ಮುಗ್ದತೆ...
ಜೀವವಿರದ ಬೊಂಬೆಗಳ ಜೊತೆಯಲ್ಲಿ ಮೂರು ವರುಷದ ಪುಟಾಣಿ ಮಗುವೊಂದು ಆಟವಾಡುತ್ತಿತ್ತು.ಮುಗ್ಧತೆಯ ಪ್ರತಿರೂಪವಾಗಿದ್ದ ಆ ಮಗು ಬೊಂಬೆಯ ಜೊತೆಯಲ್ಲಿ ಆಟಗಳನ್ನು ಆಡುತ್ತ , ತನ್ನ ತೊದಲು ನುಡಿಗಳಲ್ಲಿ ಅಮ್ಮ ಹೇಳುತ್ತಿದ್ದ ಹಾಡುಗಳನ್ನು ಹಾಡಿ ಬೊಂಬೆಯನ್ನು ನಿದ್ದೆ ಮಾಡಿಸಲು ಹರಸಾಹಸ ಪಡುತಿತ್ತು, ಬೊಂಬೆಯ ಕಣ್ಣುಗಳು ಮುಚ್ಚದೇ ತೆರೆದ ಕಣ್ಣುಗಳಿಂದ ತನ್ನನ್ನೇ ನೋಡುತ್ತಿದ್ದಾಗ ಮಗು ಬಲವಂತವಾಗಿ ಕಣ್ಣು ಮುಚ್ಚಲು ಹೋದಾಗ ಬೊಂಬೆಯ ಕಣ್ಣುಗಳೆರೆಡು ಕಿತ್ತು ಬರುತ್ತವೆ. ಮತ್ತೆ ಆ ಕಣ್ಣುಗಳನ್ನು ಜೋಡಿಸಲು ಹರಸಾಹಸ ಮಾಡಿ ಸೋತುಹೋಗುತ್ತದೆ. ಏನು ಮಾಡಲಾಗದೇ ದಿಕ್ಕುತೋಚದೇ ಗಟ್ಟಿಯಾಗಿ ಅಳುತ್ತಿರುವ ಮಗುವಿನ ಭಾವನೆಯನ್ನು ಅರ್ಥಮಾಡಿಕೊಳ್ಳಲಾಗದೇ ಅಂಗಳದಲ್ಲಿದ್ದ ಮಗುವನ್ನು ತಾಯಿಯು ಎತ್ತಿಕೊಂಡು ಒಳಗೆ ಹೆಜ್ಜೆಹಾಕಿದ್ದಳು. ಆ ಮಗುವಿನ ದೃಷ್ಟಿ ಮಾತ್ರ ಕುರುಡು ಬೊಂಬೆಯತ್ತ ಇತ್ತು. ತಾನೇನು ಮಾಡಿದರೂ ಸಮಾಧಾನಗೊಳ್ಳದ ಮಗುವನ್ನು ನೋಡಿ ತಾಯಿ ಸಿಟ್ಟಿನಿಂದ ಒಂದೇಟು ನೀಡಿದಾಗ ಮಗು ಹೆದರಿಕೆಯಿಂದ ಸುಮ್ಮನಾಗಿ ಮೂಲೆಯಲ್ಲಿ ಮುದುಡಿ ಕುಳಿತಿರುತ್ತದೆ.ಎಷ್ಟೆಂದರೂ ತಾಯಿಕರುಳು ಅವಳಿಗೂ ನೋವಾಗಿತ್ತು, ತುಂಬಾ ವರ್ಷಗಳ ನಂತರ ಹುಟ್ಟಿದ ಮಗುವೆಂದು ಬಹಳ ಮುದ್ದಿನಿಂದ ಬೆಳೆಸಿದ್ದರು.ಮಗುವಿನ ತಂದೆ ಖ್ಯಾತ ಕಣ್ಣಿನ ತಜ್ಞರಾಗಿದ್ದರೂ , ಮಗುವಿನ ಜೊತೆ ಜಾಸ್ತಿ ಸಮಯವನ್ನು ಕಳೆಯುತ್ತಿದ್ದರು. ಹತ್ತು ನಿಮಿಷದ ಬಳಿಕ ಮೂಲೆಯಲ್ಲಿ ಕುಳಿತ ಮಗುವಿನ ಬಳಿ ಬಂದು ಪ್ರೀತಿಯಿಂದ ಮಾತನಾಡಿ ಒತ್ತಾಯವಾಗಿ ಊಟಮಾಡಿಸಿ, ಮಲಗಿಸಿದ್ದರೂ, ಮಗುವಿನ ಮನಸ್ಸು ಮಾತ್ರ ಅಂಗಳದಲ್ಲಿತ್ತು..ನಿದ್ದೆ ಮಾಡಿದ ನಾಟಕವಾಡಿ ಅಮ್ಮನ ಕಣ್ಣುತಪ್ಪಿಸಿ ಪುಟ್ಟ ಪುಟ್ಟ ಕಾಲುಗಳಿಂದ ದೊಡ್ಡ ದೊಡ್ಡ ಹೆಜ್ಜೆಗಳನಿಡುತ್ತಾ ಬೊಂಬೆಗಳಿದ್ದ ಜಾಗದತ್ತ ಬಂದು ನಿಂತಿತ್ತು. ಮನೆಗೆಲಸದವಳಿಂದ ಬೊಂಬೆಯ ಕಣ್ಣುಗಳು ಕಸದ ಬುಟ್ಟಿಗೆ ಸೇರಿದ ವಿಷಯ ಗೊತ್ತಿರದ ಮಗು ಪುಟ್ಟ ಕಣ್ಣುಗಳಿಂದ, ಬೊಂಬೆಯ ಕಣ್ಣುಗಳಿಗಾಗಿ ಹುಡುಕತೊಡಗಿತ್ತು. ತುಂಬಾ ಸಮಯದ ಹುಡುಕಾಟದಲ್ಲಿ ಸೋತ ಮಗು ತಾನೇನು ದೊಡ್ಡ ತಪ್ಪನ್ನು ಮಾಡಿದ್ದೇನೆ ಎಂದುಕೊಂಡು ಬೊಂಬೆಯ ಜೊತೆ ಆಡುವುದನ್ನು ನಿಲ್ಲಿಸುವುದರ ಜೊತೆಗೆ, ಹೆದರಿ ಯಾವಾಗಲೂ ಮಂಕಾಗಿ ಮೂಲೆಯಲ್ಲಿ ಕುಳಿತಿರುತಿತ್ತು.
ಎರಡು ದಿನದಿಂದ ಎಷ್ಟು ಕೇಳಿದರೂ ಉತ್ತರಿಸದೆ ಬೊಂಬೆಯತ್ತ ಕೈತೋರಿಸಿ ಅಳುತ್ತಿದ್ದ ಮಗುವಿನ ಈ ವರ್ತನೆಯನ್ನು ನೋಡಿ ಗಾಬರಿಯಾದ ತಂದೆ ತಾಯರಿಬ್ಬರು ಆವತ್ತು ಸಂಜೆ ಮಗುವನ್ನು ಹತ್ತಿರದಲ್ಲಿ ನಿಲ್ಲಿಸಿಕೊಂಡು, ಆ ಬೊಂಬೆಯನ್ನು ಕೈಯಲ್ಲಿಡಿದುಕೊಂಡು ಪ್ರೀತಿಯಿಂದ ಕೇಳಿದ್ದರು.ಮೊದಮೊದಲು ಏನು ಹೇಳದ ಮಗು ನಂತರ ತಂದೆಯ ಪ್ರೀತಿಯ ಬಲವಂತಕ್ಕೆ, ತಾಯಿಯ ಗದರುವಿಕೆಗೆ ನಿಧಾನವಾಗಿ ತನ್ನ ತೊದಲು ನುಡಿಗಳಿಂದ ಆ ಬೊಂಬೆಯನ್ನು ನೋಡುತ್ತ "ನಾನು ಈ ಬೊಂಬೆಯ ಕಣ್ಣುಗಳನ್ನು ಕಿತ್ತುಬಿಟ್ಟೆ. ಪುನಃ ಜೋಡಿಸಲು ಆ ಕಣ್ಣುಗಳನ್ನು ಕಳೆದುಕೊಂಡಿದ್ದೇನೆ.ನಾನು ನಿಮ್ಮನೆಲ್ಲಾ ಈ ಕಣ್ಣುಗಳಿಂದ ನೋಡುತ್ತಿದ್ದೇನೆ.ಆದರೆ ಬೊಂಬೆಗೆ ಕಣ್ಣುಇಲ್ಲದೇ ಇನ್ನುಮುಂದೆ ನನ್ನ ನೋಡೋಕಾಗಲ್ಲ . ಅದರ ಕಣ್ಣು ಕಿತ್ತ ನನಗೆ ನೀವು ಮತ್ತು ಆ ದೇವರು ಶಿಕ್ಷೆ ಕೊಡುತ್ತೀರಿ" ಎಂದು ಅಳುತ್ತ ಭಯದಿಂದ ನಡುಗುತ್ತ ಹೇಳಿತ್ತು. ಮಗುವಿನ ಮುಗ್ಧತೆಯ ಮಾತುಗಳನ್ನು ಕೇಳಿ,ಪ್ರೀತಿಯಿಂದ ಏನು ಮಾತನಾಡದೇ ಬಿಗಿಯಾಗಿ ತಬ್ಬಿಕೊಂಡ ತಂದೆಯ ಕಣ್ಣುಗಳಲ್ಲಿ ನೋವಿನ ಕಣ್ಣೀರ ಹನಿಯೊಂದು ಜಿನುಗಿ ಹೃದಯದಲಿ ಪಶ್ಚಾತ್ತಾಪದ ಭಾವನೆ ಮೂಡಿತ್ತು. ಇನ್ನು ಮಗುವಿನ ತಾಯಿ ಮಗುವನ್ನು ಸಮಾಧಾನ ಪಡಿಸಲು ಬೇರೊಂದು ಬೊಂಬೆಯ ಕಣ್ಣುಗಳನ್ನು ಕೀಳಲು ಪ್ರಯತ್ನಿಸುತ್ತಿದ್ದಳು.