾಷೆಗೇ. ಅದರ ವ್ಯಾಕರಣದಲ್ಲಿ ಮತ್ತು ಅದರ ನುಡಿಗಟ್ಟುಗಳಲ್ಲಿ ಮೂಡುವ ವಿಚಾರ - ವಿವೇಕಗಳಲ್ಲೇ.

ಏಕೆಂದರೆ, ಅದು ನಮ್ಮದೇ ಜೀವ ಕೇಂದ್ರದಿಂದ ಹೊಮ್ಮಿ ನಮ್ಮನ್ನು ಸರ್ವ ಸಂಕಟಗಳಲ್ಲೂ ಪೊರೆಯಬಲ್ಲ 'ಸಾವಯವ' ಗುಣ ಹೊಂದಿರುತ್ತದೆ. ಅದು, ಹೊರಗಿನ ವಿಚಾರಗಳ, ಪರಾಕರ್ಷಣೆಗಳ ಸುಲಭ ಮರುಳಿಗೆ ಒಳಗಾಗದೆ; ಆದರೆ, ಅವುಗಳ ಎಲ್ಲ 'ಪ್ರಗತಿಪರ' ಚೈತನ್ಯವನ್ನೂ ತನ್ನ ವ್ಯಾಕರಣಕ್ಕೆ, ನುಡಿಗಟ್ಟಿಗೆ ತನ್ನದೇ ರೀತಿಯಲ್ಲಿ ಅಳವಡಿಸಿಕೊಂಡು ತನ್ನದನ್ನೇ ಮಾಡಿಕೊಳ್ಳುವ ಜಾಣ್ಮೆ ಅದರಲ್ಲಿ ಅಂತರ್ಗತವಾಗಿರುತ್ತದೆ. ಹಾಗಾಗಿ ಇಂದಿನ ಜಾಗತೀಕರಣದ ಅನುಕೂಲಗಳನ್ನು ಕ್ರೋಢೀಕರಿಸಿಕೊಳ್ಳಲು ಮತ್ತು ಅದೇ ಸಮಯದಲ್ಲಿ ಅದು ನಮ್ಮಲ್ಲಿ ಸೃಷ್ಟಿಸುವ 'ಹಂದಿತನ'ವನ್ನು ನಿವಾರಿಸಿಕೊಳ್ಳಲು;ಅಂದರೆ, ಆಧುನಿಕ ವಿಜ್ಞಾನ - ತಂತ್ರಜ್ಞಾನಗಳ ಫಲಗಳ ಪರಿಣಾಮಗಳು ನಮ್ಮ ವ್ಯಕ್ತಿತ್ವ ಮತ್ತು ಸಮಾಜದ ಮೇಲೆ ಸಮತೋಲಿತವಾಗಿರುವಂತೆ ನೋಡಿಕೊಳ್ಳಲು ಹಾಗೂ ಆ ಮೂಲಕ ನಮ್ಮನ್ನು ಒಂದು ರಾಷ್ಟ್ರವಾಗಿ, ಸಮಾಜವಾಗಿ ಉಳಿಸಲು ದೇಶ ಭಾಷೆಗಳು - ನಮಗೆ ಕನ್ನಡ - ಒಂದು ಸಂವಹನ ಮಾಧ್ಯಮವಾಗಿ ಮಾತ್ರವಲ್ಲ, ಒಂದು ಸಾಂಸ್ಕೃತಿಕ ಸಾಧನವಾಗಿ ಕೂಡಾ ಅತ್ಯವಶ್ಯಕವಾಗಿದೆ.

ಹೀಗಾಗಿ 'ಚಂದ್ರು' ಅವರೇ, ನೀವು ಈ ಯಾವುದರಿಂದಲೂ ವಿಚಲಿತರಾಗದೆ ಕನ್ನಡದ ಅಭಿವೃದ್ಧಿಯನ್ನು ಒಂದು ಸಮಗ್ರ ಹಾಗೂ ಪರ್ಯಾಯ ರಾಜಕೀಯ ಕಾರ್ಯಕ್ರಮದಂತೆಯೇ ಆಯೋಜಿಸಿ, ಜಾರಿಗೆ ತರಲು ಸಿದ್ಧವಾಗುವುದು ನಿಮ್ಮ ಆದ್ಯ ಕರ್ತವ್ಯವಾಗಿದೆ. ಕನ್ನಡ ಉಳಿದು ಬೆಳೆಯವುದು ಕನ್ನಡಿಗರು ಅದನ್ನು ಸಕಲ ಕ್ಷೇತ್ರಗಳಲ್ಲಿ ಬಳಸಿ ಬೆಳೆಸಿದಾಗ ಮಾತ್ರ. ಅದಕ್ಕಾಗಿ ಮುಖ್ಯವಾಗಿ ಶಿಕ್ಷಣ, ಆಡಳಿತ ಮತ್ತು ಉತ್ಪಾದನೆ - ಉದ್ಯಮ ಕ್ಷೇತ್ರಗಳಲ್ಲಿ ಕನ್ನಡದ 'ಅಭಿವೃಧ್ಧಿ’ಯನ್ನು ಸಾಧಿಸುವುದರ ಕಡೆ ತೀವ್ರ ಗಮನ ಹರಿಸಬೇಕಿದೆ. ಅದಕ್ಕಾಗಿ ನೀವು ಆದ್ಯತೆಯ ಮೇಲೆ ಮಾಡಬೇಕಾದ ಕೆಲಸಗಳೆಂದರೆ:

1. ರಾಜ್ಯಾದ್ಯಂತ, ವಿಶೇಷವಾಗಿ ಬೆಂಗಳೂರು ನಗರದಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಶೀಘ್ರವಾಗಿ ಸುಧಾರಿಸಬೇಕಿದೆ. ಅವು ಮೂಲಭೂತ ಸೌಕರ್ಯಗಳಲ್ಲಾಗಲೀ, ಬೋಧನೆಯ ಗುಣ ಮಟ್ಟದಲ್ಲಾಗಲೀ, ಶಿಸ್ತು ಪಾಲನೆಯಲ್ಲಾಗಲೀ, ಯಾವುದೇ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಒಂದು ಕಾಲಬದ್ಧ ಕಾರ್ಯಕ್ರಮವಾಗಿ ಜಾರಿಗೆ ತರುವಂತೆ ಸರ್ಕಾರದ ಶಾಲಾ ಶಿಕ್ಷಣ ಸಚಿವರ ಮನವೊಲಿಸಬೇಕಿದೆ. ಆ ಮೂಲಕ ಮತ್ತೆ ಎಲ್ಲ ವರ್ಗಗಳ ಮಕ್ಕಳು ಕನ್ನಡ ಶಾಲೆಗೆ ಬರುವಂತೆ ಮಾಡಬೇಕಿದೆ.

ಇದರ ಜೊತೆಗೇ ಬರೀ ಅನ್ಯಭಾಷಿಕರ ವಿರುದ್ಧವಷ್ಟೇ ಹೋರಾಡುತ್ತಿರುವಂತೆ ತೋರುವ ಕನ್ನಡ ಚಳುವಳಿಯ ಎಲ್ಲ ಸಂಘಟನೆಗಳ ಸಭೆ ಕರೆದು, ಇಂದು ಹೇಗೆ ಕನ್ನಡ ಶಾಲೆಗಳ ಪುನರುದ್ಧಾರದ ಚಳುವಳಿಯ ಮೂಲಕ ಮಾತ್ರ ಕನ್ನಡ ಉಳಿಯಬಲ್ಲುದೆಂದು, ಅಗತ್ಯವಿದ್ದರೆ ಅವರಿಗೆ ಒಂದು ಕಾರ್ಯಾಗಾರದ ಮೂಲಕ ವಿವರಿಸಿಬೇಕು. ಹಾಗೂ ಅವರನ್ನು ಕನ್ನಡ ಮಾಧ್ಯಮ ಶಾಲಾ ಆಂದೋಲನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

2. ಕನ್ನಡ ಶಿಕ್ಷಣ ಮಾಧ್ಯಮ ಕುರಿತಂತೆ ಹೈಕೋರ್ಟಿನಲ್ಲಿರುವ ತಡೆಯಾಜ್ಞೆಗೆ ಸಂಬಂಧಿಸಿದಂತೆ ವಾದ - ಪ್ರತಿವಾದಗಳು ಮುಗಿದು ಎರಡು ವರ್ಷಗಳಾಗುತ್ತಿದ್ದರೂ, ತೀರ್ಪು ಹೊರಬಿದ್ದಿಲ್ಲ! ತೀರ್ಪು ಕೂಡಲೇ ಹೊರಬೀಳುವಂತೆ ಕ್ರಮ ಕೈಗೊಳ್ಳಬೇಕು. ಆ ತೀರ್ಪಿನ ಪ್ರಕಾರ ಶಾಲಾ ಶಿಕ್ಷಣ ಮಾಧ್ಯಮ ನೀತಿಯನ್ನು ಅಸಂದಿಗ್ಧವಾಗಿ ರಾಜ್ಯಾದ್ಯಂತ ಜಾರಿಗೆ ತರಲು ಮತ್ತು ಯಾವುದೇ ಶಿಕ್ಷಣ ಸಂಸ್ಥೆ ಕನ್ನಡ ಶಿಕ್ಷಣದ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲೆಂದೇ ಕೇಂದ್ರೀಯ ಶಿಕ್ಷಣ ಪಠ್ಯಕ್ರಮವನ್ನು ಆಯ್ದುಕೊಳ್ಳಲು ಅವಕಾಶವಿರದಂತೆ, ಕಾನೂನು ತಿದ್ದುಪಡಿಗೆ ಶಿಫಾರ್ಸ್‌ ಮಾಡಬೇಕು.

ಹಾಗೇ ಭಾಷಾ ಅಲ್ಪಸಂಖ್ಯಾತರ ಶಾಲೆಗಳ ಹೊರತಾಗಿ, ರಾಜ್ಯದ ಎಲ್ಲ ಶಾಲೆಗಳಲ್ಲಿ ಕನಿಷ್ಠ ಏಳನೇ ತರಗತಿಯವರೆಗಾದರೂ ಕನ್ನಡ ಮಾಧ್ಯಮ ಕಡ್ಡಾಯವಾಗಿರುವಂತೆ ಮಾಡುವ ನೀತಿ ರೂಪಿಸಿ, ಹಂತಾನುಹಂತವಾಗಿ ಇದನ್ನು ಜಾರಿಗೆ ತರುವಂತೆ ರಾಜ್ಯ ಸ‌ರ್ಕಾರದ ಮನವೊಲಿಸಬೇಕು. ಅಲ್ಲಿಯವರೆಗೆ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಪದ್ಧತಿಯನ್ನು ಅಮಾನತ್ತಿನಲ್ಲಿಟ್ಟು, ಮೂರನೆಯ ತರಗತಿಯಿಂದ ಅದನ್ನು, ಸಂವಹನ ಇಂಗ್ಲಿಷ್ ಕಲಿಸುವಲ್ಲಿ ವಿಶೇಷ ಪರಿಣತಿಯಳ್ಳ ಸಿಬ್ಬಂದಿಯ ನೇಮಕದ ಮೂಲಕ ಆರಂಭಿಸಬೇಕು.

ಅಂದರೆ, ಯಾವುದೇ ಕಾರಣಕ್ಕೂ ಕನ್ನಡದ ಮಕ್ಕಳಿಗೆ ಶಾಲೆಗಳಲ್ಲಿ ಇಂಗ್ಲಿಷನ್ನು ಕನ್ನಡದ ಸಮಾನಾಂತರ ಭಾಷೆಯಾಗಿ ಕಲಿಸುವ ವ್ಯವಸ್ಥೆ ಇರಕೂಡದು. ಇಂಗ್ಲಿಷ್ ಏನಿದ್ದರೂ ಕನ್ನಡಕ್ಕೆ ಪೂರಕ ಭಾಷೆಯಾಗಿ ಮಾತ್ರ ಕಲಿಸಲ್ಪಡಬೇಕು. ಇದು ರಾಜ್ಯ ಸರ್ಕಾರದ ಭಾಷಾ ನೀತಿಯ ಅವಿಭಾಜ್ಯ ಅಂಗವಾಗಿರುಂತೆ ಕನ್ನಡ ಅಭಿವೃಧ್ಧಿ ಪ್ರಾಧಿಕಾರ ನೋಡಿಕೊಳ್ಳಬೇಕು.

3. ಇಂದು ಎಲ್ಲ ಕ್ಷೇತ್ರಗಳಲ್ಲಿ ಗಣಕಯಂತ್ರದ ಬಳಕೆ ಅನಿವಾರ್ಯವೂ, ಉಪಯುಕ್ತವೂ ಆಗಿ ಕಂಡುಬಂದಿರುವುದರಿಂದ, ಗಣಕ ಯಂತ್ರ ವಿದ್ಯೆ ನಿರ್ವಹಿಸಲು ಇಂಗ್ಲಿಷ್ ಜ್ಞಾನ ಅಗತ್ಯವಿಲ್ಲದಂತಹ ಕನ್ನಡ ತಂತ್ರಾಂಶದ ಅಭಿವೃದ್ಧಿಯ ಕಡೆ ತುರ್ತು ಗಮನ ಹರಿಸಬೇಕಿದೆ. ಕನ್ನಡ ಇಂದು - ಜಾಗತೀಕರಣದ ದಿನಗಳಲ್ಲಿ - ಹಿಂದುಳಿಯಲು ಇಂತಹ ತಂತ್ರಾಂಶ ಇಲ್ಲದಿರುವುದೇ ಒಂದು ಪ್ರಮುಖ ಕಾರಣವಾಗಿದೆ. ಇದನ್ನು ಆದಷ್ಟು ಬೇಗ ಅಭಿವೃದ್ಧಿಗೊಳಿಸಿ ಮತ್ತು ಸರ್ಕಾರದ ಗಣಕಯಂತ್ರ ಜಾಲದಲ್ಲಿ ಅಳವಡಿಸುವ ಮೂಲಕ ಜನಪ್ರಿಯಗೊಳಿಸಬೇಕಿದೆ. ನಂತರ ಅದು ತಂತಾನೇ ಸ್ಥಳೀಯ ವಾಣಿಜ್ಯ - ವ್ಯವಹಾರ ನಿರ್ವಹಣೆಗೂ ಹರಡುತ್ತದೆ. ಜಗತ್ತಿನ ತಂತ್ರಾಂಶ ಅಭಿವೃದ್ಧಿಯ ರಾಜಧಾನಿಯೆನಿಸಿರುವ ಕನ್ನಡ ನಾಡಿನ ರಾಜಧಾನಿ ಬೆಂಗಳೂರಿನಲ್ಲಿ ಇದು ಕಷ್ಟದ ಕೆಲಸವಾಗಲಾರದು. ಸಂಕಲ್ಪ ಮತ್ತು ಹಠ ಬೇಕಷ್ಟೆ.

4. ಆಡಳಿತ ಭಾಷೆಯಾಗಿ ಕನ್ನಡ ಜಾರಿಯ ಸಮಸ್ಯೆ ಇರುವುದು ವಿಧಾನ ಸೌಧದ ಮಟ್ಟದಲ್ಲಷ್ಟೆ. ಬಾಯಿಬಿಟ್ಟರೆ ಇಂಗ್ಲಿಷ್ ಮಾತನಾಡುವ ಮುಖ್ಯಮಂತ್ರಿ ಅಥವಾ ಮಂತ್ರಿಗಳು ಸದ್ಯದ ಸಚಿವ ಸಂಪುಟದಲ್ಲಿ ಇಲ್ಲವಾದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ವಾತಾವರಣ ನಿಮ್ಮ ಸರ್ಕಾರದಲ್ಲಿದೆ. ಆದುದರಿಂದ ಆಡಳಿತ ಭಾಷಾ ನೀತಿಯನ್ನು ಉಲ್ಲಂಘಿಸುವ ಅಧಿಕಾರಿಗಳಿಗೆ ಬರೀ ಎಚ್ಚರಿಕೆಯಲ್ಲ, ಶಿಕ್ಷೆಯನ್ನೂ ನೀಡುವ ಅಧಿಕಾರವನ್ನು ಪ್ರಾಧಿಕಾರಕ್ಕೆ ಒದಗಿಸುವ ಕಡೆ ನೀವು ಕ್ರಮ ಕೈಗೊಳ್ಳಬೇಕಾದ ಕಾಲವೀಗ ಬಂದಿದೆ. ಕಾನೂನು ಮಂತ್ರಿ ಸುರೇಶ್ ಕುಮಾರ್ ಅವರು ಈಗಾಗಲೇ ನ್ಯಾಯಾಂಗದ ಎಲ್ಲ ಸ್ತರಗಳಲ್ಲ್ಲಿ ಕನ್ನಡ ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದರಿಂದ, ಅವರ ಕನ್ನಡ ಪ್ರೀತಿಯನ್ನು ಬಳಸಿಕೊಂಡು ನೀವು ಈ ಕೆಲಸ ಮಾಡಬಹುದಾಗಿದೆ. ನಿಮ್ಮ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಿಶೇಷವಾಗಿ ಪ್ರಸ್ತಾಪಿಸಿರುವ ಕನ್ನಡ ಬದ್ಧತೆಯ ಸ್ಫೂರ್ತಿಯಿಂದ ಈ ಕೆಲಸವನ್ನು ಸರ್ಕಾರದಿಂದ ಆಗುಮಾಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ.

ಇದರ ಜೊತೆಗೇ ಆಡಳಿತ ಭಾಷೆಯಾಗಿ ಕನ್ನಡವನ್ನು ಇನ್ನಷ್ಟು ತಿಳಿಗೊಳಿಸಿ, ಜನ ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವಂತೆ ಸರಳ - ಸಾಮಾನ್ಯಗೊಳಿಸುವ ಕಡೆ ಕ್ರಮ ಕೈಗೊಳ್ಳಬೇಕಿದೆ.

5. ಇನ್ನು ಮುಖ್ಯವಾಗಿ, ಕೇಂದ್ರ - ರಾಜ್ಯ ಸಂಬಂಧಗಳ ಪುನಾರಚನೆ ಕಡೆ ಕೂಡಾ ನೀವು ಗಮನ ಹರಿಸಬೇಕಿದೆ. ಏಕೆಂದರೆ, ರಾಜ್ಯಗಳು ದುರ್ಬಲವಾದಷ್ಟೂ ಆಯಾ ರಾಜ್ಯಗಳ ಭಾಷೆಗಳು ದುರ್ಬಲಗೊಳ್ಳುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹೆಸರು ಒಕ್ಕೂಟವೆಂತಿದ್ದರೂ, ಭಾರತ ಕೇಂದ್ರ - ಬಲಿಷ್ಠ ರಾಷ್ಟವಾಗುತ್ತಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನೇಕ ಕಾನೂನು ತಿದ್ದುಪಡಿಗಳ ಮೂಲಕ ರಾಜ್ಯಗಳ ಹಲವು ಸ್ವಯಮಾಧಿಕಾರಗಳನ್ನು ಮೊಟಕುಗೊಳಿಸಲಾಗಿದೆ. ಕೇಂದ್ರದ ಮೇಲುಗೈಯೇ ರಾಷ್ಟ್ರೀಯತೆ, ಸ್ಥಳೀಯತೆ ಎಂದರೆ ಸಂಕುಚಿತತೆ ಎಂಬಂತಾಗಿದೆ. ಲಾಭಕೋರತನಕ್ಕಾಗಿ ಸದಾ ವಲಸೆಯಲ್ಲಿರುವ ವ್ಯಾಪಾರೋದ್ಯಮಿಗಳ ಹಿತ ರಕ್ಷಣೆಗಾಗಿ ರಾಷ್ಟ್ರೀಯತೆಯ ಹೆಸರಿನಲ್ಲಿ, ಸ್ಥಳಿಯ ಜನರ ಭಾಷೆ, ಸಂಸ್ಕೃತಿ ಮತ್ತು ಉದ್ಯೋಗ ಅಭಿವೃದ್ಧಿಯ ಕೆಲಸಗಳಿಗೆ ತಡೆಯೊಡ್ಡುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಶಾಲಾ ಶಿಕ್ಷಣ ಮಾಧ್ಯಮದ ಪ್ರಶ್ನೆ, ಸರೋಜಿನಿ ಮಹಿಷಿ ವರದಿಯ ಅನುಷ್ಠಾನದ ಸಮಸ್ಯೆ ಇದಕ್ಕೆ ಎರಡು ಜ್ವಲಂತ ಉದಾಹರಣೆಗಳಷ್ಟೆ. ಇದು ಸ್ವಾತಂತ್ರ್ಯ ಹೋರಾಟದಲ್ಲಿ ಮೂಡಿದ ರಾಷ್ಟ್ರೀಯತೆಯ ವಿಕ್ಷಿಪ್ತ ರೂಪವಾಗಿದೆ.

ಭಾಷಾ ರಾಷ್ಟ್ರೀಯತೆಗಳೇ ಭಾರತದ ನಿಜವಾದ ರಾಷ್ಟ್ರೀಯತೆಗಳಾಗಿದ್ದು, ಸ್ವಾತಂತ್ರ್ಯ ಹೋರಾಟ ಇವನ್ನೆಲ್ಲ ಜೋಡಿಸಿ ಆ ತಂತ್ರವನ್ನಷ್ಟೆ ರಾಷ್ಟ್ರವೆಂದು ಕರೆಯಿತು. ಆದರಿಂದು ತಂತ್ರವೇ ರಾಷ್ಟ್ರವಾಗಿ, ನೆಲ ಮತ್ತು ಜನಗಳನ್ನೊಳಗೊಂಡ ರಾಷ್ಟ್ರೀಯತೆಗಳನ್ನು 'ಇಂತೀ ತಮ್ಮ ವಿಧೇಯ' ಸ್ಥಾನಕ್ಕೆ ಇಳಿಸಲಾಗಿದೆ. ಇದರ ವಿರುದ್ಧ ಅಸಮಧಾನಗಳು ಅನೇಕ ಬಾರಿ ಅನೇಕ ರೂಪಗಳಲ್ಲಿ ಭುಗಿಲೆದ್ದಿವೆ. ಆದರೆ ರಾಷ್ಟ್ರೀಯತೆಯ ಹೆಸರಿನಲ್ಲಿ ಅವನ್ನು ದಮನ ಮಾಡಲಾಗಿದೆ. ಆದರೀಗ ಅದನ್ನು ರಾಷ್ಟ್ರವನ್ನು ಬಲಪಡಿಸುವ ಭಾವನೆಯೊಂದಿಗೆ, ಪ್ರಜಾಸತ್ತಾತ್ಮಕ ರೀತಿಯಲ್ಲೇ ಬಗೆಹರಿಸಿಕೊಳ್ಳುವ ಪ್ರಯತ್ನಗಳನ್ನು ಮಾಡಬೇಕಿದೆ.

ಆಶ್ಚರ್ಯವೆಂದರೆ ಇದರ ಮೊದಲ ಪ್ರಯತ್ನ, ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಅಸಂಗತ ಮಟ್ಟಕ್ಕೆ ಒಯ್ದಿರುವ ನಿಮ್ಮ ಪಕ್ಷದ ಮುಖ್ಯಮಂತ್ರಿಯೊಬ್ಬರಿಂದಲೇ ಆರಂಭವಾಗಿದೆ! ನಿಮ್ಮ ಪಕ್ಷದ ಕಾರ್ಯಕರ್ತರ ಆರಾಧ್ಯ ದೈವವೆನಿಸಿರುವ ನರೇಂದ್ರ ಮೋದಿ, ಕೇಂದ್ರದ ಆರ್ಥಿಕತೆಯಿಂದ ಗುಜರಾತ್ ರಾಜ್ಯದ ಆರ್ಥಿಕತೆಯ ವಿಮೋಚನೆ ಬಯಸಿದ್ದಾರೆ. ಈ ಬಯಕೆಯನ್ನು ವ್ಯಕ್ತಪಡಿಸಿದ್ದಕ್ಕಾಗಿ ಅಫ್ಜಲ್ ಗುರುವಿನೊಡನೆ ನೇಣು ಏರಲೂ ಅವರು ಸಿದ್ಧವಾಗಿದ್ದಾರೆ! ಇನ್ನು ಈ ವಿಷಯದಲ್ಲಿ ಎಲ್ಲರಿಗೂ ಮುಂದಿರುವ ತಮಿಳ್ನಾಡಂತೂ ಈಗಾಗಲೇ ರಾಜ್ಯ ಸ್ವಾಯತ್ತತೆಗಾಗಿ ಸಂವಿಧಾನ ಪರಿಷ್ಕಾರಕ್ಕಾಗಿ ಒತ್ತಾಯಿಸುವ ಬೇಡಿಕೆಯನ್ನು ತನ್ನ ರಾಜ್ಯಪಾಲರ ಭಾಷಣದ ಮೂಲಕವೇ ಮಂಡಿಸಿ, ಶಾಸನ ಸಭೆಯ ಒಪ್ಪಿಗೆಯನ್ನೂ ಪಡೆದಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಜನರ ಅಭಿವೃದ್ಧಿಗೆ ಭಂಗ ತರುವಂತಹ ಕೇಂದ್ರ - ರಾಜ್ಯ ಸಂಬಂಧದ ನೆಲೆಗಳ ಬಗ್ಗೆ ಅಧ್ಯಯನ ನಡೆಸಲು ಸಂವಿಧಾನ ತಜ್ಞರ ಒಂದು ತಂಡ ರಚಿಸಿ, ಸೂಕ್ತ ಶಿಫಾರಸ್‌ಗಳನ್ನು ಸರ್ಕಾರಕ್ಕೆ ಸಲ್ಲಿಸುವ ವ್ಯವಸ್ಥೆ ಮಾಡಬೇಕು. ಇದನ್ನು, ಎಂದೋ ಮುಂದೊಂದು ದಿನ ಆಗಬೇಕಾದ ಕೆಲಸದ ಆರಂಭವನ್ನಷ್ಟೆ ನಾವು ಮಾಡುತ್ತಿದ್ದೇವೆ ಎಂಬ ತಿಳುವಳಿಕೆಯೊಂದಿಗೆ ಮಾಡಬೇಕು.

- ಇದೆಲ್ಲ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವ್ಯಾಪ್ತಿಗೆ ಬರುವುದೋ ಇಲ್ಲವೋ ನನಗೆ ತಿಳಿಯದು. ಆದರೆ ಕನ್ನಡದ ನಿಜವಾದ ಅಭಿವೃದ್ಧಿಗೆ ಇವುಗಳೇ ಮೂಲಭೂತ ಆಧಾರಗಳಾಗಿರುವುದರಿಂದ, ಈ ಕೆಲಸಗಳನ್ನು ನಿಮ್ಮ ಸರ್ಕಾರದ ಸಂಬಂಧಪಟ್ಟ ಯಾವುದೇ ಇಲಾಖೆಯಿಂದಲಾದರೂ ಮಾಡಿಸುವ ಜವಾಬ್ದಾರಿ ನಿಮ್ಮದಾಗಿರುತ್ತದೆ. ಇಂತಹ ಆಧಾರಭೂತ ಕೆಲಸಗಳನ್ನು ಮಾಡದೆ, ಸುಮ್ಮನೆ ಟಿಎ, ಡಿಎ ಲೆಕ್ಕದಲ್ಲಿ ಊರೂರು ತಿರುಗುತ್ತಾ, ಸರ್ಕಾರಿ ಕಛೇರಿಗಳ ಕಡತಗಳನ್ನು ತಡಕುತ್ತಾ, ನಿಷ್ಪ್ರಯೋಜಕ ಎಚ್ಚರಿಕೆಯ ಸುತ್ತೋಲೆಗಳನ್ನು ಹೊರಡಿಸುವ ಹಾಸ್ಯಾಸ್ಪದ ಕೆಲಸಗಳನ್ನು ಮಾಡುತ್ತಾ, ಆದರೆ ಸಾರ್ವಜನಿಕ ಭಾಷಣಗಳಲ್ಲಿ ವೀರಾವೇಶದ ಮಾತುಗಳನ್ನಾಡುತ್ತಾ ಕಾಲ ಕಳೆದು; ಕೊನೆಗೆ ಅಧಿಕಾರ ಬಿಡಬೇಕಾದ ಸಂದರ್ಭದಲ್ಲಿ, ಅಧಿಕಾರಗಳೇ ಇಲ್ಲದ ಪ್ರಾಧಿಕಾರವಿದು - ನಿಜವಾದ ಅರ್ಥದಲ್ಲಿ ಏನು ಮಾಡಲೂ ಸಾಧ್ಯವಿಲ್ಲವೆಂದು ಮೊದಲೇ ಗೊತ್ತಿದ್ದ ಸತ್ಯವನ್ನು ಕೊನೆಯಲ್ಲಿ ಹೇಳುವ ಆತ್ಮದ್ರೋಹಿ ಕೆಲಸ ಮಾಡುವ ಬದಲು, ಸ್ಪಷ್ಟ ಗುರಿ ಮತ್ತು ಕಾರ್ಯಕ್ರಮಗಳೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರಿ ನಿಜವಾಗಿ ಕನ್ನಡದ ಕೆಲಸ ಮಾಡಲು ಪ್ರಯತ್ನಿಸಬೇಕು. ಇದು ಸಾಧ್ಯವಿಲ್ಲ ಎನ್ನಿಸುವುದಾದರೆ, ಅಧಿಕಾರ ಬಿಸಾಕಿ ಹೊರಗೆ ಬಂದು, ಅಲ್ಲಿ ಸಾಧ್ಯವಾಗುವ ಕನ್ನಡದ ಕೆಲಸವನ್ನು ಆರಂಭಿಸಬೇಕು.

ಇದು ಸಾಧ್ಯವೇ ನಿಮಗೆ 'ಚಂದ್ರು' ಅವರೇ?

ವಿಶ್ವಾಸದ
ಡಿ.ಎಸ್.ನಾಗಭೂಷಣ