ಮುಗ್ಧ ಹಿಮಕನ್ಯೆ ಮಾಗ್ದಾ
ನೂರಾರು ವರುಷಗಳ ಮುಂಚೆ ರಷ್ಯಾದಲ್ಲಿ ಮಾಗ್ದಾ ಎಂಬ ರೂಪವತಿ ಇದ್ದಳು. ಹಳ್ಳಿಯ ಮನೆಯಲ್ಲಿ ತನ್ನ ತಂದೆ, ಮಲತಾಯಿ ಮತ್ತು ಮಲತಾಯಿಯ ಇಬ್ಬರು ಮಗಳಂದಿರ ಜೊತೆ ಮಾಗ್ದಾ ವಾಸ ಮಾಡುತ್ತಿದ್ದಳು.
ಆ ಇಬ್ಬರು ಸೋದರಿಯರ ಹೆಸರು ತನಿಯಾ ಮತ್ತು ಮಾರ್ಫಾ. ಅವರಷ್ಟು ಸೋಮಾರಿ ಮತ್ತು ಜಗಳಗಂಟಿ ಯುವತಿಯರು ಎಲ್ಲಿಯೂ ಇರಲಿಲ್ಲ. ಯಾರು ತಮ್ಮಲ್ಲಿ ಅತ್ಯಂತ ರೂಪವತಿ ಮತ್ತು ಯಾರಿಗೆ ಅತ್ಯಂತ ಶ್ರೀಮಂತ ಗಂಡ ಸಿಗುತ್ತಾನೆ ಎಂಬ ಬಗ್ಗೆ ಅವರು ಯಾವಾಗಲೂ ಜಗಳ ಮಾಡುತ್ತಿದ್ದರು. ಆದರೆ ಮಾಗ್ದಾಳಿಗೆ ಬೆಳಗ್ಗೆಯಿಂದ ರಾತ್ರಿ ಮಲಗುವ ವರೆಗೆ ಕ್ಷಣವೂ ಬಿಡುವಿಲ್ಲ; ಮಲತಾಯಿ ಅಷ್ಟು ಮನೆಗೆಲಸ ಮಾಡಿಸುತ್ತಿದ್ದಳು.
ಆ ವರುಷ ಭೀಕರ ಚಳಿಗಾಲ. ಆಹಾರಕ್ಕೆ ತತ್ವಾರ. ಅದಲ್ಲದೆ ಎಲ್ಲ ಆಹಾರವೂ ದುಬಾರಿ. ಅದೊಂದು ದಿನ ಮಲತಾಯಿ ಗಂಡನಿಗೆ ಹೇಳಿದಳು, "ಮಾಗ್ದಾಳಿಗೆ ನಾವಿನ್ನು ಮದುವೆ ಮಾಡಬೇಕು. ನಾವು ಬಡವರು. ಮನೆಯಲ್ಲಿ ಇರುವವರ ಸಂಖ್ಯೆ ಒಂದು ಕಡಿಮೆಯಾದರೂ ಅನುಕೂಲ."
ಆ ದಿನ ರಾತ್ರಿ ಮಲತಾಯಿ ಗಂಡನಿಗೆ ತಾಕೀತು ಮಾಡಿದಳು, "ನಾಳೆ ಬೇಗನೇ ಎದ್ದು ತಯಾರಾಗಿ. ಚಕ್ರವಿಲ್ಲದ ಕುದುರೆ ಗಾಡಿಯಲ್ಲಿ ಮಾಗ್ದಾಳನ್ನು ಕಾಡಿಗೆ ಒಯ್ದು ಬಿಟ್ಟು ಬಿಡಿ. ಅಲ್ಲಿಗೆ ಅವಳ ಭಾವೀ ಪತಿ ಬಂದು ಕರೆದೊಯ್ಯುತ್ತಾನೆ.”
ಮಾಗ್ದಾಳ ತಂದೆಗೆ ಗೊಂದಲವಾದರೂ ಪತ್ನಿಯೊಂದಿಗೆ ಚರ್ಚೆ ಮಾಡಲು ಅವನು ತಯಾರಿರಲಿಲ್ಲ. ಮರುದಿನ ಆತ ಮಾಗ್ದಾಳನ್ನು ಕಾಡಿಗೆ ಕರೆದೊಯ್ದ. ಅವಳಿಗೆ ವಿದಾಯ ಹೇಳಿ ಮನೆಗೆ ಮರಳಿದ. "ಮಾಗ್ದಾಳನ್ನು ಯಾರು ಮದುವೆ ಆಗುತ್ತಾರೆ?" ಎಂದು ಕೇಳಿದ. ಆಕೆ ಕುಹಕದ ನಗು ನಗುತ್ತಾ, “ಹಿಮರಾಜ ಮದುವೆಯಾಗ್ತಾನೆ. ನೀವೇನೂ ಚಿಂತೆ ಮಾಡಬೇಡಿ. ಮನೆಯಲ್ಲಿ ಒಬ್ಬರು ಕಡಿಮೆಯಾದರು” ಎಂದಳು. ತನ್ನ ಮಗಳನ್ನು ಮರಗಟ್ಟಿಸುವ ಹಿಮಪಾತಕ್ಕೆ ಬಲಿಗೊಡುವುದೇ ಆಕೆಯ ಕುತಂತ್ರ ಎಂದು ಅರ್ಥವಾದರೂ ಮಾಗ್ದಾಳ ತಂದೆ ತುಟಿ ಪಿಟಕ್ಕೆನ್ನಲಿಲ್ಲ.
ಅಲ್ಲಿ ಕಾಡಿನಲ್ಲಿ ತೆಳುಬಟ್ಟೆಯ ಉಡುಪು ತೊಟ್ಟಿದ್ದ ಮಾಗ್ದಾ ಚಳಿಯಿಂದ ನಡುಗುತ್ತಿದ್ದಳು. ಯಾಕೆಂದರೆ ಅವಳಿಗೆ ಬೆಚ್ಚಗಿನ ಉಡುಪನ್ನೂ ಕೊಟ್ಟಿರಲಿಲ್ಲ. ಮಾಗ್ದಾ ರಕ್ತ ಹೆಪ್ಪುಗಟ್ಟಿಸುವ ಚಳಿಯಲ್ಲಿ ಒಬ್ಬಂಟಿಯಾಗಿ ಕುಳಿತು ಅಳ ತೊಡಗಿದಳು.
ಫಕ್ಕನೆ ಅವಳೆದುರು ಹಿಮರಾಜ ಪ್ರತ್ಯಕ್ಷನಾದ. ಅವನು ಹಿಮದಷ್ಟು ಬಿಳಿಯಾದ ಉಡುಪು ತೊಟ್ಟಿದ್ದ. “ಒಬ್ಬಳೇ ಈ ಕಾಡಿನಲ್ಲಿ ಏನು ಮಾಡುತ್ತಿದ್ದಿ?” ಎಂದು ಕೇಳಿದ. “ನನ್ನನ್ನು ಕರೆದೊಯ್ಯಲು ಬರುವ ಗಂಡನಿಗಾಗಿ ಕಾಯುತ್ತಿದ್ದೇನೆ” ಎಂದಳು ಮಾಗ್ದಾ. “ನೀನು ಚೆನ್ನಾಗಿದ್ದೀಯಾ?” ಮತ್ತೆ ಕೇಳಿದ ಹಿಮರಾಜ. “ಪರವಾಗಿಲ್ಲ. ಈ ಭೀಕರ ಚಳಿಗಾಲದ ಚಳಿಯಲ್ಲಿ ಹೇಗೋ ಇದ್ದೇನೆ” ಎಂದು ಉತ್ತರಿಸಿದಳು. “ಚಳಿಯಾಗುತ್ತಿದೆಯಾ?" ಎಂದು ಹಿಮರಾಜ ಪ್ರಶ್ನಿಸಿದಾಗ “ಸ್ವಲ್ಪ ಚಳಿಯಾಗ್ತಿದೆ. ಯಾಕೆಂದರೆ ನಾನು ಕೋಟು ತೊಟ್ಟಿಲ್ಲ” ಎಂದಳು ಮಾಗ್ದಾ.
"ನನ್ನ ಹಿಮಪಾತದಿಂದಾಗಿ ನಿನಗೆ ಚಳಿಯಾಗ್ತಿದೆಯಾ?” ಎಂದು ಮತ್ತೆ ಕೇಳಿದ ಹಿಮರಾಜ. “ಹಿಮಪಾತದಿಂದಾಗಿ ಇಲ್ಲೆಲ್ಲ ಚಂದವಾಗಿ ಕಾಣ್ತಾ ಇದೆ. ನಾನೊಂದು ದಪ್ಪ ಕೋಟು ತೊಟ್ಟಿದ್ದರೆ ನನಗೆ ಚಳಿಯಾಗುತ್ತಲೇ ಇರಲಿಲ್ಲ" ಎಂದು ಮಾಗ್ದಾ ಹೇಳುತ್ತಿರುವಾಗ ಅವಳ ಹಲ್ಲುಗಳು ಚಳಿಯಿಂದ ಕಟಕಟನೆ ಕಡಿದವು. ಹಿಮರಾಜನಿಗೆ ಮಾಗ್ದಾಳ ಮೇಲೆ ಕನಿಕರ ಮೂಡಿತು. ಅವನು ಅವಳಿಗೆ ಅತ್ಯಂತ ಬೆಲೆಬಾಳುವ ಉಣ್ಣೆಯಿಂದ ಮಾಡಿದ ಕೋಟು, ತಲೆಕವಚ, ಮಫ್ಲರ್ ಮತ್ತು ಬೂಟ್ಸುಗಳನ್ನು ಕೊಟ್ಟ. ಜೊತೆಗೆ ಅದ್ಭುತವಾದ ವಜ್ರಗಳ ಹಾರವನ್ನು ಅವಳ ಕುತ್ತಿಗೆಗೆ ಉಡುಗೊರೆಯಾಗಿ ತೊಡಿಸಿದ.
ಮರುದಿನ ಅವಳ ತಂದೆ ಅವಳ ಪಾಡು ಏನಾಗಿದೆಯೆಂದು ನೋಡಲು ಅಲ್ಲಿಗೆ ಬಂದ. ಯಾಕೆಂದರೆ ಅವನಿಗೆ ರಾತ್ರಿಯಿಡೀ ಮಗಳ ಯೋಚನೆಯಿಂದ ನಿದ್ದೆ ಬಂದಿರಲಿಲ್ಲ. ಇದೀಗ ಅದ್ಭುತ ಆಭರಣ ತೊಟ್ಟಿದ್ದ ಮಾಗ್ದಾ ಚೆನ್ನಾಗಿರುವುದನ್ನು ಕಂಡು ಅವನ ಆನಂದಕ್ಕೆ ಪಾರವೇ ಇಲ್ಲ. ಅವಳನ್ನು ಮನೆಗೆ ವಾಪಾಸು ಕರೆತಂದ.
ಮಾಗ್ದಾಳ ಬೆಲೆಬಾಳುವ ಉಡುಪು, ಆಭರಣಗಳನ್ನು ಕಂಡು ಮಲತಾಯಿಗೆ ಅಸೂಯೆಯಿಂದ ಹೊಟ್ಟೆಯುರಿಯಿತು. ಅವಳು ತನ್ನಿಬ್ಬರು ಮಗಳಂದಿರಿಗೆ ಬೆಚ್ಚಗಿನ ಉಡುಪು ತೊಡಿಸಿದಳು. ನಂತರ ಅವರನ್ನೂ ಕಾಡಿನಲ್ಲಿ ಬಿಟ್ಟು ಬರಲು ತನ್ನ ಗಂಡನೊಂದಿಗೆ ಕಳಿಸಿದಳು - ಇವರಿಗೂ ಹಿಮರಾಜ ಬೆಲೆಬಾಳುವ ಉಡುಪು, ಆಭರಣ ಕೊಡಬಹುದೆಂಬ ನಿರೀಕ್ಷೆಯಲ್ಲಿ.
ಕಾಡಿನಲ್ಲಿ ಬೆಚ್ಚಗಿನ ಉಡುಪು ತೊಟ್ಟಿದ್ದರೂ ಇಬ್ಬರಿಗೂ ಭೀಕರ ಚಳಿಯಿಂದ ನಡುಕ ಶುರುವಾಯಿತು. "ನಮ್ಮ ಗಂಡಂದಿರು ಬೇಗನೇ ಬರುತ್ತಾರೆ ಎಂದುಕೊಳ್ತೇನೆ. ಇಲ್ಲವಾದರೆ ನಾನು ಮರಗಟ್ಟಿ ಹೋದೇನು” ಎಂದಳು ತನಿಯಾ. “ಅಬ್ಬಾಬ್ಬಾ, ಚಳಿಗೆ ರಕ್ತ ಹೆಪ್ಪುಗಟ್ಟುತ್ತಿದೆ. ಈಗ ಒಬ್ಬನೇ ಗಂಡಸು ಬಂದರೇನು ಮಾಡೋದು? ಅವನು ನನ್ನನ್ನೇ ಆಯ್ಕೆ ಮಾಡ್ತಾನೆ" ಎಂದಳು ಮಾರ್ಫಾ. ಆಕೆ ಹೀಗೆನ್ನುತ್ತಲೇ ತಮ್ಮಿಬ್ಬರಲ್ಲಿ ಯಾರು ರೂಪವತಿ ಎಂದು ಅವರಲ್ಲಿ ಜಗಳ ಆರಂಭವಾಯಿತು.
ಅವರಿಬ್ಬರ ಮಾತುಗಳನ್ನು ದೂರದಿಂದಲೇ ಕೇಳಿಸಿಕೊಂಡ ಹಿಮರಾಜ ಅವರೆದುರು ಪ್ರತ್ಯಕ್ಷನಾದ. “ನೀವಿಬ್ಬರು ಇಲ್ಲಿ ಚಳಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಿ” ಎಂದವನು ಕೇಳಿದ. "ನಾವು ನಮ್ಮ ಗಂಡಂದಿರಿಗಾಗಿ ಕಾಯುತ್ತಿದ್ದೇವೆ” ಎಂದು ಅವರಿಬ್ಬರೂ ಗೊಣಗಿದರು.
“ನೀವು ಚೆನ್ನಾಗಿದ್ದೀರಾ?” ಎಂದು ಪುನಃ ಕೇಳಿದ ಹಿಮರಾಜ. “ಏನು ಕಾಣೋದಿಲ್ಲವೇ? ನಾವಿಲ್ಲಿ ಚಳಿಯಿಂದಾಗಿ ಮರಗಟ್ಟಿದ್ದೇವೆ. ಈ ಕೆಟ್ಟ ಹಿಮಪಾತ ಸಹಿಸಲು ಸಾಧ್ಯವಿಲ್ಲ” ಎಂದಳು ತನಿಯಾ. "ಬೆಚ್ಚಗಿನ ಕೋಟು ತೊಟ್ಟಿದ್ದರೂ ನಿಮಗೆ ಚಳಿ ಆಗ್ತಿದೆಯಾ?" ಎಂದು ಪ್ರಶ್ನಿಸಿದ ಹಿಮರಾಜ. "ನಾವು ನಡುಗುವುದು ಕಾಣೋದಿಲ್ಲವೆಂದರೆ ನಿನ್ನ ಕಣ್ಣು ಕುರುಡಾಗಿರಬೇಕು. ತೊಲಗಾಚೆ, ತಲೆಕೆಟ್ಟ ಮುದುಕ" ಎಂದು ಮಾರ್ಫಾ ಬಯ್ದಳು.
ಹಿಮರಾಜನಿಗೆ ಈ ಜಗಳಗಂಟಿ ಯುವತಿಯರ ಮಾತು ಕೇಳಿ ಕೋಪ ಕುದಿಯಿತು. ಅವನು ಅವರತ್ತ ತನ್ನ ಕೈ ಬೀಸಿದೊಡನೆ ಅವರಿಬ್ಬರೂ ಹಿಮಗಡ್ದೆಯ ತುಂಡುಗಳಾಗಿ ನೆಲಕ್ಕೆ ಉರುಳಿದರು. ಮರುದಿನ ಅವರನ್ನು ಹುಡುಕಿಕೊಂಡು ಬಂದ ತಂದೆಗೆ ಅಲ್ಲಿ ಮನುಷ್ಯನ ಆಕಾರದ ಎರಡು ಹಿಮಗಡ್ಡೆಗಳು ಕಾಣಿಸಿದವು.
ಅವನು ಮನೆಗೆ ಮರಳಿ ಅವರ ತಾಯಿಗೆ ಈ ಸಂಗತಿ ತಿಳಿಸಿದಾಗ ಅವಳು ಜೋರಾಗಿ ಚೀರಿದಳು. ತಕ್ಷಣವೇ ತನ್ನ ಮಗಳಂದಿರನ್ನು ಆವರಿಸಿದ ಹಿಮದ ಪದರ ಕರಗಿಸಬಹುದೆಂದು ಚಿಂತಿಸುತ್ತಾ ಕಾಡಿಗೆ ಧಾವಿಸಿದಳು. ಅನಂತರ ಅವಳನ್ನಾಗಲೀ ಅವಳ ಇಬ್ಬರು ಮಗಳಂದಿರನ್ನಾಗಲೀ ಯಾರೂ ಕಂಡಿಲ್ಲ.
ಮುಗ್ಧ ಸುಂದರಿ ಮಾಗ್ದಾಳನ್ನು ಆ ಹಳ್ಳಿಯ ಸುಂದರಾಂಗನೊಬ್ಬ ಮದುವೆಯಾದ. ಅನಂತರ ಅವರಿಬ್ಬರೂ
ಸುಖಶಾಂತಿಯಿಂದ ಬಾಳಿದರು.