ಮುದುಕ ಮತ್ತು ಮುದುಕಿ

ಮುದುಕ ಮತ್ತು ಮುದುಕಿ

ಒಂದಾನೊಂದು ಕಾಲದಲ್ಲಿ, ಒಂದು ಸಣ್ಣ ಮನೆಯಲ್ಲಿ ಒಬ್ಬ ಮುದುಕ ಮತ್ತು ಮುದುಕಿ ವಾಸ ಮಾಡುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಅವರು ಯಾವುದೇ ಪ್ರಾಣಿಗಳನ್ನು ಸಾಕುತ್ತಿರಲಿಲ್ಲ. ಮುದುಕನಿಗೆ ಜೊತೆ ಮುದುಕಿ ಮತ್ತು ಮುದುಕಿಗೆ ಜೊತೆ ಮುದುಕ ಮಾತ್ರ.

ಅದೊಂದು ಮಧ್ಯಾಹ್ನ, ಯಾವಾಗಿನಂತೆ, ಮುದುಕ ಮತ್ತು ಮುದುಕಿ ಮನೆಯ ವರಾಂಡದಲ್ಲಿ ಕುಳಿತಿದ್ದರು. ಮುದುಕಿ ಹೊಲಿಯುತ್ತಿದ್ದಳು ಮತ್ತು ಮುದುಕ ಒಂದು ಮರದ ತುಂಡಿನಿಂದ ತಟ್ಟೆ ತಯಾರಿಸುತ್ತಿದ್ದ. ಅದನ್ನು ಕತ್ತರಿಸುತ್ತಾ ಮುದುಕ ಹೇಳಿದ, “ನಾವು ಬೇಸಾಯ ಮಾಡದಿರುವುದು ಎಷ್ಟು ಒಳ್ಳೆಯದಾಯಿತು! ಇಲ್ಲವಾದರೆ ನಮಗೆ ಯಾವಾಗಲೂ ಗದ್ದೆ ಉಳುವ ಮತ್ತು ಕೊಯ್ಲು ಮಾಡುವ ಚಿಂತೆ. ಯಾವಾಗಾದರೂ ನೆರೆ ಅಥವಾ ಬಿರುಗಾಳಿ ಬಂದರೆ ನಾವು ಬೆಳೆಸಿದ್ದನ್ನೆಲ್ಲ ಕಳೆದುಕೊಂಡು ನಮಗೆ ಬಹಳ ದುಃಖವಾಗುತ್ತಿತ್ತು.”

ಮುದುಕಿ ತಲೆಯಾಡಿಸುತ್ತಾ ಉತ್ತರಿಸುತ್ತಾಳೆ, “ಓ, ನಮಗೆ ಗದ್ದೆಯಿಲ್ಲದ್ದು ಒಳ್ಳೆಯದೇ ಆಯಿತು. ನಾವು ನಾಯಿ ಸಾಕದೆ ಇರುವುದು ಇನ್ನೂ ಒಳ್ಳೆಯ ಸಂಗತಿ. ನಮಗೆ ನಾಯಿ ಇದ್ದಿದ್ದರೆ, ರಾತ್ರಿ ಮರದಿಂದ ಒಂದು ಎಲೆ ಉದುರಿಬಿದ್ದರೂ ಅದು ಬೊಗಳಿ ನಮ್ಮನ್ನು ನಿದ್ದೆಯಿಂದ ಎಚ್ಚರಗೊಳಿಸುತ್ತಿತ್ತು.”

ಮುದುಕ ಉತ್ತರಿಸಿದ, “ನೀನು ಹೇಳಿದ್ದು ಸರಿ. ನಮ್ಮ ಬಳಿ ಕುರಿಗಳು ಇಲ್ಲದಿದ್ದದ್ದು ಒಳಿತೇ ಆಯಿತು. ಕುರಿಗಳು ಇದ್ದಿದ್ದರೆ, ನಾವು ಅವನ್ನು ಮೇಯಿಸಲು ಒಯ್ಯಬೇಕಾಗುತ್ತಿತ್ತು. ಆಗ ತೋಳ ಧಾಳಿ ಮಾಡಿ, ನನ್ನನ್ನು ತಿಂದೇ ಬಿಡುತ್ತಿತ್ತು. ನೀನು ಒಬ್ಬಂಟಿಯಾಗುತ್ತಿದ್ದೆ.” ಇದಕ್ಕೂ ಮುದುಕಿ ಹೌದೆಂದಳು.

ಆ ದಿನ ರಾತ್ರಿ, ಮುದುಕಿಯ ಕಣ್ಣುಗಳು ದಣಿದಾಗ ಮತ್ತು ಮುದುಕನಿಗೆ ಆಯಾಸದಿಂದ ಚೂರಿಯನ್ನು ಹಿಡಿದುಕೊಳ್ಳಲಿಕ್ಕೂ ಆಗದಿದ್ದಾಗ ಅವರು ಕೆಲಸ ಮಾಡುವುದನ್ನು ನಿಲ್ಲಿಸಿದರು. ಅನಂತರ ಊಟ ಮಾಡಿ ಮಲಗಿದರು.

ಅವರಿಗೆ ನಿದ್ದೆ ಬರುವಷ್ಟರಲ್ಲಿ, ಮುದುಕ ಹೇಳಿದ, “ಕೇಳಿಸಿತೇನು? ಮನೆಯ ಚಾವಣಿಯಲ್ಲಿ ಏನೋ ಸದ್ದಾಯಿತು." ಮುದುಕಿ ಉತ್ತರಿಸಿದಳು, “ಇಲ್ಲ, ನನಗೇನೂ ಕೇಳಿಸಲಿಲ್ಲ. ಆರಾಮವಾಗಿ ನಿದ್ದೆ ಮಾಡು."

ಮುದುಕ ನಿದ್ದೆಗೆ ಜಾರಿದ. ಅಷ್ಟರಲ್ಲಿ ಮುದುಕಿಯ ಚೀರಾಟ ಅವನು ಹಾಸಿಗೆಯಿಂದ ಹಾರಿ ಏಳುವಂತೆ ಮಾಡಿತು. ಮುದುಕಿ ಗಾಬರಿಯಿಂದ ಹೇಳಿದಳು, “ನನಗೆ ಹಿತ್ತಲಿನಿಂದ ಏನೋ ಸದ್ದು ಕೇಳಿಸಿತು. ಅದೇನೆಂದು ಹೋಗಿ ನೋಡು.”

ಮುದುಕಿ ಮತ್ತು ಮುದುಕ ಇಬ್ಬರಿಗೂ ಹೆದರಿಕೆಯಾಯಿತು. ಅವರು ಎದ್ದು ಕಿಟಕಿಯ ಹತ್ತಿರ ಹೋಗಿ ಹೊರಗೆ ನೋಡಿದರು. ಆದರೆ ಅವರಿಗೆ ಏನೂ ಕಾಣಿಸಲಿಲ್ಲ.

ಮುದುಕಿ ನಿಟ್ಟುಸಿರು ಬಿಡುತ್ತಾ ಹೇಳಿದಳು, "ನಾವು ಒಂದು ನಾಯಿ ಸಾಕಿದ್ದರೆ, ಅದು ಬೊಗಳುತ್ತಿತ್ತು. ಆಗ ನಮಗೆ ಹಿತ್ತಲಿನಲ್ಲಿ ಯಾರಾದರೂ ಬಂದಿದ್ದರೆ ಗೊತ್ತಾಗುತ್ತಿತ್ತು.”

ಮುದುಕ ಹೇಳಿದ, "ಈಗ ನಾವೇ ಸ್ವತಃ ಹಿತ್ತಲಿಗೆ ಹೋಗಿ ನೋಡಬೇಕಾಗಿದೆ.” ಮುದುಕಿ ಸ್ಕಾರ್ಪ್ ಕಟ್ಟಿಕೊಂಡಳು ಮತ್ತು ಮುದುಕ ಲಾಟೀನನ್ನು ಕೈಯಲ್ಲಿ ಹಿಡಿದುಕೊಂಡ. ಅವರು ಮನೆಯಿಂದ ಹೊರಗೆ ಬಂದು, ಮನೆಯ ಸುತ್ತಲೂ ನೋಡಿದರು. ಆದರೆ ಅವರಿಗೆ ಅಲ್ಲಿ ಯಾರೂ ಕಾಣಿಸಲಿಲ್ಲ. ಮುದುಕ ನಗುತ್ತಾ ಹೇಳಿದ, “ಇವತ್ತು ರಾತ್ರಿ ನಮಗೆ ವಿಚಿತ್ರ ಅನಿಸುತ್ತಿದೆ.”

ಅವರಿಬ್ಬರೂ ಮನೆಯೊಳಗೆ ಹೋದರು. ಅವರಿಗೆ ನಿದ್ದೆ ಹತ್ತುತ್ತದೆ ಎನ್ನುವಾಗ, ಮುದುಕನ ಬೊಬ್ಬೆ ಕೇಳಿ ಮುದುಕಿ ಹಾಸಿಗೆಯಿಂದ ಜಿಗಿದು ಎದ್ದಳು. “ಏಳು, ಏಳು. ಆ ಶಬ್ದ ಬರುತ್ತಿರುವುದು ಮನೆಯ ಚಾವಣಿಯಿಂದ” ಎಂದ ಮುದುಕ.
ಅವರಿಬ್ಬರೂ ಹಾಸಿಗೆಯಿಂದ ಎದ್ದು ಕುಳಿತರು. ಆದರೆ ಅಲ್ಲಿ ಎಲ್ಲವೂ ನಿಶ್ಶಬ್ದವಾಗಿತ್ತು. ಫಕ್ಕನೆ ಮುದುಕಿ ಮೆಲುದನಿಯಲ್ಲಿ ಹೇಳಿದಳು, “ಓ, ನಾವು ಒಂದು ಕುರಿ ಸಾಕಿದ್ದರೆ, ಅದು "ಬಾ ಬಾ" ಎಂದು ಕೂಗುತ್ತಿತ್ತು ಮತ್ತು ನಮಗೆ ಇಲ್ಲಿ ಬೇರೆ ಯಾರೂ ಇಲ್ಲ ಎಂದು ಅನಿಸುತ್ತಿರಲಿಲ್ಲ.”

ಇಬ್ಬರೂ ಮನೆಯಿಂದ ಪುನಃ ಹೊರಗೆ ಬಂದರು. ಮುದುಕ ಒಂದು ಏಣಿ ತಂದಿಟ್ಟು, ಚಾವಣಿ ಹತ್ತಿದ. ಚಾವಣಿಯ ತುದಿಗೆ ಹೋದಾಗ, ಭಯದಿಂದ ಮುದುಕ ಬೊಬ್ಬೆ ಹಾಕಿದ, “ನನಗೆ ಇಲ್ಲಿ ಏನೂ ಕಾಣಿಸುತ್ತಿಲ್ಲ. ನಾನು ಕತ್ತಲಿನಲ್ಲಿ ಚಾವಣಿಯಿಂದ ಕೆಳಗೆ ಬೀಳುತ್ತೇನೆಂದು ನನಗೆ ಹೆದರಿಕೆಯಾಗುತ್ತಿದೆ!"

ಮುದುಕಿ ಕೂಗಿದಳು, "ತಾಳು, ತಾಳು. ನಿನ್ನ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳುವಷ್ಟು ಹೊತ್ತು ತಾಳು.” ಸ್ವಲ್ಪ ಸಮಯದ ನಂತರ ಮುದುಕಿ ಕೇಳಿದಳು, "ಅಲ್ಲೇನಾದರೂ ಕಾಣಿಸುತ್ತಿದೆಯಾ?"

ಮುದುಕ ಹೇಳಿದ, “ಇಲ್ಲಿ ಕತ್ತಲೆಂದರೆ ಕತ್ತಲು. ಬೇರೇನೂ ಕಾಣಿಸುತ್ತಿಲ್ಲ. ಆಂ, ಒಂದು ನಿಮಿಷ ತಾಳು …" ಮುದುಕಿ ಸ್ವಲ್ಪ ಹೊತ್ತು ಕಾದಳು. ಆದರೆ ಮುದುಕ ಏನೂ ಹೇಳಲಿಲ್ಲ. ಆಗ ಮುದುಕಿ ಜೋರಾಗಿ ಕೇಳಿದಳು, “ಅಲ್ಲಿ ಅದೇನು ಮಾಡುತ್ತಿದ್ದಿ? ನೀನ್ಯಾಕೆ ಮಾತಾಡುತ್ತಿಲ್ಲ?"

ಮುದುಕ ಉತ್ತರಿಸಲಿಲ್ಲ. ಮುದುಕಿಗೆ ಭಯವಾಯಿತು. ಅವಳೂ ಏಣಿಯಲ್ಲಿ ಮೇಲೇರಿದಳು. ಅವಳು ಚಾವಣಿಯ ತುದಿಗೆ ಹೋಗುವ ಮುಂಚೆ, ಅಲ್ಲಿದ್ದ ಮುದುಕ ನಗುವುದನ್ನು ಕಂಡಳು.

ಮುದುಕಿ ಅಸಮಾಧಾನದಿಂದ ಕೇಳಿದಳು, “ನನ್ನನ್ನು ಯಾಕೆ ಹೆದರಿಸಿದೆ? ನೀನ್ಯಾಕೆ ಉತ್ತರಿಸಲಿಲ್ಲ? ಈಗ ನೀನ್ಯಾಕೆ ನಗುತ್ತಾ ಇದ್ದಿ?” ಮುದುಕ ಹೇಳಿದ, "ನಾನು ಕೆಳಗೆ ಬಂದು ನಿನಗೆ ಎಲ್ಲವನ್ನೂ ಹೇಳುತ್ತೇನೆ.”

ಮುದುಕಿ ಏಣಿಯಲ್ಲಿ ಕೆಳಗೆ ಇಳಿದಳು. ಮುದುಕನೂ ಕೆಳಗೆ ಇಳಿದು ಬಂದ. ಅವನು ನೆಲಕ್ಕೆ ಕಾಲಿಡುವಾಗ, ಮುದುಕನು ಕೈಯಲ್ಲಿ ಬಿಳಿ ಬೆಕ್ಕಿನ ಮರಿಯೊಂದನ್ನು ಹಿಡಿದು ಕೊಂಡಿರುವುದನ್ನು ಮುದುಕಿ ನೋಡಿದಳು. “ಇಲ್ಲಿ ನೋಡು. ಈ ಬೆಕ್ಕಿನ ಮರಿ ಅದರ ಅಮ್ಮನನ್ನು ಕಳೆದುಕೊಂಡಿರಬೇಕು. ಅದು ಹೆದರಿದೆ. ಅದನ್ನು ಚಾವಣಿಯ ತುದಿಯಲ್ಲೇ ಬಿಟ್ಟು ಬರಲು ನನಗೆ ಮನಸ್ಸಾಗಲಿಲ್ಲ.”

ಮುದುಕಿ ನಿಟ್ಟುಸಿರು ಬಿಡುತ್ತಾ, ಬೆಕ್ಕಿನ ಮರಿಯನ್ನು ಮುದುಕನಿಂದ ತನ್ನ ಕೈಗಳಿಗೆ ತೆಗೆದುಕೊಂಡಳು. “ಇದು ಬಹಳ ಸಣ್ಣ ಮರಿ. ಇದಕ್ಕೆ ಹಾಲು ಕೊಡಬೇಕು. ಇದನ್ನು ಸಾಕುವುದಾದರೆ, ನಾವು ಹಾಲು ಕೊಡಲೇ ಬೇಕು” ಎಂದಳು ಮುದುಕಿ.

ಮುದುಕ ಹೇಳಿದ, "ನಾಳೆ ಬೆಳಗ್ಗೆಯೇ ಹೋಗಿ ಒಂದು ಕುರಿ ಖರೀದಿಸಿ ತರುತ್ತೇನೆ.” ಆಗ ಮುದುಕಿ ಉತ್ತರಿಸಿದಳು, “ಕುರಿಗೆ ಹಸುರು ಹುಲ್ಲು ಬೇಕಾಗುತ್ತದೆ. ಹಾಗಾಗಿ ನಾಳೆ ನಾವು ನಮ್ಮ ಜಮೀನನ್ನು ಉಳುಮೆ ಮಾಡೋಣ. ಅಲ್ಲಿ ಕುರಿಗಾಗಿ ಹುಲ್ಲು ಬೆಳೆಸೋಣ."

ಮುದುಕ ದನಿಗೂಡಿಸಿದ, "ನಾವು ಒಂದು ನಾಯಿಯನ್ನೂ ಸಾಕಬೇಕಾಗುತ್ತದೆ, ನಮ್ಮ ಕುರಿ ಮತ್ತು ಜಮೀನನ್ನು ಕಾಯಲಿಕ್ಕಾಗಿ.”

ಮುದುಕ ಮತ್ತು ಮುದುಕಿ, ಸಂತೋಷದಿಂದ ಅವರ ಮನೆಯೊಳಗೆ ಬಂದು ಬೆಕ್ಕಿನ ಮರಿ ಮಲಗಲಿಕ್ಕಾಗಿ ಬಟ್ಟೆ ಹಾಸಿದರು. ಅನಂತರ ಅವರಿಬ್ಬರೂ ಕುಳಿತುಕೊಂಡು, ಮರುದಿನ ಮಾಡಬೇಕಾದ ಕೆಲಸಗಳ ಬಗ್ಗೆ ಮಾತಾಡಿದರು. ಮಾತಾಡುತ್ತಾ ಮಾತಾಡುತ್ತ ಅವರಿಗೆ ನಿದ್ದೆ ಬಂತು, ನೆಮ್ಮದಿಯ ನಿದ್ದೆ.

ಚಿತ್ರ ಕೃಪೆ: ನ್ಯಾಷನಲ್ ಬುಕ್ ಟ್ರಸ್ಟ್ ಪುಸ್ತಕ “ರೀಡ್ ಮಿ ಎ ಸ್ಟೋರಿ”
ಚಿತ್ರಕಾರ: ಮಿರ್ ಅಲಿ ಬಾರೂಟಿಯನ್