ಮುಗಿದ ಚುನಾವಣೆ ; ಪ್ರಜಾಪ್ರಭುತ್ವದ ಹಬ್ಬವೋ, ತಿಥಿಯೋ…?
ಕೆಲವರಿಗೆ ಮಾತ್ರ ಹಬ್ಬ. ಬಹುತೇಕ ಸಾಮಾನ್ಯ ಜನರಿಗೆ ತಿಥಿ. ನಿಮಗೆಷ್ಟು ಕೊಟ್ರು, ನಿಮ್ಮ ಕಡೆ ದುಡ್ಡು ಎಷ್ಟು ಸಿಕ್ತು, ಆ ಪಕ್ಷದವರು ಎಷ್ಟು ಕೊಟ್ರು, ದುಡ್ಡಿನ ಜೊತೆ ಬೇರೆ ಏನು ಕೊಟ್ರು, ಕುರುಬರು ಯಾರಿಗೆ ಓಟು ಹಾಕಿದ್ರು, ಲಿಂಗಾಯತರು ಯಾರಿಗೆ ಓಟು ಕೊಟ್ರು, ಮುಸ್ಲಿಮರ ಆ ಕ್ಷೇತ್ರದಲ್ಲಿ ಯಾರ ಪರವಾಗಿ ಇದ್ರು, ಯಾವ ಪಕ್ಷ ಗೆಲ್ಲುತ್ತೆ ಅಥವಾ ಸಮ್ಮಿಶ್ರ ಸರ್ಕಾರವಾ?
ಹೀಗೆ ಪ್ರಜಾಪ್ರಭುತ್ವದ ಹಬ್ಬ ಎಂಬ ಭ್ರಮೆಗೆ ಒಳಗಾಗಿರುವ ಈ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಜನರ ಮಾತುಕತೆಗಳು ನಡೆಯುತ್ತಿದ್ದ ರೀತಿ. ಇದರ ಜೊತೆಗೆ ಅಯ್ಯೋ ನಮ್ಮ ಜನರೇ ಸರಿ ಇಲ್ಲ ಬಿಡಿ, ಏನ್ಮಾಡೋಕಾಗುತ್ತೆ ಎಂಬ ಕೊಸರು. ಬಹಳಷ್ಟು ಗೌರವಾನ್ವಿತರು ಎಂದು ಕಾಣುತ್ತಿದ್ದ ಅನೇಕ ಪುರುಷ - ಮಹಿಳೆಯರು ಯಾವುದೋ ಒಂದು ಪಕ್ಷದ ಬಣ್ಣದ ಶಲ್ಯವನ್ನು ಹೆಗಲಿಗೆ ಹಾಕಿಕೊಂಡು ಬಾವುಟ ಹಿಡಿದು ಓಟಿನ ಕೇಂದ್ರದ ಬಳಿ ಪ್ರಚಾರ ಮಾಡುತ್ತಿದ್ದರು. ಎಷ್ಟೋ ಯುವಕರು ದಿನಗೂಲಿಗಾಗಿ ಇನ್ಯಾವುದೋ ಪಕ್ಷದ ಪರವಾಗಿ ಜೈಕಾರ ಹಾಕುವುದು ಮತ್ತು ಚೀಟಿ ಬರೆದು ಕೊಡುವುದು ಕಾಣುತ್ತಿತ್ತು.
ಇದು ಪ್ರಜಾಪ್ರಭುತ್ವದ ಹಬ್ಬವಂತೆ. ಮೊನ್ನೆ ಹೇಳಿದಂತೆ ನನಗೆ ಇದು ಪ್ರಜಾಪ್ರಭುತ್ವದ ತಿಥಿಯಂತೆ ಕಾಣುತ್ತಿತ್ತು. ಯಾರಿಗೂ ಭ್ರಷ್ಟಾಚಾರ, ಕೋಮುವಾದ, ಸರ್ವಾಧಿಕಾರ, ವಂಶಾಡಳಿತ, ಪರಿಸರ ನಾಶ, ವಾಯು ಮಾಲಿನ್ಯ, ಕಲಬೆರಕೆ ಆಹಾರ, ನಿರುದ್ಯೋಗ, ಮುಂತಾದ ವಿಷಯಗಳು ಪ್ರಮುಖವಾಗಲೇ ಇಲ್ಲ. ಸಾಮಾನ್ಯ ಜನರನ್ನು ಬಿಡಿ ಮಾಧ್ಯಮಗಳಿಗು ಇದು ಮುಖ್ಯವಾಗಲೇ ಇಲ್ಲ. ಫಲಿತಾಂಶ ಏನಾದರೂ ಆಗಲಿ ಆದರೆ ಚುನಾವಣೆ ನಡೆಯುವ ರೀತಿ ಇದಲ್ಲ. ಇನ್ನಷ್ಟು ಜವಾಬ್ದಾರಿ, ಸ್ವಾಭಿಮಾನ, ಪ್ರಬುದ್ದತೆಯಿಂದ ನಡೆಯಬೇಕು. ಇಲ್ಲದಿದ್ದರೆ ಅಭ್ಯರ್ಥಿಗಳು ಬದಲಾಗಬಹುದು ಆದರೆ ವ್ಯವಸ್ಥೆ ಹಾಗೆಯೇ ಮುಂದುವರೆಯುತ್ತದೆ. ಮತ್ತೆ 5 ವರ್ಷಕ್ಕೆ ಮತ್ತೊಂದು ಚುನಾವಣೆ. ಜನರ ಸಮಸ್ಯೆಗಳು ಮಾತ್ರ ನಿರಂತರ. ಇದು ಒಳ್ಳೆಯದಲ್ಲ.
ಹಾಗೆಯೇ ಹೇಗೋ ಚುನಾವಣೆಗಳು ಮುಗಿದಿವೆ. ಈಗ ಬಹುದೊಡ್ಡ ಜವಾಬ್ದಾರಿ ಇರುವುದು ಅಭ್ಯರ್ಥಿಗಳ ಮೇಲೆ. ಏಕೆಂದರೆ ಗೆದ್ದ ಅಭ್ಯರ್ಥಿ ಯಾವುದೇ ಕಾರಣಕ್ಕೂ ಅತಿರೇಕದ ಸಂಭ್ರಮವನ್ನು ಬಹಿರಂಗವಾಗಿ ಆಚರಿಸದೆ ಸೋತ ಅಭ್ಯರ್ಥಿಯನ್ನು ಸ್ವತಃ ಭೇಟಿಯಾಗಿ " ಕ್ಷಮಿಸು ಗೆಳೆಯ/ಗೆಳತಿ, ಈ ಬಾರಿ ವಿಜಯ ನನಗೆ ಒಲಿದಿದೆ. ಮುಂದಿನ ಬಾರಿ ವಿಜಯ ನಿನ್ನದೂ ಆಗಬಹುದು. ಬೆಟರ್ ಲಕ್ ನೆಕ್ಸ್ಟ್ ಟೈಮ್. ಈ ಜಯದಲ್ಲಿ ನಿನ್ನದೂ ಪಾಲಿದೆ. ಇಬ್ಬರೂ ಸೇರಿ ಒಟ್ಟಿಗೆ ಅಭಿವೃದ್ಧಿ ಮಾಡೋಣ " ಎಂದು ಶಾಲು ಹೊದಿಸಿ ಹಾರ ಹಾಕಿ ಆತ್ಮೀಯ ಅಪ್ಪುಗೆ ನೀಡಬೇಕು. ಆಗ ದ್ವೇಷ ಅಸೂಯೆಯ ವಾತಾವರಣ ಕಡಿಮೆಯಾಗಿ ಕ್ರೀಡಾ ಸ್ಪೂರ್ತಿ ಮೆರೆದಂತೆ ಆಗುತ್ತದೆ.
ಇಲ್ಲದಿದ್ದರೆ ಅನಾವಶ್ಯಕವಾಗಿ ಸೋತವರ ಮುಂದೆ ಪಟಾಕಿ ಹೊಡೆದು ಧಿಕ್ಕಾರ ಕೂಗಿ ಅವಮಾನಿಸಿದರೆ ಅದು ಉರಿವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತದೆ. ಒಳ್ಳೆಯತನ ಎಂಬುದು ಕೇವಲ ಮಾತಿನ ಸರಕಾಗಬಾರದು. ಅದು ನಮ್ಮ ನಡವಳಿಕೆಯಾಗಬೇಕು. ಆಗ ಮಾತ್ರ ಸಮಾಜವನ್ನು ಉತ್ತಮ ಗುಣಮಟ್ಟಕ್ಕೆ ಕೊಂಡೊಯ್ಯಬಹುದು. ಏಕೆಂದರೆ ಹಿಂದೆ ಬಹಳಷ್ಟು ಚುನಾವಣಾ ಸಂದರ್ಭದಲ್ಲಿ ನೋಡಿದಂತೆ ಸೇಡು ಎಂಬುದು ಮನಸ್ಸುಗಳಲ್ಲಿ ಆಳವಾಗಿ ಬೇರೂರಿ ಅದು ವಿವಿಧ ರೂಪಗಳಲ್ಲಿ ಪ್ರಕಟವಾಗಿ ಇಡೀ ಊರು ನಗರ ಹಳ್ಳಿಗಳ ಸಾಂಸ್ಕೃತಿಕ ವಾತಾವರಣವನ್ನೇ ಹದಗೆಡಿಸಿವೆ. ಚುನಾವಣೆ ಯಾಕಾಗಿ ನಡೆಯುತ್ತದೋ ಎಂದು ಬಹಳಷ್ಟು ಜನರು ಕೊರಗುವಂತೆ ಆಗುತ್ತದೆ. ಅದನ್ನು ಈಗ ಸರಿಪಡಿಸಬೇಕು.
ಚುನಾವಣೆ ನಮ್ಮ ನಮ್ಮಲ್ಲಿಯೇ ನಡೆಯುವ ಒಂದು ಸ್ಪರ್ಧೆ ಮಾತ್ರ. ಅದು ಕುರುಕ್ಷೇತ್ರ ಯುದ್ದವಲ್ಲ. ಪ್ರಜಾಪ್ರಭುತ್ವದ ಒಂದು ಸಣ್ಣ ಅನಿವಾರ್ಯ ಪ್ರಕ್ರಿಯೆ. ಕೇವಲ 15-20 ದಿನಕ್ಕೆ ಮಾತ್ರ ಸೀಮಿತ. ಫಲಿತಾಂಶದ ನಂತರ ನಾವೆಲ್ಲರೂ ಒಂದೇ ಎಂಬ ಮನೋಭಾವ ಎಲ್ಲಾ ಕಡೆ ವ್ಯಾಪಕವಾಗಿ ಹರಡುವಂತೆ ಎಲ್ಲರೂ ಪ್ರಯತ್ನಿಸೋಣ. ಇದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ.
ಇದು ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಒಂದು ಮಾನವೀಯ ಮೌಲ್ಯಗಳ ಕೊಡುಗೆ. ದಯವಿಟ್ಟು ಚುನಾವಣೋತ್ತರ ಸೌಹಾರ್ದಧ ಬಗ್ಗೆ ಕಾಳಜಿ ವಹಿಸಿ. ಚುನಾವಣೆ ಸಾರ್ವತ್ರಿಕ ಹಬ್ಬವಾಗಲಿ ತಿಥಿಯಾಗುವುದು ಬೇಡ ಎಂದು ಆಶಿಸುತ್ತಾ...
-ವಿವೇಕಾನಂದ ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ