ಮುಗಿಲು ಕಂಡ ನವಿಲು

ಮುಗಿಲು ಕಂಡ ನವಿಲು

ಕವನ

ಕರಿಯ ಮುಗಿಲು ಬಾನಿನಲ್ಲಿ

ಹರಿದು ಬರುವ ಮಿಂಚಿನಲ್ಲಿ

ಹರಿದು ಹೋಗುವಂತೆ ಕಿವಿಯು ಗುಡುಗಿನಾರ್ಭಟ

ಸುರಿಯಲಿರುವ ಮಳೆಯ ನೆನೆದು

ವಿರಹ ಬಾಧೆಯಲ್ಲಿ ನವಿಲು

ಕರೆಯಲೆಂದು ಗೆಳತಿಯನ್ನು ಕಳೆಯೆ ಸಂಕಟ

 

ಗಿರಿಯ ಹತ್ತಿ ಬಂದ ನವಿಲು

ಮುರಿದ ಮರದ ಕಾಂಡವೇರಿ

ಬರದೆ ಹೋದ ಗೆಳತಿಯನ್ನು ಹುಡುಕತೊಡಗಿತು

ಗಿರಿಯ ಸುತ್ತ ಹಸಿರು ವನವು

ಕರೆದು ಕರೆದು ಗೆಳತಿ ಬರದೆ

ಗಿರಿಯ ನವಿಲು ನೊಂದು ಮನದೆ ಸುತ್ತ ನೋಡಿತು

 

ಏರಿ ಬರುವ ಗೆಳತಿಯನ್ನು

ದೂರದಲ್ಲಿ ಕಂಡ ನವಿಲು

ಮೇರೆ ಮೀರಿ ಹರುಷವುಕ್ಕಿ ನೋಡ ತೊಡಗಿತು

ದಾರಿಯೆಲ್ಲ ಮೆತ್ತಗಾಗಿ

ಜಾರಬಹುದು ನಡೆದು ಬರಲು

ಹಾರಿಕೊಂಡು ಬೇಗ ಬರಲು ಕೂಗಿ ಹೇಳಿತು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್