ಮುದ್ದಣ ಕವಿಯ ನೆನಪು ಸದಾ ಅಮರ

ಮುದ್ದಣ ಕವಿಯ ನೆನಪು ಸದಾ ಅಮರ

ನಂದಳಿಕೆಯ ಲಕ್ಷ್ಮೀನಾರಾಯಣಪ್ಪ ಎಂದೊಡನೆಯೇ ನಮಗೆ ಮುದ್ದಣ ಕವಿಯ ನೆನಪಾಗುತ್ತದೆ. ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವಾಗ ಇದೊಂದು ಬಗೆಯ ಪ್ರಶ್ನೆ ಇದ್ದೇ ಇರುತ್ತಿತ್ತು. ಆ ಮುದ್ದಣ-ಮನೋರಮೆಯ ಸಂಭಾಷಣೆಗಳು ಎಲ್ಲವೂ ಜನಜನಿತ. ವಿನಯಶೀಲ ಹಾಗೂ ಸಂಕೋಚ ಸ್ವಭಾವದ ಮುದ್ದಣರು ಬರೆದ ಮಹಾಕಾವ್ಯಗಳು ಈಗಲೂ ಅವರ ಬರಹಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತವೆ. ಆ ಕಾರಣಗಳಿಂದ ಕವಿ ಮುದ್ದಣರು ಸದಾಕಾಲ ಸ್ಮರಣೀಯರು.

ಉಡುಪಿ ಜಿಲ್ಲೆಯ ನಂದಳಿಕೆಯಲ್ಲಿ ೧೮೭೦ರ ಜನವರಿ ೨೪ರಂದು ಲಕ್ಷ್ಮೀನಾರಾಯಣಪ್ಪ ಜನಿಸಿದರು. ತಂದೆ ತಿಮ್ಮಪ್ಪಯ್ಯ ಹಾಗೂ ತಾಯಿ ಮಹಾಲಕ್ಷ್ಮಿ. ತಿಮ್ಮಪ್ಪಯ್ಯನವರು ಸ್ಥಳೀಯ ದೇವಸ್ಥಾನಗಳಲ್ಲಿ ಕೆಲಸ ಮಾಡುತ್ತಿದ್ದರು. ಮುದ್ದು ಮುದ್ದಾಗಿದ್ದ ಬಾಲಕನನ್ನು ಅವನ ತಾಯಿ ಪ್ರೀತಿಯಿಂದ ‘ಮುದ್ದಣ' ಎಂದು ಕರೆಯುತ್ತಿದ್ದರು. ನಂತರದ ದಿನಗಳಲ್ಲಿ ತಮ್ಮ ಹೆಸರನ್ನು ಮರೆಮಾಚಿ ಕಾವ್ಯನಾಮವನ್ನು ಆಯ್ದು ಆ ಮೂಲಕ ಬರಹಳನ್ನು ರಚಿಸಿದಾಗ ಲಕ್ಷ್ಮೀನಾರಾಯಣಪ್ಪನವರು ‘ಮುದ್ದಣ’ ಎಂಬ ಕಾವ್ಯನಾಮವನ್ನೇ ಆರಿಸಿಕೊಂಡರು. ಇನ್ನೊಂದು ಉಲ್ಲೇಖಗಳ ಪ್ರಕಾರ ಅವರು ರಚಿಸಿದ ರಾಮಾಶ್ವಮೇಧಂ ಮುಂತಾದ ಕೃತಿಗಳನ್ನು ಪ್ರಕಾಶಕರಿಗೆ ನೀಡುವಾಗ ತಾನು ಬರೆದದ್ದು ಎಂದು ತಿಳಿಸಲು ಸಂಕೋಚವಾಗಿ ನನ್ನ ಪೂರ್ವಜರಲ್ಲಿ ಒಬ್ಬರಾದ ಮುದ್ದಣ ಎಂಬವರು ಬರೆದ ಕೃತಿ ಎಂದು ಹೇಳಿದ್ದರಂತೆ. ಈ ಕಾರಣದಿಂದ ಮುದ್ದಣರು ಬದುಕಿದ್ದ ಸಮಯದಲ್ಲಿ ಯಾರಿಗೂ ಆ ಮಹಾನ್ ಕೃತಿಗಳ ರಚನೆಕಾರರು ಲಕ್ಷ್ಮೀನಾರಾಯಣಪ್ಪ ಎಂದು ತಿಳಿಯಲೇ ಇಲ್ಲ. ಅವರ ಮರಣದ ೨೮ ವರ್ಷಗಳ ಬಳಿಕ ಈ ವಿಚಾರ ಬೆಳಕಿಗೆ ಬಂತು. ಲಕ್ಷ್ಮೀನಾರಾಯಣಪ್ಪನವರು ಬದುಕಿದ್ದಾಗ ಅವರ ಕೈಬರಹವೂ, ಆ ಮೂರು ಗ್ರಂಥಗಳ (ಅದ್ಭುತ ರಾಮಾಯಣಂ, ಶ್ರೀರಾಮ ಪಟ್ಟಾಭಿಷೇಕಂ, ಶ್ರೀ ರಾಮಾಶ್ವಮೇಧಂ) ಬರವಣಿಗೆಯೂ ಹೋಲುತ್ತಿರುವ ಅಂಶ ಗಮನಕ್ಕೆ ಬಂದು, ಅವರಲ್ಲಿ ಪ್ರಕಾಶಕರು ಕೇಳಿದಾಗ ಅಂದು ಒಪ್ಪಿಕೊಂಡಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಅವರ ಸಮೀಪವರ್ತಿಗಳೂ ಆಗಿದ್ದ ಬೆನಗಲ್ ರಾಮರಾಯರು ಈ ವಿಚಾರವನ್ನು ಹೊರಗೆ ಹಾಕಿದ್ದರು. ಮುದ್ದಣ ಕವಿಯು ಬದುಕಿದ್ದ ಸಮಯದಲ್ಲಿ ಬೆನಗಲ್ ರಾಮರಾಯರು ಕೇಳಿದ ಸಂದರ್ಭದಲ್ಲಿ ಅವರು ಅತ್ಯಂತ ಸಂಕೋಚದಿಂದ ಆ ಕೃತಿಗಳ ರಚನೆ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದರಂತೆ. ಆದರೆ ಈ ವಿಷಯ ಸಾರ್ವಜನಿಕವಾಗಿ ಬೆಳಕಿಗೆ ಬಂದದ್ದು ಮುದ್ದಣ ಕವಿ ನಿಧನ ಹೊಂದಿದ ೨೮ ವರ್ಷಗಳ ಬಳಿಕವೇ.

ಬಾಲ್ಯದ ಬಡತನದ ಕಾರಣದಿಂದಾಗಿ ತಮ್ಮ ಓದನ್ನು ಮೊಟಕುಗೋಳಿಸಿ ದೈಹಿಕ ಶಿಕ್ಷಣದ ಅಧ್ಯಯನಕ್ಕಾಗಿ ಅಂದಿನ ಮದರಾಸಿಗೆ ಹೋಗಿದ್ದರು ಲಕ್ಷ್ಮೀನಾರಾಯಣಪ್ಪನವರು. ಅಲ್ಲಿನ ಜನರೊಂದಿಗಿನ ಒಡನಾಟದಿಂದ ತಮಿಳು, ತೆಲುಗು ಭಾಷೆಯನ್ನು ಕಲಿತರು. ಮಂಗಳೂರಿನಲ್ಲಿ ಪ್ರಕಟವಾಗುತ್ತಿದ್ದ ‘ಸುವಾಸಿನಿ' ಎಂಬ ಪತ್ರಿಕೆಗೆ ‘ಚಕ್ರಧಾರಿ' ಎಂಬ ಹೆಸರಿನಲ್ಲಿ ಲೇಖನ ಬರೆದಿದ್ದರು. ಇದು ಅವರ ಮೊದಲ ಬರಹ ಎಂಬುದು ಉಲ್ಲೇಖನೀಯ.

ಆದರೆ ಹೊಟ್ಟೆ ಪಾಡಿಗಾಗಿ ಉದ್ಯೋಗ ಅನಿವಾರ್ಯವಾಗಿದ್ದುದರಿಂದ ಮುದ್ದಣರು ಮದರಾಸಿನಿಂದ ಉಡುಪಿಗೆ ಮರಳಿ ಬರುತ್ತಾರೆ. ೧೮೮೯ರಲ್ಲಿ ಉಡುಪಿಯ ಬೋರ್ಡ್ ಶಾಲೆಯಲ್ಲಿ ಕುಸ್ತಿಯ ಮಾಸ್ತರರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆಗ ಅವರ ಸಂಬಳ ಹತ್ತು ರೂಪಾಯಿ. ವ್ಯಾಯಾಮ ಅಧ್ಯಾಪಕರಾಗಿದ್ದುದರಿಂದ ಮುದ್ದಣ ಅವರಿಗೆ ತುಂಬಾ ಬಿಡುವು ಸಿಗುತ್ತಿತ್ತು. ಅದೇ ಶಾಲೆಯಲ್ಲಿ ಅಧ್ಯಾಪಕರಾಗಿದ್ದ ಮಳಲಿ ಸುಬ್ಬರಾಯರ ಬಳಿ ಸಂಸ್ಕೃತ ಭಾಷೆಯನ್ನು ಕಲಿತುಕೊಂಡರು. ಸುಬ್ಬರಾಯರನ್ನು ಮುದ್ದಣರು ತಮ್ಮ ಮಾನಸ ಗುರುಗಳೆಂದು ಕರೆದು ಗೌರವಿಸಿದ್ಧಾರೆ. ಮುದ್ದಣರ ಸಂಸ್ಕೃತ ಕಲಿಕೆಯ ಹಸಿವನ್ನು ಗಮನಿಸಿದ ಸುಬ್ಬರಾಯರು ತಮ್ಮ ಬಳಿಯಿದ್ದ ಹಲವಾರು ಉಪಯುಕ್ತ ಗ್ರಂಥಗಳನ್ನು ಹಾಗೂ ತಾವು ರಚಿಸಿದ ಕೆಲವು ಗ್ರಂಥಗಳನ್ನು ಮುದ್ದಣರಿಗೆ ನೀಡಿದರು. ಇದನ್ನು ಓದಿ ಪ್ರೇರಿತರಾದ ಮುದ್ದಣರು ಕುಮಾರ ವಿಜಯ ಹಾಗೂ ರತ್ನಾವತಿ ಕಲ್ಯಾಣ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ರಚಿಸಿದರು. 

ಮಳಲಿ ಸುಬ್ಬರಾಯರು ಓದಿ ಹೇಳುತ್ತಿದ್ದ ಸಂಸ್ಕೃತದ ಅದ್ಭುತ ರಾಮಾಯಣದಿಂದ ಮುದ್ದಣರು ಬಹಳಷ್ಟು ಪ್ರಭಾವಿತರಾದರು. ಇದನ್ನು ಆಗಾಗ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ಮುದ್ದಣರು ಮುಂದಿನ ದಿನಗಳಲ್ಲಿ ಹೊಸಗನ್ನಡ ಗದ್ಯ ಶೈಲಿಯಲ್ಲಿ ಅದ್ಭುತ ರಾಮಾಯಣವನ್ನು ರಚಿಸಿದರು. ಕನ್ನಡ ಕಾವ್ಯಮಂಜರಿ ಎಂಬ ಪುಸ್ತಕ ಮಾಲೆಗಾಗಿ ಅದ್ಭುತ ರಾಮಾಯಣವನ್ನು ಕಳಿಸಿಕೊಡಲು ಸುಬ್ಬರಾಯರು ಬಲವಂತ ಮಾಡಿದಾಗ ಮುದ್ದಣರು ತಾವು ಹೆಚ್ಚು ಕಲಿಯದವರು, ತಾವು ಇಂತಹ ಕೃತಿಯನ್ನು ರಚಿಸಲು ಸಾಧ್ಯವೇ ಎಂದು ಪ್ರಕಾಶಕರು ಭಾವಿಸಿದರೆ ಎಂದು ಯೋಚಿಸಿ, ತನಗೆ ಹಳೆಯ ತಾಳೆಗರಿಗಳಲ್ಲಿ ಸಿಕ್ಕಿದ ಬರಹಗಳು ಎಂದು ಬರೆದು ಕಳಿಸಿದರಂತೆ. ಅದು ಹಾಗೆಯೇ ಯಥಾವತ್ತಾಗಿ ಪ್ರಕಟವಾಯಿತು. ಮುದ್ದಣರು ತಮ್ಮ ಹೆಸರನ್ನು ಕೃತಿಗಳಲ್ಲಿ ಬಳಸದೇ ಇದ್ದ ಕಾರಣ ಅವರಿಗೆ ಬರಬೇಕಾಗಿದ್ದ ಸಂಭಾವನೆಯೂ ನಷ್ಟವಾಯಿತು. ನಂತರ ಷಟ್ಪದಿ ಶೈಲಿಯ ‘ಶ್ರೀರಾಮ ಪಟ್ಟಾಭಿಷೇಕಂ’ ಹಾಗೂ ‘ಶ್ರೀ ರಾಮಾಶ್ವಮೇಧಂ’ ಕೃತಿಗಳನ್ನು ರಚಿಸಿದರು. ಶ್ರೀ ರಾಮಾಶ್ವಮೇಧಂ ಮುದ್ದಣರು ರಚಿಸಿದ ಅತ್ಯುತ್ತಮ ಕೃತಿಯೆಂದು ಹೇಳುತ್ತಾರೆ. 

ಮುದ್ದಣರಿಗೆ ಕಮಲಮ್ಮ ಯಾನೆ ಕಮಲಾದೇವಿ ಎಂಬವರೊಡನೆ ವಿವಾಹವಾಯಿತು. ಇವರ ಊರು ಶಿವಮೊಗ್ಗ ಜಿಲ್ಲೆಯ ಕಾಗೆಗೊಡಮಗ್ಗಿ. ಮುದ್ದಣರು ರಚಿಸಿದ ಶ್ರೀ ರಾಮಶ್ವಮೇಧಂ’ ಗ್ರಂಥದಲ್ಲಿ ಬರುವ ಮನೋರಮೆ ಇವರೇ ಎಂಬುದು ಉಲ್ಲೇಖನೀಯ. ಮುದ್ದಣ- ಮನೋರಮೆಯ ಸಂಭಾಷಣೆಗಳು ಬಹಳ ಖ್ಯಾತಿ ಪಡೆದಿವೆ. ಈ ರೀತಿಯ ಬರಹಕ್ಕೆ ಬಂಗಾಲಿ ಕಾದಂಬರಿ ‘ವಿಷವೃಕ್ಷ' ಸ್ಪೂರ್ತಿಯೆನ್ನುತ್ತಾರೆ. 

ಶ್ರೀ ರಾಮಾಶ್ವಮೇಧವನ್ನು ೧೮೯೭ರಲ್ಲಿ ಪೂರ್ತಿಗೊಳಿಸಿ ‘ಮುದ್ದಣ' ಎಂಬ ಕಾವ್ಯನಾಮವನ್ನೇ ಬಳಸಿ ಕಾವ್ಯ ಕಲಾನಿಧಿ ಎಂಬ ಪತ್ರಿಕೆಗೆ ಹಳೆಯ ಗ್ರಂಥ ಆಧಾರಿತ ಕೃತಿ ಎಂದು ಕಳುಹಿಸಿಕೊಡುತ್ತಾರೆ. ಅದು ಯಥಾವತ್ತಾಗಿ ಸರಣಿರೂಪದಲ್ಲಿ ಪ್ರಕಟವಾಗುತ್ತದೆ. ೧೯೦೧ರ ಆಗಸ್ಟ್ ತಿಂಗಳಲ್ಲಿ ಅದರ ಪ್ರಕಟಣೆ ಮುಕ್ತಾಯವಾಗುತ್ತದೆ. ಆದರೆ ಅದಕ್ಕೂ ಮೊದಲೇ ಮುದ್ದಣ ಕವಿ ೧೯೦೧ರ ಫೆಬ್ರವರಿ ೧೫ರಂದು ನಿಧನ ಹೊಂದುತ್ತಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅನರ್ಘ್ಯ ಮುತ್ತುಗಳನ್ನು ನೀಡಿದ ಕವಿ ತಮ್ಮ ೩೧ರ ಸಣ್ಣ ವಯಸ್ಸಿನಲ್ಲಿ ನಿಧನ ಹೊಂದಿದ್ದು ಮಾತ್ರ ತುಂಬಲಾರದ ನಷ್ಟ. ಕ್ಷಯ ರೋಗ ಪೀಡಿತರಾಗಿದ್ದ ಇವರಿಗೆ ತಮ್ಮ ಬಡತನದ ಕಾರಣದಿಂದ ಸರಿಯಾಗಿ ಔಷಧೋಪಚಾರಗಳನ್ನು ಮಾಡಿಸಲು ಸಾಧ್ಯವಾಗುವುದಿಲ್ಲ. ಇದೇ ಅವರ ಮೃತ್ಯುವಿಗೆ ಕಾರಣವಾಗುತ್ತದೆ. ಇವರಿಗೆ ರಾಧಾಕೃಷ್ಣ ಎಂಬ ಮಗ ಇದ್ದನು ಎಂಬ ಉಲ್ಲೇಖವಿದೆ.

ಇವರ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆಯು ೨೦೧೭ರಲ್ಲಿ ೫ ರೂ ಮುಖಬೆಲೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಪ್ರತೀ ವರ್ಷ ಇವರ ಹುಟ್ಟೂರಾದ ನಂದಳಿಕೆಯಲ್ಲಿ ಮುದ್ದಣ ಜಯಂತಿಯನ್ನು ಆಚರಿಸಲಾಗುತ್ತದೆ. ೧೯೭೯ರಲ್ಲಿ ವರಕವಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ಮುದ್ದಣ ಭವನದ ನಿರ್ಮಾಣವೂ ಆಗಿದೆ. ಇವರನ್ನು ಹೊಸಗನ್ನಡ ಕಾವ್ಯದ ಮುಂಗೋಳಿ ಎಂದೂ ಕರೆಯುತ್ತಾರೆ. ಮುದ್ದಣರು ರಚಿಸಿದ ಕೃತಿಗಳು ಕೆಲವೇ ಆದರೂ ಆ ಬರಹದ ಮಹತ್ವ ಸಾರಸ್ವತ ಲೋಕದಲ್ಲಿ ಅಜರಾಮರವಾಗಿರುತ್ತವೆ ಎನ್ನುವುದು ಸತ್ಯ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣಗಳಿಂದ