ಮುಚ್ಚಿಡುವುದು ಮತ್ತು ಬಿಚ್ಚಿಡುವುದು ಎಂಬ ಜಗಳ..!

ಮುಚ್ಚಿಡುವುದು ಮತ್ತು ಬಿಚ್ಚಿಡುವುದು ಎಂಬ ಜಗಳ..!

‘ದೇವಕಣ’ವನ್ನು ಕಂಡು ಹಿಡಿದಿದ್ದೇವೆ ಎಂಬ ವಿಚಾರವೊಂದು ಹರಡಿಕೊಂಡಾಗ ವಿಜ್ಞಾನ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೆರಡರಲ್ಲಿಯೂ ಸಂತಸ ವ್ಯಕ್ತವಾಯಿತು. ಈ ಪ್ರಪಂಚದ ಪ್ರತಿ ಕಣದಲ್ಲೂ ದೇವರಿದ್ದಾನೆ ಎಂದು ನಂಬಿಕೊಂಡಿದ್ದ ಧರ್ಮಗಳು ಮತ್ತು ಆ ಮೂಲ ಕಣವನ್ನು ವಿಜ್ಞಾನ ‘ದೇವಕಣ’ ಎಂದು ದೇವರ ಹೆಸರಿನಲ್ಲಿ ಕರೆದಾಗ ಎಲ್ಲೋ ಒಂದು ಕಡೆ ಧರ್ಮ ಪಾರಮಾರ್ಥವೇ ವಿಜ್ಞಾನ, ಮೂಲಧರ್ಮ ಸೃಜಿಸಿರುವ ಅನೇಕ ವೃತ್ತಾಂತಗಳಲ್ಲಿ ವಿಜ್ಞಾನವೂ ಒಂದು ಅಂಗವಷ್ಟೇ ಎಂದು ಬಿಂಬಿಸುವ ಪ್ರಯತ್ನವಾಯಿತು. ವಿಜ್ಞಾನವನ್ನು ದೇವರು ನಮಗೆಂದೇ ಕಲಿಯಲು ಸೃಷ್ಟಿರುವ ಒಂದು ವಿಶಿಷ್ಟ ಭಾಗವೆಂದು ಗೆಳೆಯನೊಬ್ಬ ನನ್ನ ಮುಂದೆ ಒಮ್ಮೆ ಪ್ರತಿಪಾದಿಸಲು ಪ್ರಯತ್ನಿಸಿದ್ದ. ದೇವಕಣವೆಂಬುದು ಒಂದು ರೊಮಾಂಚಕ ಅನ್ವೇಷಣೆಯೆಂಬುದರಲ್ಲಿ ಎರಡು ಮಾತಿಲ್ಲ. ಆದರೆ, ವೈಜ್ಞಾನಿಕವಾಗಿ, ಈ ಸಂಶೋಧನೆಗೆ ಆಣಿ ಮಾಡಿಕೊಂಡು ಸಂಘಟಿಸಿದವರ ಪ್ರಕಾರವಾಗಿ ಹೇಳುವುದಾದರೆ ದೇವರಿಗೂ, ದೇವಕಣಕ್ಕೂ ಸಂಬಂಧವೇ ಇಲ್ಲ. ಲೆಡರ್ ಮ್ಯಾನ್ ಎಂಬ ವಿಜ್ಞಾನಿಯ ಪ್ರಕಾರ ಆ ಕಣ ತುಂಬಾ ಮಹತ್ವದ್ದು, ಎಲ್ಲಕ್ಕಿಂತಲೂ ಪ್ರಮುಖವಾದದ್ದು, ಮುಂದಿನ ಪೀಳಿಗೆಗೆ ಜಿಜ್ಞಾಸೆ ಹುಟ್ಟುಹಾಕುವಂತಹದ್ದು, ಎಲ್ಲರೂ ಈ ಕಣವನ್ನು ಗಂಭೀರವಾಗಿ ಪರಿಗಣಿಸಲಿ ಎಂಬ ಸರಳ ಅರ್ಥದಲ್ಲಿ ‘ದೇವಕಣ’ವೆಂದು ಬಳಸಿಕೊಂಡಿದ್ದಾರೆ. ಜೀವವಿಜ್ಞಾನ ವಿಭಾಗದಲ್ಲಿನ ‘ವಿಕಾಸವಾದ’ ಸಿದ್ಧಾಂತ’ವನ್ನು ಬಹು ವಿಸ್ತಾರವಾಗಿ ಪ್ರತಿಪಾದಿಸಿದ ಡಾರ್ವಿನ್ ಕೊನೆಗೆ ‘ಮಾನವನೆಂಬ ಜೀವಿ ಮೂಲವಾಗಿ ಉದ್ಭವಿಸಿರಲಿಲ್ಲ, ಮಂಗನೆಂಬ ಜೀವಿಗೆ ಕಾಲ ಕಾಲದಲ್ಲಾದ ಬದಲಾವಣೆಯಿಂದ ಮಾನವ ಎಂಬ ಜೀವಿಯ ಉಗಮವಾಯಿತು’ ಎಂದು ಪ್ರತಿಪಾದಿಸಿದಾಗ ಎಲ್ಲೋ ಒಂದು ಕಡೆ ವಿಜ್ಞಾನ ಮತ್ತು ಧಾರ್ಮಿಕ ನಂಬಿಕೆಗಳ ನಡುವೆ ಘರ್ಷಣೆ ಉಂಟಾಯಿತು. ಧರ್ಮವನ್ನು ಅತಿಯಾಗಿ ನಂಬುವವರ ಒಳ ತಳಮಳಗಳು ಹೇಳತೀರದ್ದಾಗಿತ್ತು. ಯಾಕೆಂದರೆ ಕ್ರೈಸ್ತ, ಇಸ್ಲಾಂ ಹಾಗೂ ವೈದಿಕ ಪರಂಪರೆಗಳಲ್ಲಿ ದೇವರನ್ನೇ ಸೃಷ್ಟಿಯೋಗಮಕ್ಕೆ ಮೂಲ ಕಾರಣವಾಗಿಸಿಕೊಂಡಿವೆ. ಆದರೆ ಬೌದ್ಧ, ಜೈನಧರ್ಮಗಳು ವಿಶ್ವದ ಸೃಷ್ಟಿಗೆ ದೇವರ ಕಲ್ಪನೆಯನ್ನು ತಿರಸ್ಕರಿಸಿ ಪ್ರಪಂಚದ ಸೃಷ್ಟಿಗೆ ಪ್ರಕೃತಿ ಪರಮಾಣುಗಳನ್ನು ಪ್ರತಿಪಾದಿಸುತ್ತವೆ. ಆ ವಿಚಾರವಾಗಿ ವಿಜ್ಞಾನವೂ ಪ್ರತಿ ವಸ್ತುವಿನೊಳಗಿನ ಕಣಗಳನ್ನು ಬಿಡಿ ಬಿಡಿಯಾಗಿ ನಮಗೆ ಭೋದಿಸುತ್ತದೆ.

ಡಾರ್ವಿನ್ ನ ವಿಕಾಸವಾದವನ್ನು ಒಪ್ಪಿಕೊಳ್ಳದ ಧರ್ಮಗಳು ಈಗ ‘ದೇವಕಣ’ ವೆಂಬ ಸಿದ್ಧಾಂತದ ಮೂಲಕ ಪ್ರಪಂಚದ ಪ್ರತಿ ಮೂಲಕಣದೊಳಗೆ ದೈವತ್ವ ತುಂಬಿಕೊಂಡಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿವೆ. ಮೂಲಕಣವನ್ನು ‘ದೇವಕಣ’ವೆಂದು ಕರೆದ ವಿಜ್ಞಾನ ನಂತರ ಹೇಗಾದರೂ ಅರ್ಥೈಸಲಿ ನಾವಂತೂ ‘ದೇವಕಣ’ವೆಂದೇ ಕರೆಯುತ್ತೇವೆ ಎಂಬ ಧರ್ಮಗಳ ಮಾತಿಗೆ ಗೌರವ ಕೊಡಲೇಬೇಕಾಗುತ್ತದೆ. ಆದರೆ ಮೂಲಕಣವೆಂದರೇನು? ಅದು ದೊರಕುವುದೇ? ತನ್ನನ್ನು ತಾನು ಕಾಣಿಸಿಕೊಳ್ಳುವುದೇ? ವಿಸ್ತಾರಗೊಳ್ಳುತ್ತಲೇ ಸಾಗುತ್ತಿರುವ ಈ ವಿಶ್ವಸೃಷ್ಟಿಗಳ ಯಾವ ಹಂತದಲ್ಲಿ ಆ ಕಣ ಕೆಲಸ ಮಾಡುತ್ತಿದೆ ಎಂಬ ಪ್ರಶ್ನೆ ನನ್ನಲ್ಲಿ ಯಾವಾಗಲೂ ಉದ್ಭವಿಸುತ್ತದೆ. ಈ ಪ್ರಪಂಚದ ಸಮತೋಲನದೊಳಗೆ, ನಿಜ ಸಾಕ್ಷಾತ್ಕಾರದೊಳಗೆ, ಅಣು ರೇಣು ತೃಣ ಕಾಷ್ಠದೊಳಗೆ ಒಂದು ಶಕ್ತಿಯಿದೆ, ವೈಜ್ಞಾನಿಕವಾಗಿ ಒಂದು ಕಾರಣ ನೀಡಿದರೂ, ಕಾರಣಕ್ಕೆ ಕಾರಣ ಉದ್ಭವಿಸಿ ಅದೊಂದು ಅಂತ್ಯವಿಲ್ಲದ, ದಾರಕ್ಕೆ ಮಲ್ಲಿಗೆ ಪೋಣಿಸಿದಂತೆ ದಾರ ಉದ್ದವಾಗುತ್ತಾ ಸಾಗಿದಂತೆ ಸಾಗುತ್ತಲೇ ಇರುತ್ತದೆ. ಕಾರಣಗಳು ಹುಟ್ಟಿದಂತೆ ಪ್ರಶ್ನೆಗಳೂ ಉದ್ಭವಿಸಿಸುವುದು ಈ ಲೋಕದ ಒಂದು ಅಕಾರಣ ಜಿಜ್ಞಾಸೆ. ಕಾರಣ ಮತ್ತು ಪ್ರಶ್ನೆ ಎರಡೂ ಕೊನೆಯಾಗುವುದಿಲ್ಲ. ಚಪಾತಿ ಹಿಟ್ಟನ್ನು ನೀರಿನಲ್ಲಿ ಮಿದಿಸಬಹುದು ಬದಲಾಗಿ ಎಣ್ಣೆಯಲ್ಲಲ್ಲ ಎಂಬ ಒಂದು ಸಾಮಾನ್ಯ ವಿಚಾರದಲ್ಲೂ ನೀರಿನಲ್ಲೇ ಮಿಳಿತಗೊಳಿಸಿದ ಕಾರಣದ ಸಾದೃಶ್ಯವೇನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಾನೇ ಆಗಲಿ, ನೀವೇ ಆಗಲಿ, ವಿಜ್ಞಾನವೇ ಆಗಲಿ ಒಂದು ಕಾರಣ ನೀಡಿದರೆ, ಕೊನೆಗೆ ಆ ಕಾರಣವೇ ಪ್ರಶ್ನೆಯಾಗಿ ಉಳಿಯುತ್ತದೆ. ಗಣಿತದಲ್ಲಿ 1ನ್ನು 1ರಿಂದ ಭಾಗಿಸಿದರೆ ಉತ್ತರ 1 ಆಗುತ್ತದೆ, 1 ನ್ನು 0.1ರಿಂದ ಭಾಗಿಸಿದರೆ 10 ಬರುತ್ತದೆ, 1ನ್ನು 0.01 ರಿಂದ ಭಾಗಿಸಿದರೆ 100 ಬರುತ್ತದೆ, ಹೀಗೆ ತಟಸ್ಥವಾದ ಅಂಶಕ್ಕೆ ಛೇದ ಕಡಿಮೆಯಾಗುತ್ತಾ ಸಾಗಿದಂತೆ, ಒಟ್ಟು ಉತ್ತರ ಜಾಸ್ತಿಯಾಗುತ್ತಲೇ ಸಾಗುತ್ತದೆ. ಅಂಶ ಕಡಿಮೆಗೊಳ್ಳುತ್ತಾ ಸಾಗುತ್ತಲೇ ಇರುತ್ತದೆ, ಆದರೆ ಆ ‘ಕಡಿಮೆಗೊಳ್ಳುವ ಕಾರ್ಯ’ ಕೊನೆಗೊಳ್ಳುವುದಿಲ್ಲ, ಹಾಗೆಯೇ ಒಟ್ಟು ಉತ್ತರ ಜಾಸ್ತಿಯಾಗುತ್ತಾ ಸಾಗುತ್ತದೆ, ಆಗ ಆ ‘ಜಾಸ್ತಿಯಾಗುವ’ ಕಾರ್ಯವೂ ಕೊನೆಗೊಳ್ಳುವುದಿಲ್ಲ. ಈ ರೀತಿಯಲ್ಲಿ ಕಾರಣಕ್ಕೆ ಕಾರಣ ಬೇಡಿಕೆಯಾಗಿ ಪ್ರಶ್ನೆಗಳು ಉತ್ಪತ್ತಿಯಾಗುತ್ತಲೇ ಇರುತ್ತವೆ. ಕೊನೆಯಿಲ್ಲದೆ, ಸಿಗದೇ ಎಲ್ಲಿಗೋ ಸಾಗುವ ಆ ಸಂಖ್ಯೆಯನ್ನು, ವೈಜ್ಞಾನಿಕವಾಗಿ ‘ಅಪರಿಮಿತ’(Infinity = ∞) ಎಂದು ಅರ್ಥಗರ್ಭಿತವಾಗಿ ಕರೆದಿದ್ದಾರೆ. ಕೊನೆಗೆ ಉಳಿಯುವ, ಸಿಕ್ಕರೂ ಸಿಗದಂತೆ ಇರುವ ಆ ಶಕ್ತಿಯನ್ನು ನಾನು ಪವಿತ್ರವಾದ ದೈವತ್ವ ಎಂದು ಕರೆಯುತ್ತೇನೆ. ಒಂದೇ ರಕ್ತದ ಮನುಷ್ಯ ತಮ್ಮತನಕ್ಕೆ ಧರ್ಮಗಳನ್ನುದ್ಭವಿಸಿ, ಅಲ್ಲಲ್ಲಿನ ಗುಂಪುಗಳ ಘರ್ಷಣೆಗೋ, ಶಿಸ್ತಿಗೋ ಎಂಬುದೇ ತಿಳಿಯದಂತೆ ನೂರಾರು ಕಟ್ಟಳೆಗಳನ್ನೆಳೆದುಕೊಂಡು ಆ ಧರ್ಮಕ್ಕಷ್ಟು ದೇವರು, ಈ ಧರ್ಮಕ್ಕಷ್ಟು ದೇವರುಗಳನ್ನು ಸೃಜಿಸಿಕೊಂಡು, ಒಂದು ಧರ್ಮದ ನಂಬಿಕೆಗಳನ್ನು ಮತ್ತೊಂದು ಧರ್ಮದವರು ತೆಗಳುತ್ತ, ಪ್ರಪಂಚದ ಸೃಷ್ಟಿಗೆ ತಮ್ಮ ತಮ್ಮ ಧರ್ಮದ ದೇವರುಗಳೇ ಮೂಲ ಕಾರಣವೆಂಬುದು ವಿಪರ್ಯಾಸ. ಆದರೆ ಎಲ್ಲಾ ಧರ್ಮಗಳು ಒಂದಲ್ಲ ಒಂದು ನೆಲೆಯಲ್ಲಿ ಪ್ರತಿಪಾದಿಸುವ ‘ವಿಶ್ವವ್ಯಾಪಿತನ’ತನವನ್ನು ಒಪ್ಪಿಕೊಳ್ಳಲೇಬೇಕು. ಧರ್ಮಾಂಧರಿಂದ ಅಂತಹ ಅಂಶಗಳು ಕಾಣಿಸಿಕೊಳ್ಳದೇ ಸಹ್ಯವಾಗದೇ ಇರುವುದು ಮತ್ತೊಂದು ವಿಪರ್ಯಾಸವೇ ಸರಿ. 

ಹಾಗಾದರೆ, ವಿಜ್ಞಾನ ಮತ್ತು ದೇವರು ಎಂಬ ವಿಚಾರಗಳಿಗೆ ಇರುವ ಸಾಮ್ಯತೆ ಅಥವಾ ವ್ಯತ್ಯಾಸವಾದರೂ ಏನು ಎಂದು ಕೇಳಿದರೆ ನಾನಂತೂ ಸಾಮ್ಯತೆ ಮೂಡಿಸಿಕೊಳ್ಳಲು ಇಲ್ಲಿ ತಲಾತಲಾಂತರಗಳಿಂದ ಒಂದು ಜಗಳ ನಡೆದುಕೊಂಡು ಬಂದಿದೆ ಎಂದು ಹೇಳುತ್ತೇನೆ. ಉದಾಹರಣೆಗೆ ದೇವರು ಗಾಳಿಯನ್ನು ಸೃಷ್ಟಿಸಿ ಮನುಷ್ಯನಿಗೆ ಕಾಣದಂತೆ ಇಟ್ಟ. ಆದರೆ ಮನುಷ್ಯ ಕಣ್ಣಿಗೆ ಕಾಣುವ ಒಂದು ಕಾಗದವನ್ನು ಮುಂದೆ ಇಟ್ಟುಕೊಂಡು ಅದು ಅಲುಗಾಡಿದ್ದು ಕಂಡು ಇಲ್ಲಿ ಏನೋ ಇದೆ ಎಂದು ಗುರುತಿಸಿಕೊಂಡ. ಅದಲ್ಲದೇ ಒಟ್ಟು ಗಾಳಿಯಲ್ಲಿರುವ ಕಣಕಣಗಳನ್ನೆಲ್ಲಾ ಬೇಧಿಸಿಬಿಟ್ಟ. ಉರಿವ ಸಣ್ಣ ಹಣತೆ ಸಾಕು ಅದರ ತೀವ್ರತೆ ಅರಿಯಲು. ಕಾಣದ ಅಣು ಮತ್ತದರೊಳಗಿರುವ ತರಂಗಗಳ ಭಾವಗಳನ್ನರಿಯಲು ರುದರ್‍ಫೋರ್ಡ್ ಎಂಬ ವ್ಯಕ್ತಿಗೆ ಒಂದು ಚಿನ್ನದ ಹಾಳೆ ಸಾಕಾಯಿತು. ಚಿನ್ನದ ಹಾಳೆ ಮೇಲಿನ ಸಣ್ಣ ಸಣ್ಣ ಗುರುತುಗಳು ಅಲ್ಲಿ ಏನೋ ಒಂದು ಹಾದುಹೋಗಿರುವುದನ್ನು ತೋರಿಸಿಕೊಟ್ಟವು. ಇನ್ನೂ ಮುಂದುವರೆದು ಹೇಳುವುದಾದರೆ ಕಾಣದ ಅಥವಾ ಕಾಣುವ ಕೈವಲ್ಯಗಳಿಗೆ ಕೆಲ ಚಿಹ್ನೆಗಳನ್ನು ನೀಡುವ ಇಂದಿನ ವಿಜ್ಞಾನ ಅಥವಾ ಗಣಿತ, ಚಿಹ್ನೆ ಚಿಹ್ನೆ ಸೇರಿಸಿ, ಕೂಡಿಸಿ ಅಥವಾ ಕಳೆದು, ಇನ್ನೇನೋ ಮಾಡಿ ಬಂದು ಉತ್ತರದ ಮೂಲಕ ಆ ವಿಚಾರಗಳ ನಡುವೆಯೇ ಕಾಣದಂತೆ ಹುದುಗಿರುವ ಮತ್ತೇನನ್ನೋ ಸಾಕ್ಷೀಕರಿಸಿಕೊಳ್ಳುತ್ತದೆ. ಅಂದರೆ ಕಾಣದ ವಿಚಾರಗಳನ್ನು ಮನುಷ್ಯ ಕಾಣುವ ಪರಿಕರಗಳನ್ನುಪಯೋಗಿಸಿಕೊಂಡು ಕಾಣಿಸಿಕೊಳ್ಳುತ್ತಾನೆ! ಅವನು ಬಚ್ಚಿಟ್ಟಿರುವುದನ್ನು ಮನುಷ್ಯ ಈ ರೀತಿ ಬಿಚ್ಚಿಟ್ಟು ಜಗಳ ಕಾದರೆ ಆತ ಮತ್ತೂ ಇಕ್ಕಟ್ಟಾಗಿ ಕಾಣುತ್ತಾನೆ. ಉದಾಹರಣೆಗೆ, ಮನುಷ್ಯ ಕಾಣಿಸಿಕೊಂಡ ಗಾಳಿಯೊಳಗೇನಿದೆ ಎಂಬ ಪ್ರಶ್ನೆ ಉದ್ಭವವಾದಾಗ ಒಳಗೆ ಆಮ್ಲಜನಕ, ಜಲಜನಕ, ಸಾರಜನಕ ಮುಂತಾದ ಧಾತುಗಳಿವೆ ಎಂದುತ್ತರಿಸಿದರೆ, ಮತ್ತದರೊಳಗೇನಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಚಂದ್ರಿಕೆ(Nucleus), ನ್ಯೂಟ್ರಾನ್, ಪ್ರೋಟಾನ್, ಇಲೆಕ್ಟ್ರೋನ್ ಮುಂತಾದವುಗಳಿವೆ ಎಂದುತ್ತರಿಸಿದರೂ ಅವುಗಳೊಳಗೇನಿದೆ ಎಂಬ ಪ್ರಶ್ನೆ ಸೃಜಿಸುತ್ತದೆ. ಹೀಗೇ ಪ್ರಶ್ನೆಗೆ ಪ್ರಶ್ನೆ, ಕಾರಣಕ್ಕೆ ಕಾರಣಗಳು ಹುಟ್ಟುತ್ತವೆ. ಬಿಚ್ಚಿಡುವ ಕಾರ್ಯ ವೃದ್ಧಿಸಿದಂತೆ, ಬಚ್ಚಿಡುವ ವಿಚಾರಗಳು ಹೆಚ್ಚಾಗುತ್ತಲೇ ಸಾಗುತ್ತವೆ. ವಿಜ್ಞಾನದಲ್ಲಿ ‘ಮಹಾಸ್ಫೋಟ ಸಿದ್ಧಾಂತ’ವೆಂದಿದೆ. ಇಷ್ಟು ದೊಡ್ಡ ಪ್ರಪಂಚ ಹಿಂದೆ ಕೇವಲ ಇಲೆಕ್ಟ್ರೋನ್, ಪ್ರೋಟೋನ್, ನ್ಯೂಟ್ರಾನ್ ಗಳ ಮುದ್ದೆಯಾಗಿತ್ತು. ಈ ಮುದ್ದೆಯೊಳಗಿದ್ದ ಕಣಗಳು ಸುತ್ತುತ್ತ ಸುತ್ತುತ್ತ ವೇಗ ಹೆಚ್ಚಿಸಿಕೊಂಡು ಒಂದಕ್ಕೊಂದು ಘರ್ಷಿಸಿ ಸಿಡಿದು ಚೂರು ಚೂರಾಗಿ ಇಂದಿನ ವಿಶ್ವವೆಂಬ ಒಂದು ವ್ಯವಸ್ಥೆಯಾಯಿತು, ಅದು ಇಂದಿಗೂ ಚದುರಿ ಹಿಗ್ಗುತ್ತಿದೆ ಎಂದು ಆ ಸಿದ್ಧಾಂತ ಪ್ರತಿಪಾದಿಸುತ್ತದೆ. ಇಷ್ಟೆಲ್ಲಾ ಭೇದಿಸಿದ ಸಿದ್ಧಾಂತಕ್ಕೆ ಅನೇಕ ಉತ್ತರಿಸಲಾಗದ ಪ್ರಶ್ನೆಗಳೂ ಸುತ್ತಿಕೊಳ್ಳುತ್ತವೆ. ಹೀಗೆ ಇನ್ನೂ ಚದುರುತ್ತಿರುವ ನಿಂತ ನೀರಲ್ಲದ ವಿಶ್ವದೊಳಗಿನ ತಾರಾಮಂಡಲಗಳು ಸಾಗುತ್ತಿರುವುದಾದರೂ ಎಲ್ಲಿಗೆ? ಅಷ್ಟು ವೇಗವಾಗಿ ಸಿಡಿದ ಕಣಗಳ ಮುದ್ದೆಯ ವೇಗವನ್ನು ತಗ್ಗಿಸಿದ ಅಥವಾ ಗುದ್ದಿಕೊಂಡ ಕಾಣದ ಕವಚ ಯಾವುದು? ಜೊತೆಗೆ ಆ ಮುದ್ದೆಯನ್ನು ತನ್ನೊಳಡಗಿಸಿಟ್ಟುಕೊಂಡಿದ್ದ ನಿರ್ವಾತ ಪ್ರದೇಶವಾದರೂ ಏನು? ಅದೆಲ್ಲಿತ್ತು? ಅದರ ಉಗಮವಾದುದ್ದಾದರೂ ಹೇಗೆ? ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಹುಡುಕಿದರೂ, ಆ ಉತ್ತರ ಮತ್ತೆ ಪ್ರಶ್ನೆಯಾಗಿಯೇ ಉಳಿಯುತ್ತದೆ. ಒಂದು ಜೀವೋಗಮಕ್ಕೆ ಎರಡು ಚೈತನ್ಯಗಳು ಕೂಡಬೇಕು ಎಂಬುದನ್ನು ನಾವು ಪ್ರತಿಪಾದಿಸಬಹುದೇ ವಿನ: ಇಷ್ಟೆಲ್ಲಾ ಮಾತನಾಡುವ, ಓಡಾಡುವ, ನಗುವ, ಅಳುವ ಜೀವವೆಂದರೆ ಏನು? ಎಲ್ಲಿತ್ತು? ಸತ್ತ ನಂತರ ಇಷ್ಟು ದಿನ ಕುಣಿದಾಡಿಕೊಂಡಿದ್ದ ಆ ಜೀವ ಸೇರಿದ್ದಾದರೂ ಎಲ್ಲಿಗೆ? ಅಸಲಿಯಾಗಿ ಸಾವೆಂದರೆ ಏನು? ಸಾಯುವುದೇ ಗುರಿಯಾದರೆ ಹುಟ್ಟಿದ್ದಾದರೂ ಯಾಕೆ? ಎಂಬ ಪ್ರಶ್ನೆಗಳು ಸಮಂಜಸವೆನಿಸಿದರೂ ಉತ್ತರ ಸಿಗದೆ ಅಸಮಂಜಸವೆನಿಸಿಕೊಳ್ಳುತ್ತವೆ. ದೇವಕಣವೂ ಕೂಡ ಹಾಗೆಯೇ. ನಾವು ಕಂಡುಕೊಂಡೆವೆಂಬ ಖುಷಿಯಿಂದ ಕುಣಿದಾಡಿದ ವಿಜ್ಞಾನ, ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಳ್ಳುವ ಧರ್ಮಗಳು ಆ ದೇವಕಣದೊಳಗೇನಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗಿದೆ.

ಮುಂದಿನ ಪ್ರಶ್ನೆಯೇನೆಂದರೆ, ಈ ನಿಗೂಢತೆಯನ್ನು ಭೇದಿಸುವ ವಿಜ್ಞಾನ ಎಷ್ಟು ಪರಿಶುದ್ಧವಾಗಿದೆ? ಅದೇ ಅನೇಕ ತಪ್ಪುಗಳಿಂದ ಕೂಡಿದ್ದರೆ ಭೇದಿಸಲಿಚ್ಚಿಸುವ ವಿಚಾರಗಳಲ್ಲಿ ಕಲ್ಪನೆಗಳು ಸಾದೃಶವಾಗುವುದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೌದು, ಈ ನಿಟ್ಟಿನಲ್ಲಿಯೋ ಏನೋ, ವಿಜ್ಞಾನದಲ್ಲಿಯೂ ಶುದ್ಧತೆ ಕಾಯ್ದುಕೊಳ್ಳುತ್ತಾ ಬಂದಿರುವುದು ತುಂಬಾ ಸೂಕ್ಷ್ಮಗಣ್ಣುಗಳಿಂದ, ಶಾಂತ ಮತ್ತು ಸಮಾನಚಿತ್ತರಾಗಿ ಗಮನಿಸಿದರೆ ಗೋಚರಿಸಿಕೊಳ್ಳುತ್ತದೆ.

ಗಣಿತ ಮೇಷ್ಟ್ರಾದ ನನಗೆ ಅನೇಕ ಕಡೆ ಇದಿರಾಗಿರುವ ಒಂದು ಪ್ರಶ್ನೆಯೆಂದರೆ ಸೊನ್ನೆಯನ್ನು ಸೊನ್ನೆಯಿಂದ ಭಾಗಿಸಿದಾಗ ಬರುವ ಉತ್ತರ ಏನು ಎಂಬುದು. ಮೂಲ ಗಣಿತದ ಪ್ರಕಾರ 0/0 ಬೆಲೆಯನ್ನು ಉಲ್ಲೇಖಿಸಲ್ಪಟ್ಟಿಲ್ಲ(Not defined) ಎನ್ನುವುದಕ್ಕಿಂತ ಉಲ್ಲೇಖಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರೆ ಚೆನ್ನ.

ಉಲ್ಲೇಖಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ 0/0 ಬೆಲೆಯನ್ನು ‘ಗೊತ್ತಿಲ್ಲ’ವೆಂದೇ ಗಣಿತದಲ್ಲಿ ಪರಿಗಣಿಸಲ್ಪಡಲಾಗುತ್ತದೆ ಎಂದಾಗ ಮತ್ತಷ್ಟು ಪ್ರಶ್ನೆಗಳು ಇದಿರಾಗುತ್ತವೆ. 2/2 = 1, 3/3 = 1, 100/100 = 1, 237/237 = 1... ಹೀಗೆ ಪ್ರತಿ ಸಂಖ್ಯೆಯನ್ನು ಅದೇ ಸಂಖ್ಯೆಯಿಂದ ಭಾಗಿಸಿದಾಗ ಉತ್ತರ ಸಂಖ್ಯೆ ‘1’ ಆಗುವಾಗ, 0/0 ಬೆಲೆಯನ್ನು ಗೊತ್ತಿಲ್ಲ ಎಂದು ಯುಗ ಯುಗಗಳಿಗೆ ಸಾರುವ ಬದಲು ಸಂಖ್ಯೆ ‘1’ ಎಂದು ಹೇಳಬಹುದಲ್ಲವೇ? ಎಂಬ ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ‘ಗೊತ್ತಿಲ್ಲ’ ಎಂದು ಸುಮ್ಮನಿರುವ ಬದಲು ‘ಏನಾದರೂ’ ಹೇಳುವುದು ಚಂದ ಎಂಬ ಸಬೂಬಿನೊಂದಿಗೆ ಆ ಪ್ರಶ್ನೆ ಇದಿರಾಗುತ್ತದೆ. Something is better than nothing ಎನ್ನುವಂತೆ.

ಹಾಗೇಯೇ ಆಗಲಿ,  0/0ಯ ಬೆಲೆ 1 ಎಂದೇ ಇಟ್ಟುಕೊಳ್ಳೋಣ. ಆಗ ಆಗುವ ಅನೇಕ ಅನಾಹುತಗಳಲ್ಲಿ ಒಂದನ್ನು ಉಲ್ಲೇಖಿಸಲಿಚ್ಚಿಸುತ್ತೇನೆ.

2 x 0 = 3 x 0

ಎರಡೂ ಕಡೆಯನ್ನು ಸೊನ್ನೆಯಿಂದ ಭಾಗಿಸಿದರೆ ಹೀಗಾಗುತ್ತದೆ,

2 x 0/0 = 3 x 0/0

2 x 1 = 3 x 1

2 = 3

2 = 3 ಆದಾಗ ಆಗುವುದಾದರೂ ಏನು? ಅದರ ಪಾಡಿಗೆ ಅದಿರಲಿ ಬಿಡಿ. ಯುಗ ಯುಗಳೇ ಒಪ್ಪಿಕೊಂಡಿರುವ ಅನೇಕ ಎಡವಟ್ಟುಗಳಿರುವಾಗ ಇದೇನು ದೊಡ್ಡ ವಿಚಾರವೇ ಅಲ್ಲ ಎಂದು ಅನೇಕರು ವಾದಿಸುತ್ತಾರೆ.

ತಮಾಷೆಗೆ ಹೇಳುವುದಾದರೆ 2 = 3 ಎಂಬುದನ್ನು ಒಪ್ಪಿಕೊಂಡರೆ 2ಕೋಟಿ = 3ಕೋಟಿ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಾವು ಯಾರ ಬಳಿಯಾದರೂ 3 ಕೋಟಿ ಸಾಲ ಪಡೆದುಕೊಂಡು ಹಿಂದಿರುಗಿ ಕೇವಲ 2 ಕೋಟಿ ಕೊಡಬಹುದು. ನಮಗಿಂತಲೂ ಅವರು ಬುದ್ಧಿವಂತರಾದರೆ 3 = 10 ಎಂದು ಸಾಧಿಸಿಕೊಂಡು ನಮ್ಮನ್ನು ಪೇಚಿಗೆ ಸಿಕ್ಕಿಸಬಹುದು. ಈ ವಿಚಾರವನ್ನು ನಾನು ತಮಾಷೆಯಾಗಿ ಮಂಡಿಸಿದರೂ ಎಲ್ಲೋ ಒಂದು ಕಡೆ ಗಹನವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಜ್ಞಾನವಿರುವ ಮನುಷ್ಯ ಈ ರೀತಿ ಮಾಡಲಾರ ಎಂದು ಒಪ್ಪಿಕೊಂಡರೂ ಅನೇಕ ವರ್ಷಗಳ ಕಾಲ ಆ ಒಂದು ವಿಚಾರವನ್ನು ನಾವು ಕಾಯ್ದುಕೊಳ್ಳಬೇಕೆಂದರೆ ಅದನ್ನು ಕಡತಗಳಲ್ಲಿ ಕೂಡಿಡುತ್ತೇವೆ. ಮನೆಯ ಪಡಸಾಲೆಯಲ್ಲಿ ಕುಳಿತು ಮಾತನಾಡುವಾಗ ತೊಂದರೆಯಾಗದಿದ್ದರೂ ಮುಂದಿನ ಪೀಳಿಗೆಗೆ ವಿಚಾರಗಳು ದಾಖಲೆ ರೂಪದಲ್ಲಿ ವ್ಯಕ್ತವಾಗುವಾಗ, ಕೂಡುವ ಕಳೆಯುವ ಲೆಕ್ಕಗಳ ಮೂಲಕ ವ್ಯವಹಾರಗಳನ್ನು ವರ್ಗಿಸುವಾಗ ತೊಂದರೆ ಆಗೇ ಆಗುತ್ತದೆ

ಜೊತೆಗೆ ಇಂದಿನ ಕಾಲದಲ್ಲಂತು, ಪ್ರತಿಯೊಂದೂ ಕೆಲಸಕ್ಕೂ ಯಂತ್ರಗಳನ್ನು ಅವಲಂಬಿಸುತ್ತೇವೆ. ಅಗೆಯುವ, ಬಗೆಯುವ, ತೂಕದ ವಸ್ತುಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಯಂತ್ರಗಳಿಗೆ ತಂತ್ರಾಂಶ(Software) ಬೇಡವಾದರೂ, ಈ ದೇಹದ ಪ್ರತಿ ಅಂಗದ ಚಲನವಲನಕ್ಕೆ ಹೇಗೆ ದೇಹದೊಳಗಿರುವ ಜೀವ ಮುಖ್ಯವೋ ಹಾಗೇ, ಕೆಲವು ಯಂತ್ರಗಳಿಗೆ ತಂತ್ರಾಂಶಗಳು ಬೇಕೇಬೇಕು. ಇಂತಹ ತಪ್ಪುಗಳನ್ನು ಕಡೆಗಣಿಸಿ ತಯಾರಾದ ವಿಜ್ಞಾನ ಅಥವಾ ಗಣಿತದಿಂದ ಉಸಿರಾಡಲ್ಪಡುವ ಈ ತಂತ್ರಾಂಶಗಳಿಂದ ಮಹಾನ್ ಎಡವಟ್ಟುಗಳಾಗಬಹುದು. ಮನುಷ್ಯನ ಸಾಮಾನ್ಯ ಜ್ಞಾನದಿಂದ ಈ ರೀತಿಯ ಎಡವಟ್ಟುಗಳಾಗದಿದ್ದರೂ, ಯೋಚಿಸುವ ಶಕ್ತಿಯಿಲ್ಲದ, ಪರಾವಂಲಂಬನೆಯಿಂದ ಪರಾಮರ್ಶಿಸುವ ಯಂತ್ರಗಳಿಗೆ ಸಾಮಾನ್ಯ ಜ್ಞಾನವಿರುವುದಿಲ್ಲ. ಈ ರೀತಿಯ ಎಡವಟ್ಟುಗಳಿದ್ದರೆ 1000 ರೂ ದಾಖಲಿಸಿದಾಗ ಎ.ಟಿ.ಎಂ 10000 (1000 = 10000 ಎಂದು ಸಾಧಿಸಿಕೊಳ್ಳಬಹುದು) ದಯಪಾಲಿಸಬಹುದು. ಹಣಕ್ಕಾಗಿ ಹಾತೊರೆಯುವ ಇಂದಿನ ಯುಗದಲ್ಲಿ ಆ ರೀತಿಯಾದರೆ ಪ್ರತಿಯೊಬ್ಬರೂ ಖುಷಿ ಪಡುವವರೇ! ಆದರೆ 1000 ಬದಲು 100 ರೂ ಬಂದುಬಿಟ್ಟರೆ ಬಾಯಿ ಬಡಿದುಕೊಳ್ಳುತ್ತಾರೆ. ಆ ಯಂತ್ರವನ್ನು ಕುಟ್ಟಿ ಪುಡಿ ಪುಡಿ ಮಾಡಿಬಿಡಬಹುದು, ಪ್ರತಿಭಟನೆ, ಅಮಾನತ್ತು ಹೀಗೆ ಬೇಡದ್ದೆಲ್ಲಾ ನಡೆಯುತ್ತವೆ. ಸಮಾಜದ ಸ್ವಾಸ್ಥ್ಯ ಕೆಡುತ್ತದೆ!

ಆಧುನಿಕ ವಿಜ್ಞಾನದಲ್ಲಿ ಯಾವುದೇ ಅಂಶವಿರಲಿ, ಮೊದಲು ತಾರ್ಕಿಕವಾಗಿ ಸಾಧಿಸಿಕೊಳ್ಳಬೇಕು, ನಂತರ ಅದನ್ನು ಪ್ರಾಯೋಗಿಕವಾಗಿ ಸಾಧಿಸಿಕೊಂಡಾಗ ಮಾತ್ರ ಅದನ್ನು ಸಾರ್ವತ್ರಿಕ ಅಂಶವೆಂದು ಬಿಂಬಿಸಿಕೊಳ್ಳುತ್ತೇವೆ. ತಾರ್ಕಿಕವಾಗಿ ಮೊದಲು ಸಾಧಿಸಿಕೊಳ್ಳದ ಅಂಶಗಳನ್ನು ಒಪ್ಪಿಕೊಂಡಾಗ ಮತ್ತೆ ಎಡವಟ್ಟುಗಳಾಗಬಹುದು. 2 x 2 = 2 + 2 ಎಂಬುದನ್ನು ಗಮನಿಸಿ axa = a+a ಎಂಬ ಒಂದಂಶವನ್ನು ತಾರ್ಕಿಕ ನೆಲೆಗಟ್ಟಿನಲ್ಲಿ ಸಾಧಿಸಿಕೊಳ್ಳದೆ ಕೇವಲ ಈ ಉದಾಹರಣೆಯ ಮೂಲಕ ಪ್ರಾಯೋಗಿಕವಾಗಿ ಸಾಧಿಸಿಕೊಂಡರೆ ಎಡವಟ್ಟಾಗೇ ಆಗುತ್ತದೆ. ಈ ಅಂಶವನ್ನು ಯಾವುದಾದರೂ ಯಂತ್ರದ ತಂತ್ರಾಂಶಕ್ಕೆ ತುಂಬಿಬಿಟ್ಟಾಗ ಏನನ್ನೂ ಆಲೋಚಿಸದ ಆ ತಂತ್ರಾಂಶ 3 x 3 = 3 +3 ( 9 = 6 ) ಎಂದು ಪರಿಗಣಿಸಿ ಅದರಿಂದಾಗುವ ಉಪಯೋಗಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಗೋಚರಿಸಬಹುದು. ಆದುದರಿಂದ ತಾರ್ಕಿಕ ನೆಲೆಗಟ್ಟಿನಲ್ಲಿ ಸಾಧಿಸಿಕೊಂಡ ಅಂಶಗಳು ಎಂದಿಗೂ ಪ್ರಾಯೋಗಿಕವಾಗಿ ವಿಫಲವಾಗುವುದಿಲ್ಲ. ಈ ಯುಗದ ಅಚ್ಚರಿಗಳಲ್ಲೊಂದಾದ E = mc2 ಸೂತ್ರವನ್ನು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಮೊದಲು ತಾರ್ಕಿಕವಾಗಿಯೇ ಸಾಧಿಸಿಕೊಂಡಿದ್ದು. ರಾಶಿ(mass)ಯನ್ನು ಶಕ್ತಿ(Energy)ಯಾಗಿ ಪರಿವರ್ತಿಸಬಹುದು ಎಂದು ತೋರಿಸಿಕೊಟ್ಟ ಈ ಸೂತ್ರದಿಂದ ಪ್ರಾಯೋಗಿಕವಾಗಿ ಆದಂತಹ ಉಪಯೋಗ ಮತ್ತು ನಷ್ಟ ಹೇಳತೀರದು. ತಾರ್ಕಿಕವಾಗಿ ಸಾಧಿಸಿಕೊಂಡ ಅಂಶಗಳು, ಪ್ರಾಯೋಗಿಕವಾಗಿ ಯಾವುದೇ ಅಡೆತಡೆಯಿಲ್ಲದೇ, ಅನಾಹುತಗಳಿಲ್ಲದೇ, ಅಷ್ಟೇ ಸ್ಪಷ್ಟವಾಗಿ ಮೂಡಿಬರಬೇಕೆಂದರೆ ತಾರ್ಕಿಕ ಸಾಧನೆಗೆ ಬಳಸಿಕೊಳ್ಳುವ ವಿಜ್ಞಾನ ಅಥವಾ ಗಣಿತ ಸರಿಯಿರಬೇಕು. ಈ ರೀತಿಯಾಗಿ 0/0 = 1 ಎಂದು ಊಹಿಸಿಕೊಂಡು ಕೈ ತೊಳೆದುಕೊಂಡುಬಿಟ್ಟರೆ, ಆ ವಿಜ್ಞಾನ ಅಥವಾ ಗಣಿತದಲ್ಲಿನ ಈ ರೀತಿಯ ತಪ್ಪುಗಳು ಬೇಲಿ ಮೇಲಿನ ಓತಿಕ್ಯಾತನಂತೆ ಕಂಡೂ ಕಾಣದಂತೆ ಇಣುಕುತ್ತಿರುತ್ತವೆ. ನಾವು ತಾರ್ಕಿಕವಾಗಿ ಸಾಧಿಸಲು ಪ್ರಯತ್ನಿಸುವ ಅನೇಕ ಅಂಶಗಳಿಗೆ ಈ ತಪ್ಪುಗಳು ಮಿಶ್ರಗೊಂಡು ಮತ್ತೊಂದು ತಪ್ಪು ಉದ್ಭವಿಸಬಹುದು. ಪ್ರಾಯೋಗಿಕವಾಗಿ ಏನೋ ಆಗಿ ಎಡವಟ್ಟಾಗಬಹುದು. ಒಬ್ಬ ವಿಜ್ಞಾನಿಯ ಸಂಶೋಧನೆಯ ಜಾಡಿನಲ್ಲಿ ಸಾಗಿ ಮತ್ತೊಬ್ಬ ವಿಜ್ಞಾನಿ ಮತ್ತೇನನ್ನೋ ಸಾಧಿಸುವುದು ಸಾಮಾನ್ಯವಾಗಿರುವಾಗ, ಆ ತಪ್ಪುಗಳು ಒಂದು ಸಂಶೋಧನೆಯಿಂದ ಮತ್ತೊಂದು ಸಂಶೋಧನೆಗೆ ಸಾಗಬಹುದು. ಹೀಗೆ ತಪ್ಪಿಂದ ಮತ್ತಷ್ಟು ತಪ್ಪುಗಳು ಉದ್ಭವಿಸಬಹುದು. ಅದೇನು ಮಹಾ? ಸಣ್ಣ ತಪ್ಪಲ್ಲವೇ? ಎಂದು ಕಡೆಗಣಿಸಿದರೆ ಇನ್ನು 200 ಅಥವಾ 300 ವರ್ಷಗಳ ನಂತರ ಒಟ್ಟು ವಿಜ್ಞಾನವೇ ನೆಲ ಕಚ್ಚಬಹುದು! ಆಗ ವಿಜ್ಞಾನವನ್ನು, ಗಣಿತವನ್ನು, ಗಣಿತದ ಮೂಲವಾದ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಇತ್ಯಾದಿಯನ್ನು ಮತ್ತೆ ಹೊಸದಾಗಿ ಬರೆಯಬೇಕಾಗುತ್ತದೆ. ಆ ಸಮಯದಲ್ಲಿ ಬದುಕಿರುವ ಎಲ್ಲರನ್ನೂ ಮತ್ತೆ ಎಲ್.ಕೆ.ಜಿಯಿಂದ ಓದಿಸಬೇಕಾಗುತ್ತದೆ! ಅಲ್ಲಿಯವರೆವಿಗೂ ಅವರು ಕಲಿತಿದ್ದು ಕೇವಲ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ. 0/0ನ ಬೆಲೆ ಏನೇ ತೆಗೆದುಕೊಂಡರೂ ಎಡವಟ್ಟಾವುದರಿಂದ, ಏನಾದರೂ ಬೆಲೆ ನೀಡಿ ಇಡೀ ವಿಜ್ಞಾನ ವ್ಯವಸ್ಥೆಯನ್ನೇ ಹಾಳು ಮಾಡುವ ಬದಲು ‘ಗೊತ್ತಿಲ್ಲ’(Not defined) ಎಂದು ನುಣುಚಿಕೊಳ್ಳುವುದೇ ಉತ್ತಮ. ಅದೆಷ್ಟೇ ಯುಗಗಳು ಅಳಿಯಲಿ, ಉಳಿಯಲಿ, ಮರಳಲಿ, 0/0 ಎಂಬ ಅಂಶವನ್ನೆಲ್ಲಾದರೂ ಕಂಡರೆ ‘ಗೊತ್ತಿಲ್ಲ’ವೆಂದು ಬಿಟ್ಟುಬಿಡಬೇಕು. 0/0 ಒಂದು ಉದಾಹರಣೆಯಷ್ಟೇ, ವಿಜ್ಞಾನ ಅಥವಾ ಗಣಿತದಲ್ಲಿ ಈ ರೀತಿಯಾಗಿ ಗೊತ್ತಿಲ್ಲ ಎಂದು ಬಿಟ್ಟಿರುವ ವಿಚಾರಗಳು ಇನ್ನೂ ಅನೇಕ ಇವೆ. ಈ ರೀತಿಯಾಗಿ ವಿಜ್ಞಾನವನ್ನು ಶುದ್ಧಿಕರಿಸಿರುವುದರಿಂದ ಯಾವುದೇ ವಿಚಾರವಾಗಿಯಾದರೂ ಧೈರ್ಯವಾಗಿ ಸಂಶೋಧನೆಗಳ ಹಾದಿಗೆ ವಿಜ್ಞಾನವನ್ನೆಳೆದುಕೊಂಡು ಬಂದು ಜಗಳ ಆಡಬಹುದು...

 

ಈ ಕೊಂಡಿಯೊಂದಿಗೆ ಗಲ್ಫ್ ಕನ್ನಡಿಗ ಎಂಬ ಪತ್ರಿಕೆಯಲ್ಲಿಯೂ ಈ ಲೇಖನವನ್ನು ದಯವಿಟ್ಟು ಅನುಸರಿಸಿ...

http://gulfkannadiga.com/news/culture/9787.html

 

Comments

Submitted by lpitnal@gmail.com Tue, 10/16/2012 - 08:20

ಮೋಹನ ಕೊಳ್ಳೇಗಾಲ ರವರೇ, ಉತ್ತಮ ಸುದೀರ್ಘ ಲೇಖನ. ಹೊಸ ಹೊಸ ವಿಷಯಗಳನ್ನು ಹೀಗೆ ಚರ್ಚಿಸುವುದರಿಂದ ನಮಗೂ ಒಂದಿಷ್ಟು ವೈಜ್ಞಾನಿಕ ಸಂಗತಿಗಳು ಅನಾವರಣಗೊಳ್ಳುತ್ತವೆ. ಹೊಸ ಹೊಸ ವಿಚಾರಧಾರೆಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
Submitted by Mohan V Kollegal Wed, 10/17/2012 - 20:22

ಜೀ... ನಮಸ್ತೆ... ಮೊದಲು ಅದನ್ನು ಗಾಡ್ ಡ್ಯಾಮ್ ಪಾರ್ಟಿಕಲ್ ಎಂದೇ ಮೊದಲು ಲೆಡರ್ ಮ್ಯಾನ್ ಎಂಬ ನೊಬೆಲ್ ಪ್ರಶಸ್ತಿ ವಿಜೇತ ಕರೆದಿದ್ದು, ನಂತರ ಆ ವಿಜ್ಞಾನಿಯ ಪುಸ್ತಕವನ್ನು ಮುದ್ರಿಸುವಾಗ ಪ್ರಕಾಶಕರು ಇಟ್ಟ ಹೆಸರು ಗಾಡ್ ಪಾರ್ಟಿಕಲ್ ಅಥವಾ ದೇವಕಣವೆಂದು. ಆದರೆ ಇಲ್ಲಿ ದೇವಕಣ ಎಂಬ ಹೆಸರನ್ನು ವಿಜ್ಞಾನ ಸುಮ್ಮನೇ ಅನುಮತಿಸಿದ್ದನ್ನು ನಂತರ ದೈವತ್ವಕ್ಕೆ ತಿರುಗಿಸಿಕೊಂಡದ್ದನ್ನು ಹೇಳಿದ್ದೇನೆ. ದೇವರಿಗೂ ದೇವಕಣಕ್ಕೂ ಸಂಬಂಧವಿಲ್ಲವೆಂಬುದನ್ನು ಉಲ್ಲೇಖಿಸಿದ್ದೇನೆ. ಜೊತೆಗೆ, ನನ್ನ ಲೇಖನಕ್ಕೆ ಪೂರಕವಾಗಲಿ ಎಂಬ ಉದ್ದೇಶದಿಂದ ದೇವಕಣದ ವಿಚಾರವನ್ನು ಪೀಠಿಕೆಯಾಗಿ ಆರಿಸಿಕೊಂಡಿದ್ದೇನೆ... ಮುಂದುವರೆದಂತೆ ಈ ಲೇಖನದ ವಿಚಾರ ದೇವಕಣದ ಬಗ್ಗೆ ಮಾತನಾಡುವುದಲ್ಲ, ಬದಲಾಗಿ ಆ ರೀತಿಯ ಒಂದು ಕಣವೇ ಸಿಗದೇನೋ, ಅದನ್ನು ಹೇಗೆ ಸಾಕ್ಷೀಕರಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾತನಾಡಿದ್ದೇನೆ... ಪ್ರತಿಕ್ರಿಯೆಗೆ ಧನ್ಯವಾದಗಳು... ಸಸ್ನೇಹದೊಂದಿಗೆ... :)
Submitted by RAMAMOHANA Fri, 10/19/2012 - 15:08

ಉತ್ತಮ‌ ಆರೋಗ್ಯಯುಕ್ತ ತರ್ಕ‌. ಎಲ್ಲದಕ್ಕೂ ಕೊನೆಗೆ ಉತ್ತರ‌ ಮೌನ‌. ಎಲ್ಲವೂ ಇದ್ದಹಾಗೇ ಇದೆ. ಆದರೆ ಇದ್ದದನ್ನು ನಾವು ಹೊಸದಾಗಿ ಕ0ಡು ಹಿಡೆದೆವೆ0ದು ಸ0ತೋಷ‌ ಪಡುತ್ತೇವೆ ಅಷ್ಟೆ. ತಮ್ಮ ಉತ್ತಮ‌ ಲೇಖನಕ್ಕೆ ಧನ್ಯವಾದಗಳು ಮತ್ತು ಅಭಿನ0ದನೆಗಳು ಮೋಹನ್ ಅವರೆ. ರಾಮೋ.