ಮುದಿ ಕಪ್ಪು ಕುದುರೆ
ಹಳ್ಳಿಯ ಗಡಿಯಲ್ಲಿದ್ದ ಬಯಲಿನಲ್ಲಿ ಮುದಿ ಕಪ್ಪು ಕುದುರೆಯೊಂದು ವಾಸ ಮಾಡುತ್ತಿತ್ತು. ವಯಸ್ಸಾದ ಕಾರಣ ಅದಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಯಲಿನಲ್ಲಿದ್ದ ತಾಜಾ ಹುಲ್ಲನ್ನು ತಿನ್ನುತ್ತಾ, ತನ್ನ ಯೌವನದ ದಿನಗಳನ್ನು ನೆನೆಯುತ್ತಾ ಅದು ದಿನಗಳೆಯುತ್ತಿತ್ತು.
ಮುದಿ ಕಪ್ಪು ಕುದುರೆ ಒಂಟಿಯಾಗಿತ್ತು. ಅದರ ಗೆಳೆಯ ಕುದುರೆಗಳು ಬೇರೆಬೇರೆ ರೈತರ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದವು. ಪಕ್ಕದ ತೋಟದಲ್ಲಿ ಕುರಿಗಳಿದ್ದವು; ಆದರೆ ಕುರಿಗಳು ಬುದ್ಧಿಯಿಲ್ಲದ ಪ್ರಾಣಿಗಳೆಂದು ಮುದಿ ಕುದುರೆಯ ಅಭಿಪ್ರಾಯ. ಆ ಬಯಲಿನಲ್ಲೇ ಹಲವು ಮೊಲಗಳಿದ್ದವು; ಆದರೆ ಮುದಿ ಕುದುರೆಯನ್ನು ಕಂಡೊಡನೆ ಅವು ಓಟ ಕೀಳುತ್ತಿದ್ದವು.
"ನನ್ನೊಡನೆ ಮಾತಾಡಲು ಒಂದು ನಾಯಿಯಾದರೂ ಇಲ್ಲಿದ್ದರೆ ಚೆನ್ನಾಗಿತ್ತು” ಎಂದು ಯೋಚಿಸುತ್ತಿತ್ತು ಮುದಿ ಕಪ್ಪು ಕುದುರೆ. ಯಾಕೆಂದರೆ ಹಲವು ವರುಷಗಳ ಮುಂಚೆ ಕೆಲವು ಬುದ್ಧಿವಂತ ನಾಯಿಗಳು ಈ ಕುದುರೆಯ ಗೆಳೆಯರಾಗಿದ್ದವು. ಪಕ್ಕದ ರೈತನ ಮನೆಯಲ್ಲಿದ್ದ ನಾಯಿಗಳು ಅದೇಕೋ ಈ ಕುದುರೆಯೊಂದಿಗೆ ಸ್ನೇಹದಿಂದ ಇರಲಿಲ್ಲ.
ಬಯಲಿನ ಬದಿಯ ರಸ್ತೆಯ ಕೊನೆಯಲ್ಲಿದ್ದ ಮನೆಯಲ್ಲೊಬ್ಬ ಹುಡುಗನಿದ್ದ. ಅವನ ಹೆಸರು ತೇಜ. ಅವನು ಅವನ ಪ್ರಾಯಕ್ಕೆ ದಾಂಢಿಗನಾಗಿಯೇ ಬೆಳೆದಿದ್ದ. ಅವನು ರಸ್ತೆಯಲ್ಲಿ ನಡೆದು ಹೋಗುತ್ತಿದ್ದನಾದರೂ ಕುದುರೆಯಿಂದ ದೂರವೇ ಉಳಿದಿದ್ದ.
ತೇಜ ಯಾರೊಂದಿಗೂ ಗೆಳೆತನ ಬೆಳೆಸಿರಲಿಲ್ಲ. ತನ್ನದೇ ವಯಸ್ಸಿನ ಇತರ ಹುಡುಗರಿಗಿಂತ ತಾನು ದಾಂಢಿಗನೂ ಬಲಶಾಲಿಯೂ ಎಂದವನ್ನು ತಿಳಿದಿದ್ದ. ಹಾಗಾಗಿ ಇತರ ಹುಡುಗರನ್ನು ಸುಮ್ಮಸುಮ್ಮನೇ ಕೆಳಕ್ಕೆ ಬೀಳಿಸುವುದು, ಹೊಡೆಯುವುದು ಅವನ ದಿನನಿತ್ಯದ ಕೆಲಸ. ಇತರ ಹುಡುಗ ಮತ್ತು ಹುಡುಗಿಯರಿಗೆ ತೇಜ ಎಂದರೆ ಭಯ. ಇದರಿಂದಾಗಿ ತೇಜನಿಗೆ ಗರ್ವ. ತಾನು ಹತ್ತಿರ ಬಂದಾಗ ಅವರು ಓಡಿ ಹೋದರೆ ಅವನಿಗೆ ಖುಷಿ. ಅವನು ಪ್ರಾಣಿಗಳೊಂದಿಗೂ ಸ್ನೇಹದಿಂದ ಇರಲಿಲ್ಲ. ಪ್ರಾಣಿಗಳೂ ತನ್ನನ್ನು ಕಂಡರೆ ಹೆದರಬೇಕೆಂಬುದು ಅವನ ಯೋಚನೆ.
ಮುದಿ ಕಪ್ಪು ಕುದುರೆಗೂ ತೇಜನೆಂದರೆ ಭಯವಿತ್ತು. ಅವನನ್ನು ಕಂಡೊಡನೆ ಅದು ಬಯಲಿನ ಇನ್ನೊಂದು ತುದಿಗೆ ಓಡಿ ಹೋಗುತ್ತಿತ್ತು. ಯಾಕೆಂದರೆ ತೇಜ ಬಲವಾಗಿ ಕಲ್ಲು ಎಸೆಯುತ್ತಾನೆಂದು ಅದಕ್ಕೆ ತಿಳಿದಿತ್ತು. ಬೆಕ್ಕು ಮತ್ತು ನಾಯಿಗಳೂ ತೇಜನನ್ನು ಕಂಡ ಕೂಡಲೇ ದೂರ ಓಡಿ ಹೋಗುತ್ತಿದ್ದವು. ಯಾಕೆಂದರೆ ಅವನು ಬೆಕ್ಕುಗಳಿಗೆ ನೋವಾಗುವಂತೆ ಬಾಲ ತಿರುಚುತ್ತಿದ್ದ ಮತ್ತು ನಾಯಿಗಳ ಕುತ್ತಿಗೆಯನ್ನು ಉಸಿರುಗಟ್ಟುವಂತೆ ಅಮುಕುತ್ತಿದ್ದ.
ಅದೊಂದು ದಿನ ತೇಜನ ಬಳಿ ಅವನದೇ ನಾಯಿಯನ್ನು ಕಂಡು ಮುದಿ ಕಪ್ಪು ಕುದುರೆಗೆ ಅಚ್ಚರಿ! ಆ ದೊಡ್ಡ ನಾಯಿಮರಿಗೆ ದೊಡ್ಡ ಕಣ್ಣುಗಳು ಮತ್ತು ಖುಷಿಯಿಂದ ಅಲ್ಲಾಡುವ ಬಾಲ. ತೇಜನಿಗೆ ಅದನ್ನು ಯಾರೋ ಕೊಟ್ಟಿದ್ದರು. ಅದನ್ನು ಜಗತ್ತಿನ ಅತೀ ವಿಧೇಯ ನಾಯಿಯನ್ನಾಗಿ ಮಾಡಬೇಕೆಂಬುದು ತೇಜನ ಯೋಚನೆ.
“ನನ್ನ ನಾಯಿಮರಿ ನಾನು ಹೇಳಿದ ಹಾಗೆಯೇ ಕೇಳುತ್ತದೆ” ಎಂದು ತೇಜ ಇತರ ಮಕ್ಕಳೊಂದಿಗೆ ಜಂಭ ಕೊಚ್ಚಿಕೊಳ್ಳುತ್ತಿದ್ದ.
"ನಾನು ಬಾ ಎಂದಾಗ ಅದು ಬರುತ್ತದೆ; ಹೋಗು ಎಂದಾಗ ಹೋಗುತ್ತದೆ” ಎಂದು ಅವನು ಹೇಳುತ್ತಿದ್ದ. ಅವನಿಗೆ ನಾಯಿಯೊಂದಿಗೆ ಸ್ನೇಹ ಬೇಕಾಗಿರಲಿಲ್ಲ; ಅದು ಗುಲಾಮಿ-ನಾಯಿ ಆಗೋದೇ ಬೇಕಾಗಿತ್ತು.
ತಾನು ಹೇಳಿದಂತೆ ಮಾಡದಿದ್ದರೆ ಮುದ್ದು ನಾಯಿಗೆ ಚೆನ್ನಾಗಿ ಬಡಿಯುತ್ತಿದ್ದ ತೇಜ. ಅದಕ್ಕೆ ಯಾವಾಗಲೂ ಬಯ್ಯುತ್ತಿದ್ದ; ಒಮ್ಮೆಯೂ ಅದನ್ನು ಮುದ್ದು ಮಾಡುತ್ತಿರಲಿಲ್ಲ. ನಾಯಿಮರಿ ಬಾಲ ಅಲ್ಲಾಡಿಸುವುದನ್ನು ಮರೆತೇ ಬಿಟ್ಟಿತು. ಅದು ತೇಜನಿಗೆ ಬಹಳ ಹೆದರುತ್ತಿತ್ತು. ಚಟುವಟಿಕೆಯಿಂದ ಪುಟಿದಾಡುತ್ತಿದ್ದ ನಾಯಿಮರಿ ತೇಜ ಬಂದೊಡನೆ ನೆಲದಲ್ಲಿ ಮುದುಡಿ ಮಲಗಿ, ತನ್ನ ಬಾಲವನ್ನು ಹಿಂಗಾಲುಗಳ ಎಡೆಯಲ್ಲಿ ತುರುಕಿಕೊಳ್ಳುತ್ತಿತ್ತು.
ತೇಜ ನಾಯಿಮರಿಗೆ ಬಯಲಿನ ಬದಿಯ ರಸ್ತೆಯಲ್ಲಿ ಪಾಠ ಕಲಿಸುವ ಹೆಸರಿನಲ್ಲಿ ಯಾವಾಗಲೂ ಜಬರದಸ್ತು ಮಾಡುತ್ತಿದ್ದ. ಮುದಿ ಕಪ್ಪು ಕುದುರೆ ಅದನ್ನೆಲ್ಲ ನೋಡುತ್ತಿತ್ತು. ನಾಯಿಮರಿಯ ಬಗ್ಗೆ ಅದಕ್ಕೆ “ಪಾಪ" ಎನಿಸುತ್ತಿತ್ತು.
ಅದೊಂದು ದಿನ ತೇಜ ತನ್ನ ನಾಯಿಮರಿಯೊಂದಿಗೆ ರಸ್ತೆಯಲ್ಲಿ ನಡೆಯುತ್ತಿದ್ದಾಗ ಅವನ ಕ್ಲಾಸಿನ ಹರಿ, ಗಿರಿ ಮತ್ತು ಮುರಾರಿ ಎದುರಾದರು. "ನೋಡಿದಿರಾ ನನ್ನ ನಾಯಿ ಮರಿಯನ್ನು? ಅವನು ಆಟ ಆಡೋದನ್ನು ನೋಡುತ್ತೀರಾ?” ಕೇಳಿದ ತೇಜ.
ಮೂವರೂ ನೋಡುತ್ತಾ ನಿಂತರು. "ನನ್ನ ಕೋಲನ್ನು ಕೆರೆಗೆ ಬಿಸಾಡುತ್ತೇನೆ. ನೀನು ಹೋಗಿ ಅದನ್ನು ಅಲ್ಲಿಂದ ತಗೊಂಡು ಬಾ" ಎಂದು ತೇಜ ನಾಯಿ ಮರಿಗೆ ಹೇಳಿದ. ನಾಯಿಮರಿ ಕುಂಯ್‌ಗುಟ್ಟಿತು. ಅದು ಕೆರೆಯತ್ತ ನೋಡಿತು. ಅಲ್ಲಿ ಹಲವು ಬಾತುಕೋಳಿಗಳು ಇದ್ದವು. ತಮ್ಮ ರೆಕ್ಕೆ ಬಡಿದು ನೀರು ಸಿಡಿಸುವ ಬಾತುಕೋಳಿಗಳೆಂದರೆ ನಾಯಿಮರಿಗೆ ಕಿರಿಕಿರಿ.
ತೇಜ ತನ್ನ ಕೋಲನ್ನು ರೊಯ್ಯನೆ ಕೆರೆಗೆ ಎಸೆದ. “ಹೋಗು, ಕೋಲು ತಗೊಂಡು ಬಾ" ಎಂದು ತೇಜ ಕಿರುಚಿದ. ಆದರೆ ನಾಯಿಮರಿ ನೆಲದಲ್ಲಿ ಗಪ್ಪನೆ ಮಲಗಿತು. ಅದು ಎದ್ದೇಳಲೇ ಇಲ್ಲ. ಇತರ ಮೂವರೂ ಜೋರಾಗಿ ನಕ್ಕರು.
ತೇಜನಿಗೆ ಭಾರೀ ಸಿಟ್ಟು ಬಂತು - ಈ ನಾಯಿ ತನ್ನ ಮಾತು ಕೇಳುತ್ತಿಲ್ಲವಲ್ಲಾ ಎಂದು. ಅವನು ರೇಗಿದ “ಏನು, ನಾಯಿಕುನ್ನಿ, ನಾನು ಹೇಳಿದಂತೆ ನೀನು ಮಾಡೋದಿಲ್ಲವೇ? ನಿನಗೆ ಚೆನ್ನಾಗಿ ಏಟು ಬಾರಿಸುತ್ತೇನೆ.” ಇನ್ನೊಂದು ಕೋಲಿನಿಂದ ಅವನು ನಾಯಿಮರಿಗೆ ಜೋರಾಗಿ ಬಡಿದ; ಅದು ನೋವಿನಿಂದ ಮುಲುಗುಟ್ಟಿತು. “ನೀನು ಎಂತಹ ಕ್ರೂರಿ! ಹೊಡೆಯಬೇಡ” ಎಂದ ಮುರಾರಿ. “ಅದು ಪಾಪದ ನಾಯಿಮರಿ. ಅದಕ್ಕೆ ಹೊಡೆಯಬೇಡ” ಎಂದ ಹರಿ. “ಏನು? ನನ್ನ ನಾಯಿಮರಿಗೆ ಏನು ಮಾಡಬೇಕೆಂದು ನೀವು ನನಗೇ ಹೇಳ್ತೀರಾ? ಈಗ ನಿಮಗೆ ಎರಡೆರಡು ಏಟು ಬಾರಿಸುತ್ತೇನೆ” ಎಂದು ಕೂಗಾಡಿದ ತೇಜ.
ಮುದಿ ಕಪ್ಪು ಕುದುರೆ ಬಯಲಿನಲ್ಲಿ ನಿಂತು ಇದನ್ನೆಲ್ಲಾ ನೋಡುತ್ತಿತ್ತು. ಪುಟ್ಟ ನಾಯಿಮರಿ ನೋವಿನಿಂದ ಮುಲುಗುಟ್ಟುವುದನ್ನು ಅದಕ್ಕೆ ಸಹಿಸಲಾಗಲಿಲ್ಲ. ಅದು ಒಂದೇ ಜಿಗಿತಕ್ಕೆ ಬಯಲಿನ ಬೇಲಿ ಹಾರಿ ರಸ್ತೆಯಲ್ಲಿ ಮಕ್ಕಳಿದ್ದಲ್ಲಿಗೆ ಬಂತು. ಮಕ್ಕಳೆಲ್ಲರೂ ದೂರ ಸರಿದರು. ನಾಯಿಮರಿ ಪೊದೆಯೊಂದರ ಹಿಂದಕ್ಕೆ ಓಡಿತು.
ಈಗ ಕಪ್ಪು ಕುದುರೆ ತೇಜನಿದ್ದಲ್ಲಿಗೆ ಬಂತು. ಫಕ್ಕನೆ ಅದು ತೇಜನ ಹಿಂದಕ್ಕೆ ತಲೆ ಬಾಗಿಸಿ, ಅವನ ಫ್ಯಾಂಟಿನ ಬೆಲ್ಟನ್ನು ಕಚ್ಚಿ ಹಿಡಿದು, ಅವನನ್ನು ಮೇಲಕ್ಕೆತ್ತಿತು. ತೇಜ ಕೈಕಾಲು ಬಡಿಯುತ್ತಿದ್ದಂತೆ ಕುದುರೆ ಅವನನ್ನು ಅಲ್ಲಿದ್ದ ಮುಳ್ಳಿನ ಪೊದೆಯ ಮೇಲಕ್ಕೆ ಎಸೆಯಿತು! “ಅಯ್ಯೊಯ್ಯೋ! ಮುರಾರಿ, ನನ್ನನ್ನು ಬೇಗ ಇಲ್ಲಿಂದ ಹೊರಕ್ಕೆ ಎಳೆದುಕೋ” ಎಂದವನು ಚೀರಿದ.
ಅವನು ನಕ್ಕು ಬಿಟ್ಟ. ಇತರ ಇಬ್ಬರೂ ನಕ್ಕರು. ಮುರಾರಿ ಹೇಳಿದ, "ನಿನಗೆ ಒಳ್ಳೇ ಶಾಸ್ತಿ ಆಯಿತು, ತೇಜ. ನೀನು ಯಾವಾಗಲೂ ನಿನ್ನ ಬಲದಿಂದ ಚಿಕ್ಕವರಿಗೆ, ದುರ್ಬಲರಿಗೆ ನೋವು ಕೊಡುತ್ತಿ. ಈಗ ನಿನಗಿಂತ ಬಲಶಾಲಿ ನಿನಗೆ ಶಿಕ್ಷೆ ಕೊಟ್ಟಾಗ ಅನುಭವಿಸು.”
ಮುಳ್ಳಿನ ಪೊದೆಯಿಂದ ಒದ್ದಾಡುತ್ತಾ ಎದ್ದು ಬಂದ ತೇಜ ಸಿಟ್ಟಿನಿಂದ ಮುರಾರಿಗೆ ಹೊಡೆಯಲು ಮುನ್ನುಗ್ಗಿದ. ಅಲ್ಲೇ ನಿಂತಿದ್ದ ಕಪ್ಪು ಕುದುರೆ ಪುನಃ ಅವನನ್ನು ನೆಲದಿಂದೆತ್ತಿ, ಪಕ್ಕದ ಕೆರೆಗೆ ಎಸೆಯಿತು. ಅಲ್ಲಿದ್ದ ಬಾತುಕೋಳಿಗಳು ಕ್ರೋಕ್ರೋ ಎಂದು ಚೀರುತ್ತ ದಿಕ್ಕಾಪಾಲಾದವು. ತೇಜ ಕೆಸರುನೀರಿನಲ್ಲಿ ಬಿದ್ದಿದ್ದ. ಅವನು ಏದುಸಿರು ಬಿಡುತ್ತಾ ಕೆಸರುನೀರಿನಿಂದ ಎದ್ದು ಬರುತ್ತಿದ್ದಂತೆ ಇತರ ಮೂವರು ಬಿದ್ದುಬಿದ್ದು ನಕ್ಕರು.
ಆಗ ಅಲ್ಲಿಗೆ ಬಂದ ರೈತ ಸುಬ್ಬಣ್ಣ ತೇಜನಿಗೆ ಹೇಳಿದರು, “ತೇಜ, ಮುದಿ ಕುದುರೆ ನಿನಗೆ ಸರಿಯಾದ ಪಾಠ ಕಲಿಸಿದೆ. ಎಷ್ಟೋ ಸಲ ನಿನಗೆ ನಾನೇ ಎರಡೇಟು ಬಿಗಿಯಬೇಕೆಂದಿದ್ದೆ. ಇವತ್ತು ಕುದುರೆಯೇ ನಿನ್ನನ್ನು ಎತ್ತಿ ಬಿಸಾಡಿದೆ. ಇವತ್ತಿನ ಪಾಠ ಯಾವತ್ತೂ ಮರೆಯಬೇಡ. ನೀನೊಬ್ಬ ಸೊಕ್ಕಿನ ಹುಡುಗ. ಇವತ್ತು ನನ್ನ ಮುದಿ ಕುದುರೆ ನಿನ್ನ ಸೊಕ್ಕನ್ನೆಲ್ಲ ಇಳಿಸಿದೆ. ನಿನಗೆ ಸಾಕೋ ಸಾಕಾಯಿತು, ಅಲ್ಲವೇ? ನೀನು ಆ ಪುಟ್ಟ ನಾಯಿಮರಿಗೆ ಪದೇಪದೇ ಹೊಡೆಯುವುದನ್ನು, ಬೇರೆ ಹುಡುಗರಿಗೂ ಹೊಡೆಯುವುದನ್ನು ನಾನು ಹಲವು ಸಲ ನೋಡಿದ್ದೇನೆ. ಈಗ ಮನೆಗೆ ಹೋಗಿ ಸ್ನಾನ ಮಾಡು. ಮತ್ತು ಒಂದು ಸಂಕಲ್ಪ ಮಾಡು: ಇನ್ನು ಮುಂದೆ ಎಲ್ಲರಿಗೂ ಗೆಳೆಯನಾಗಿರುತ್ತೇನೆ ಎಂದು."
ತೇಜ ಅಳುತ್ತಾ ಅಲ್ಲಿಂದ ಹೊರಟು ಹೋದ. ಇತರ ಹುಡುಗರೂ ತಮ್ಮ ಮನೆಗೆ ಓಡಿದರು. ರೈತ ಸುಬ್ಬಣ್ಣ ಮುದಿ ಕಪ್ಪು ಕುದುರೆಯ ಬೆನ್ನನ್ನು ಮೆಚ್ಚುಗೆಯಿಂದ ತಡವಿ, ಮನೆಯತ್ತ ನಡೆದರು.
ಪುಟ್ಟ ನಾಯಿಮರಿ ಪೊದೆಯ ಹಿಂದಿನಿಂದ ಓಡುತ್ತ ಕುದುರೆಯ ಹತ್ತಿರ ಬಂತು. ಅದು ಕುದುರೆಯ ಸುತ್ತ ಸುತ್ತುತ್ತಾ ಹೇಳಿತು, “ನಿನ್ನಿಂದಾಗಿ ನನಗೆ ಬೀಳುವ ರಭಸದ ಏಟು ತಪ್ಪಿತು. ತೇಜ ಇನ್ನಾದರೂ ಒಳ್ಳೆಯ ಹುಡುಗನಾದಾನು.”
"ನೋಡೋಣ. ಆದರೆ ನೆನಪಿರಲಿ. ಅವನು ನಿನಗೆ ತೊಂದರೆ ಮಾಡಿದರೆ, ನನಗೆ ಹೇಳು. ಅವನಿಗೆ ಚೆನ್ನಾಗಿ ಬುದ್ಧಿ ಕಲಿಸುತ್ತೇನೆ. ನಾವಿಬ್ಬರೂ ಗೆಳೆಯರಾಗಿರೋಣ” ಎಂದಿತು ಮುದಿ ಕಪ್ಪು ಕುದುರೆ. “ಓಹೋ, ಖಂಡಿತ ಹೇಳ್ತೇನೆ. ನೀನು ಬಹಳ ಒಳ್ಳೆಯ ಕುದುರೆ. ನಾವೀಗ ಬಯಲಿನ ಆ ತುದಿಯ ವರೆಗೆ ಓಡೋಣ” ಎಂದು ಜಿಗಿದಾಡುತ್ತಾ ಹೇಳಿತು ನಾಯಿಮರಿ.
ಮುದಿ ಕಪ್ಪು ಕುದುರೆ ಮತ್ತು ಪುಟ್ಟ ನಾಯಿಮರಿ - ಇವರಿಬ್ಬರೂ ಈಗ ಅಚ್ಚುಮೆಚ್ಚಿನ ಗೆಳೆಯರು. ಈಗ ತೇಜ ನಾಯಿಮರಿಯ ತಂಟೆಗೆ ಬರುವುದಿಲ್ಲ. ಯಾಕೆಂದರೆ ನಾಯಿಮರಿ ಎಲ್ಲ ಸಂಗತಿಗಳನ್ನೂ ಮುದಿ ಕಪ್ಪು ಕುದುರೆಗೆ ಹೇಳುತ್ತದೆಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಇನ್ನೊಮ್ಮೆ ಕೆಸರುನೀರಿನ ಕೆರೆಗೆ ಎಸೆಯಲ್ಪಡುವುದು ಅವನಿಗೆ ಬೇಕಾಗಿಲ್ಲ!
ಚಿತ್ರ ಕೃಪೆ: "ದ ಟೆಡ್ಡಿ ಬೇರ್ಸ್ ಟೇಯ್ಲ್" ಪುಸ್ತಕ