ಮುಖ್ಯ ಮಂತ್ರಿಗೆ ವೃದ್ಧ ರೈತ ಮಹಿಳೆಯ ನೇರ ಪ್ರಶ್ನೆ
“ಭ್ರಷ್ಟಾಚಾರ ಆಗಿದೇಂತ ನೀನು ಕೊಟ್ಟ ದೂರಿನಿಂದ ಏನೂ ಆಗೋದಿಲ್ಲ. ಯಾಕೆಂದರೆ ಅದನ್ನೆಲ್ಲ ಮುಚ್ಚಿ ಹಾಕಲಿಕ್ಕೆ ಜಿಲ್ಲಾಧಿಕಾರಿ ಮತ್ತು ಮುಖ್ಯಮಂತ್ರಿಗೆ ನಾನೇ ಹಣ ಕೊಟ್ಟಿದ್ದೇನೆ” ಎಂದು ಕೃಷಿ ಇಲಾಖೆಯ ಅಧಿಕಾರಿ ವೃದ್ಧ ರೈತ ಮಹಿಳೆ ಬಾನಾಬಾಯಿ ಕುಮ್ರೆ ಮನೆಗೆ ಬಂದು ದಬಾಯಿಸಿದ್ದ. ಆಗಲೇ, ೭೦ ವಯಸ್ಸು ದಾಟಿದ್ದ ಆ ರೈತ ಮಹಿಳೆ ನಿರ್ಧರಿಸಿದ್ದಳು – ಇದರ ಮೂಲಕ್ಕೇ ಹೋಗಬೇಕೆಂದು. ಅಂತೂ ಆಕೆ ಮುಂಬೈಗೆ ಹೋಗಿ, ಮಹಾರಾಷ್ಟ್ರದ (ಆಗಿನ) ಮುಖ್ಯಮಂತ್ರಿ ಎದುರು ಕುಳಿತು ನೇರ ಪ್ರಶ್ನೆ ಕೇಳಿದಳು, “ನನ್ನ ಜಮೀನಿನಲ್ಲಿ ಕಟ್ಟಿದ ಚೆಕ್ ಡ್ಯಾಂ ಬಾಬ್ತು ನೀವು ಲಂಚ ತಗೊಂಡಿದ್ದೀರಾ?”
ಇದೆಲ್ಲ ಶುರುವಾದದ್ದು ಜೂನ್ ೨೦೦೮ರಲ್ಲಿ – ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಖರುಲಾ ಹಳ್ಳಿಯಲ್ಲಿ ಭಾರೀ ಮಳೆ ಬಂದಾಗ. ಹಲವು ರೈತರ ಆತ್ಮಹತ್ಯೆಗಳಿಂದಾಗಿ ಸುದ್ದಿ ಮಾಡಿದ್ದ ಆ ಜಿಲ್ಲೆಯಲ್ಲಿ ಅದಕ್ಕಿಂತ ದೊಡ್ಡ ಸುದ್ದಿಯಾಯಿತು – ಅಧಿಕಾರಷಾಯಿಯನ್ನು ಬಾನಾಬಾಯಿ ಕುಮ್ರೆ ನೇರಾನೇರ ಎದುರಿಸಿದ್ದು.
ಆರು ಜನರಿದ್ದ ಬಾನಾಬಾಯಿ ಕುಟುಂಬ ಕಷ್ಟದಿಂದ ಜೀವನ ಸಾಗಿಸುತ್ತಿತ್ತು. ಅವಳ ದೊಡ್ದ ಕುಟುಂಬದಲ್ಲಿ ೨೦ ಜನರಿದ್ದರು; ಅವರಿಗೆ ಹತ್ತು ಹೆಕ್ಟೇರ್ ಜಮೀನಿದ್ದರೂ, ಸ್ವಲ್ಪ ಭಾಗದಲ್ಲಿ ಮಾತ್ರ ಜೋಳ, ದ್ವಿದಳಧಾನ್ಯ ಮತ್ತು ಭತ್ತ ಬೆಳೆಸುತ್ತಿದ್ದರು. ಜೂನ್ ೨೦೦೮ರಲ್ಲಿ ಭಾರೀ ಮಳೆ ಸುರಿದು, ಚೆಕ್ ಡ್ಯಾಂ ಒಡೆದಾಗ ಅವರ ಲೆಕ್ಕಾಚಾರವೆಲ್ಲ ತಲೆಕೆಳಗಾಯಿತು. ಬಾನಾಬಾಯಿಯ ಹೊಲದಲ್ಲಿದ್ದ ಭತ್ತದ ಸಸಿಗಳೆಲ್ಲ ನುಗ್ಗಿ ಬಂದ ನೆರೆನೀರಿನಿಂದಾಗಿ ನಾಶ.
ಅದೇನೂ ಪುರಾತನ ಚೆಕ್ ಡ್ಯಾಂ ಅಲ್ಲ. ಅದನ್ನು ಕೇವಲ ಒಂದು ವರುಷದ ಮುಂಚೆ ಕಟ್ಟಿದ್ದು. ಆದ್ದರಿಂದ ಯವತ್ಮಾಲ್ ತಾಲೂಕುಕೇಂದ್ರದ ಕೃಷಿ ಇಲಾಖೆ ಕಚೇರಿಗೆ ಬಾನಾಬಾಯಿ ದೂರು ಕೊಟ್ಟಳು. ಯಾಕೆಂದರೆ, ಚೆಕ್ ಡ್ಯಾಂ ಕಟ್ಟಲು ಪ್ರಧಾನಮಂತ್ರಿಗಳ ಪರಿಹಾರ ಯೋಜನೆಯಿಂದ ರೂಪಾಯಿ ಮೂರು ಲಕ್ಷ ವೆಚ್ಚ ಮಾಡಲಾಗಿತ್ತು!
ಜೂನ್ ೧೬, ೨೦೦೮ರಂದು ಕೃಷಿ ಇಲಾಖೆಯ ತನಿಖಾ ತಂಡ ಬಾನಾಬಾಯಿ ಜಮೀನಿಗೆ ಭೇಟಿ ನೀಡಿತು. ಚೆಕ್ ಡ್ಯಾಂ ಕಟ್ಟಲಿಕ್ಕಾಗಿ ಕಳಪೆ ಸಾಮಗ್ರಿ ಬಳಸಲಾಗಿದೆ ಎಂಬ ಬಾನಾಬಾಯಿಯ ಆರೋಪವನ್ನು ತನಿಖಾ ತಂಡ ಖಚಿತಪಡಿಸಿತು. ಇದರಿಂದಾಗಿ ತನಗೆ ತೊಂದರೆಯಾದೀತೆಂದು ಕೃಷಿ ಇಲಾಖೆಯ ಸುಪರ್ವೈಸರ್ ವಿ.ಬಿ. ಮಿಟ್ಕರಿ ಹೆದರಿದ. ಯಾಕೆಂದರೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಅವನದ್ದೇ ಮೇಲುಸ್ತುವಾರಿ. ಆತನೀಗ ಬಾನಾಬಾಯಿ ಮನೆಗೆ ಬಂದು ಬೆದರಿಕೆಗಳನ್ನೊಡ್ದಿದ; ಚೆಕ್ ಡ್ಯಾಮನ್ನು ಆಕೆಯೇ ಒಡೆದದ್ದೆಂದು ಆಪಾದಿಸಿದ; ಎಲ್ಲ ಮೇಲಧಿಕಾರಿಗಳಿಗೂ ಹಣ ಕೊಟ್ಟು ತಾನು ಅವರ ಬಾಯಿ ಮುಚ್ಚಿಸಿದ್ದೇನೆಂದು ಎಗರಾಡಿದ.
ಬಾನಾಬಾಯಿ ಇದನ್ನೆಲ್ಲ ಕೇಳಿಕೊಂಡು ಸುಮ್ಮನಿರಲಿಲ್ಲ. ಎರಡನೆಯ ದೂರುಪತ್ರ ಬರೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದಳು; ಮಿಟ್ಕರಿಯ ಬೆದರಿಕೆಗಳನ್ನು ದೂರಿನಲ್ಲಿ ನಮೂದಿಸಿ, ಆತನನ್ನು ಕೆಲಸದಿಂದ ಸಸ್ಪೆಂಡ್ ಮಾಡಬೇಕೆಂದು ಆಗ್ರಹಿಸಿದಳು. ಚೆಕ್ ಡ್ಯಾಂ ನಿರ್ಮಾಣಕ್ಕಾಗಿ ರೂಪಾಯಿ ಮೂರು ಲಕ್ಷ ಪಾವತಿ ಮಾಡಲಾಗಿದ್ದರೂ ನಿಜವಾಗಿ ಖರ್ಚಾಗಿರುವುದು ಕೇವಲ ರೂಪಾಯಿ ಒಂದು ಲಕ್ಷ ಎಂದು ಆಪಾದಿಸಿದಳು. ಚೆಕ್ ಡ್ಯಾಂ ನಿರ್ಮಾಣಕ್ಕೆ ಕಪ್ಪುಮಣ್ಣಿನ ಬದಲು ಸ್ಥಳೀಯ ಮುರ್ರಂ ಮಣ್ಣು ಬಳಸಲಾಗಿದೆಯೆಂದು ದೂರಿದಳು.
ಆದರೆ ಜಿಲ್ಲಾಧಿಕಾರಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಜುಲಾಯಿ ೧, ೨೦೦೮ರಂದು ಬಾನಾಬಾಯಿ ಜಿಲ್ಲಧಿಕಾರಿಯ ಕಚೇರಿಗೆ ಹೋಗಿ, ಅವರನ್ನೇ ನೇರವಾಗಿ ಕೇಳಿದಳು, “ನನ್ನ ಜಮೀನಿನಲ್ಲಿ ಚೆಕ್ ಡ್ಯಾಂ ಕಟ್ಟಿಸಿದ್ದಕ್ಕಾಗಿ ನೀವು ಲಂಚ ತಗೊಂಡಿದ್ದೀರಾ?” ಆಗ ಜಿಲ್ಲಾಧಿಕಾರಿ ಸಂಜಯ ದೇಶಮುಖರ ಬಾಯಿಯಿಂದ ಕೆಲವು ನಿಮಿಷ ಮಾತೇ ಹೊರಡಲಿಲ್ಲ. ಅನಂತರ ಸುಧಾರಿಸಿಕೊಂಡ ಅವರಿಂದ ಅಧೀನ ಅಧಿಕಾರಿಗಳಿಗೆ ಆದೇಶ; ಬಾನಾಬಾಯಿ ಜಮೀನಿಗೆ ತನಿಖಾ ತಂಡದ ತುರ್ತು ರವಾನೆ. ನಸುನಗುತ್ತಾ ಆ ದಿನವನ್ನು ನೆನಪು ಮಾಡಿಕೊಳ್ಳುತ್ತಾಳೆ ಬಾನಾಬಾಯಿ, “ಕಲೆಕ್ಟರರ ಕೆಂಪುದೀಪದ ವಾಹನದಲ್ಲೇ ಆ ದಿನ ತನಿಖಾ ತಂಡ ಮತ್ತು ನಾನು ಹಳ್ಳಿಗೆ ಬಂದೆವು. ಯಾಕೆಂದರೆ ಆ ಸಮಯದಲ್ಲಿ ಕಲೆಕ್ಟರರ ಆಫೀಸಿನಲ್ಲಿ ಬೇರೆ ವಾಹನ ಇರಲಿಲ್ಲ”.
ಎರಡನೇ ತನಿಖಾ ತಂಡದಿಂದಲೂ ಬಾನಾಬಾಯಿಯ ಆರೋಪಗಳ ಸಮರ್ಥನೆ. ಆ ಹೊತ್ತಿಗೆ, ಬಾನಾಬಾಯಿಯ ಬೆಂಬಿಡದ ಕಾರ್ಯಾಚರಣೆ ಸ್ಥಳೀಯ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ. ಜನಾಭಿಪ್ರಾಯದ ಬಿಸಿ ತಟ್ಟಿದ ಜಿಲ್ಲಾಧಿಕಾರಿಯಿಂದ ಜುಲಾಯಿ ೩, ೨೦೦೮ರಂದು ಆ ಚೆಕ್ ಡ್ಯಾಮನ್ನು ಪುನಃ ನಿರ್ಮಿಸಬೇಕೆಂಬ ಬಾಯಿಮಾತಿನ ಆದೇಶ. ಅದೇ ದಿನ, ಯವತ್ಮಾಲಿನ ಜಿಲ್ಲಾ ಪಂಚಾಯತಿನಿಂದ ಸೂಪರ್ವೈಸರ್ ಮಿಟ್ಕರಿಯನ್ನು ಸಸ್ಪೆಂಡ್ ಮಾಡಬೇಕೆಂಬ ಠರಾವಿನ ಅಂಗೀಕಾರ.
ಇಷ್ಟೆಲ್ಲ ಆದರೂ, ಮಿಟ್ಕರಿ ಸಸ್ಪೆಂಡ್ ಆಗಲಿಲ್ಲ. ಬಾನಾಬಾಯಿ ಕೈಚೆಲ್ಲಿ ಕೂರಲೂ ಇಲ್ಲ. ಬದುಕಿನ ಏಳುಬೀಳು ಕಂಡಿರುವ ಆ ವೃದ್ಧೆ, ಮುಂಬೈಗೇ ಬಂದಿಳಿದಳು. ಮಂತ್ರಾಲಯಕ್ಕೆ ಹೋಗಿ, (ಆಗಿನ) ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖರನ್ನು ಭೇಟಿಯಾಗಬೇಕೆಂಬ ಬೇಡಿಕೆ ಮುಂದಿಟ್ಟಳು. ಅಲ್ಲಿ ಬಾನಾಬಾಯಿ ಎರಡು ದಿನ ಕಾದು ಕೂರಬೇಕಾಯಿತು. ಆದರೆ ಅವಳ ಛಲ ಫಲ ನೀಡಿತು.
ಮುಖ್ಯಮಂತ್ರಿಗಳೊಂದಿಗಿನ ಭೇಟಿಯನ್ನು ಬಾನಾಬಾಯಿ ಸ್ಮರಿಸಿಕೊಳ್ಳುವುದು ಹೀಗೆ: “ಮಿಟ್ಕರಿಯ ಮಾತು ನೆನಪು ಮಾಡಿಕೊಳ್ಳುತ್ತಾ, ಮುಖ್ಯಮಂತ್ರಿಗಳನ್ನು ನೇರವಾಗಿ ಕೇಳಿದೆ, ನನ್ನ ಜಮೀನಿನ ಚೆಕ್ ಡ್ಯಾಂ ಬಾಬ್ತು ಮಿಟ್ಕರಿಯಿಂದ ಮಂತ್ರಾಲಯದಲ್ಲಿರುವ ನಿಮಗೆ ಹಣ ಬಂದಿದೆಯೇ? ಆಗ ಮುಖ್ಯಮಂತ್ರಿಗಳು, “ನೀವು ದೂರದಿಂದ ಬಂದಿದ್ದೀರಿ. ಕುಳಿತುಕೊಳ್ಳಿ” ಎಂದು ಕುಳ್ಳಿರಿಸಿ, ನೀರು ತರಿಸಿಕೊಟ್ಟು, ನನ್ನ ಮಾತುಗಳನ್ನೆಲ್ಲಾ ಕೇಳಿದರು”
ಅದು ಹದಿನೈದು ನಿಮಿಷಗಳ ಚಾರಿತ್ರಿಕ ಭೇಟಿ. ರೈತರ ಪರಿಹಾರ ಯೋಜನೆಯಲ್ಲಿ ನಡೆಸಲಾದ ಕಾಮಗಾರಿಗಳಲ್ಲಿ ಆಗಿರುವ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗೆ ಬಾನಾಬಾಯಿಯಿಂದ ವಿವರಣೆ. ಈ ಪ್ರಕರಣದಲ್ಲಿ ವೈಯಿಕ್ತಿಕ ಆಸಕ್ತಿ ವಹಿಸುವುದಾಗಿ ಮುಖ್ಯಮಂತ್ರಿಯ ಭರವಸೆ. ಅನಂತರ, ಆಗಸ್ಟ್ ೧೭, ೨೦೦೮ರಂದು ಮಿಟ್ಕರಿಯ ಸಸ್ಪೆಂಡ್.
ಈ ದೇಶದ ಪ್ರಜೆಯಾಗಿ ತನ್ನ ಕರ್ತವ್ಯ ನಿರ್ವಹಿಸಿದ ಹಿರಿಯ ರೈತ ಮಹಿಳೆಯ ಬದುಕು ಯಥಾಸ್ಥಿತಿಗೆ ಮರಳಿದೆ. ಅಧಿಕಾರಷಾಯಿಯನ್ನು ಮಣಿಸಿದ ಆತ್ಮಾಭಿಮಾನದಿಂದ ಬಾನಾಬಾಯಿ ಹೇಳುತ್ತಾರೆ, “ಸರಕಾರಿ ಕೆಲಸ ಸಿಗೋದು ಅದೃಷ್ಟ. ಆದರೆ, ಸರಕಾರಿ ಕೆಲಸ ಸಿಕ್ಕಿದವರಿಗೆ ಸೊಕ್ಕು ತಲೆಗೇರುತ್ತದೆ. ಸರಕಾರಿ ಸಿಬ್ಬಂದಿ ಬಡರೈತರನ್ನು ಕೊಳ್ಳೆ ಹೊಡೆಯುತ್ತಾರೆ. ಅವರಿಗೆ ಶಿಕ್ಷೆಯಾಗಲೇ ಬೇಕು”. ವೃದ್ಧ ರೈತ ಮಹಿಳೆಯ ಎದೆಯಾಳದ ಮಾತುಗಳು ನಮ್ಮೆದೆಗಳಲ್ಲೂ ಆತ್ಮಗೌರವದ ಕಿಡಿ ಹೊತ್ತಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕೆಚ್ಚು ಮೂಡಿಸಲಿ.
ಗಮನಿಸಿ: ವೃದ್ಧ ರೈತ ಮಹಿಳೆಯ ಕೆಚ್ಚಿನ ಹೋರಾಟದ ಈ ಘಟನೆಯನ್ನು ಸುಮಾರು ೧೪ ವರುಷಗಳ ನಂತರ ಪ್ರಕಟಿಸಲು ಎರಡು ಕಾರಣಗಳು: ಅಂದೊಮ್ಮೆ ರಿಕ್ಷಾ ಚಾಲಕರಾಗಿದ್ದ ಏಕನಾಥ್ ಶಿಂಧೆ ಅವರು ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ೩೧ ಜುಲಾಯಿ ೨೦೨೨ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಬಡವರ, ನಿರ್ಗತಿಕರ, ಅಸಹಾಯಕರ ನೋವಿನ ಅರಿವಿರುವ ಏಕನಾಥ ಶಿಂಧೆಯವರ ಆಡಳಿತದ ಅವಧಿಯಲ್ಲಿ ಅಂಥವರ ಶೋಷಣೆ ನಿಲ್ಲಿಸುವ ಕೆಲಸಗಳು ನಡೆಯಲಿ ಎಂದು ಹಾರೈಸೋಣ.
ಎರಡನೆಯ ಕಾರಣ, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ, ೪ ಜುಲಾಯಿ ೨೦೨೨ರಂದು, ಇಬ್ಬರು ಉನ್ನತಾಧಿಕಾರಿಗಳ ಬಂಧನವಾಗಿ, ಇವತ್ತು ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ: ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ (ಐಪಿಎಸ್ ಅಧಿಕಾರಿ) ಮತ್ತು ಬೆಂಗಳೂರು ನಗರ ಮಾಜಿ ಜಿಲ್ಲಾಧಿಕಾರಿ ಮಂಜುನಾಥ್ (ಐ.ಎ.ಎಸ್. ಅಧಿಕಾರಿ). ಈ ಚಾರಿತ್ರಿಕ ಕ್ರಮ ತಾರ್ಕಿಕ ಅಂತ್ಯ ಕಾಣಲಿ; ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಕರ್ನಾಟಕ ಸರಕಾರ ಸಾಬೀತು ಮಾಡಲಿ ಮತ್ತು ಕರ್ನಾಟಕದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರದ ದೊಡ್ಡ ಬೇರುಗಳು ಚಿಂದಿಯಾಗಲಿ ಎಂದು ಹಾರೈಸೋಣ.
ಫೋಟೋ: ಮಹಾರಾಷ್ಟ್ರ ಸೆಕ್ರೆಟರಿಯೇಟ್ ಭವನ, ಮುಂಬೈ .... ಕೃಪೆ: ಮುಂಬೈಲೈವ್.ಕೋಮ್
Comments
ಮೆಚ್ಚ ತಕ್ಕ ರೈತ ಮಹಿಳೆಯ ಧೈರ್ಯ …
ಮೆಚ್ಚ ತಕ್ಕ ರೈತ ಮಹಿಳೆಯ ಧೈರ್ಯ
ರಾಜ್ಯವೊಂದರ ಮುಖ್ಯಮಂತ್ರಿಗೆ ನೇರವಾಗಿ 'ನೀವು ಹಣ ಪಡೆದುಕೊಂಡಿರುವಿರೋ?' ಎಂದು ಕೇಳಿದ ವೃದ್ಧ ರೈತ ಮಹಿಳೆ ಬಾನಾಬಾಯಿ ಇವರ ಧೈರ್ಯ, ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಮೆಚ್ಚಿಕೊಳ್ಳಲೇ ಬೇಕು ಏಕೆಂದರೆ ಮಹಾರಾಷ್ಟ್ರದ ತನ್ನ ಪುಟ್ಟ ಗ್ರಾಮದಿಂದ ಮುಂಬೈಗೆ ಬಂದು ಅಲ್ಲಿ ಮುಖ್ಯಮಂತ್ರಿಯ ಕಚೇರಿಯ ಬಳಿ ದಿನಗಟ್ಟಲೆ ಕಾದು ಕೊನೆಗೆ ಅವರನ್ನು ಭೇಟಿ ಮಾಡಿ ತನ್ನ ಮನದ ಮಾತನ್ನು ಅರುಹಿದ ಘಟನೆ ನಿಜಕ್ಕೂ ಸಿನೆಮಾದ ಕಥೆಯಂತಿದೆ.
ಇಂತಹ ಮಹಿಳೆಯರು ಊರಿಗೆ ಒಬ್ಬರಾದರೂ ಇದ್ದರೆ ಖಂಡಿತಕ್ಕೂ ನಮ್ಮ ದೇಶ, ರಾಜ್ಯ ಉದ್ಧಾರವಾಗಿ ಬಿಡುತ್ತಿತ್ತು. ನಮಗೆ ಯಾವ ಹೋರಾಟಕ್ಕೂ ಧೈರ್ಯ, ಕಿಚ್ಚು, ಸಮಯ ಇಲ್ಲವೇ ಇಲ್ಲವಾಗಿದೆ. ಈ ಕಾರಣದಿಂದಲೇ ಭ್ರಷ್ಟ ಅಧಿಕಾರಿಗಳು, ರಾಜಕಾರಣಿಗಳ ಸಂಖ್ಯೆ ಬೆಳೆಯುತ್ತಲೇ ಇದೆ. ಲೇಖನದ ಕೊನೆಗೆ ತಿಳಿಸಿದ ಎರಡು ಘಟನೆಗಳು ಇನ್ನಷ್ಟು ಪ್ರಮಾಣದಲ್ಲಿ ನಡೆಯಬೇಕು. ಸಾಮಾನ್ಯ ವ್ಯಕ್ತಿಯೊಬ್ಬ (ಆಟೋ ಡ್ರೈವರ್) ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾದ ಘಟನೆ ನಿಜಕ್ಕೂ ಅದ್ಭುತ. ಆದರೆ ಅವರು ಮಾಡಬೇಕಾದ ಕೆಲಸ ಬಹಳ ಇದೆ ಎಂಬುವುದನ್ನು ಮರೆಯುವಂತಿಲ್ಲ.
ಉತ್ತಮ ಪರಿಣಾಮಕಾರಿಯಾದ ಲೇಖನ. ಇಂತಹ ಲೇಖನಗಳು 'ಸಂಪದ' ಪುಟಗಳನ್ನು ಶ್ರೀಮಂತವನ್ನಾಗಿಸಿದೆ ಎಂದರೆ ತಪ್ಪಿಲ್ಲ. ಲೇಖಕರಾದ ಶ್ರೀ ಅಡ್ಡೂರು ಅವರಿಗೆ ಅಭಿನಂದನೆಗಳು.