ಮುದುಕಿ ಕೊಟ್ಟ ಕವಡೆ ಹಾರ
ಒಂದಾನೊಂದು ಕಾಲದಲ್ಲಿ ಒಂದು ಹಳ್ಳಿಯಲ್ಲಿ ಸುಧಾ ಎಂಬ ಯುವತಿ ಇದ್ದಳು. ಸುಂದರಿಯೂ ಒಳ್ಳೆಯ ಗುಣನಡತೆಯವಳೂ ಆದ ಅವಳು ತನ್ನ ಮಲತಾಯಿಯೊಂದಿಗೆ ವಾಸವಿದ್ದಳು.
ಆ ಮಲತಾಯಿಯೋ, ಬಹಳ ಕೆಟ್ಟವಳು ಮತ್ತು ಮುಂಗೋಪಿ ಹೆಂಗಸು. ಸುಧಾ ಎಲ್ಲ ಮನೆಗೆಲಸ ಮಾಡುವುದಲ್ಲದೆ, ಮನೆಗೆ ಬೇಕಾದ್ದೆಲ್ಲವನ್ನೂ ಮಾರುಕಟ್ಟೆಯಿಂದ ತರಬೇಕಾಗಿತ್ತು.
ಅದೊಂದು ದಿನ, ಮಾರುಕಟ್ಟೆಯಿಂದ ಮಲತಾಯಿ ಹೇಳಿದಂತೆ ಬ್ರೆಡ್, ಜಾಮ್ ಮತ್ತು ತರಕಾರಿ ಖರೀದಿಸಿ ಸುಧಾ ಮನೆಗೆ ಮರಳುತ್ತಿದ್ದಳು. ಅವಳು ಕಾಡಿನ ದಾರಿಯಲ್ಲಿ ಖುಷಿಯಿಂದ ಹಾಡುತ್ತಾ ಬರುತ್ತಿದ್ದಳು. ಆಗ ಒಂದು ಮರದ ಬುಡದಲ್ಲಿ ಕುಳಿತಿದ್ದ ಒಬ್ಬ ಮುದುಕಿಯನ್ನು ಸುಧಾ ಕಂಡಳು. ಆ ಮುದುಕಿ ಬಹಳ ದಣಿದವಳಂತೆ ಕಾಣಿಸಿದಳು.
“ನಿಮಗೇನಾದರೂ ಸಹಾಯ ಮಾಡಲೇ?” ಎಂದು ಕೇಳಿದಳು ಸುಧಾ. “ನನಗೇನಾದರೂ ತಿನ್ನಲು ಕೊಟ್ಟರೆ ಬಹಳ ಸಹಾಯವಾಗುತ್ತಿತ್ತು” ಎಂದು ಉತ್ತರಿಸಿದಳು ಮುದುಕಿ. ಮನೆ ತಲಪಿದಾಗ ಮಲತಾಯಿ ತಾನು ತಂದದ್ದನ್ನೆಲ್ಲ ಪರೀಕ್ಷಿಸಿ, ಪೈಸೆಪೈಸೆಗೂ ಲೆಕ್ಕ ಕೇಳುತ್ತಾಳೆಂದು ಸುಧಾಳಿಗೆ ಗೊತ್ತಿತ್ತು. ಆದರೂ ಅವಳು ಮುದುಕಿಗೆ ಕರುಣೆಯಿಂದ ಒಂದು ಪುಟ್ಟ ಬ್ರೆಡ್ ಮತ್ತು ಸ್ವಲ್ಪ ಜಾಮ್ ಕೊಟ್ಟಳು.
“ನೀನು ತುಂಬ ಕರಣಾಮಯಿ. ನಿನ್ನ ಅದೃಷ್ಟ ಚೆನ್ನಾಗಿರಲಿ" ಎಂದು ಆ ಮುದುಕಿ ಹಾರೈಸಿದಳು. "ಇದಕ್ಕಾಗಿ ನಿನಗೆ ಹಣ ಕೊಡುವ ಸ್ಥಿತಿಯಲ್ಲಿ ನಾನಿಲ್ಲ. ಆದರೆ ನಿನಗೊಂದು ಪುಟ್ಟ ಕೊಡುಗೆ ಕೊಡ್ತೇನೆ” ಎನ್ನುತ್ತಾ ಮುದುಕಿ ತನ್ನ ಚೀಲದಿಂದ ಒಂದು ಕವಡೆ ಹಾರವನ್ನು ತೆಗೆದು ಅದನ್ನು ಸುಧಾಳಿಗೆ ಕೊಟ್ಟಳು. “ಇದನ್ನು ಯಾವಾಗಲೂ ನಿನ್ನ ಹತ್ತಿರವೇ ಇಟ್ಟುಕೋ” ಎಂದಳು.
ಅವಳಿಗೆ ವಂದಿಸಿ ಮುನ್ನಡೆದ ಸುಧಾ ಮನೆ ತಲಪಿದಳು. ತಕ್ಷಣವೇ ಅವಳ ಮಲತಾಯಿ ರೇಗಾಡಿದಳು, "ಯಾಕೆ ತಡವಾಯಿತು? ಎಲ್ಲಿಗೆ ಹೋಗಿದ್ದೆ? ಏನೇನು ತಂದಿದ್ದಿ? ಉಳಿದ ಚಿಲ್ಲರೆ ಎಲ್ಲಿದೆ, ತೋರಿಸು.”
ಸುಧಾ ಹಾದಿಯಲ್ಲಿ ಏನೆಲ್ಲ ನಡೆಯಿತೆಂಬುದನ್ನು ಮಲತಾಯಿಗೆ ಹೇಳಿದಳು. ಮಲತಾಯಿ ಸಿಟ್ಟಿನಿಂದ ಕೆಂಪುಕೆಂಪಾದಳು. ಅವಳು ಕವಡೆ ಹಾರವನ್ನು ಕಿತ್ತುಕೊಂಡು, ಅದರಿಂದಲೇ ಸುಧಾಳಿಗೆ ಬಡಿದು ಅಬ್ಬರಿಸಿದಳು, "ತಲೆಕೆಟ್ಟ ಹುಡುಗಿ, ಇವತ್ತು ರಾತ್ರಿ ನಿನಗೆ ಹಸಿವಾದರೆ ಈ ಕವಡೆ ಹಾರವನ್ನೇ ತಿನ್ನು. ಆಗ ನಿನಗೆ ಅರ್ಥವಾಗುತ್ತದೆ - ಕೆಲಸಕ್ಕೆ ಬಾರದ ವಸ್ತುಗಳಿಗೆ ಬದಲಾಗಿ ತಿನ್ನುವ ಆಹಾರ ಕೊಡಬಾರದು ಎಂದು.”
ಸುಧಾ ತನ್ನ ಕೋಣೆಗೆ ಹೋಗಿ ಅಳುತ್ತಾ ಕೂತಳು. ಮಲಗುವ ಮುಂಚೆ, ತನ್ನ ಅಮ್ಮ ಕೊಟ್ಟಿದ್ದ ಪುಟ್ಟ ಸಂಪುಟದಲ್ಲಿದ್ದ ಇತರ ವಸ್ತುಗಳೊಂದಿಗೆ ಆ ಕವಡೆ ಹಾರವನ್ನು ಹಾಕಿದಳು.
ಐದು ವರುಷಗಳು ದಾಟಿದವು. ಅದೊಂದು ದಿನ ಸುಧಾಳ ಹಳ್ಳಿಗೆ ಬಂದ ಡಂಗುರದವನು ಹೀಗೆಂದು ಡಂಗುರ ಸಾರಿದ, “ಕೇಳಿರಿ, ಕೇಳಿರಿ. ರಾಜಕುಮಾರರ ಹುಟ್ಟುಹಬ್ಬಕ್ಕೆ ಹಳ್ಳಿಯ ಎಲ್ಲರನ್ನೂ ಆಹ್ವಾನಿಸಲಾಗಿದೆ. ಎಲ್ಲರೂ ಬನ್ನಿ.”
ಅಂತೆಯೇ ರಾಜಕುಮಾರನ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಹಳ್ಳಿಯಿಂದ ಎಲ್ಲರೂ ಹೊರಟರು. ಸುಧಾಳೂ ಹೊರಟಳು. ಹಳ್ಳಿಯ ಇತರ ಯುವತಿಯರೆಲ್ಲ ಅಂದಚಂದದ ಉಡುಗೆ ತೊಟ್ಟು, ಕಣ್ಣುಕುಕ್ಕುವ ಆಭರಣ ಧರಿಸಿ ಹೊರಟಿದ್ದರು. ಪಾಪದ ಸುಧಾಳ ಬಳಿ ಅವ್ಯಾವುದೂ ಇರಲಿಲ್ಲ. ಅವಳು ತನ್ನ ಸಾದಾ ಉಡುಪು ಧರಿಸಿ, ಕುತ್ತಿಗೆಗೆ ಕವಡೆ ಹಾರ ಹಾಕಿಕೊಂಡಿದ್ದಳು.
ಸುಧಾಳನ್ನು ನೋಡಿದ ಹಳ್ಳಿಯ ಇತರ ಯುವತಿಯರು ಅವಳಿಗೆ ಗೇಲಿ ಮಾಡಿದರು. “ನೀನು ನಮ್ಮ ಜೊತೆ ಬಾರದಿದ್ದರೆ ಒಳ್ಳೆಯದು. ಯಾಕೆಂದರೆ ನಿನ್ನನ್ನು ನೋಡಿದರೆ ಜನರು ನಮ್ಮ ಹಳ್ಳಿಯವರೆಲ್ಲ ಬಡವರು ಅಂದುಕೊಳ್ತಾರೆ” ಎಂದಳೊಬ್ಬಳು.
ಇದನ್ನು ಕೇಳಿದ ಸುಧಾ ಅವಮಾನದಿಂದ ಕಣ್ಣೀರು ಹಾಕಿದಳು. ಅಷ್ಟರಲ್ಲಿ ಕುದುರೆಯ ಮೇಲೆ ಕುಳಿತ ಯುವಕನೊಬ್ಬ ಅಲ್ಲಿಗೆ ಬಂದ. ಆತ ಯುವತಿಯರ ಬಳಿ ಕುದುರೆ ನಿಲ್ಲಿಸಿ, ಸುಧಾ ಯಾಕೆ ಕಣ್ಣೀರು ಹಾಕುತ್ತಿದ್ದಾಳೆಂದು ಕೇಳಿದ. ಅವರಲ್ಲೊಬ್ಬಳು ಉತ್ತರಿಸಿದಳು, “ಇಲ್ನೋಡಿ, ಸಾದಾ ಉಡುಪು ತೊಟ್ಟು, ಕವಡೆ ಹಾರ ಹಾಕಿಕೊಂಡ ಈ ಯುವತಿ ನಮ್ಮ ಹಳ್ಳಿಯವಳು. ಇವಳೇನಾದರೂ ಇವತ್ತು ರಾಜಕುಮಾರರ ಹುಟ್ಟುಹಬ್ಬದ ಸಂತೋಷಕೂಟಕ್ಕೆ ಬಂದರೆ, ನಮ್ಮ ಹಳ್ಳಿಗೇ ಅವಮಾನ.”
ಆ ಯುವಕ ಸುಧಾಳನ್ನು ದಿಟ್ಟಿಸಿ ನೋಡಿದ. ಆಗ ಅಲ್ಲೊಂದು ವಿಸ್ಮಯ ನಡೆಯಿತು. ಸುಧಾಳ ಉಡುಪು ಬೆಕ್ಕಸ ಬೆರಗಾಗುವಂತಹ ಉಡುಪಾಗಿ ಮತ್ತು ಅವಳ ಕವಡೆ ಹಾರ ವಜ್ರದ ಹಾರವಾಗಿ ಬದಲಾಯಿತು!
ಇತರ ಯುವತಿಯರು ನೋಡನೋಡುತ್ತಿದ್ದಂತೆ, ಯುವಕ ಮುಗುಳು ನಗುತ್ತಾ, ಕುದುರೆಯಿಂದ ಕೆಳಗಿಳಿದು, ಅವಳನ್ನು ಕುದುರೆಗೆ ಹತ್ತಿಸಿಕೊಂಡು ಅಲ್ಲಿಂದ ಕರೆದೊಯ್ದ.
ಅವರು ಸಂತೋಷಕೂಟ ತಲಪಿದಾಗ ಯುವಕ ಸುಧಾಳನ್ನು ವೇದಿಕೆಗೆ ಕರೆದೊಯ್ದ. ಆಗ ಸುಧಾಳಿಗೆ ಅರ್ಥವಾಯಿತು: ಆ ಯುವಕನೇ ರಾಜಕುಮಾರ ಎಂದು.
ಕೆಲವೇ ದಿನಗಳಲ್ಲಿ ರಾಜಕುಮಾರ ಸುಧಾಳನ್ನು ಮದುವೆಯಾದ. ಸುಧಾ ಸಂತೋಷದಿಂದ ದಿನಗಳೆಯತೊಡಗಿದಳು. ಆ ದಿನ ಕಾಡಿನ ಹಾದಿಯಲ್ಲಿ ಮರದ ಬುಡದಲ್ಲಿ ಕುಳಿತಿದ್ದ ಮುದುಕಿ, ಸುಧಾಳ ಕರುಣೆಯನ್ನು ಕಂಡು “ನಿನ್ನ ಅದೃಷ್ಟ ಚೆನ್ನಾಗಿರಲಿ" ಎಂದು ಹಾರೈಸಿದ್ದು ನಿಜವಾಗಿತ್ತು!