ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರದಲ್ಲಿ....

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರದಲ್ಲಿ....

ಒಂದು ವೇಳೆ ನಾನು ಮುಖ್ಯಮಂತ್ರಿ ಶ್ರೀ ‌ಸಿದ್ದರಾಮಯ್ಯ ಅವರ ಜಾಗದಲ್ಲಿ ಇದ್ದು ಪ್ರಜ್ಞಾಪೂರ್ವಕವಾಗಿ ವಿಶ್ವೇಶ್ವರ ಭಟ್ಟರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದರೆ ಎಲ್ಲಾ ಒತ್ತಡಗಳ ಮಧ್ಯೆಯೂ  ಹೋಗುತ್ತಿದ್ದೆ ಮತ್ತು ಅಲ್ಲಿ ನನ್ನ ಮಾತು ಹೀಗಿರುತ್ತಿತ್ತು. 

" ಇಲ್ಲಿ ಭಾಗವಹಿಸಿರುವ ಎಲ್ಲರಿಗೂ ಪ್ರೀತಿ ಪೂರ್ವಕ ಧನ್ಯವಾದಗಳು. ‌ನನ್ನ ರಾಜಕೀಯ ಮತ್ತು ಸಾಮಾಜಿಕ ನಿಲುವುಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡ ನಂತರವೂ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಭಟ್ಟರ‌ ಧೈರ್ಯವನ್ನು ಮೆಚ್ಚುತ್ತಾ, ಇಲ್ಲಿ ನೆರದಿರುವ ಬಹುತೇಕರು ನಮ್ಮ ವಿರುದ್ಧ ಚಿಂತನೆಯ ಬಲಪಂಥೀಯ ಪ್ರಭಾವಕ್ಕೆ ಒಳಗಾಗಿರುವವರು ಎಂಬುದು ಗೌಪ್ಯವೇನು ಅಲ್ಲ.‌ ನಮ್ಮ ಉಚಿತ ಭಾಗ್ಯಗಳ ಕಡು ವಿರೋಧಿಗಳು ಸಹ...

ನಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ. ಕರ್ನಾಟಕದ ಎಲ್ಲಾ ಜನರ ಯೋಗಕ್ಷೇಮ ನೋಡಿಕೊಳ್ಳುವುದು ನನ್ನ ಸಂವಿಧಾನಾತ್ಮಕ ಕರ್ತವ್ಯ. ಇಲ್ಲಿ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳು ಇರಬಹುದೇ ಹೊರತು ಯಾರೂ ಶತ್ರುಗಳು ಇರಲು ಸಾಧ್ಯವಿಲ್ಲ. ‌ಒಂದಷ್ಟು ರಾಜಕೀಯ ಓಲೈಕೆಗಳು ಸಿದ್ದಾಂತಗಳು ಇರಬಹುದು.

ಇಂದಿನ ಅತಿಯಾದ ಸಂಘರ್ಷಮಯ ಸಮಾಜದಲ್ಲಿ ದ್ವೇಷಿಸುತ್ತಲೇ ಬದುಕನ್ನು ಕಳೆಯುವುದಕ್ಕಿಂತ ಪ್ರೀತಿಸುತ್ತಾ ಸವೆಸಿದರೆ ಹೆಚ್ಚು ಅರ್ಥಪೂರ್ಣ ಎಂದು ಭಾವಿಸುತ್ತೇನೆ. ಇದು ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮವೇ ಆದರೂ ಅದಕ್ಕಿಂತ ಹೆಚ್ಚಾಗಿ ಇಲ್ಲಿನ ಜನರಿಗೆ ಮತ್ತು ಈ ಮೂಲಕ ಇಡೀ ರಾಜ್ಯದ ಜನರಿಗೆ ಕರ್ನಾಟಕ ಒಂದು " ಸರ್ವ ಜನಾಂಗದ ಶಾಂತಿಯ ತೋಟ " ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯವನ್ನು ಅರ್ಥಮಾಡಿಸಲು ಪ್ರಯತ್ನಿಸುವ ವೇದಿಕೆ ಎಂದು  ಭಾವಿಸುತ್ತೇನೆ. ಏಕೆಂದರೆ ಈ ಪುಸ್ತಕಗಳನ್ನು ನಾನು ಇನ್ನೂ ಓದಿಲ್ಲ‌. ಕೆಲಸದ ಒತ್ತಡ ಅಲ್ಲದೇ ಇಲ್ಲಿರುವ ಇತರ ಸಾಹಿತಿಗಳು ಅದನ್ನು ವಿಮರ್ಶಿಸಲು ನನಗಿಂತ ಹೆಚ್ಚು ಅರ್ಹರು.

" ಹಸಿವು ಮುಕ್ತ " ಕರ್ನಾಟಕಕ್ಕಾಗಿ ಅನ್ನ ಭಾಗ್ಯ ಯೋಜನೆಯನ್ನು ಬಿಟ್ಟಿ ಭಾಗ್ಯ, ಅದು ನಮ್ಮ ತೆರಿಗೆ ಹಣವನ್ನು ಇನ್ನೊಬ್ಬರಿಗೆ ಹಂಚಿ ಸೋಮಾರಿಗಳನ್ನು ಮಾಡುವ ಯೋಜನೆ ಎಂದು ಟೀಕಿಸುವವರು ದಯವಿಟ್ಟು ಬಡವರ ಹಸಿವಿನ ನೋವನ್ನು ಮರೆಯದಿರಿ. ನಾವು ಕೊಡುವುದು ಬಡವರಿಗೆ ಮಾತ್ರ. ಈ ವ್ಯವಸ್ಥೆಯಲ್ಲಿ ಒಂದಷ್ಟು ದುರುಪಯೋಗ ಆಗಬಹುದು. ಆದರೆ ನಾವು ಕೊಡುವುದು ಪಾಕಿಸ್ತಾನ ಅಥವಾ ಚೀನಾದವರಿಗಲ್ಲ. ನಮ್ಮದೇ ಜನರಿಗೆ. ಅದನ್ನು ನಾವೇ ಅಸೂಯೆಪಟ್ಟರೆ ಹೇಗೆ. ದುಡಿದು ತಿನ್ನುವವರಿಗೆ ಅನ್ನ ಒಂದು ಇಂಧನ ಮಾತ್ರ. ಅದರ ನಂತರವೇ ಬದುಕು ಚಲಿಸುವುದು. ಅನುಕೂಲ ಇರುವವರು ದಯವಿಟ್ಟು ಉಚಿತ ಅಕ್ಕಿಯನ್ನು ತಿರಸ್ಕರಿಸಿ ಖಜಾನೆಯ ಹೊರೆ ಕಡಿಮೆ ಮಾಡುವ ಕೊಡುಗೆ ನೀಡಬಹುದು. ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆಯಿಂದಾಗಿ ಸಂಪತ್ತಿನ ಅಸಮಾನ ಹಂಚಿಕೆಯ ಕಾರಣ ಉಂಟಾಗಿರುವ ತಾರತಮ್ಯವನ್ನು ಈ ಮೂಲಕ ಸರಿಪಡಿಸುವ ಒಂದು ಕ್ರಮ ಈ ಯೋಜನೆ. ದುಡಿದು ತಿನ್ನವುದಕ್ಕಾಗಿಯೇ ಉಚಿತ ಆಹಾರ ವಿತರಣೆ. ‌ಅದು ಸರ್ಕಾರದ ಜವಾಬ್ದಾರಿಯೂ ಹೌದು.

ಹಾಗೆಯೇ ಮುಖ್ಯವಾಗಿ ನಾನು ಅಲ್ಪಸಂಖ್ಯಾತರನ್ನು ಹೆಚ್ಚಾಗಿ ಓಲೈಸುವೆ ಎಂಬ ತಪ್ಪು ಅಭಿಪ್ರಾಯ ಸಹ ಇದೆ. ಏಕೆಂದರೆ ಇಲ್ಲಿ ಸೇರಿರುವ ಬಹುತೇಕರಿಗೆ ನನ್ನ ಮೇಲೆ ಈ ವಿಷಯದಲ್ಲಿ ಸ್ವಲ್ಪ ಕೋಪವೂ ಇರಬಹುದು. ಅದಕ್ಕಾಗಿ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಅಲ್ಪಸಂಖ್ಯಾತರಲ್ಲಿ ಸಾಮಾನ್ಯವಾಗಿ ಕಾಡುವ ಅಭದ್ರತೆಯ ಕಾರಣದಿಂದ ಅವರ ಬಗ್ಗೆ ಕಾಳಜಿ ವಹಿಸುವುದು ಸರ್ಕಾರದ ಕರ್ತವ್ಯ. ‌ಕೇವಲ ಮುಸ್ಲಿಮರು ಮಾತ್ರವಲ್ಲ ಕ್ರಿಶ್ಚಿಯನ್ ಸಿಖ್ ಬೌದ್ಧ ಜೈನ ಪಾರ್ಸಿ ಎಲ್ಲರಿಗೂ ಇದು ಅನ್ವಯಿಸುತ್ತದೆ. ‌ರಾಜಕೀಯ ಕಾರಣದಿಂದ ಒಂದಷ್ಟು ಹೆಚ್ಚಾದ ಓಲೈಕೆಗಳು ಇರಬಹುದಾದರು ಅದು ಬಹುಸಂಖ್ಯಾತರ ವಿರೋಧಿ ನೀತಿಗಳಲ್ಲ. ಹಾಗೆಯೇ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಯಾರಿಗೂ ಯಾವುದೇ ರಿಯಾಯಿತಿಯೂ ಇರುವುದಿಲ್ಲ. ಕೆಲವು ‌ಧಾರ್ಮಿಕ‌ ಆಚರಣೆಗಳ ವಿಷಯದಲ್ಲಿ ತೀವ್ರ ಸ್ವರೂಪದ ಭಿನ್ನಾಭಿಪ್ರಾಯಗಳು ಇರುವುದು ನಿಜ. ಆದರೆ ‌ಅದು ಆಂತರಿಕ ಯುದ್ಧ ಅಥವಾ ಕೋಮು ಗಲಭೆಯಷ್ಟು ತೀಕ್ಷ್ಣವಾಗಿ ಮುಂದುವರೆಯದೆ ಸೌಹಾರ್ದತೆ ಕಾಪಾಡಲು ನಾವೆಲ್ಲರೂ ಮೊದಲ ಆದ್ಯತೆ ನೀಡಬೇಕು.

ನಾನು ಈ ಕಾರ್ಯಕ್ರಮ ಒಪ್ಪಿಕೊಳ್ಳಲು ಮುಖ್ಯ ಕಾರಣ ಎಡ ಬಲ ಪಂಥಗಳಿಗಿಂತ ಮಾನವೀಯತೆಯೇ ಮೊದಲು. ದ್ವೇಷಕ್ಕಿಂತ ಪ್ರೀತಿಯೇ ಪ್ರಬಲ, ಎರಡು ಅಭಿಪ್ರಾಯಗಳ ನಡುವೆ ಒಂದಷ್ಟು ಸೌಹಾರ್ದತೆ ಮತ್ತು ಸಮನ್ವಯ ಸಾಧಿಸುವುದು ರಾಜ್ಯದ ಹಿತದೃಷ್ಟಿಯಿಂದ ಮುಖ್ಯ ಎಂಬ ಕಾರಣಕ್ಕಾಗಿ...

ವಿಶ್ವೇಶ್ವರ ಭಟ್ಟರು ಮೊದಲಿನಿಂದಲೂ ಪರಿಚಿತರು. ನನ್ನನ್ನು ಸಾಕಷ್ಟು ಟೀಕೆ ಮಾಡಿದ್ದಾರೆ. ನಮ್ಮ ನಿಲುವುಗಳು ಭಿನ್ನ. ಆದರೂ ಒಂದು ಸಂವಹನದ ಸಾಧ್ಯತೆಯ ಬಾಗಿಲು ಸದಾ ತೆರೆದಿರಲಿ‌ ಎಂಬ ಆಶಯ ನನ್ನದು. ರಾಜ್ಯದ ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ಇಲ್ಲಿನ ಸಾಮಾಜಿಕ ವಾತಾವರಣ ಹೆಚ್ಚು ಸೌಹಾರ್ದಯುತವಾಗಿದ್ದರೆ ಅಭಿವೃದ್ಧಿಯೂ ಅಷ್ಟೇ ವೇಗ ಪಡೆಯುತ್ತದೆ ಮತ್ತು ಜನರ ಜೀವನಮಟ್ಟ ಸುಧಾರಿಸಿ ನೆಮ್ಮದಿ ನೆಲೆಸುತ್ತದೆ ಎಂಬ ಆಸೆಯೂ ಇದೆ.

ಇಲ್ಲಿರುವ ಅನೇಕರಲ್ಲಿ ನನ್ನನ್ನು ಕೇಳಲು ಸಾಕಷ್ಟು ಪ್ರಶ್ನೆಗಳು ಇರಬಹುದು. ಆದರೆ ಅದಕ್ಕೆ ಇಲ್ಲಿ ಅವಕಾಶವಿಲ್ಲ ಮತ್ತು ಸಮಯವೂ ಇಲ್ಲ. ನನ್ನ ಅಭಿಪ್ರಾಯ ಮಾತ್ರ ವ್ಯಕ್ತಪಡಿಸುತ್ತಿದ್ದೇನೆ. ನಮ್ಮ ಸರ್ಕಾರ ಮತ್ತು ಇಲ್ಲಿನ ವಿರೋಧ ಪಕ್ಷಗಳ ನಡುವೆ, ನಮ್ಮ ಮತ್ತು ‌ಕೇಂದ್ರ ಸರ್ಕಾರದ ನಡುವೆ ಸಂಘರ್ಷ  ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಇದು ಒಂದು ವ್ಯವಸ್ಥೆಯ ನಡುವಿನ ಘರ್ಷಣೆ. ಆದರೆ ‌ವ್ಯಕ್ತಿಗತವಾಗಿ ಸಾಮಾನ್ಯ ಜನ ಅಷ್ಟೇ ತೀವ್ರ ಘರ್ಷಣೆಗೆ ಇಳಿದರೆ ಅದರಿಂದ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಿನ್ನ ಚಿಂತನೆಯ ಜನರಲ್ಲಿ ಆ ಭಿನ್ನತೆಯ ತೀವ್ರತೆಯನ್ನು ಕಡಿಮೆ ಮಾಡುವ ಒಂದು ಪ್ರಯತ್ನ ಮಾಡಿದ್ದೇನೆ.

ಅನೇಕ ವೇಳೆ ಏಕಾಂಗಿಯಾಗಿ ಒಬ್ಬನೇ ಮಲಗಿರುವಾಗ ನನ್ನ ಕಾಳಜಿಯನ್ನು ಅರ್ಥಮಾಡಿಕೊಳ್ಳದೇ ಕಠಿಣವಾಗಿ ಟೀಕಿಸುವ ಮಾತುಗಳು ನೆನಪಾಗಿ ಸಾಕಷ್ಟು ನೋವು ದುಃಖ ಹೆಚ್ಚಾಗಿ ಹೃದಯ ಭಾರವಾಗುತ್ತದೆ. ಆಗ ಬುದ್ದ ಬಸವ ಅಂಬೇಡ್ಕರ್ ಗಾಂಧಿ ಅವರ ತ್ಯಾಗ ಸಾಹಸ ಬಲಿದಾನಗಳು ನೆನಪಾಗಿ ಸಮಾಧಾನ ಮಾಡಿಕೊಳ್ಳುತ್ತೇನೆ. ರಾಜಕೀಯದಲ್ಲಿ ಇರುವುದರಿಂದ ಅದನ್ನು ಹೊರಗೆ ತೋರ್ಪಡಿಸಿಕೊಳ್ಳುವುದು ಕಷ್ಟ. ಆದರೆ ಇಂದು ಈ‌ ಸಾಹಿತ್ಯದ ಕಾರ್ಯಕ್ರಮದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯಗಳ ನಡುವೆ ಮನಸ್ಸು ಸ್ವಲ್ಪ ನಿಯಂತ್ರಣ ಮೀರಿದೆ.

ವಿಷಕ್ಕಿಂತ ಹಾಲು ಉತ್ತಮ. ಈ ಪ್ರಜ್ಞೆ ನಮ್ಮಲ್ಲಿ ಜಾಗೃತವಾದರೆ ತೀವ್ರ ದ್ವೇಷ ಮರೆಯಾಗುತ್ತದೆ. ಇಲ್ಲಿ ನೆರೆದಿರುವ ಮತ್ತು ಇಡೀ ರಾಜ್ಯದ ಜನರಲ್ಲಿ ಬದುಕಿನ ಇಳಿ ವಯಸ್ಸಿನಲ್ಲಿ ಇರುವ ನಾನು ಮನವಿ ಮಾಡಿಕೊಳ್ಳುವುದು ಇಷ್ಟೇ, ಈ ಸಮಾಜ ನಾವು ಬದುಕಿರುವ ಕಾಲಕ್ಕಿಂತ ನಮ್ಮ ಮಕ್ಕಳ ಕಾಲಕ್ಕೆ ಇನ್ನಷ್ಟು ಉತ್ತಮವಾಗಿರುವುದೇ ನಾವು ಸಮಾಜಕ್ಕೆ ಕೊಡುವ ಕೊಡುಗೆ. ಆದ್ದರಿಂದ ನಮ್ಮ ನಡುವಿನ ರಾಗ ದ್ವೇಷಗಳನ್ನು ಕಡಿಮೆ ಮಾಡಿಕೊಂಡು ಪ್ರೀತಿ ಸಹಕಾರಗಳನ್ನು ಹೆಚ್ಚು ಮಾಡಿಕೊಳ್ಳೋಣ.

ಹೇಳಲು ಕೇಳಲು ಮುಗಿಯದಷ್ಟು ವಿಷಯಗಳು ನಮ್ಮೆಲ್ಲರ ಮನಸ್ಸಿನಲ್ಲಿ ಇರುತ್ತದೆ. ಆದರೆ ಸಮಯದ ಮಿತಿಯೂ ಇರುತ್ತದೆ. ನಿಮ್ಮ ನಿಮ್ಮ ಅಭಿಪ್ರಾಯ ಸ್ವಾತಂತ್ರ್ಯ ಗೌರವಿಸುತ್ತಾ, ಇನ್ನು ಮುಂದೆಯಾದರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಹೀಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಚರ್ಚಿಸುವ ವಾತಾವರಣ ಸೃಷ್ಟಿಯಾಗಲಿ. ಆದರೆ ಮನುಷ್ಯ ಪ್ರೀತಿ ಮತ್ತು ಜೀವಪರ ನಿಲುವುಗಳ ಎಲ್ಲರ‌ ಆದ್ಯತೆಯಾಗಲಿ ಎಂದು ಆಶಿಸುತ್ತಾ,

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ