ಮುತ್ತಜ್ಜಿಯ ಪಾಕಶಾಲೆ

ಮುತ್ತಜ್ಜಿಯ ಪಾಕಶಾಲೆ

ಪುಸ್ತಕದ ಲೇಖಕ/ಕವಿಯ ಹೆಸರು
ಸರಸ್ವತಮ್ಮ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೮೦.೦೦, ಮುದ್ರಣ: ೨೦೨೧

‘ಮುತ್ತಜ್ಜಿಯ ಪಾಕಶಾಲೆ’ ಪುಸ್ತಕದ ಹೆಸರೇ ಹೇಳುವಂತೆ ಇದೊಂದು ಪಾಕ ಸಲಹೆಯ ಪುಸ್ತಕ. ಸುಮಾರು ೬೦ ವರ್ಷಗಳ ಹಿಂದೆ ನಮ್ಮ ಅಜ್ಜಿ, ಮುತ್ತಜ್ಜಿಯವರು ತಯಾರು ಮಾಡುತ್ತಿದ್ದ ವಿವಿಧ ಬಗೆಯ, ಅಪರೂಪದ ಅಡುಗೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಪುಸ್ತಕದಲ್ಲಿನ ಪಾಕಗಳನ್ನು ತಯಾರಿಸಿದ್ದು ಎಲ್ಲರ ಪ್ರಿಯರ ‘ಕೋಲಾರಜ್ಜಿ' ಸರಸ್ವತಮ್ಮ. ಸರಸ್ವತಮ್ಮನವರು ಹುಟ್ಟಿದ್ದು ತಮಿಳುನಾಡಿನ ಕೃಷ್ಣಗಿರಿಯಲ್ಲಿ. ೧೯೧೫ ಡಿಸೆಂಬರ್ ೨೦ರಂದು. ತನ್ನ ಹದಿಮೂರನೆಯ ವಯಸ್ಸಿನಲ್ಲಿ ನಂದಿಗಿರಿ ರಾವ್ ಅವರನ್ನು ವಿವಾಹವಾಗಿ ಕೋಲಾರಕ್ಕೆ ಬಂದರು. ನಂದಿಗಿರಿ ರಾವ್ ಅವರು ಕೋಲಾರದಲ್ಲಿ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು. ಈ ದಂಪತಿಗಳಿಗೆ ಹತ್ತು ಜನ ಮಕ್ಕಳು. ಪತಿಗೆ ನೆಚ್ಚಿನ ಮಡದಿಯಾಗಿ, ಹೆತ್ತ ಮಕ್ಕಳ ಕಣ್ಮಣಿಯಾಗಿ, ಮೊಮ್ಮಕ್ಕಳ ಮುದ್ದಿನ ಕೋಲಾರಜ್ಜಿಯಾಗಿ ಕೂಡು ಕುಟುಂಬದಲ್ಲಿ ಸಂತೃಪ್ತಿಯ ಜೀವನ ಸಾಗಿಸಿದ ಸರಸ್ವತಮ್ಮನವರು ತನ್ನ ೮೧ನೆಯ ವಯಸ್ಸಿನಲ್ಲಿ  ೧೯೯೬ ಡಿಸೆಂಬರ್ ೨೭ರಂದು ನಿಧನ ಹೊಂದಿದರು. ತಮಿಳು ಮಾತೃಭಾಷೆಯಾಗಿದ್ದರೂ ಸರಸ್ವತಮ್ಮನವರು ತಮ್ಮ ಮಕ್ಕಳ ಕೈಯಲ್ಲಿ ಪಾಕಶಾಸ್ತ್ರದ ಕೃತಿಯನ್ನು ಕನ್ನಡದಲ್ಲಿ ಲಿಪಿಬದ್ಧಗೊಳಿಸಿದ್ದು ೫೬ ವರ್ಷಗಳ ಹಿಂದೆ. ಅದೀಗ “ಮುತ್ತಜ್ಜಿಯ ಪಾಕಶಾಲೆ"ಯಾಗಿ ನಿಮ್ಮ ಮುಂದಿವೆ. 

ಸರಸ್ವತಮ್ಮನ ಮಕ್ಕಳಲ್ಲಿ ಓರ್ವರಾದ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಸಿ.ಎನ್.ಅಶ್ವಥನಾರಾಯಣ ರಾವ್ ಇವರು ತಮ್ಮ ಬೆನ್ನುಡಿಯಲ್ಲಿ ಅಮ್ಮನನ್ನು ನೆನೆಸಿಕೊಂಡದ್ದು ಹೀಗೆ.."ನನ್ನ ತಾಯಿ ಸರಸ್ವತಮ್ಮನವರ ಹುಟ್ಟೂರು ತಮಿಳುನಾಡಿನ ಕೃಷ್ಣಗಿರಿ. ವಿದ್ಯಾಭ್ಯಾಸ ತಮಿಳಿನಲ್ಲಿ ಐದನೇ ತರಗತಿಯವರೆಗೆ ಮಾತ್ರ. ಆದರೆ ಅಪಾರವಾದ ಲೋಕಜ್ಞಾನವಿದ್ದು, ತಮಿಳಿನಲ್ಲೇ ವ್ಯವಹಾರ ಮಾಡಿ, ಎಲ್ಲಾ ಜವಾಬ್ದಾರಿಗಳನ್ನೂ ನಿರ್ವಹಿಸುತ್ತಿದ್ದರು. ಅವರ ವಿಶೇಷತೆ ಎಂದರೆ ಅವರು ಮಾಡುತ್ತಿದ್ದ ಅಡುಗೆ, ತಿಂಡಿಗಳು, ತಮಿಳುನಾಡಿನ ಆಡೆ, ಮೋರ್ ಕೊಳಂಬು, ಆವಿಯಲ್ ಮೊದಲಾದುವುಗಳ ಜೊತೆಗೆ ಕರ್ನಾಟಕದ ಅಡುಗೆ, ತಿಂಡಿಗಳು ಮತ್ತು ವಿಶೇಷವಾದ ಸಿಹಿತಿಂಡಿಗಳನ್ನು ಸಹಾ ಅತ್ಯಂತ ರುಚಿಕರವಾಗಿ ಮಾಡುತ್ತಿದ್ದರು. ಕೆಲಸದಲ್ಲಿ ಶೃದ್ಧೆ, ಕುಟುಂಬದ ಪ್ರತಿಯೊಬ್ಬರ ಮೇಲೂ ತುಂಬು ಪ್ರೀತಿ ಅವರ ಸಹಜ ಗುಣವಾಗಿತ್ತು. ಇದರಿಂದಲೇ ಅವರು ತಂದೆಯವರ ಜೊತೆಯಲ್ಲಿ ತಮ್ಮ ಹತ್ತು ಮಕ್ಕಳ ವಿದ್ಯಾಭ್ಯಾಸ, ವಿವಾಹಾದಿಗಳ ಗುರುತರ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿರ್ವಹಿಸಿದರು.

ಜೊತೆಗೆ ಅವರು ತಮಗೆ ತಿಳಿದಿದ್ದ ಪಾಕಕಲೆಯನ್ನು ಬೇರೆಯವರಿಂದ ಕನ್ನಡದಲ್ಲಿ ಬರೆದು ಸಂಗ್ರಹಿಸಿಟ್ಟಿದ್ದರು. ಆ ಬರವಣಿಗೆಯಲ್ಲಿ ನನ್ನ ಪಾಲೂ ಇದೆ. ಅದನ್ನು ಉಪಯೋಗಿಸಿಕೊಂಡು ನನ್ನ ಮೊಮ್ಮಗಳು, ಅಂದರೆ ಅವರ ಮರಿಮಗಳು ಚಿತ್ರಾ ಮತ್ತು ಅವಳ ಪತಿ ಶಶಾಂಕ್ ಉಪಯುಕ್ತವಾದ ಒಂದು ಕಿರುಹೊತ್ತಗೆಯನ್ನು ಪ್ರಕಟಿಸುತ್ತಿರುವುದು ಅತ್ಯಂತ ಸಂತೋಷದಾಯಕ ವಿಷಯ.”

ಕುಟುಂಬ ವರ್ಗದ ಹಾರೈಕೆಯಲ್ಲಿ ಕೋಲಾರಜ್ಜಿಯ ಪ್ರೀತಿಯ ಮಗಳು, ಮಗ, ಸೊಸೆ, ಮೊಮ್ಮಗಳು ಎಲ್ಲರೂ ತಮ್ಮ ಅಜ್ಜಿಯ ಕುರಿತು ಅವರ ಪಾಕ ಕಲೆಯ ಕುರಿತಾಗಿ ಬರೆದಿದ್ದಾರೆ. ‘ಊಟ ಎಂಬುದು ಮನುಷ್ಯನ ಹೃದಯಕ್ಕಿರುವ ಹತ್ತಿರದ ಮಾರ್ಗ' ಎಂಬ ಮಾತನ್ನು ಪ್ರಕಾಶಕರು ಹೇಳಿದ್ದಾರೆ. ಪುಸ್ತಕದಲ್ಲಿ ೩೮ ವಿಷಯಗಳ ಪರಿವಿಡಿಯಿದೆ. ವಿವಿಧ ಪಲ್ಯಗಳು, ಕೋಸಂಬರಿ, ಚಟ್ನಿ, ಗೊಜ್ಜುಗಳು, ಹುಳಿ, ಸಾರುಗಳು, ತೊವ್ವೆಗಳು, ತಂಬುಳಿ, ಅನ್ನದ ಐಟಂಗಳು, ಹಪ್ಪಳ - ಸಂಡಿಗೆ, ಉಪ್ಪಿನಕಾಯಿ, ಸಾಂಬಾರ್, ಅಡುಗೆ ಪುಡಿಗಳು, ದೋಸೆಗಳು, ಇಡ್ಲಿ, ರೊಟ್ಟಿಗಳು, ಕಡುಬುಗಳು, ಉಸಲಿ, ಉಪ್ಪಿಟ್ಟುಗಳು, ಕುರುಕಲು ತಿಂಡಿ, ಸಕ್ಕರೆ ಸಿಹಿತಿನಸುಗಳು, ಕಜ್ಜಾಯ, ಹಲ್ವ, ಹಾಲಿನ ಖಾದ್ಯಗಳು, ಹೋಳಿಗೆ, ಒಬ್ಬಟ್ಟುಗಳು, ಪೂಜಾ ಪ್ರಸಾದ ಹಾಗೂ ತರಹೇವಾರಿ ಪಾಯಸಗಳು ಮಾಡುವ ಹಳೆಯ ವಿಧಾನವನ್ನು ತಿಳಿಸಿದ್ದಾರೆ. 

ಅಡುಗೆಗಳಿಗೆ ಸೊಗಸಾದ ರೇಖಾಚಿತ್ರಗಳಿವೆ. ಶೈಲೇಶ್ ಕುಮಾರ್ ಉಜಿರೆ ಅಂದವಾದ ಮುಖಪುಟ ರಚಿಸಿದ್ದಾರೆ. ಈ ಪುಸ್ತಕ ಅಯೋಧ್ಯಾ ಪ್ರಕಾಶನದ ೧೫ನೇ ಕಾಣಿಕೆ.